September 20, 2024
ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಗೆ ಮೂರು ವರ್ಷ ತುಂಬುತ್ತಿರುವ ಈ ಸುಸಂದರ್ಭದಲ್ಲಿ ನಮ್ಮೆಲ್ಲಾ ಓದುಗರಿಗೆ, ಅಭಿಮಾನಿಗಳಿಗೆ, ಬರಹಗಾರರಿಗೆ, ತಾಂತ್ರಿಕ ವರ್ಗಕ್ಕೆ, ಸಂಪಾದಕೀಯ ಸಮೂಹಕ್ಕೆ, ವರದಿಗಾರರಿಗೆ ಮತ್ತು ನಿರಂತರವಾಗಿ ಬೆನ್ನೆಲುಬಾಗಿ ನಿಂತಿರುವ ಕೆಲವು ಸಹೃದಯರಿಗೆ ಹಾರ್ದಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. 
 
ಮೊಬೈಲ್ ಫೋನುಗಳ ಅಬ್ಬರದ ಮಧ್ಯೆ ಆಧುನಿಕ ತಂತ್ರಜ್ಞಾನಾಧಾರಿತ ಇ-ಮ್ಯಾಗಜಿನ್ ಒಂದನ್ನು ಆರಂಭಿಸಬೇಕು ತನ್ಮೂಲಕ ಭಂಡಾರಿ ಕುಟುಂಬದ ಸುದ್ದಿ ಸಮಾಚಾರಗಳನ್ನು ಅವರ ಮನೆ ಮನದ ಬಾಗಿಲಿಗೆ ಕ್ಷಿಪ್ರವಾಗಿ ತಲುಪಿಸಬೇಕು, ಭಂಡಾರಿ ಕುಟುಂಬದ ಉದಯೋನ್ಮುಖರಿಗೆ ತಮ್ಮ ಸೃಜನಶೀಲತೆಯ ಪ್ರದರ್ಶನಕ್ಕೆ ವೇದಿಕೆಯಾಗಬೇಕು, ನಮ್ಮದೇ ಕುಟುಂಬದ ಎಲೆಮರೆಯ ಕಾಯಿಯಂತಿರುವ ಸಾಧಕರ ಜೀವನದ ಮೇಲೆ ಬೆಳಕು ಚೆಲ್ಲುವ ಮೂಲಕ ಅವರನ್ನು ಸಮಾಜಕ್ಕೆ ಪರಿಚಯಿಸಬೇಕು, ಪ್ರತಿಭಾವಂತ ವಿದ್ಯಾರ್ಥಿಗಳ ಬೆನ್ನಿಗೆ ನಿಂತು ನೆರವಿನ ಹಸ್ತ ಚಾಚಬೇಕು ಎಂಬೆಲ್ಲಾ ಅಭಿಲಾಷೆಯೊಂದಿಗೆ ಉಡುಪಿಯ ಹೋಟೆಲೊಂದರ ಚಹಾ ಟೇಬಲ್ಲಿನಲ್ಲಿ ಆರಂಭವಾದ ಚರ್ಚೆ ಪ್ರಕಾಶ್ ಮಂಜೇಶ್ವರ ಮತ್ತು ನಿತಿನ್ ಆನಂದ್ ಭಂಡಾರಿ ಕುಂದಾಪುರ ಇವರ ತಾಂತ್ರಿಕ ಸ್ಪರ್ಶದಿಂದಾಗಿ ಆಂಡ್ರಾಯ್ಡ್ ಅಪ್ಲಿಕೇಷನ್ ರೂಪದಲ್ಲಿ ಭಂಡಾರಿವಾರ್ತೆ ಆರಂಭವಾಯಿತು. 2017 ರ ಆಗಸ್ಟ್ ತಿಂಗಳಿನಲ್ಲಿ “ಭಂಡಾರಿವಾರ್ತೆ” ಎಂಬ ಹೆಸರಿನಲ್ಲಿ ಆರಂಭವಾದ ಆಂಡ್ರಾಯ್ಡ್ ಅಪ್ಲಿಕೇಷನ್ ಈಗಲೂ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ.
 
