September 20, 2024

ಆತ್ಮೀಯ ಬಂಧುಗಳೇ…
ಪ್ರತಿವರ್ಷದ ಪದ್ದತಿಯಂತೆ “ಭಂಡಾರಿವಾರ್ತೆ” ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ “ಕನ್ನಡ ಕಿರುಕಥಾಸ್ಪರ್ಧೆ” ಯನ್ನು ಏರ್ಪಡಿಸಿತ್ತು. ಸಮಾಜದ ಬಂಧುಗಳಿಂದ ಕಿರುಕಥೆಗಳನ್ನು ಆಹ್ವಾನಿಸುವುದು, ಆಹ್ವಾನಿತ ಕಥೆಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಕಥೆಗಳಿಗೆ ನಗದು ಬಹುಮಾನ ನೀಡುವುದು ಮತ್ತು ಭಾಗವಹಿಸಿದ ಕತೆಗಳನ್ನು ಭಂಡಾರಿ ವಾರ್ತೆಯಲ್ಲಿ ಆದ್ಯತಾನುಸಾರ ಪ್ರಕಟಿಸಲಾಗುವುದು ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನಾ ಪತ್ರವನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಅದರಂತೆ ಸಮಾಜದ ಬಂಧುಗಳಿಂದ ಅದ್ಭುತವಾದ ಸ್ಪಂದನೆ ದೊರಕಿರುವುದು ಮಾತ್ರವಲ್ಲದೆ ಅನ್ಯ ಸಮಾಜದವರಿಂದಲೂ ಅಭೂತಪೂರ್ವ ಬೆಂಬಲ ದೊರಕಿರುವುದು ನಮ್ಮಲ್ಲಿ ಹೊಸ ಉತ್ಸಾಹವನ್ನು ತುಂಬಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಹಿತ್ಯಕ ಸ್ಪರ್ಧೆಗಳನ್ನು ಆಯೋಜಿಸಲು ನಮಗೆ ನೈತಿಕ ಬಲವನ್ನು ಈ ಸ್ಪರ್ಧೆ ತಂದುಕೊಟ್ಟಿದೆ ಎಂದರೆ ತಪ್ಪಾಗಲಾರದು. ನಾವು ನಿರೀಕ್ಷಿಸಿರದ ಮಟ್ಟದಲ್ಲಿ ಸುಮಾರು ಐವತ್ತು ಕಥೆಗಳು ನಮ್ಮನ್ನು ತಲುಪಿದ್ದವು. ಅವುಗಳಲ್ಲಿ ಮಕ್ಕಳ ಕಥೆ, ಜಾನಪದ ಕಥೆ ಮತ್ತು ಆಡುಭಾಷೆಯ ಕಥೆಗಳನ್ನು ಸ್ಪರ್ಧೆಗೆ ಪರಿಗಣಿಸದೆ, ಸಾಮಾಜಿಕ ಕಳಕಳಿ ಇರುವ, ಸಮಾಜಕ್ಕೆ ಸಂದೇಶ ನೀಡುವಂತಹ, ಉತ್ತಮ ಗುಣಮಟ್ಟದ ಮೂವತ್ತೆರಡು ಕಥೆಗಳನ್ನು ಆಯ್ಕೆ ಮಾಡಿ ನಾವು ನಮ್ಮ ತೀರ್ಪುಗಾರರಿಗೆ ಲೇಖಕರ ಹೆಸರುಗಳನ್ನು ಹೊರತುಪಡಿಸಿ ಕೇವಲ ಕಥೆಗಳನ್ನು ಮಾತ್ರ ಕಳುಹಿಸಿಕೊಟ್ಟು, ಅವರಿಂದ ಮೌಲ್ಯಮಾಪನ ನಡೆಸಿ ಮೂರು ಅತ್ಯುತ್ತಮ ಕಥೆಗಳನ್ನು ಪ್ರಥಮ, ದ್ವಿತೀಯ,ಹಾಗೂ ತೃತೀಯ ಸ್ಥಾನಗಳಿಗಾಗಿ ಆಯ್ಕೆ ಮಾಡಲಾಗಿದೆ.

ನಿರ್ಣಾಯಕರ ಆಯ್ಕೆಯಂತೆ “ತನ್ನೂರಿಗೆ ಸರಿಯಾದ ರಸ್ತೆ ಸಂಪರ್ಕ ಇರದುದರಿಂದ ತನ್ನ ತಾಯಿ ಸಾಯಬೇಕಾಗಿ ಬಂತು,ನನಗಾದ ಅನ್ಯಾಯ ಇನ್ನಾರಿಗೂ ಆಗದಿರಲೆಂದು ಸರ್ಕಾರಕ್ಕೆ ಸಡ್ಡು ಹೊಡೆದು ರಸ್ತೆ ನಿರ್ಮಿಸಿಕೊಂಡು, ತನ್ನೂರಿನವರಿಗೆ ಪ್ರತಿಭಟಿಸುವ,ತಮ್ಮ ಹಕ್ಕನ್ನು ಧಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಸ್ಪೂರ್ತಿ ತುಂಬುವ ಪುಟ್ಟ ಬಾಲಕಿಯೊಬ್ಬಳ ಕಥಾಹಂದರ” ಹೊಂದಿರುವ ರಂಜಿತ್ ಭಂಡಾರಿ ಸಸಿಹಿತ್ಲು ರವರ “ಸ್ಫೂರ್ತಿ” ಕಥೆ ಪ್ರಥಮ ಸ್ಥಾನವನ್ನು ಗಳಿಸಿದರೆ,

