January 19, 2025
anoop

ಅನಾರೋಗ್ಯ ನಿಮಿತ್ತ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅನೂಪ್ ಕುಮಾರ್ ಭಂಡಾರಿ ಮಾರ್ಚ್ ತಿಂಗಳ 5 ನೇ ತಾರೀಖಿನಂದು ಆತನ ಕುಟುಂಬದವರ, ಭಂಡಾರಿ ಬಂಧುಗಳ, ಸ್ನೇಹಿತರ, ಸಹೋದ್ಯೋಗಿಗಳ ಮತ್ತು ತನ್ನ ಸಂಸ್ಥೆಯ ಆಡಳಿತ ವರ್ಗದ ಹಿರಿಯ ಅಧಿಕಾರಿಗಳ, ಯಾರೊಬ್ಬರ ಹಾರೈಕೆಯನ್ನೂ ಮನ್ನಿಸದೆ ಸಂಜೆಯ ಸೂರ್ಯನೊಂದಿಗೆ ಅಸ್ತಂಗತನಾಗಿಯೇ ಬಿಟ್ಟರು.ಅದರೊಂದಿಗೆ ಭಂಡಾರಿ ಸಮಾಜದ ಅತ್ಯಂತ ಚಟುವಟಿಕೆಯ, ಲವಲವಿಕೆಯ, ಕಾರ್ಯಕರ್ತನೊಬ್ಬನನ್ನು,ಸ್ನೇಹ ಜೀವಿಯನ್ನು, ಸಮಾಜ ಸೇವಕನನ್ನು ನಾವೆಲ್ಲ ಕಳೆದುಕೊಂಡು ಬಿಟ್ಟೆವು.ಹೀಗೆ ಮಾರ್ಚ್ 5,2017 ರ ಆದಿನ ನಮ್ಮ ಪಾಲಿನ ಕರಾಳದಿನವಾಗಿ ದಾಖಲಾಯಿತು.


ಸಾಮಾಜಿಕ ಕಾರ್ಯಕ್ರಮಗಳಿರಲಿ, ಭಂಡಾರಿ ಸಮಾಜದ ಯಾವುದೇ ಕಾರ್ಯಕ್ರಮಗಳೇ ನಡೆಯುತ್ತಿರಲಿ, ಅಲ್ಲಿ ತನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ ಭಂಡಾರಿ ಸಮುದಾಯದ ಆಸ್ತಿಯಂತಿದ್ದ ಕಕ್ಕೆಪದವು ಪುಣ್ಕೆದಡಿ ಅನೂಪ್ ಕುಮಾರ್ ನಮ್ಮನ್ನಗಲಿ ವರ್ಷವೆರಡು ಕಳೆದರೂ ಅವರು ನಮ್ಮೊಂದಿಗೆ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ‌. ಇಂದಿಗೂ ಮತ್ತೆ ಮತ್ತೆ ನೆನಪಾಗಿ ಕಾಡುತ್ತಲೇ ಇದ್ದಾರೆ ಅನೂಪ್.
ಕಕ್ಕೆಪದವು ಪುಣ್ಕೆದಡಿ ಶ್ರೀ ಗೋಪಾಲ ಭಂಡಾರಿ ಮತ್ತು ಶ್ರೀಮತಿ ಜಲಜಾಕ್ಷಿ (ಬೇಬಿ) ಗೋಪಾಲ ಭಂಡಾರಿ ದಂಪತಿಯ ಮೂವರು ಮಕ್ಕಳಲ್ಲಿ  ಅನೂಪ್ ಹಿರಿಯ ಮಗನಾಗಿ ಜನಿಸಿದವರು.  ವೇಣೂರಿನಲ್ಲಿ ತಾಂತ್ರಿಕ ಶಿಕ್ಷಣ ಪೂರೈಸಿದ ನಂತರ ಉದ್ಯೋಗವನ್ನರಸಿ ಬೆಂಗಳೂರು ಮಹಾನಗರವನ್ನು ಸೇರಿದರು.ಸ್ವಾತಿಯವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅನೂಪ್ ಮಗಳ ರೂಪದಲ್ಲಿ ಬಂದ ಐಶಾನಿಯೊಂದಿಗೆ ನೆಮ್ಮದಿಯ ಜೀವನ ಸಾಗಿಸುವ ಸಂದರ್ಭದಲ್ಲಿ ಕ್ರೂರವಿಧಿ ಅವರೊಂದಿಗೆ ಚೆಲ್ಲಾಟವಾಡಿ ಅವರನ್ನು ಸೆಳೆದೊಯ್ದುಬಿಟ್ಟಿತು.