 
ಹೀಗೆ ಬೆರಳ ತುದಿಯಲ್ಲಿ ಮಾಹಿತಿ ನೀಡುವ ತಂತ್ರಜ್ಞಾನಕ್ಕೆ ಕಾಲಿಟ್ಟ ಭಂಡಾರಿವಾರ್ತೆಯೊಂದಿಗೆ ರವಿ ಬಿದನೂರು, ಕುಶಾಲ್ ಕುಮಾರ್, ಸಂದೇಶ್ ಕುಮಾರ್ ಬಂಗಾಡಿ, ಪ್ರಶಾಂತ್ ಕಾರ್ಕಳ, ವೆಂಕಟೇಶ್ ಕುಂದಾಪುರ,ರಾಜೇಶ್ ಭಂಡಾರಿ, ಕುಮಾರಿ ದಿವ್ಯಾ ಉಜಿರೆ, ಶ್ರೀಮತಿ ಶೃತಿ ಶರತ್ ಭಂಡಾರಿ, ಕುಮಾರಿ ಶೃತಿಕ ಬನ್ನಂಜೆ, ರಾಜಶೇಖರ ಭಂಡಾರಿ ಬೆಂಗಳೂರು, ಕಿಶೋರ್ ಸೊರ್ನಾಡು, ಕಿರಣ್ ಸರಪಾಡಿ, ಮನೋರಾಜ್ ರಾಜೀವ್, ಶ್ರೀಪಾಲ್ ಭಂಡಾರಿ ನೆಲ್ಯಾಡಿ, ಭಾಸ್ಕರ ಭಂಡಾರಿ ಶಿರಾಳಕೊಪ್ಪ ಇವರೆಲ್ಲ ಜೊತೆಯಾಗಿ ನಿಂತು ಒಂದು ತಂಡವಾಗಿ ಶ್ರಮಿಸಿದ ರೀತಿ ನಿಜಕ್ಕೂ ಅದ್ಭುತ. ಕಥೆ, ಕವನ, ಲೇಖನ, ಬ್ಯೂಟಿ ಟಿಪ್ಸ್, ಹೊಸ ರುಚಿ, ಹುಟ್ಟುಹಬ್ಬದ ವರದಿ, ಮರಣ ವಾರ್ತೆ, ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಾಧನೆಗಳ ವರದಿ, ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ವರದಿ, ಎಲೆಮರೆಯ ಸಾಧಕರ ಮೇಲೆ ಬೆಳಕು ಚೆಲ್ಲುವ ವರದಿಗಳು, ಭಂಡಾರಿ ಕುಟುಂಬದ ಅಪ್ರತಿಮ ಸಾಧಕರ ಜೀವನ ಗಾಥೆಯಾಧರಿಸಿದ ಲೇಖನಗಳು, ಧಾರ್ಮಿಕ ಕಥಾ ಹಂದರಗಳು, ವಿಡಂಬನಾತ್ಮಕ ವರದಿಗಳು ಇವೆಲ್ಲವುಗಳಿಂದಾಗಿ “ಭಂಡಾರಿವಾರ್ತೆ” ಭಂಡಾರಿ ಕುಟುಂಬದಲ್ಲಿ ಸಂಚಲವನ್ನು ಸೃಷ್ಟಿ ಮಾಡಿದ್ದು ಸುಳ್ಳಲ್ಲ. ಅದೇ ರೀತಿ ದಿನಕ್ಕೊಂದು ಶುಭೋದಯದ ಶುಭನುಡಿಗಳ ಚಿತ್ತಾರ ರೂಪಿಸುತ್ತ ಭಂಡಾರಿವಾರ್ತೆ ಅಂಗಳಕ್ಕೆ ಕಾಲಿಟ್ಟ ರತ್ನಾಕರ ಭಂಡಾರಿ ಬಸ್ರೂರು ಸಹ ಈಗ ನಮ್ಮ ತಂಡದ ಸದಸ್ಯರಲ್ಲೊಬ್ಬರಾಗಿದ್ದಾರೆ.  ಈ ರೀತಿಯಲ್ಲಿ ನಾವು ನಮ್ಮ ಅಭಿಲಾಷೆಯ ಮೊದಲ ಮೆಟ್ಟಿಲನ್ನು ಯಶಸ್ವಿಯಾಗಿ ಏರಿದ್ದೆವು.
 
