ಅನೂಪ್ ಕುಮಾರ್ ನಮ್ಮನ್ನಗಲಿ ಇಂದಿಗೆ ನಾಲ್ಕು ವರ್ಷ….!
ಮತ್ತೆ ಮತ್ತೆ ನೆನಪಾಗುತ್ತಿದೆ ಅನೂಪನ ಅನುಪಮ ಸೇವೆ…
2017 ರ ಮಾ.5 ರಂದು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ನಮ್ಮ ಸಮಾಜದ ಯುವಕನ ಆರೋಗ್ಯದ ಚೇತರಿಕೆಗೋಸ್ಕರ ಆತನ ಕುಟುಂಬದವರು, ಭಂಡಾರಿ ಬಂಧುಗಳು , ಆತನ ಗೆಳೆಯರು , ಸಹೋದ್ಯೋಗಿಗಳು ಮತ್ತು ಆತ ಕೆಲಸ ಮಾಡುತ್ತಿದ್ದ ಸಂಸ್ಥೆಯ ಆಡಳಿತ ವರ್ಗ ದೇವರಲ್ಲಿ ಪ್ರಾರ್ಥಿಸುತ್ತಿದ್ದರು . ಆದರೆ ವಿಧಿ ಅವರ ಮೊರೆಯನ್ನು ಕೇಳಿಸಿಕೊಳ್ಳಲೇ ಇಲ್ಲ . ಸಂಜೆಯ ಹೊತ್ತಿಗೆ ಆ ಯುವಕನನ್ನು ಕರೆದುಕೊಂಡು ಹೋಗಿಯೇ ಬಿಟ್ಟ .
ಅದರೊಂದಿಗೆ ಭಂಡಾರಿ ಸಮಾಜದ ಅತ್ಯಂತ ಚಟುವಟಿಕೆಯ, ಲವಲವಿಕೆಯ, ಕಾರ್ಯಕರ್ತನೊಬ್ಬನನ್ನು, ಸ್ನೇಹ ಜೀವಿಯನ್ನು, ಸಮಾಜ ಸೇವಕನನ್ನು ನಾವೆಲ್ಲ ಕಳೆದುಕೊಂಡು ಬಿಟ್ಟೆವು.
ಹೀಗೆ ಮಾರ್ಚ್ 5, 2017 ರ ಆದಿನ ನಮ್ಮ ಪಾಲಿನ ಕರಾಳದಿನವಾಗಿ ದಾಖಲಾಯಿತು.
ಹೌದು ..ಸಾಮಾಜಿಕ ಕಾರ್ಯಗಳ ಜತೆಗೆ ಎಲ್ಲೇ ಭಂಡಾರಿ ಸಮಾಜದ ಕಾರ್ಯಕ್ರಮ ನಡೆಯುತ್ತಿದ್ದರೂ, ಅಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಭಂಡಾರಿ ಸಮುದಾಯದ ಆಸ್ತಿಯಂತಿದ್ದ ಕಕ್ಕೆಪದವು ಪುಣ್ಕೆದಡಿ ಅನೂಪ್ ಕುಮಾರ್ ನಮ್ಮನ್ನಗಲಿ 4 ವರ್ಷ ಕಳೆದಿದೆ. ಅನೂಪ್ ಕುಮಾರ್ ಇಂದು ನಮ್ಮೊಂದಿಗೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ, ಮತ್ತೆ ಮತ್ತೆ ನೆನಪಾಗುತ್ತಲೇ ಇದ್ದಾರೆ.
ಅನುಪಮ ಸೇವೆಯ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದ ಅನೂಪ್ ಕುಮಾರ್ ಖಾಯಿಲೆಯೊಂದಕ್ಕೆ ತುತ್ತಾಗಿ 2017 ರ ಮಾ.5 ರಂದು ಇಹಲೋಕ ತ್ಯಜಿಸಿದರು. ಎಳವೆಯಲ್ಲೇ ಉನ್ನತ ಸಾಧನೆಯ ಪಥದಲ್ಲಿ ಮುನ್ನಡೆಯುತ್ತಿದ್ದ ಯುವ ಪ್ರತಿಭೆಯೊಂದನ್ನು ದೇವರು ತನ್ನೆಡೆಗೆ ಸೆಳೆದು ನಾಲ್ಕು ವರುಷ ಕಳೆದಿದೆ.
