January 18, 2025
Independence day Feauture image

75ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ನಾವು ನೀವು

ಎಲ್ಲೆಲ್ಲೂ ಸಂಭ್ರಮ…. ಸಂಭ್ರಮ… ಅಲ್ಲಲ್ಲಿ ಹಾರಾಡುತ್ತಿರುವ ರಾಷ್ಟ್ರ ಧ್ವಜಗಳು. ಸುತ್ತ ಮುತ್ತಲೂ ಕೇಸರಿ, ಬಿಳಿ ,ಹಸಿರು…. ದೇಶದಾದ್ಯಂತ ಭಾರತ ಮಾತೆ ಸಿಂಗಾರಗೊಂಡಿದ್ದಾಳೆ. ಇಡೀ ದೇಶದ ಜನತೆ ಸಂತಸದಿಂದ 75ನೇ ಸ್ವಾತಂತ್ರೋತ್ಸವ ಆಚರಿಸಲು ತಯಾರಿ ನಡೆಸುತ್ತಿದೆ.

 

ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ಬರಬರುತ್ತಾ ಒಳ ಸಂಚು ನಡೆಸಿ, ಈ ದೇಶವನ್ನೇ ತನ್ನ ಕಪಿ ಮುಷ್ಠಿಯಲ್ಲಿ ಇಟ್ಟು ಕಷ್ಟ ನೀಡಿದರು. ನಮ್ಮ ನಾಯಕ, ನಾಯಕಿಯರ ಅವಿರತ ಪ್ರಯತ್ನದಿಂದ ಇಂದು ನಾವು ಸ್ವತಂತ್ರವಾಗಿದ್ದೇವೆ. ಅವರೆಲ್ಲರ ಬಲಿದಾನದಿಂದ ಭರತ ಮಾತೆಯ ಮಕ್ಕಳೆಲ್ಲಾ ಇಂದು ಆನಂದದಿಂದ ಬದುಕುತ್ತಿದ್ದೇವೆ. ಈ ಸಂಭ್ರಮದ ಸಮಯದಲ್ಲಿ ಅವರನ್ನೆಲ್ಲಾ ನೆನೆಯಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ.

ಆಜಾದಿ ಕಾ ಅಮೃತ್ ಮಹೋತ್ಸವ ದ ಅಂಗವಾಗಿ ಸರಕಾರವು ಭಾರತದ ಧ್ವಜ ಸಂಹಿತೆಯಲ್ಲಿ ತಿದ್ದುಪಡಿ ಮಾಡಿ, ಕೆಲವೊಂದು ಸುತ್ತೋಲೆಗಳನ್ನು ಹೊರಡಿಸಿದೆ. ಅಗಸ್ಟ್ 13ರಿಂದ 15ರವರೆಗೆ ಹರ್ ಘರ್ ತಿರಂಗ್ ( ಪ್ರತಿ ಮನೆಯಲ್ಲೂ ಧ್ವಜಾರೋಹಣ) ಎಂಬ ಮಹತ್ವದ ತೀರ್ಮಾನ ಕೈಗೊಂಡಿದ್ದು ತ್ರಿವರ್ಣ ಧ್ವಜವನ್ನು ಹಗಲು ರಾತ್ರಿ ಹಾರಿಸಲು ಅವಕಾಶ ಕಲ್ಪಿಸಲಾಗಿದೆ. ಖಾದಿ, ಪಾಲಿಸ್ಟರ್ ಜೊತೆಗೆ ಯಂತ್ರದಿಂದ ತಯಾರಿಸಿದ ಧ್ವಜಗಳ ಬಳಕೆಗೂ ಅವಕಾಶ ನೀಡುವಂತೆ ತಿದ್ದುಪಡಿ ತರಲಾಗಿದೆ. ಧ್ವಜವನ್ನು ತೆರೆದ ಪ್ರದೇಶದಲ್ಲಿ ಮೂರು ದಿನ ಹಾರಿಸಲು ಅನುಮತಿ ನೀಡಲಾಗಿದೆ. ಈ ಹಿಂದೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಹಾರಿಸಲು ಅನುಮತಿ ನೀಡಲಾಗಿತ್ತು. 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಅನೇಕ ತಿದ್ದುಪಡಿಯನ್ನು ಮಾಡಲು ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಧ್ವಜದ ಪ್ರದರ್ಶನ, ಹಾರಾಟ ಮತ್ತು ಬಳಕೆಯನ್ನು ಭಾರತದ ಧ್ವಜ ಸಂಹಿತೆ 2002 ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆ 1971ರ ಮೂಲಕ ನಿಯಂತ್ರಿಸಲಾಗುತ್ತದೆ. ಭಾರತದ ಧ್ವಜ ಸಂಹಿತೆ 2002 ಅನ್ನು ಜುಲೈ 20, 2022 ರ ಆದೇಶದ ಮೂಲಕ ಮತ್ತಷ್ಟು ತಿದ್ದುಪಡಿ ಆದೇಶದಂತೆ ಬಹಳಷ್ಟು ತಿದ್ದುಪಡಿ ಮಾಡಲಾಗಿದೆ.
ಧ್ವಜ ಏರಿಸುವಾಗ ಕೇಸರಿ ಬಣ್ಣ ಮೇಲೆ, ಹಸಿರು ಬಣ್ಣ ಕೆಳಗಡೆ ಇರುವಂತೆ ಹಾರಿಸತಕ್ಕದ್ದು. ರಾಷ್ಟ್ರ ಧ್ವಜವನ್ನು ಸುಡುವುದಾಗಲಿ, ಕೆಡಿಸುವುದಾಗಲಿ, ಕಾಲಲ್ಲಿ ತುಳಿಯುವುದು ಇತ್ಯಾದಿ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದುಕೊಂಡರೆ ಅಥವಾ ಬರಹಗಳಿಂದ ಅಗೌರವ ತೋರಿದರೆ ಶಿಕ್ಷೆಗೆ ಗುರಿ ಪಡಿಸಲಾಗುವುದು.