ನಂತರದಲ್ಲಿ ಈ ಎಲ್ಲಾ ಚಟುವಟಿಕೆಗಳೊಂದಿಗೆ ನಾವಿಟ್ಟ ಎರಡನೇ ಹೆಜ್ಜೆ ಸಮಾಜಮುಖಿ ಚಿಂತನೆ. ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳ ಓದಿಗೆ ದಾನಿಗಳ ನೆರವಿನೊಂದಿಗೆ ಸಹಾಯಸ್ತ ಚಾಚುವುದು, ಅನಾರೋಗ್ಯ ಪೀಡಿತರಾಗಿರುವ ದುರ್ಬಲರ ನೆರವಿಗೆ ಧಾವಿಸಿ ಸಹೃದಯಿ ಬಂಧುಗಳ ಸಹಕಾರದಿಂದ ನೆರವಿನ ಹಸ್ತ ಚಾಚುವುದು. ಈ ಕಾರ್ಯಕ್ಕೆ ನಾವು ಮುಂದಾದಾಗ ಹಲವಾರು ಭಂಡಾರಿ ಬಂಧುಗಳು ನಮ್ಮೊಂದಿಗೆ ಕೈಜೋಡಿಸಿ ನೆರವಾದರು. ಭಂಡಾರಿ ಸಮಾಜದ ಹಲವಾರು ಬಲಿಷ್ಠ ಸಮಾಜ ಸಂಘ ಸಂಘಟನೆಗಳು ಮಾಡಲಾಗದ ಕೈಂಕರ್ಯವನ್ನು ಭಂಡಾರಿವಾರ್ತೆ ಸಹೃದಯಿ ಬಂಧುಗಳ ನೆರವಿನೊಂದಿಗೆ ನಿರಾಯಾಸವಾಗಿ ಮಾಡಿದಾಗ ಹಲವರ ಹುಬ್ಬೇರಿದ್ದೂ ನಿಜ. ಈ ಒಂದು ಕಾರ್ಯ ನಮಗೆ ಆತ್ಮ ತೃಪ್ತಿಯೊಂದಿಗೆ ಮಾನಸಿಕ ಸ್ಥೈರ್ಯವನ್ನು ತಂದುಕೊಟ್ಟಿತು.
 
ನಮ್ಮ “ಭಂಡಾರಿವಾರ್ತೆ” ತಂಡ ನಿರಂತರವಾಗಿ ವರದಿಗಳನ್ನು ಪ್ರಕಟಿಸುತ್ತ ಹೊಸ ಮುಖಗಳಿಗೆ, ಯುವ ಲೇಖಕರಿಗೆ ಕಥೆ ಕವನ ಕಾವ್ಯ ರಚನೆಗಳನ್ನು ಪ್ರಕಟಿಸಲು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಬಗ್ಗೆ ಫೋಟೋ ಸಹಿತ ವರದಿಗಳನ್ನು ಪ್ರಕಟಿಸಿ ಸಮಾಜದ ಮುಂದೆ ಅವರ ಸಾಧನೆಯನ್ನು ಪ್ರಚುರಪಡಿಸಿ ವಿದ್ಯಾರ್ಥಿಗಳ ಮನೋಬಲವನ್ನು ಹೆಚ್ಚಿಸುವ ಕಾರ್ಯವನ್ನು “ಭಂಡಾರಿವಾರ್ತೆ” ಮಾಡುತ್ತಾ ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಸರಿಸುಮಾರು ಎರಡು ಸಾವಿರ ವರದಿ, ಲೇಖನಗಳನ್ನು ಪ್ರಕಟಿಸಿದ “ಭಂಡಾರಿವಾರ್ತೆ” ಭಂಡಾರಿ ಕುಟುಂಬದ ಮನೆ ಮನದ ಮಾತಾಗಿ ಬಂಧುಗಳ ಮನೆಮನದಲ್ಲಿ ಪ್ರತಿಷ್ಠಾಪಿತವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
 