“ತನ್ನ ಮನದಿನಿಯ ನನ್ನ ಪ್ರತಿಭೆಗೆ ನೀರೆಯಬಹುದೆಂದು ಭಾವಿಸಿ ಮದುವೆಯಾದ ಹೆಣ್ಣೊಬ್ಬಳು ಗಂಡನ ಅಸಡ್ಡೆ,ಮೂದಲಿಕೆ ಮಾತುಗಳಿಗೆ ಅರೆಜೀವವಾಗಿ,ತನ್ನ ಮಾವನೆಂಬ ಮಾನಗೇಡಿಯಿಂದ ಲೈಂಗಿಕ ಶೋಷಣೆಗೊಳಗಾಗಿ ಭ್ರಮನಿರಸನಗೊಂಡು ಬದುಕಿಗೆ ಅಂತಿಮ ವಿದಾಯ ಹೇಳುವ ಹೆಣ್ಣೊಬ್ಬಳ” ಕಥಾಹಂದರದ ಹೊಂದಿರುವ ಬಜಪೆಯ ಶ್ರೀಮತಿ ವನಿತಾ ಅರುಣ್ ಭಂಡಾರಿಯವರ “ಜೊತೆಗಾರ” ಕಥೆ ದ್ವಿತೀಯ ಸ್ಥಾನವನ್ನು,

“ಬೆಟ್ಟದೂರಿನ ಜನರ ದೀಪವನ್ನು ತಂದು ದೇವರದೀಪವೆಂದು ತನ್ನೂರಿನ ಜನರನ್ನು ನಂಬಿಸಿ ಅವರ ಮೌಡ್ಯತೆಯ ಅಂಧಕಾರವನ್ನು ತೊಲಗಿಸುವ,ತನ್ಮೂಲಕ ತಾನೂ ಊರವರ ದೃಷ್ಟಿಯಲ್ಲಿ ಶ್ರೇಷ್ಠನೆನಿಸಿಕೊಳ್ಳುವ ಕ್ಷೌರಿಕರ ದ್ಯಾವಪ್ಪನ” ಕಥಾವಸ್ತು ಹೊಂದಿರುವ ವಿಜಯ ಭಂಡಾರಿ ನಿಟ್ಟೂರು ರವರ “ದೇವರ ದೀಪ” ಕಥೆ ತೃತೀಯ ಸ್ಥಾನವನ್ನು ಗಳಿಸಿಕೊಂಡಿತು.

ಭಂಡಾರಿ ಸಮಾಜದ ಯುವ ಪ್ರತಿಭೆಗಳಿಗೆ ವೇದಿಕೆಯಾಗಬೇಕೆಂಬ ಸದುದ್ಧೇಶದಿಂದ ಶ್ರೀ ಪ್ರಕಾಶ್ ಭಂಡಾರಿ ಕಟ್ಲರ ಸಾರಥ್ಯದಲ್ಲಿ ಹೊರಟ “ಭಂಡಾರಿವಾರ್ತೆ” ಯ ತಂಡಕ್ಕೆ ಈ ಸ್ಪರ್ಧೆಯ ಅದ್ಭುತವಾದ ಯಶಸ್ಸು ಆನೆಬಲವನ್ನು ತಂದುಕೊಟ್ಟಿದೆ. ಸ್ಪರ್ಧೆಗೆ ಕಥೆಗಳನ್ನು ಕಳುಹಿಸಿ ಸಹಕರಿಸಿದ ಯುವಕ ಯುವತಿಯರಿಗೆ, ಸೂಕ್ತ ಸಲಹೆ ಸಹಕಾರ ನೀಡಿದ ಸಮಾಜದ ಹಿರಿಯರಿಗೆ,ತಾಳ್ಮೆಯಿಂದ ಎಲ್ಲಾ ಕಥೆಗಳನ್ನು ಓದಿ, ಪರಾಮರ್ಶಿಸಿ,ಪಕ್ಷಾತೀತವಾದ ಫಲಿತಾಂಶ ನೀಡಿದ ತೀರ್ಪುಗಾರರಿಗೆ,ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸ್ಪರ್ಧೆಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ “ಭಂಡಾರಿವಾರ್ತೆ” ತಂಡದಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಗುತ್ತದೆ.


ವಂದನೆಗಳೊಂದಿಗೆ ….

“ಭಂಡಾರಿವಾರ್ತೆ ತಂಡ.”

3 thoughts on “ಭಂಡಾರಿವಾರ್ತೆ – “ಕನ್ನಡ ಕಿರುಕಥಾ ಸ್ಪರ್ಧೆ”ಯ ವಿಜೇತರು

  1. ತುಂಬಾ ಖುಷಿ ಆಯ್ತು .. ಹೀಗೆ ಕಥೆ ಬರೆಯೋದಕ್ಕೆ ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳು

Leave a Reply

Your email address will not be published. Required fields are marked *