ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಶ್ರೀ ದುರ್ಗಾ ಫ್ರೆಂಡ್ಸ್ ನವರು ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬಂದ ಪದ್ದತಿಯಂತೆ ಈ ವರ್ಷವೂ ಹನ್ನೊಂದನೇ ವರ್ಷದ
“ಮೊಸರು ಕುಡಿಕೆ ಉತ್ಸವ”
ವನ್ನು ಸೆಪ್ಟೆಂಬರ್ 3 ರ ಸೋಮವಾರ ಕುರಿಯಾಳ ಗ್ರಾಮದ ದುರ್ಗಾ ನಗರದ ವಠಾರದಲ್ಲಿ ಅತೀ ವಿಜೃಂಭಣೆಯಿಂದ ನೆರವೇರಿಸಿದರು.
ಸೋಮವಾರ ಬೆಳಿಗ್ಗೆ 9:30 ಕ್ಕೆ ಅತಿಥಿಗಣ್ಯರಿಂದ ಕ್ರೀಡಾಕೂಟಕ್ಕೆ ವಿಧ್ಯುಕ್ತ ಚಾಲನೆ ದೊರಕಿತು. ಅಂಗನವಾಡಿ ಮಕ್ಕಳು, ಪ್ರೌಢಶಾಲಾ ಮಕ್ಕಳು, ಯುವಕರು, ಮಹಿಳೆಯರು, ಪುರುಷರು ಅತೀ ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿಕೊಟ್ಟರು.
ಕ್ರೀಡಾಕೂಟದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ, ಕಬಡ್ಡಿ, ಹಗ್ಗ ಜಗ್ಗಾಟ, ಮೊಸರು ಕುಡಿಕೆ ಒಡೆಯುವುದು ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಶೇಷ ಆಕರ್ಷಣೆಯಾಗಿ ಪಿರಮಿಡ್ ರಚಿಸಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ಕುರಿಯಾಳ ಗ್ರಾಮದ ಶ್ರೀ ದುರ್ಗಾ ಫ್ರೆಂಡ್ಸ್ ಯುವಕರ ತಂಡ ಜಯಗಳಿಸಿದ್ದು ಮಾತ್ರವಲ್ಲದೇ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿಯೂ ಜಯಗಳಿಸಿ ಕ್ರೀಡಾಕೂಟದಲ್ಲಿ ಪಾರಮ್ಯ ಮೆರೆಯಿತು.
ಸಂಜೆ 5:30 ರಿಂದ ಉತ್ಸವದ ಸಮಾರೋಪ ಸಮಾರಂಭ ಆರಂಭಗೊಂಡಿತು. ವೇದಿಕೆಯಲ್ಲಿ ಹಿಂದೂ ಸಮಾಜದ ಮುಖಂಡರೂ, ತಾಲ್ಲೂಕು ಬಿಜೆಪಿಯ ಪ್ರಮುಖ ನಾಯಕರೂ ಆಗಿರುವ ಶ್ರೀ ಹರಿಕೃಷ್ಣ ಬಂಟ್ವಾಳ, ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರೂ ಉಪನ್ಯಾಸಕರೂ ಆಗಿರುವ ಶ್ರೀ ಶಿವಣ್ಣ ಪ್ರಭು, ಅಮ್ಟಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಹರೀಶ್ ಶೆಟ್ಟಿ ಪಡು, ಎಸ್.ವಿ.ಎಸ್ ಕಾಲೇಜಿನ ಪ್ರೊಫೆಸರ್ ಶ್ರೀ ನಾರಾಯಣ ಭಂಡಾರಿ, ಸಾಧನಶ್ರೀ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕರೂ, ಭಂಡಾರಿ ಸಮಾಜದ ಹಿರಿಯರೂ ಆಗಿರುವ ಶ್ರೀ ಜಗದೀಶ್ ಭಂಡಾರಿ, ಶ್ರೀ ದುರ್ಗಾ ಫ್ರೆಂಡ್ಸ್ ಕುರಿಯಾಳದ ಅಧ್ಯಕ್ಷರಾದ ಶ್ರೀ ಸಂದೀಪ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಜಯಗಳಿಸಿದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.
ಕುರಿಯಾಳದ ಶ್ರೀ ದುರ್ಗಾ ಫ್ರೆಂಡ್ಸ್ ನ ಯುವಕರು ಪ್ರತೀ ವರ್ಷ ಮಾಡಿಕೊಂಡು ಬರುತ್ತಿರುವ ಈ ಒಂದು ಧಾರ್ಮಿಕ ಕಾರ್ಯಕ್ರಮ ನಿರಂತರವಾಗಿ ಸಾಂಗವಾಗಿ ಸಾಗಲಿ.ಈ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದಿ ವೈಭವಯುತವಾಗಿ ನೆರವೇರಿಸಲು ಶ್ರೀ ದುರ್ಗೆ, ಶ್ರೀ ಕೃಷ್ಣ, ಶ್ರೀ ದೇವರುಗಳು ಎಲ್ಲರಿಗೂ ಇನ್ನೂ ಹೆಚ್ಚಿನ ಶಕ್ತಿ ಚೈತನ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