 
ಶತಮಾನದ ಮಹಾಮಾರಿ ಕರೋನಾ ಹಾವಳಿಯಿಂದಾಗಿ ಸರ್ಕಾರ ಅನಿರ್ದಿಷ್ಟಾವಧಿಗೆ ಲಾಕ್ ಡೌನ್ ಘೋಷಿಸಿದಾಗ ಸಂಕಷ್ಟಕ್ಕೆ ಸಿಲುಕಿದ ಭಂಡಾರಿ ಸಮಾಜದ ಬಂಧುಗಳೊಂದಿಗೆ ಭಂಡಾರಿ ವಾರ್ತೆ ನಿರಂತರ ಸಂಪರ್ಕದಲ್ಲಿದ್ದು ಅವರ ಮನೋಸ್ಥೈರ್ಯ ಕುಗ್ಗದಂತೆ, ಅವರಲ್ಲಿ ಭರವಸೆ ತುಂಬುತ್ತಾ ಬೆಂಬಲವಾಗಿ ನಿಂತುಕೊಂಡಿತ್ತು. ಸಂಕಷ್ಟ ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆಯ ಕ್ರಮಗಳೇನು? ಪಾಲಿಸಬೇಕಾದ ನಿಯಮಗಳೇನು? ಎಂಬ ಮಾಹಿತಿ ನೀಡುತ್ತಾ ಜೀವನಕ್ಕಿಂತ ಜೀವ ದೊಡ್ಡದು ಎಂಬ ಭಾವನೆಯನ್ನು ಬಂಧುಗಳಲ್ಲಿ ತುಂಬಿದ್ದು ಭಂಡಾರಿವಾರ್ತೆ. ಮೂಕ ಪ್ರೇಕ್ಷಕರಾಗಿದ್ದ ಸಮಾಜದ ಬಲಿಷ್ಠ ಸಂಘಟನೆಗಳನ್ನು ನೆರವಿಗೆ ಧಾವಿಸುವಂತೆ ಎಚ್ಚರಿಸುತ್ತ,ವಲಯವಾರು ಸಂಘ ಸಂಸ್ಥೆಗಳು ಬಂಧುಗಳ ನೆರವಿಗೆ ಧಾವಿಸಲು ಪ್ರೇರೇಪಣೆ ನೀಡಿದ್ದು ಭಂಡಾರಿವಾರ್ತೆ. ದಿನಸಿ ಕಿಟ್ ಗಳನ್ನು ವಿತರಣೆ ಮಾಡುತ್ತಿದ್ದ ಸಂಘಟನೆಗಳಿಗೆ ಅಶಕ್ತರ ಬಗ್ಗೆ ಮಾಹಿತಿ ನೀಡಿ ಸಾಮಗ್ರಿಗಳನ್ನು ತಲುಪಿಸಲು ಅಂತರ್ಗಾಮಿಯಾಗಿ ಕೆಲಸ ಮಾಡಿದ್ದು ಭಂಡಾರಿವಾರ್ತೆ ಎಂದು ತಿಳಿಸಲು ಹರ್ಷವೆನಿಸುತ್ತದೆ.
 
 
ಕ್ಷೌರಿಕ ವೃತ್ತಿಯನ್ನು ಅವಲಂಬಿಸಿರುವ ಭಂಡಾರಿ ಕುಟುಂಬಗಳಿಗೆ ಸರ್ಕಾರ ಐದು ಸಾವಿರ ರೂಪಾಯಿಗಳ ಸಹಾಯಧನ ಘೋಷಣೆ ಮಾಡಿದಾಗ ಆ ಯೋಜನೆಯಡಿಯಲ್ಲಿ ಸೌಲಭ್ಯ ವಂಚಿತರಾಗಿ ಸಹಾಯಧನ ದೊರೆಯದೇ ಇರುವ ಭಂಡಾರಿ ಬಂಧುಗಳಿಗೆ ಭಂಡಾರಿವಾರ್ತೆ “ಕೋವಿಡ್ 19 ಪರಿಹಾರ ನಿಧಿ” ಸ್ಥಾಪಿಸಿ ಸಹೃದಯಿ ಬಂಧುಗಳಿಂದ ನೆರವನ್ನು ಪಡೆದು ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದೆ. ಹೀಗೆ ಭಂಡಾರಿ ವಾರ್ತೆ ಕೈಗೊಳ್ಳುವ ಪ್ರತಿಯೊಂದು ಯೋಜನೆಗಳನ್ನು,ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮತ್ತು ಪಾರದರ್ಶಕತೆಯಿಂದ ವ್ಯವಸ್ಥೆ ಮಾಡಿ ನೇರವಾಗಿ ದಾನಿಯಿಂದ ಫಲಾನುಭವಿಗಳಿಗೆ ರೂಪದಲ್ಲಿ ಕಾರ್ಯಕ್ರಮ ರೂಪಿಸಿ ಭಂಡಾರಿ ವಾರ್ತೆ ಕೇವಲ ಒಂದು ವ್ಯವಸ್ಥೆಯ ಮಾಧ್ಯಮವಾಗಿ ಪಾರದರ್ಶಕ ಸೇವೆಯನ್ನು ನೀಡುತ್ತಾ ಬಂದಿದೆ.
 
