ನ್ಯಾಷನಲ್ ಕೆಡೆಟ್ ಕಾರ್ಪ್ಸ್.. ಯುವಕರಲ್ಲಿ ಏಕತೆ ಮತ್ತು ಶಿಸ್ತನ್ನ ಬೆಳೆಸುವ ನಿಟ್ಟಿನಲ್ಲಿ ಶುರುವಾದ ಒಂದು ರೀತಿಯ ಸ್ಪೆಷಲ್ ಕೋರ್ಸ್.. ಶಿಸ್ತಿನ ಜೊತೆಗೆ ದೇಶ ಭಕ್ತಿ, ಸೈನ್ಯ ಹಾಗೂ ತುರ್ತು ಪರಿಸ್ಥಿತಿಗೆ ಸ್ಪಂದಿಸುವ ರೀತಿ, ಆತ್ಮಸ್ಥೈರ್ಯ ಇತರೆ ಬದುಕಿನ ಕಲೆಗಳನ್ನ ಎನ್ ಸಿಸಿ ಬೋಧಿಸುತ್ತದೆ. 1948ರಲ್ಲಿ ಆರಂಭವಾದ ಎನ್ ಸಿಸಿಯಲ್ಲಿ ಮೊದಲು ಕಾಲೇಜು ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡರೂ ಕ್ರಮೇಣ ಹೈಸ್ಕೂಲು ವಿದ್ಯಾರ್ಥಿಗಳಿಗೂ ಜೂನಿಯರ್ ಮಟ್ಟದ ತರಬೇತಿ ನೀಡಲಾಗುತ್ತಿದೆ.
ಆರಂಭದಲ್ಲಿ ಹುಡುಗರಿಗಷ್ಟೇ ಸೀಮಿತವಾದ ಎನ್ ಸಿಸಿ ತರಬೇತಿ ಕ್ರಮೇಣ ಹುಡುಗಿಯರಿಗೂ ಸಿಗುತ್ತಿರುವುದು ವಿಶೇಷ. ಆದ್ರೆ ದೈಹಿಕವಾಗಿ ಬಲ ಹಾಗೂ ಮಾನಸಿಕ ಧೃಡತೆಯನ್ನ ಬಯಸುವ ಈ ನ್ಯಾಷನಲ್ ಕೆಡೆಟ್ ಕೋರ್ಪ್ಸ್ ಗೆ ಸೇರಿಕೊಳ್ಳಲು ಇಚ್ಛಿಸುವ ಹುಡುಗಿಯರು ಕೇವಲ ಕೆಲವರು ಮಾತ್ರ.. ಆದ್ರೆ ನಮ್ಮ ಭಂಡಾರಿ ಕುಟುಂಬದ ಚರಿತ್ರ ಸುಭಾಷ್ ಭಂಡಾರಿ ಎನ್ ಸಿಸಿ ವಿಚಾರದಲ್ಲಿ ಹೊಸ ಚರಿತ್ರೆಯನ್ನೇ ಬರೆಯುವತ್ತ ದಾಪುಗಾಲಿಟ್ಟಿದ್ದಾರೆ.
ಎನ್ ಸಿಸಿ ಬಗ್ಗೆ ಆರಂಭದಿಂದಲೂ ಅತ್ಯಾಸಕ್ತಿ ಹೊಂದಿದ್ದ ಚರಿತ್ರ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ವಿದ್ಯಾರ್ಥಿನಿ.. ಸುಭಾಷ್ ಭಂಡಾರಿ (ಟೈಲರ್) ಗುಂಡಿಬೈಲು ಉಡುಪಿ ಹಾಗೂ ಸುಮತಿ ಎಸ್ ಭಂಡಾರಿ ಅವರ ಸುಪುತ್ರಿಯಾಗಿರುವ ಚರಿತ್ರ ಈಗಾಗಲೇ ವಿವಿಧ ಹಂತಗಳ ಒಟ್ಟು 14 ಎನ್ ಸಿಸಿ ಕ್ಯಾಂಪ್ ಗಳಲ್ಲಿ ಭಾಗವಹಿಸಿರುವುದು ವಿಶೇಷ. ಅದರಲ್ಲೂ ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವ ಪೂರ್ವ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವುದು ಈಕೆಯ ಹೆಗ್ಗಳಿಕೆ.
ಎನ್ ಸಿಸಿಯಲ್ಲಿ ರಿಸರ್ವ್ ಕಾಂಟಿನೆಂಟ್ ಕಮಾಂಡ್ ಆಗಿರುವ ಚರಿತ್ರ ಹಲವು ವಿಶೇಷತೆಗಳ ಮೂಲಕ ಗಮನ ಸೆಳೆದಿದ್ದಾರೆ. ಬೆಸ್ಟ್ ಜ್ಯೂನಿಯರ್ ಅಂಡರ್ ಆಫೀಸರ್, ಮಂಗಳೂರು 18 ಗ್ರೂಪ್ ನ ಬೆಸ್ಟ್ ಕೆಡೆಟ್, ಆಳ್ವಾಸ್ ಕಾಲೇಜಿನ ಬೆಸ್ಟ್ ಕೆಡೆಟ್ 2016, ಬೆಸ್ಟ್ ಫೈರರ್, ಬೆಸ್ಟ್ ಕ್ಯಾಂಪ್ ಸೀನಿಯರ್ ಹೀಗೆ ವಿವಿಧ ಗೌರವಗಳಿಗೆ ಚರಿತ್ರ ಪಾತ್ರರಾಗಿದ್ದಾರೆ. ಅದರಲ್ಲೂ ಆಳ್ವಾಸ್ ಕಾಲೇಜಿನ 2017ರ ಸ್ವಾತಂತ್ರ್ಯ ದಿನದಂದು ನಡೆದ ವಿಶೇಷ ಪಥಸಂಚಲದಲ್ಲಿ ಇಡೀ ಟ್ರೂಪ್ ಕಮಾಂಡರ್ ಆಗಿದ್ದು ವಿಶೇಷ.
ವೃತ್ತಿಯಲ್ಲಿ ಟೈಲರ್ ಆಗಿರುವ ಉಡುಪಿ ಮೂಲದ ಶ್ರೀ ಸುಭಾಷ್ ಭಂಡಾರಿ ಯವರು ತಮ್ಮ ಮಗಳ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಭಂಡಾರಿ ಕುಟುಂಬದಿಂದ ಹೊರಬಂದಿರುವ ಈ ಪ್ರತಿಭೆ ಇನ್ನಷ್ಟು ಸಾಧನೆಗಳ ಮೂಲಕ ಅತ್ಯುನ್ನತ ಸ್ಥಾನಕ್ಕೆ ತಲುಪಲಿ ಎಂಬುದು ಭಂಡಾರಿ ವಾರ್ತೆಯ ಆಶಯ.
– ಭಂಡಾರಿ ವಾರ್ತೆ