ಹಿಂದಿನ ರಾತ್ರಿ ವೇಶ್ಯಾವಟಿಕೆ ತಾಣದ ಮೇಲೆ ನಡೆದ ರೈಡ್ನಲ್ಲಿ ಸಿಕ್ಕಿ ಬಿದ್ದಿದ್ದ ಹೆಣ್ಣುಗಳನ್ನೆಲ್ಲ ನೋಡುತ್ತ ನಿಂತಿದ್ದ ಇನ್ಸ್ಪೆಕ್ಟರ್ ಪ್ರಸಾದ್ ಒಮ್ಮೆ ದಿಗ್ಭ್ರಮೆಗೆ ಒಳಗಾದವನಂತೆ ಆ ಒಂದು ಮುಖವನ್ನು ಮತ್ತೆ ದಿಟ್ಟಿಸಿ
ನೋಡಿದ ಮನಸ್ಸಿಗೆ ಸಿಡಿಲು ಹೊಡೆದಂತೆ ಆಯಿತು ….ಆ
ಮುಖ….ಅದೇ ಮುಖ ತಾನು ಮದುವೆಯಾಗಲು ನಿರ್ಧರಿಸಿ
ಕೊನೆಗೆ ಅವಳ ತಾಯಿ ತಾನು ಬಡವನೆಂದು ತಿಳಿದು ಹೆಣ್ಣು ಕೊಡಲು ನಿರಾಕರಿಸಿದ ಅದೇ ಹುಡುಗಿ ..ಇಂದು ಇಲ್ಲಿ ತನ್ನದೇ ಠಾಣೆಯಲ್ಲಿ ಈ ಸ್ಥಿತಿಯಲ್ಲಿ…ಅಯ್ಯೋ ದೇವರೇ…..!!!! ಎಂದು ಮನದಲ್ಲಿ ಮರುಗಿ ಅವಳನ್ನು ವಿಚಾರಣೆಗೆ ಕರೆದ…ಅವನ ಮೊದಲ ಪ್ರೀತಿಯದು ಮರೆಯಲು ಹೇಗೆ ಸಾಧ್ಯವೆಂದು ಮನ ಅಳುಕಿದ್ದರು ತನ್ನ ಕರ್ತವ್ಯ ನೆನೆದು ಅವಳ ವಿಚಾರಣೆ ನಡೆಸಿದ.
ಅವಳು ಇವನ ಮುಂದೆ ತನ್ನ ಬದುಕಿನ ಕತೆಯನ್ನು ನಿಧಾನವಾಗಿ ತೆರೆದಿಡುತ್ತ ಸಾಗಿದಳು ಅಮ್ಮ ಆ ಹುಡುಗ ನನಗೆ ಇಷ್ಟವಾದ ಅವನ್ನ ಮದ್ವೆಯಾಗಲಾ? ಎಂದಾಗ ತಾಯಿ ನಾನು ತಿಂದ ಬಡತನದ ಅನ್ನವೇ ಈ ಜನ್ಮಕ್ಕೆ ಸಾಕು ನೀನಾದರೂ ಸುಖವಾಗಿರು ನಾಳೆ ಮುಂಬೈನ ಹುಡುಗನ ಕಡೆಯವರು ಬರುತ್ತಿದ್ದರೆ ನಿನ್ನನ್ನು ನೋಡಲು ಸಿದ್ಧವಾಗಿರು..ಬಾಯಿ ಮುಚ್ಚಿಕೊಂಡು ಒಳಗೆ ಹೋಗು ಎಂದು ಗದರಿದಳು. ಮುಂಬೈನಾ ಶ್ರೀಮಂತ ಹುಡುಗ ,ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ತಾಯಿ ತೋರಿಸಿದ ಹುಡುಗನಿಗೆ ತನ್ನ ಬದುಕಿನ ಕೊರಳನ್ನು ಒಪ್ಪಿಸಿದಳು. ಮೊದಮೊದಲು ಬದುಕು ಸಿರಿವಂತಿಕೆಯಿಂದಲೇ ತುಂಬಿತ್ತಾದರೂ ಬರುಬರುತ್ತ ಶ್ರೀಮಂತ ಹುಡುಗನ ಶ್ರೀಮಂತ ದುಶ್ಚಟಗಳ ವಿಶ್ವ ರೂಪ ಒಂದೊಂದಾಗಿ ಅವಳ ಬದುಕಿನ ಕನಸಿಗೆ ಕೊಳ್ಳಿಯಿಟ್ಟವು .
