ಕ್ಯಾರೆಟ್ ಗೆಡ್ಡೆ ತರಕಾರಿಯಾಗಿದ್ದು ಇದರ ಹುಟ್ಟು ಮದ್ಯ ಏಶ್ಯಾದ ಪರ್ಶೀಯದಲ್ಲಾಯಿತು ನಂತರ ಪ್ರಪಂಚಕ್ಕೆ ಹರಡಿತು. ಈಗ ಅನೇಕ ತಳಿಯ ಕ್ಯಾರೆಟ್ ಗಳು ಲಭ್ಯವಿದೆ. ಅದರ ಗೆಡ್ಡೆ ಪೌಷ್ಠಿಕಾಂಶ ಗಳ ಆಕರ. ಅತಿ ಹೆಚ್ಚಿನ ಪೌಷ್ಟಿಕಾಂಶ ಘಟಕಗಳು ಕ್ಯಾರೆಟ್ ಗಡ್ಡೆಯ ಸಿಪ್ಪೆಯ ಸನಿಹದಲ್ಲೇ ಸಂಗ್ರಹವಾಗಿದೆ.ಹಾಗಾಗಿ ಸಿಪ್ಪೆ ಹೆರೆದರೆ ಪೌಷ್ಟಿಕಾಂಶ ಗಳ ಭಂಡಾರವೇ ಲೂಟಿಯಾಗಿ ಹೋಗುತ್ತದೆ. ಅದಕ್ಕೆ ಬದಲಾಗಿ ಕ್ಯಾರೆಟ್ ಅನ್ನು ನಲ್ಲಿ ನೀರಿನ ಕೆಳಗೆ ಹಿಡಿದು ಪ್ಲಾಸ್ಟಿಕ್ ಜುಂಗಿನಿಂದ ಉಜ್ಜಿ ಮೆತ್ತಿಕೊಂಡಿರುವ ಮಣ್ಣನ್ನು ತೆಗೆದು ಸ್ವಚ್ಛ ಮಾಡಬಹುದು. ಇದರಲ್ಲಿ ಹೇಳಿಕೊಳ್ಳುವಷ್ಟು ಪ್ರಮಾಣದ ಪ್ರೋಟಿನ್ ಮತ್ತು ಕೊಬ್ಬಿನಂಶಗಳಿಲ್ಲ. ಹಾಗಾಗಿ ಪ್ರಮುಖ ಆಹಾರವಾಗಿ ಇದೊಂದನ್ನೇ ಬಳಸುವಂತಿಲ್ಲ. ಬೇರೆ ಆಹಾರ ಪದಾರ್ಥಗಳ ಜೊತೆ ಇದು ಒಂದು ಭಾಗ ಆಗಿರಬೇಕಷ್ಟೆ. ಈ ಕೆಳಗೆ ಅದರಲ್ಲಿರುವ ಪೌಷ್ಟಿಕಾಂಶಗಳ ವಿವರ ನೀಡಲಾಗಿದೆ.
100ಗ್ರಾಂ ತಿನ್ನಲು ಯೋಗ್ಯವಾದ ಕ್ಯಾರೆಟ್ ನಲ್ಲಿರುವ ಪೌಷ್ಟಿಕಾಂಶಗಳು.