ಭಂಡಾರಿ ಕುಟುಂಬಗಳ ಔದ್ಯೋಗಿಕ ಬೆಳವಣಿಗೆಯ ದೃಷ್ಟಿಯಿಂದ ಈ ಸಾಲಿನಲ್ಲಿ ಕುಶಾಲ್ ಕುಮಾರ್ ನೇತೃತ್ವದಲ್ಲಿ ಆರಂಭಿಸಲಾದ “ವಿಷನ್ ಜಾಬ್ಸ್” ಹೆಸರಿನ ಉಚಿತ ಉದ್ಯೋಗ ಸಲಹಾ ಕೇಂದ್ರ ಭಂಡಾರಿವಾರ್ತೆಯ ಮಹತ್ವದ ಯೋಜನೆಗಳಲ್ಲೊಂದು. ವಿದ್ಯಾಭ್ಯಾಸ ಮುಗಿದು ಉದ್ಯೋಗದ ಬೇಟೆಯಲ್ಲಿ ತೊಡಗಿರುವ ಭಂಡಾರಿ ಕುಟುಂಬದ ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗದ ವ್ಯವಸ್ಥೆ ಕಲ್ಪಿಸಲು “ವಿಷನ್ ಜಾಬ್ಸ್” ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ವಿಷನ್ ಜಾಬ್ಸ್ ಭಂಡಾರಿ ಕುಟುಂಬದ ಅರ್ಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಿ ಸಹಕರಿಸಲಿದೆ.
 
 
ಭಂಡಾರಿ ವಿವಾಹ.Com ಸಹ ಭಂಡಾರಿ ಕುಟುಂಬದ ಅವಿವಾಹಿತ ಯುವಕ ಯುವತಿಯರಿಗೆ ದಾರಿದೀಪವಾಗಲಿ ಎಂಬ ಉದ್ದೇಶದಿಂದ ಆರಂಭಿಸಲಾದ ಯೋಜನೆಯಾಗಿದ್ದು ಈಗಾಗಲೇ ಹಲವರು ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ. ಮುಂಬರುವ ದಿನಗಳಲ್ಲಿ ಭಂಡಾರಿ ವಿವಾಹ.Com ಕಾರ್ಯಯೋಜನೆ ಮತ್ತು ರೂಪುರೇಷೆಗಳಿಗೆ ಚುರುಕು ಮುಟ್ಟಿಸಿ ಭಂಡಾರಿ ಕುಟುಂಬದ ಪ್ರತಿ ಮನೆ ಮನೆಗೂ ತಲುಪಿಸಲು ಯೋಜನೆ ರೂಪಿಸಲಾಗಿದೆ.
 
ಭಂಡಾರಿ ಕುಟುಂಬಗಳ ಸಮಗ್ರ ಅಭಿವೃದ್ಧಿಗಾಗಿ ಜಾರಿಗೆ ತರಲು ಬಯಸಿದ ವಿಷನ್ 2020 ನಿರೀಕ್ಷಿತ ವೇಗವನ್ನು ಪಡೆದುಕೊಳ್ಳಲಿಲ್ಲ. ಕ್ಷೌರಿಕ ವೃತ್ತಿಯನ್ನು ಅವಲಂಬಿಸಿರುವ ಯುವಕರಿಗೆ ಷಾಪ್ ತೆರೆಯಲು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯುವಂತಾಗಬೇಕು, ಷಾಪ್ ಗಳು ಅತ್ಯಾಧುನಿಕ ಮಟ್ಟಕ್ಕೇರಿ ಬಂಧುಗಳ ಜೀವನ ಮಟ್ಟ ಸುಧಾರಿಸಬೇಕು, ಸಮಾಜದಲ್ಲಿ ಬಡವ ಶ್ರೀಮಂತ ಎಂಬ ಬೇಧ ಭಾವ ಇಲ್ಲದಂತಾಗಬೇಕು ಎಂಬ ಸದುದ್ದೇಶದಿಂದ ಆರಂಭಿಸಲು ಉದ್ದೇಶಿಸಿದ ವಿಷನ್ 2020 ಈ ಸಾಲಿನಲ್ಲಿ ನಿರೀಕ್ಷಿತ ವೇಗ ಪಡೆದು ಕಾರ್ಯರೂಪಕ್ಕೆ ಬರಬಹುದೆನ್ನುವ ನಿರೀಕ್ಷೆಯನ್ನು ಮತ್ತು ಅತೀವ ವಿಶ್ವಾಸವನ್ನು ಹೊಂದಿದ್ದೇನೆ.
 
