ಭಂಡಾರಿ ಸಮಾಜ ಸೇವಾ ಸಂಘ ಮೂಡಬಿದಿರೆ ಇದರ 10 ನೇ ವರ್ಷದ ಕ್ರೀಡೋತ್ಸವವು ಏಪ್ರಿಲ್ 24 ರ ಭಾನುವಾರ ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ನಡೆಯಿತು.
ಸಮಾರಂಭವನ್ನು ಮಾಜಿ ಸೈನಿಕರಾದ ಬೆಳುವಾಯಿ ಶ್ರೀ ಗಣೇಶ್ ಭಂಡಾರಿ ಉದ್ಘಾಟಿಸಿದರು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಸೋಲನ್ನು ಗೆಲುವು ಎಂದು ಭಾವಿಸಿಕೊಂಡು ಭಂಡಾರಿ ಬಂಧುಗಳೆಲ್ಲ ಒಗ್ಗಟ್ಟಾಗಿ ಇರಬೇಕೆಂದು ಶ್ರೀ ಗಣೇಶ್ ಭಂಡಾರಿ ಕರೆಕೊಟ್ಟರು.ನಮ್ಮ ಸಂಘದಲ್ಲಿ ಹಲವಾರು ಉತ್ತಮ ಕೆಲಸಗಳು ನಡೆಯುತ್ತಿದ್ದು, ಪ್ರತಿಯೊಬ್ಬ ಬಂಧುವೂ ಕೂಡಾ ಅಧ್ಯಕ್ಷರಿಗೆ ಸಹಕಾರ ನೀಡಿಕೊಂಡು ಇನ್ನಷ್ಟು ಸಮಾಜಮುಖಿ ಕೆಲಸ ಮಾಡುವಲ್ಲಿ ಅವರಿಗೆ ಬಲ ತುಂಬಬೇಕು ಎಂದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ನ್ಯಾಯಾಧೀಶರಾದ ಕುಮಾರಿ ಸುನೀತಾ ಭಂಡಾರಿ ವಾಲ್ಪಾಡಿ ಸಂಘದಲ್ಲಿ ನಡೆಯುತ್ತಿರುವ ಮಹತ್ತರ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸುತ್ತಾ ತಾನು ಹಿಂದೆ ಸಂಘದಲ್ಲಿ ಇದ್ದಾಗ ಇದ್ದ ಒಡನಾಟವನ್ನು ಸ್ಮರಿಸಿದರು .ಮುಂದೆ ಸಂಘಕ್ಕೆ ತನ್ನಿಂದಾಗುವ ಸಹಾಯವನ್ನು ನೀಡಲು ಬದ್ಧಳಿರುವುದಾಗಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕೆ . ಎನ್ ಪ್ರಕಾಶ್ ಭಂಡಾರಿ ಮಾತನಾಡಿ ಕ್ರೀಡೆಯಲ್ಲಿ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಕೈ ಜೋಡಿಸಬೇಕೆಂದರು .ಕ್ರೀಡೆಯ ಮೂಲಕ ಹಲವಾರು ರೀತಿಯ ವ್ಯಾಯಾಮ ದೊರಕಿ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವ ಶಾಲಾ ವಿದ್ಯಾರ್ಥಿಗಳಿಗೆ ಸರಕಾರ ಕೂಡ ಸೌಲಭ್ಯವನ್ನು ನೀಡುತ್ತದೆ .ಉದ್ಯೋಗದಲ್ಲಿ ಕೂಡ ಸರಕಾರ ಸಹಕಾರ ನೀಡುತ್ತದೆ ಎಂದರು . ಎಲ್ಲರ ಪ್ರೋತ್ಸಾಹದಿಂದ ಸಂಘ ಹತ್ತನೇ ವರ್ಷದ ಕ್ರೀಡೋತ್ಸವವನ್ನು ನಡೆಸುತ್ತಿದೆ.ಇನ್ನು ಮುಂದಕ್ಕೂ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿಕೊಂಡು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ಪುರಸಭೆ ಅಧ್ಯಕ್ಷ ಶ್ರೀ ಪ್ರಸಾದ್ ಕುಮಾರ್ ಭಂಡಾರಿ , ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಶ್ರೀಮತಿ ಉಷಾ ಭಂಡಾರಿ , ಶ್ರೀಮಂಜುನಾಥ್ ಭಂಡಾರಿ ಉಳಿಯ , ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ವಾಸುದೇವ ಭಂಡಾರಿ , ಶ್ರೀಮತಿ ವೇದಾವತಿ ಮಿಜಾರು ಇವರೆಲ್ಲರೂ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು .ಗೌರವಾಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಭಂಡಾರಿ ,ಶ್ರೀಮತಿ ವಸಂತಿ ಜೆ ಭಂಡಾರಿ ವೇದಿಯಲ್ಲಿ ಉಪಸ್ಥಿತರಿದ್ದರು .
ವಲಯದ ಎಲ್ಲ ಬಂಧುಗಳು ವಿವಿಧ ರೀತಿಯ ಕ್ರೀಡೆಗಳಲ್ಲಿ ಭಾಗವಹಿಸಿ ಸುಮಾರು 208 ವಿಜೇತರು ಬಹುಮಾನಗಳನ್ನು ಪಡೆದರು.
ಹಿಂದಿನ ವರ್ಷದ ಕ್ರೀಡೋತ್ಸವದ ಬಹುಮಾನವನ್ನು ಈ ಕ್ರೀಡೋತ್ಸವ ದಂದು ಎಲ್ಲಾ ಮುಖ್ಯ ಅತಿಥಿಗಳು ಸೇರಿ ವಿಜೇತರಿಗೆ ವಿತರಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ಯೋಗೇಶ್ ಭಂಡಾರಿ ಸ್ವಾಗತಿಸಿ , ಶ್ರೀ ಗುರುಪ್ರಸಾದ್ ವಂದನಾರ್ಪಣೆಗೈದರು . ಸಂಘದ ಕಾರ್ಯದರ್ಶಿ ಶ್ರೀ ಸತೀಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.