ತೇವಾಂಶ -86.00ಗ್ರಾಂ
ಪ್ರೋಟಿನ್-0.90ಗ್ರಾಂ
ಕೊಬ್ಬು-0.2ಗ್ರಾಂ
ಖನಿಜ ಲವಣಗಳು -1.1ಗ್ರಾಂ
ನಾರಿನಾಂಶ-1.2ಗ್ರಾಂ
ಶರ್ಕರ ಪಿಷ್ಠಾದಿಗಳು-10.6 ಗ್ರಾಂ
ಶಕ್ತಿ- 48 ಕ್ಯಾಲೋರಿ
ಕ್ಯಾಲ್ಸಿಯಂ-530ಮಿ.ಗ್ರಾಂ
ಕೆರೋಟಿನ್1890 ಮೈಕೋ ಗ್ರಾಂ
ಕಬ್ಬಿಣ1.03 ಮಿ.ಗ್ರಾಂ
ಕ್ರೋಮಿಯಂ-0.017 ಮಿ.ಗ್ರಾಂ
ಗಂಧಕ-27ಮಿ.ಗ್ರಾಂ
ಕ್ಲೋರಿನ್ -13 ಮಿ.ಗ್ರಾಂ
ಸತು-0.36 ಮಿ.ಗ್ರಾಂ
ಕೋಲಿನ್-168ಮಿ.ಗ್ರಾಂ
ನಿಯಾಸಿನ್-0.6ಮಿ.ಗ್ರಾಂ
ರಿಬೋಫ್ಲಾವಿನ್-0.02ಮಿ.ಗ್ರಾಂ
ಸಿ ಜೀವಸತ್ವ-3ಮಿ.ಗ್ರಾಂ
ಆಕ್ಸಲೀಕ್ ಆಮ್ಲ-5ಮಿ.ಗ್ರಾಂ
ಅಗತ್ಯ ಅಮೈನೋ ಆಮ್ಲ-0.14 ಗ್ರಾಂ
ಮೆಗ್ನೀಷಿಯಂ-17ಮಿ.ಗ್ರಾಂ
ಸೋಡಿಯಂ-35ಮಿ.ಗ್ರಾಂ
ಪೋಟಾಸಿಯಂ-180ಮಿ.ಗ್ರಾಂ
ಥೈಯಾಮಿನ್-0.04ಮಿ.ಗ್ರಾಂ
ಸೋಡಿಯಂ ಪೋಟಾಸಿಯಂ ಅಂಶ ಹೆಚ್ಚಿರುವುದರಿಂದ ಇದರ ಸೇವನೆಯಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ನಾರಿನಾಂಶ ಇರುವುದರಿಂದ ಇದರ ಸೇವನೆಯಿಂದ ಕರುಳು ಚೆನ್ನಾಗಿ ಕೆಲಸ ಮಾಡುತ್ತಾ ಮಲಬದ್ಧತೆ ಉಂಟಾಗುವುದಿಲ್ಲ.
ಖನಿಜ ಲವಣ ಮತ್ತು ಜೀವಸತ್ವಗಳಿಂದ ಶ್ರೀಮಂತ ರಾಗಿರುವುದರಿಂದ ಜೊತೆಗೆ ಕೆಲೊರಿ ಪ್ರಮಾಣ ಕಡಿಮೆ ಇರುವುದರಿಂದ ಕೋಸಂಬರಿ ರೂಪದಲ್ಲಿ ಇದನ್ನು ತುರಿದು ಬಳಸಿದರೆ ದೇಹತೂಕ ಇಳಿಸಿಕೊಳ್ಳಲು ಸುಸೂತ್ರದ ಕೆಲಸ. ಕ್ಯಾರೆಟ್ ನಲ್ಲಿ ಕೆರೋಟಿನ್ ಅಂಶ ಹೆಚ್ಚು ಇದೆ. ‘ಎ’ ಜೀವಸತ್ವ ದ ಪೂರ್ವ ಗಾಮಿ ಈ ಕೆರೋಟಿನ್ ಅಂದರೆ ಪ್ರಿಕರ್ಸರ್ ನೈಸರ್ಗಿಕ ಪ್ರಕ್ರಿಯೆ ಗಳ ಫಲವಾಗಿ ಮತ್ತೊಂದು ಪದಾರ್ಥವನ್ನು ನೀಡಬಲ್ಲ ಪದಾರ್ಥ . ಕ್ಯಾರೆಟ್ ಗಳಲ್ಲಿ ಬೀಟಾ ಕೆರೋಟಿನ್ ಇರುತ್ತದೆ. ಇದುವೇ ನಮ್ಮ ಶರೀರದಲ್ಲಿ ವಿಟಮಿನ್ ಎ ಉತ್ಪಾದನೆ ಗೆ ಸಹಕಾರಿಯಾಗುತ್ತದೆ. ಕಣ್ಣಿನ ರೆಟಿನಾ ಪೊರೆಯಲ್ಲಿರುವ ಪೋಟೋ ರೆಸ್ ಸ್ಟಾರ್ಸ್ ಕಾಂತಿಯನ್ನು ಗ್ರಹಿಸಿದ ನಂತರ ಮತ್ತೆ ಪುನರುತ್ತೇಜನ ಪಡೆಯಲು ವಿಟಮಿನ್ ಎ ಅವಶ್ಯಕ.
-Supreetha Bhandary Soorinje