 
ವಿಷನ್ 2020 ಯ  ಪ್ರಾಯೋಗಿಕ ಪರೀಕ್ಷೆಯೆಂಬಂತೆ ಮಂಗಳೂರು ಕದ್ರಿಯ ಬಂಟ್ಸ್ ಹಾಸ್ಟೆಲ್ ನಿಂದ ಕದ್ರಿಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಸಿ.ವಿ.ನಾಯಕ್ ಹಾಲ್ ಪಕ್ಕದ ಪ್ರಕೃತಿ ಬಿಲ್ಡಿಂಗ್ ನಲ್ಲಿ “ಮ್ಯಾಜಿಕ್ ಹ್ಯಾಂಡ್ಸ್”ಎಂಬ ಅತ್ಯಾಧುನಿಕ ಬ್ಯೂಟಿ ಟ್ರಾನ್ಸ್ ಫಾರ್ಮಿಂಗ್ ಸೆಂಟರ್ ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ. ಗ್ರಾಹಕರಿಗೆ ಸೌಂದರ್ಯವರ್ಧಕದ ಹಲವಾರು ಮಜಲುಗಳು ಎರಡೂವರೆ ಸಾವಿರ ಸ್ಕ್ವೇರ್ ಫೀಟ್  ಜಾಗದ ಒಂದೇ ಸೂರಿನಡಿಯಲ್ಲಿ ಇಲ್ಲಿ ಲಭ್ಯವಾಗಲಿದೆ. ಸೌಂದರ್ಯದ ಸಂಪೂರ್ಣ ಬದಲಾವಣೆ ಕೇಂದ್ರ, ಕೂದಲು ಕಸಿ, ಕೂದಲು ಜೋಡಣೆ, ಮುಖ ಸೌಂದರ್ಯದ ಹೊಸ ಶೋಧನೆ, ನುರಿತ ಡಾಕ್ಟರ್ ಗಳಿಂದ ಕೂದಲು ಮತ್ತು ಚರ್ಮದ ಆರೈಕೆಯ ಸಲಹಾ ಕೇಂದ್ರ, ದೇಹ ಸೌಂದರ್ಯದ ವಿನೂತನ ಸೇವೆಗಳು, ಅಂತಾರಾಷ್ಟ್ರೀಯ ಮಟ್ಟದ ಚಿಕಿತ್ಸೆ, ಆಯುರ್ವೇದ ಪ್ರಕೃತಿ ಚಿಕಿತ್ಸೆ, ಲೇಸರ್ ಚಿಕಿತ್ಸೆ, ಸ್ಟೋನ್ ಥೆರಪಿ, ರೇಖಿ ಚಿಕಿತ್ಸೆ, ಸೌಂದರ್ಯ ಸಾಧನಗಳ ಮಾರಾಟ ಕೇಂದ್ರ ಹೀಗೆ ಹಲವಾರು ಸೇವೆಗಳು ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಲಭಿಸಲಿದೆ. ಭಂಡಾರಿ ಸಮುದಾಯದಲ್ಲಿ ಇದೊಂದು ವಿನೂತನ ಯೋಜನೆಯಾಗಿದ್ದು ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮಾದರಿಯಾಗಿ ನಿಲ್ಲುವ ಯೋಜನೆ ಇದಾಗಲಿದೆ. ನೌಕರ ಮಾಲಿಕ ಎಂಬ ಭೇದ ಭಾವವಿಲ್ಲದೆ ಅಂತರ್ಗತವಾಗಿ ನನ್ನದೇ ನಮ್ಮದೇ ಎಂಬ ಭಾವನೆ ಬೆಳೆಸುತ್ತಾ ನೌಕರ ವೃಂದಕ್ಕೆ ವಿಶೇಷ ಸವಲತ್ತು ನೀಡಿ ಕಾಳಜಿ ವಹಿಸುವ ಚಿಂತನೆಯೊಂದಿಗೆ ಆರಂಭಿಸಲಾಗಿರುವ “ಮ್ಯಾಜಿಕ್ ಹ್ಯಾಂಡ್ಸ್” ಯೋಜನೆಯ ಶಾಖೆಗಳನ್ನು ಭವಿಷ್ಯದಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಆಲೋಚನೆಯೂ ಇದೆ.
 