ಪ್ರಸ್ತುತ ಬಂಟ್ವಾಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಕಕ್ಕೆಪದವು ಪುಣ್ಕೆದಡಿ ಶ್ರೀ ಗೋಪಾಲ ಭಂಡಾರಿ ಹಾಗೂ ಶ್ರೀಮತಿ ಜಲಜಾಕ್ಷಿ ( ಬೇಬಿ) ಗೋಪಾಲ ಭಂಡಾರಿ ದಂಪತಿಗಳ ಮೂವರು ಮಕ್ಕಳಲ್ಲಿ ಅನೂಪ್ ಹಿರಿಯರು . ವೇಣೂರಿನಲ್ಲಿ ತಾಂತ್ರಿಕ ಶಿಕ್ಷಣ ಮುಗಿಸಿ ಬಳಿಕ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ ಅನೂಪ್ ಮೂರುವರೆ ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸಾಂಸಾರಿಕ ಬದುಕಿನಲ್ಲಿ ಹೆಣ್ಣು ಮಗುವನ್ನೂ ಪಡೆದಿದ್ದರು.
ಬಂಟ್ವಾಳ ಭಂಡಾರಿ ಸಮಾಜ ಸಂಘ, ಬೆಂಗಳೂರು ಭಂಡಾರಿ ಸಂಘ, ಕಚ್ಚೂರು ಶ್ರೀ ನಾಗೇಶ್ವರ ಕ್ಷೇತ್ರ ಹೀಗೆ ಭಂಡಾರಿ ಸಮಾಜದ ಕಾರ್ಯಕ್ರಮ ಎಲ್ಲೇ ನಡೆಯುತ್ತಿದ್ದರೂ, ಅಲ್ಲಿ ಅನೂಪ್ ಕುಮಾರ್ ಸಕ್ರಿಯ. ಅವರಿಲ್ಲದೆ ಭಂಡಾರಿ ಸಮಾಜದ ಕಾರ್ಯಕ್ರಮಗಳೇ ಇಲ್ಲ ಎಂಬವಷ್ಟರ ಮಟ್ಟಿಗೆ ಅನೂಪ್ ಬೆಳೆದಿದ್ದರು. 2007 ರಲ್ಲಿ ಬೆಂಗಳೂರು ಭಂಡಾರಿ ಸಂಘವನ್ನು ಸೇರಿಕೊಂಡ ಇವರು ಸಂಘದ ಆಸ್ತಿಯೇ ಆಗಿದ್ದರು. ಹೀಗಾಗಿ ಇಂದು ಸಮಾಜದ ಎಲ್ಲಾ ಕಾರ್ಯಕ್ರಮಗಳಲ್ಲೂ ಅನೂಪ್ ಅನುಪಸ್ಥಿತಿ ಎದ್ದು ಕಾಣುತ್ತಿದೆ.
ಜತೆಗೆ ತನ್ನ ಹುಟ್ಟೂರಿನಲ್ಲಿ ಕುಟುಂಬದ ಸದಸ್ಯರನ್ನೊಳಗೊಂಡು ಜೈ ತುಳುನಾಡು ಎಂಬ ಸಾಮಾಜಿಕ ಸಂಘವೊಂದನ್ನು ಸ್ಥಾಪಿಸಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಮನಗೆದ್ದವರು. ಕಕ್ಕೆಪದವು ಜಾತ್ರೆ, ಕಕ್ಕೆಪದವು ಕಂಬಳ ಸೇರಿದಂತೆ ಸ್ಥಳೀಯವಾಗಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಅನೂಪ್ ದುಡಿಯುತ್ತಿದ್ದರು.
ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ. ಮರೆಯಾದ ಅನೂಪ್ ಆತ್ಮಕ್ಕೆ ಶ್ರೀ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂಬ ಪ್ರಾರ್ಥನೆಯೊಂದಿಗೆ ಅನೂಪ್ ಮತ್ತೊಮ್ಮೆ ನಮ್ಮ ನಡುವೆ ಹುಟ್ಟಿ ಬರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿ ವಾರ್ತೆ ಆಶಿಸುತ್ತದೆ.
-ಭಂಡಾರಿವಾರ್ತೆ