ವೇದಿಕೆಯ ಮೇಲೆ ಬಳಸುವಂತಿದ್ದಲ್ಲಿ ಸಭಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ಹಾರಿಸತಕ್ಕದ್ದು. ಯಾವಾಗಲೂ ಎತ್ತರದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸತಕ್ಕದ್ದು. ರಾಷ್ಟ್ರ ಧ್ವಜವನ್ನು ಹಾರಿಸಿದ ನಂತರ ಜನಗಣಮನ ರಾಷ್ಟ್ರ ಗೀತೆಯನ್ನು ಹಾಡಲೇ ಬೇಕು. ಇಳಿಸುವಾಗಲೂ ಸೆಲ್ಯೂಟ್ ಕೊಟ್ಟು, ಜನಗಣಮನವನ್ನು ಹಾಡುತ್ತಾ ನಿಧಾನವಾಗಿ ಇಳಿಸಬೇಕು. ಹೆಗಲಿಗೆ ಹಾಕಿ ನಂತರ ಮಡಚಿ ಇಡಬೇಕು. ಯಾವುದೇ ಕಲೆಗಳು ಆಗದಂತೆ ಎಚ್ಚರಿಕೆ ವಹಿಸಬೇಕು. ರಾಷ್ಟ್ರಧ್ವಜ, ರಾಷ್ಟ್ರ ಲಾಂಛನ, ರಾಷ್ಟ್ರ ಪ್ರಾಣಿ, ರಾಷ್ಟ್ರ ಪಕ್ಷಿ ಗೆ ನಾವೆಲ್ಲರೂ ಗೌರವ ನೀಡಲೇಬೇಕು. ಇಲ್ಲಿನ ಜಲ, ನೆಲ ಬಳಸಿಕೊಂಡು, ಭಾರತ ಮಾತೆ ಪುಣ್ಯ ಗರ್ಭದಲ್ಲಿ ಜನಿಸಿದ ನಾವೆಲ್ಲರೂ ನಿಜವಾಗಿಯೂ ಧನ್ಯರು.

ಸರ್ಕಾರಿ ಕಛೇರಿಗಳಲ್ಲಿ, ಪ್ರತಿ ಮನೆಯಲ್ಲೂ ರಾಷ್ಟ ಧ್ವಜ ಹಾರಿಸಲು ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಗಳ ಮೂಲಕ ರಾಷ್ಟ್ರ ಧ್ವಜ ನೀಡುತ್ತಿದ್ದಾರೆ. ನಾವೆಲ್ಲರೂ ರಾಷ್ಟ್ರ ಧ್ವಜಕ್ಕೆ ಅಗೌರವ ಆಗದಂತೆ ಜಾಗರೂಕತೆಯಿಂದ ನಮ್ಮ ಮನೆಗಳಲ್ಲಿ ಹಾರಿಸಿ, 75ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಪಾಲ್ಗೊಳೋಣ. ಭಾರತದ ಏಳ್ಗೆಗೆಗಾಗಿ ಶ್ರಮಿಸೋಣ. ವಂದನೆಗಳು 🙏🏽

✍️  ಸುಮಾ ಭಂಡಾರಿ

Leave a Reply

Your email address will not be published. Required fields are marked *