 
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸಮಾಜಸೇವೆಯ ಮನೋಭಾವದಿಂದ ಭಂಡಾರಿವಾರ್ತೆ ಇಂತಹ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.ಭಂಡಾರಿ ಸಮಾಜದ ಶ್ರೇಯಕ್ಕಾಗಿ ನಮಗೆ ದೊರೆತ ಅಲ್ಪಾವಧಿಯಲ್ಲಿಯೇ ನಮ್ಮ ಕೈಲಾದ ಅಳಿಲುಸೇವೆಯನ್ನು ಭಂಡಾರಿವಾರ್ತೆ ಮುಖಾಂತರ ಮಾಡಿಕೊಂಡು ಬಂದಿದ್ದೇವೆ. ಮುಂದಿನ ದಿನಮಾನಗಳಲ್ಲಿ ಸಹೃದಯಿ ಬಂಧುಗಳ,ಸಮಾಜದ ಸಹೋದರ ಸಂಘಟನೆಗಳ ಬೆಂಬಲ ಇದೇ ರೀತಿ ದೊರೆತಲ್ಲಿ ನಾವು ಇನ್ನಷ್ಟು ಕ್ರಿಯಾಶೀಲವಾಗಿ ಭಂಡಾರಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತೇವೆ ಎಂಬ ಭರವಸೆಯನ್ನು ನೀಡುತ್ತೇನೆ.
 
ಕೊನೆಯದಾಗಿ ಈ ಸಂವತ್ಸರದಲ್ಲಿ ಅಕಾಲಿಕವಾಗಿ ನಮ್ಮನ್ನು ಬಿಟ್ಟು ಅಗಲಿದ ಹಿರಿಯರಾದ ಯಕ್ಷಬ್ರಹ್ಮ ಶ್ರೀ ಅನಂತರಾಮ್ ಬಂಗಾಡಿಯವರು,ಶ್ರೀ ವಿ.ಸಿ.ಶೇಖರ್ ಭಂಡಾರಿ ಬೆಂಗಳೂರು, ಪ್ರಾಸಕವಿ ಶ್ರೀ ಕಾರ್ಕಳ ಶೇಖರ್ ಭಂಡಾರಿಯವರಾದಿಯಾಗಿ ಅಗಲಿದ ಭಂಡಾರಿ ಸಮಾಜದ ಚೇತನಗಳಿಗೆ ಭಾವಪೂರ್ಣ ಶೃದ್ಧಾಂಜಲಿಯನ್ನು ಅರ್ಪಿಸಬಯಸುತ್ತೇನೆ.
 
 
 
ಧನ್ಯವಾದಗಳೊಂದಿಗೆ….
 

ಪ್ರಕಾಶ್ ಭಂಡಾರಿ ಕಟ್ಲ.
ಸಂಸ್ಥಾಪಕರು ಮತ್ತು ಕಾರ್ಯ ನಿರ್ವಾಹಕರು.
ಭಂಡಾರಿವಾರ್ತೆ.
 
 

1 thought on “ಭಂಡಾರಿ ವಾರ್ತೆ ಗೆ 3ನೇ ವಾರ್ಷಿಕೋತ್ಸವ ಸಂಭ್ರಮ- ಸಂಪಾದಕರ ನುಡಿ.

Leave a Reply

Your email address will not be published. Required fields are marked *