ಶೃಂಗೆರಿಯಲ್ಲಿ ಸೆಲೂನ್ ಉದ್ಯಮ ಮತ್ತು ಕೃಷಿಕರಾಗಿದ್ದ ಶೀನ ಭಂಡಾರಿ ಮತ್ತು ರಾಧಮ್ಮ ಭಂಡಾರಿಯವರ ಮಗನಾದ ಶ್ರೀ ನರಸಿಂಹ ಭಂಡಾರಿ ಕೊಪ್ಪಅಕ್ಟೋಬರ್ 4 , 2020 ರ ಭಾನುವಾರ ಸಂಜೆ 3.30ಕ್ಕೆ ವಿಧಿವಶರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಶೃಂಗೆರಿಯ ಬಡ ಕುಟುಂಬದಲ್ಲಿ ಜನಿಸಿದ ನರಸಿಂಹ ಭಂಡಾರಿಯವರು .
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಡುಬಡತನದಲ್ಲಿ ಶೃಂಗೇರಿಯಲ್ಲೆ ಪೂರೈಸಿ SSLC ಯಲ್ಲಿ ಉತ್ತಮ ಶ್ರೇಣಿಯಲ್ಲೆ ಉತ್ತೀರ್ಣರಾದರು.
ಮುಂದೆ ಉನ್ನತ ವಿದ್ಯಾಭ್ಯಾಸದ ಹಂಬಲ ಮನದಲ್ಲಿದ್ದರೂ ಬಡತನದ ನೆರಳು ಇವರ ಮುಂದಿನ ಕಲಿಕೆಗೆ ಅಡ್ಡಿಯಾಯಿತು. ಮತ್ತು ಆ ಸಮಯದಲ್ಲಿ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಬೇಕಾದ ವಿದ್ಯಾಲಯ ಅಥವಾ ತಂತ್ರಜ್ಞಾನ ಕೇಂದ್ರಗಳು ಹತ್ತಿರದಲ್ಲಿ ಎಲ್ಲೂ ಇರಲಿಲ್ಲ. ಇಂತಹ ಸಮಯದಲ್ಲಿ ಇವರ ಸಹಾಯಕ್ಕೆ ಯಾರೂ ಇರಲಿಲ್ಲ ಹಾಗಾಗಿ ಪಾಲಿಗೆ ಬಂದದ್ದೆ ಪಂಚಾಮೃತವೆಂದು ಭಾವಿಸಿದ ನರಸಿಂಹ ಭಂಡಾರಿಯವರು ಜೀವನ ಅನುಭವದಲ್ಲಿ ಪಾಠ ಕಲಿಯಲು ಹೆಜ್ಜೆಇಟ್ಟರು.
ಅದೇ ಹೊತ್ತಿಗೆ ಶೃಂಗೇರಿಯಲ್ಲಿ ರಾಜಾ ಇಂಡಸ್ಟ್ರೀಸ್ ನವರು ಆಯೋಜಿಸಿದ್ದ ಆರು ತಿಂಗಳ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮುಂದೆ ಅದೇ ಕಂಪೆನಿಯಲ್ಲಿ ಉಳುಮೆಯಂತ್ರದ(ಟಿಲ್ಲರ್)ಸರ್ವಿಸ್ ತಂತ್ರಜ್ಞರಾಗಿ 1970 ರಿಂದ 1976 ರವರೆಗೆ ಸೇವೆ ಸಲ್ಲಿಸಿದರು.
ಹಲವು ಸಮಯಗಳ ಮತ್ತೊಬ್ಬರ ಅಡಿಯಾಳಾಗಿ ದುಡಿದ ಭಂಡಾರಿಯವರು ಸ್ವಂತ ಉದ್ಯಮ ಆರಂಭಿಸುವ ಬಗ್ಗೆ ಚಿಂತಿಸಿ ಆ ಕಂಪೆನಿಗೆ ರಾಜೀನಾಮೆ ನೀಡಿ ಕೊಪ್ಪದಲ್ಲಿ ಶ್ರೀ ದುರ್ಗಾ ಇಂಜಿನಿಯರಿಂಗ್ ಎಂಬ ಸಂಸ್ಥೆಯನ್ನು ಆರಂಭಿಸಿದರು.
ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಭಂಡಾರಿಯವರಿಗೆ ರೈತರ ಕಷ್ಟಗಳು ಚೆನ್ನಾಗಿಯೇ ಅರ್ಥವಾಗಿದ್ದವು. ಅದಕ್ಕಾಗಿ ರೈತರಿಗೆ ಅನುಕೂಲವಾಗುವಂತಹ ಸಣ್ಣ ಸಣ್ಣ ಪ್ರಯೋಗಗಳನ್ನು ನಡೆಸಿ ಅದರಲ್ಲಿ ನಿಧಾನವಾಗಿ ಯಶಸ್ವಿಕಾಣತೊಡಗಿದರು.
ನರಸಿಂಹ ಭಂಡಾರಿಯವರ ಸಾಧನೆಗೆ ಕಾರಣವಾದ ಅವರ ಕೃಷಿ ಉಪಕರಣಗಳು
1) ಅಡಿಕೆ ಮತ್ತು ಏಲಕ್ಕಿ ಒಣಗಿಸುವ ಡ್ರೈಯರ್.5 ವಿವಿಧ ಮಾದರಿಗಳಲ್ಲಿ ಲಭ್ಯ.ಈ ಉಪಕರಣ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಿಂದ ಮಾನ್ಯತೆ ಪಡೆದಿದೆ.ಇದನ್ನು ಖರೀದಿಸುವ ಅಡಿಕೆ ಬೆಳೆಗಾರರಿಗೆ ಮ್ಯಾಮ್ಕೋಸ್ ನಿಂದ ಸಬ್ಸಿಡಿ ದೊರೆಯುತ್ತದೆ.
2)ಹಸಿ ಅಡಿಕೆ ಸುಲಿಯುವ ಯಂತ್ರ
3)ಒಣ ಅಡಿಕೆ ಸುಲಿಯುವ ಯಂತ್ರ
4)ಅಡಿಕೆ ಪುಡಿ ಮಾಡುವ ಯಂತ್ರ
5) ಬಹು ಉಪಯೋಗಿ ನೀರು ಮೇಲೆತ್ತುವ ಯಂತ್ರ (ಇದರಿಂದ 5 ತರಹದ ಕೆಲಸವನ್ನು ಸುಲಭವಾಗಿ ನಿರ್ವಹಿಸಬಹುದು)
6) ಪವರ್ ಟಿಲ್ಲರ್ ಮತ್ತು ಸುಲಭವಾಗಿ ಜೋಡಿಸಬಹುದಾದಂತಹ ವಿದ್ಯುತ್ ಶಕ್ತಿಯ ಆಲ್ಟರ್ನೇಟರ್ಗಳು.
7)ಹರಿಯುವ ನೀರಿನ ಸಹಾಯದಿಂದ ಯಾವುದೇ ವಿದ್ಯುತ್ ಅಥವಾ ಇಂಧನ ಶಕ್ತಿಯ ಸಹಾಯವಿಲ್ಲದೆ ನೀರನ್ನು ಮೇಲಕ್ಕೆತ್ತಬಹುದಾದ ಹೈಡ್ರೋಪಂಪುಗಳು.
8)ರೈತರಿಗೆ ಸುಲಭ ಸಾಗಾಣಿಕೆಗೆ ಒಂದು ಚಕ್ರದ ಕೈಗಾಡಿ ಮತ್ತು ವಿವಿಧ ಬಗೆಯ ಕೈಗಾಡಿಗಳು.
9)ಕಾಳುಮೆಣಸು ಬೇರ್ಪಡಿಸುವ ಯಂತ್ರ ಇದು 5 ಮಾಡೆಲ್ ಗಳಲ್ಲಿ ಲಭ್ಯ.ಇದನ್ನು ಖರೀದಿಸುವ ಬೆಳೆಗಾರರಿಗೆ ಸಂಬಾರ ಮಂಡಳಿಯಿಂದ ಸಬ್ಸಿಡಿ ದೊರೆಯುತ್ತದೆ.
10)ಹಪ್ಪಳ ತಯಾರಿಸುವ ಯಂತ್ರ. ಏಕಕಾಲಕ್ಕೆ ನಾಲ್ಕು ಹಪ್ಪಳಗಳನ್ನು ತಯಾರಿಸಬಹುದು.
11)ಕೃಷಿಕರಿಗಾಗಿ ಅಲ್ಯುಮಿನಿಯಂ ಏಣಿಗಳು ಮತ್ತು ಕಬ್ಬಿಣದ ಏಣಿಗಳು.