2007 ರಲ್ಲಿ ಬೆಂಗಳೂರು ಭಂಡಾರಿ ಸಮಾಜ ಸಂಘವನ್ನು ಸೇರಿಕೊಂಡ ಇವರು ಸಂಘದ ಸಕ್ರಿಯ ಸದಸ್ಯರಾಗಿ ತಮ್ಮ ಛಾಪು ಮೂಡಿಸಿದ್ದರು.ಬೆಂಗಳೂರು  ಭಂಡಾರಿ ಸಂಘದಲ್ಲಿ, ಬಂಟ್ವಾಳ ಭಂಡಾರಿ ಸಂಘದಲ್ಲಿ,ಕಚ್ಚೂರು ಶ್ರೀ  ಕ್ಷೇತ್ರದ ಯಾವುದೇ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಭಂಡಾರಿ ಸಮಾಜದ ಯಾವುದೇ ಕಾರ್ಯಕ್ರಮಗಳಲ್ಲಿಯೂ ತಪ್ಪದೇ ಭಾಗವಹಿಸುತ್ತಿದ್ದ ಅನೂಪ್ ರ ಅನುಪಸ್ಥಿತಿ ಇಂದು ಸಮಾಜದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಎದ್ದು ಕಾಣುತ್ತದೆ.ಇದರ ಜೊತೆಗೆ ತನ್ನ ಹುಟ್ಟೂರಿನಲ್ಲಿ ಕುಟುಂಬದ ಸದಸ್ಯರನ್ನೆಲ್ಲಾ,ಸ್ನೇಹಿತರನ್ನೆಲ್ಲಾ ಒಟ್ಟು ಮಾಡಿಕೊಂಡು “ಜೈ ತುಳುನಾಡು”  ಎಂಬ ಸಾಮಾಜಿಕ ಸೇವಾ ಸಂಸ್ಥೆಯನ್ನು ಸ್ಥಾಪಿಸಿ ಕ್ರೀಡೆ, ಸಾಂಸ್ಕೃತಿಕ,ಸಾಹಿತ್ಯಿಕ  ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿದ್ದ ಅನೂಪ್ ಕಕ್ಕೆಪದವು ಜಾತ್ರೆ, ಕಕ್ಕೆಪದವು ಕಂಬಳ ಸೇರಿದಂತೆ ಸ್ಥಳೀಯವಾಗಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ   ಭಾಗವಹಿಸುತ್ತಿದ್ದರು. 


ಹೀಗೆ ತನ್ನ ಎಲ್ಲ ಕೆಲಸಕಾರ್ಯಗಳ ಒತ್ತಡಗಳ ಮಧ್ಯೆಯೂ ಸಮಾಜ ಸೇವೆಗಾಗಿ ಸಮಯ ಮೀಸಲಿಟ್ಟು ದುಡಿಯುತ್ತಿದ್ದ ಅನೂಪ್ ಇಂದು ನಮ್ಮೊಂದಿಗಿಲ್ಲ. ಆದರೆ ಯುವ ಸಮೂಹಕ್ಕೆ ಅವರು ಹಾಕಿಕೊಟ್ಟ ಆದರ್ಶಗಳು ಎಂದಿಗೂ ಅಜರಾಮರ. ಅವರ ಅಗಲಿಕೆಯ ದುಃಖದಿಂದ ಸಂಕಟದಲ್ಲಿರುವ ಅವರ ಕುಟುಂಬ ವರ್ಗದವರಿಗೆ, ಪತ್ನಿ ಸ್ವಾತಿಯವರಿಗೆ, ಮಗಳು ಐಶಾನಿಯವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ, ನಮ್ಮಿಂದ ಮರೆಯಾದ ಅನೂಪ್ ಅವರ ಆತ್ಮಕ್ಕೆ ಶ್ರೀ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ, ಸಮಾಜ ಸೇವೆಯ ಮುಖಾಂತರ ಭಂಡಾರಿ ಬಂಧುಗಳ ಮನದಲ್ಲಿ ಚಿರಸ್ಥಾಯಿ ಸ್ಥಾನ ಗಳಿಸಿರುವ ಅನೂಪ್ ಭಂಡಾರಿ ನಮ್ಮ ನಡುವೆ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿ ವಾರ್ತೆ” ಪ್ರಾರ್ಥಿಸುತ್ತದೆ. 


“ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.”

Leave a Reply

Your email address will not be published. Required fields are marked *