ಧರ್ಮರಾಯ ಜೂಜಿಗೆ ರಾಜ್ಯ ಕಳೆದುಕೊಂಡಂತೆ ಆ ಹುಡುಗ ಐ ಪಿ ಎಲ್ ಕ್ರಿಕೆಟ್ ಬೆಟ್ಟಿಂಗಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದ ಮಾಡಿದ ಸಾಲ ತೀರಿಸಲು ಮತ್ತೆ ಹೆಚ್ಚು ಬಡ್ಡಿಗೆ ಸಾಲ ಮಾಡಿದ ಸಾಲದ ಉರುಳು ಅವನ ಕೊರಳನ್ನು ಬಿಗಿಯಲಾರಂಭಿಸಿತು ..ಸೋತ ಬದುಕಿನ ದಿನಗಳನ್ನು ಮರೆಯಲು ಮದಿರೆಯ ಸಂಗಕ್ಕೆ ಬಿದ್ದ ಕೊನೆಗೊಂದು ದಿನ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡ ..ಅತ್ತೆ ಸೊಸೆಯ ಕಾಲ್ಗುಣವನ್ನು ಶಪಿಸಿ ಮನೆಯಿಂದ ಹೊರ ಹಾಕಿದಳು,ಬದುಕು ಬೀದಿಗೆ ಬಿತ್ತು. ಕೆಟ್ಟು ತವರನ್ನು ಸೇರುವಂತೆ ಅವಳು ವಾಪಸ್ಸು ಊರಿಗೆ ಬಂದಳು ಬಂಧುಗಳು ದೂರದಿಂದಾಲೇ ಸಾಗ ಹಾಕಿದರು ತಾಯಿ ತನ್ನ ದುರಾಸೆಗೆ ತನ್ನನ್ನೆ ಹಳಿದುಕೊಂಡಳು..ಮುಂದೇನು ಎಂದು ಯೋಚಿಸಿ ತಾಳಿಯನ್ನು ಅಡವಿಟ್ಟು ಬ್ಯೂಟಿಷನ್ ಕೋರ್ಸ್ಗೆ ಸೇರಿಕೊಂಡಳು ಅದನ್ನು ಕಲಿತು ಹೊಸ ಬ್ಯೂಟಿ ಪಾರ್ಲರ್ ತೆರೆದು ಹೊಸ ಬದುಕಿನ ಹಾದಿಗೆ ಹೋಗ ಬಯಸಿ ಸಾಲ ಮಾಡಿ ಹೊಸ ಬ್ಯೂಟಿ ಪಾರ್ಲರ್ ತೆರೆದಳೆನೋ ನಿಜ ಆದರೆ ವಿಧಿಯೆಂಬ ನಸೀಬಿನ ಯಜಮಾನ ಇವಳ ಬದುಕನ್ನು ಮತ್ತೆ ಮುಳುಗಿಸಲು ಕರೋನಾದ ರೂಪದಲ್ಲಿ ಒಕ್ಕರಿಸಿದ್ದ ಪಾರ್ಲರ್ ತೆರೆದು ಒಂದೇ ತಿಂಗಳೊಳಗೆ ಬದುಕು ಲಾಕ್ ಡೌನ್ ಆಯಿತು..ಸಾಲ ಕೊಟ್ಟವರು ವಾಪಸ್ಸು ಹಣ ನೀಡುವಂತೆ ಒತ್ತಡ ತಂದರು, ಮನೆಯಲ್ಲಿ ವಯಸ್ಸಾದ ತಾಯಿ, ಒಡಲ ಹಸಿವು ಇವು ಅವಳನ್ನು ಮತ್ತೊಂದು ಜಗತ್ತಿಗೆ ಇಷ್ಟವಿಲ್ಲದೇ ಇದ್ದರೂ ಹೋಗುವಂತೆ ಮಾಡಿತು..ಕೊನೆಯಲ್ಲಿ ಅವಳಿದ್ದ ಮನೆ ಮೇಲೆ ಪೋಲಿಸ್ ದಾಳಿ ,ಈಗ ಕಂಬಿ ಹಿಂದೆ ಅವಳು ಮತ್ತು ಅವಳ ಬದುಕು
ವಿಚಾರಣೆ ಮುಗಿಸಿ ಊಟಕ್ಕೆಂದು ಮನೆಗೆ ಹೋಗಿ ತಟ್ಟೆ ಮುಂದೆ ಕೂತು ಅನ್ನ ಕೈಯಲ್ಲಿ ಹಿಡಿದ ಪ್ರಸಾದ್ಗೆ ಮಗಳು ಅಪ್ಪ ನೋಡು ಈ ಕರೋನಾ ಮಾರಿ ಎಷ್ಟು ಜನರ ಬದುಕನ್ನು ಬೀದಿಗೆ ತಂದಿದೆ ಎಂದಾಗ ಅವಳ ಮುಖ ನೆನಪಾಯಿತು ತುತ್ತು ಜಾರಿ ತಟ್ಟೆಗೆ ಬಿದ್ದಿತ್ತು ಕಣ್ಣಿರಿನ ಹನಿಗಳೊಂದಿಗೆ ಸೇರಿ ಭಾರವಾಗಿ… ದೂರದರ್ಶನದಲ್ಲಿ ಬ್ರೇಕಿಂಗ್ ನ್ಯೂಸ್… ದೇಶ ಲಾಕ್…ಬದುಕು ಡೌನ್
– ಪ್ರಶಾಂತ್ ಚಂದ್ರ ತೀರ್ಥಹಳ್ಳಿ