12) ಸುಲಭವಾಗಿ ಕಾರ್ಯನಿರ್ವಹಿಸುವಂತೆ ಪರಿವರ್ತಿಸಲಾಗಿರುವ ಸುಧಾರಿತ ಗಟಾರ್ ಯಂತ್ರಗಳು.
13) ಅಡಿಕೆ ಗೊನೆಯಿಂದ ಹಸಿ ಅಡಿಕೆಯನ್ನು ಬೇರ್ಪಡಿಸುವ ಯಂತ್ರ.
ಇವರಿಗೆ ಇದುವರೆಗೆ ದೊರೆತ ಪುರಸ್ಕಾರ ಮತ್ತು ಸನ್ಮಾನಗಳು
1)2001 ರಲ್ಲಿ ನ್ಯಾಷನಲ್ ಇನ್ನೋವೇಷನ್ ಫೌಂಡೇಶನ್ ನಿಂದ ಪ್ರಥಮ ರಾಷ್ಟ್ರೀಯ ಪ್ರಶಸ್ತಿ.
2)2002ರಲ್ಲಿ ಕರ್ನಾಟಕ ಸಂಶೋಧಕರ ಆಯ್ಕೆ ಸಮಿತಿ ಸದಸ್ಯ ಮತ್ತು ರಾಷ್ಟ್ರಪತಿಯವರೊಡನೆ ಚಹಾಕೂಟದಲ್ಲಿ ಭಾಗವಹಿಸುವ ಗೌರವ.
3)2007ರಲ್ಲಿ ಕಲಾಚೇತನ ಯುವಸಂಸ್ಥೆ, ವಿಜಾಪುರ ಇವರಿಂದ ಸುವರ್ಣ ಕನ್ನಡಿಗ ಪ್ರಶಸ್ತಿ.
4)2007ರಲ್ಲಿ ಜೀ ಕನ್ನಡ ವಾಹಿನಿಯ ಎಸ್ಸೆಲ್ ಕರ್ನಾಟಕ ಶ್ರೇಷ್ಠ ಉದ್ಯಮ ಮತ್ತು ಪರಿವರ್ತಕ ಪ್ರಶಸ್ತಿ.
5)2008 ರಲ್ಲಿ ಕರ್ನಾಟಕ ರಾಜ್ಯಪಾಲರಿಂದ ಕೃಷಿ ಪರಿಕರ ಸಂಶೋಧಕ ಪ್ರಶಸ್ತಿ.
6) 2009 ರಲ್ಲಿ ಚಾಲಿ ಅಡಿಕೆ ಸುಲಿಯುವ ಯಂತ್ರಕ್ಕೆ ರಾಷ್ಟ್ರೀಯ ಪುರಸ್ಕಾರ.
7)2017 ರಲ್ಲಿ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸೋಶಿಯಲ್ ಎಂಡ್ ಎಕನಾಮಿಕ್ ರಿಫಾರ್ಮ್ಸ್ ವತಿಯಿಂದ ಸರ್ .ಎಂ. ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ.
8) ಕಚ್ಚೂರು ನಾಗೇಶ್ವರ ದೇವಸ್ಥಾನದಲ್ಲಿ ಭಂಡಾರಿ ಸಮಾಜದ ವತಿಯಿಂದ ಎರಡು ಬಾರಿ ಸನ್ಮಾನ ಮತ್ತು ಬೆಂಗಳೂರು ಭಂಡಾರಿ ಸಂಘದಿಂದ ಸನ್ಮಾನ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಗೌರವ ಪುರಸ್ಕಾರಗಳು.
ನರಸಿಂಹ ಭಂಡಾರಿಯವರು ಭಂಡಾರಿ ವಾರ್ತೆಯ ಹಿತೈಷಿ ಹಾಗೂ ಭಂಡಾರಿ ವಾರ್ತೆಯ ಕಾರ್ಯಕ್ರಮಗಳ ಪ್ರಾಯೋಜಕರೂ ಆಗಿದ್ದರು.
ದಿವಂಗತರು ಧರ್ಮಪತ್ನಿಯಾದ ವಸಂತಿ ನರಸಿಂಹ ಭಂಡಾರಿ ಮತ್ತು ಮಕ್ಕಳಾದ ಅಜಯ್ ಕುಮಾರ್ ಮತ್ತು ಆಶ್ರೀತ್ ಕುಮಾರ್ ರನ್ನು, ಸೊಸೆ, ಸಹೋದರರು, ಸಹೋದರಿಯರನ್ನು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತದೆ .
–ಭಂಡಾರಿ ವಾರ್ತೆ