ಪ್ರತಿಯೊಬ್ಬರಿಗೂ ಮನೆಗೆ ಬೇಕಾದ ತರಕಾರಿ ,ಸೊಪ್ಪುಗಳನ್ನು ತಾವೇ ಬೆಳೆಸಬೇಕೆಂಬ ಹಂಬಲ ಇರುತ್ತದೆ.ಆದರೆ ವಿವಿಧ ಕಾರಣಗಳಿಂದ ಬೆಳೆಸಲು ಸಾಧ್ಯವಾಗುವುದಿಲ್ಲ.
ಕೆಲವರಿಗೆ ಸಮಯ ಇರುವುದಿಲ್ಲ, ಇನ್ನೂ ಕೆಲವರಿಗೆ ಹೇಗೆ ಬೆಳೆಸುವುದು ಎಂದು ತಿಳಿದಿರುವುದಿಲ್ಲ. ತುಂಬಾ ಜನರಿಗೆ ಅದಕ್ಕೆ ಬೇಕಾದ ಜಾಗ, ಮಣ್ಣು ಇರುವುದಿಲ್ಲ.
ಸ್ವಲ್ಪವೇ ಜಾಗದಲ್ಲಿ ಅಥವಾ ಮನೆಯ ತಾರಸಿ (ಟೆರೇಸ್ )ಮೇಲೆ ಕುಂಡದಲ್ಲಿ, ಗೋಣಿ ಚೀಲದಲ್ಲಿ, ಬಕೆಟ್ ನಲ್ಲಿ ಸಣ್ಣ ಕುಟುಂಬಕ್ಕೆ ಸಾಕಾಗುವಷ್ಟು ತರಕಾರಿ ಸೊಪ್ಪುಗಳನ್ನು ಬೆಳೆಸಬಹುದು.ಇದನ್ನು ಬೆಳೆಸುವುದರಿಂದ ನಮಗೆ ವಿವಿಧ ರೀತಿಯ ಪ್ರಯೋಜನಗಳಿವೆ.
- ಮನೆಗೆ ಬೇಕಾದ ತರಕಾರಿ ಸೊಪ್ಪು ಸಿಗುತ್ತದೆ.
- ದೈಹಿಕವಾಗಿ ವ್ಯಾಯಾಮ ದೊರಕುತ್ತದೆ, ವಾಕಿಂಗ್ ಹೋಗಬೇಕಾಗಿಲ್ಲ.
- ಮಾನಸಿಕ ಶಾಂತಿ ನೆಮ್ಮದಿ ಸಿಗುತ್ತದೆ.
ದಿನಾ ಹೊರಗೆ ಹೋಗಿ ದುಡಿಯುವವರು ಕೂಡ ತಮ್ಮ ಮನೆಯಲ್ಲಿಯೇ ತರಕಾರಿ ಬೆಳೆಸಬಹುದು.
ವಾರದ ರಜೆಯಲ್ಲಿ ಇದರ ಕೆಲಸ ಮಾಡಬಹುದು. ಮನೆಯಲ್ಲಿ ಮಾಡಬಹುದಾದ ನಾನು ಮಾಡಿದ ತರಕಾರಿ, ಸೊಪ್ಪುಗಳು ಯಾವುದೆಂದರೆ ಬಸಳೆ, ಪುದಿನಾ ,ಬೆಂಡೆಕಾಯಿ, ಟೊಮೆಟೊ, ಬದನೆ,ಕಾಯಿ ಮೆಣಸು ,ಸಿಹಿಗೆಣಸು, ಸೌತೆಕಾಯಿ ಇಷ್ಟೆಲ್ಲ ತರಕಾರಿಗಳನ್ನು ತಾರಸಿ (ಟೆರೇಸ್ ) ಮೇಲೆ ಬೆಳೆಸಬಹುದು.ಈ ಎಲ್ಲ ತರಕಾರಿಗಳನ್ನು ಹೇಗೆ ಬೆಳೆಸಬಹುದು ಎಂದು ಮುಂದೆ ತಿಳಿಯೋಣ.
ಈಗ ನಮ್ಮಲ್ಲಿ ಸ್ವಲ್ಪ ಮಣ್ಣಿದ್ದರೆ ಅದನ್ನು ಜಾಸ್ತಿ ಮಾಡುವುದು ಹೇಗೆ ಅಥವಾ ಸಾವಯವ ಗೊಬ್ಬರ ಹೇಗೆ ಮಾಡುವುದು ಎಂದು ತಿಳಿಯೋಣ.
ಮೊದಲಿಗೆ ಒಂದು ಕೆ.ಜಿ ಯಷ್ಟು ಮಣ್ಣನ್ನು ತಂದು ಇಟ್ಟುಕೊಳ್ಳಿ ಆಮೇಲೆ ಮನೆಯಲ್ಲಿ ಯಾವುದಾದರೂ ಹಳೆಯ ಅಥವಾ ಪೈಂಟ್ ಬಕೆಟ್, ಅಥವಾ ದೊಡ್ಡದಾದ ಪ್ಲಾಸ್ಟಿಕ್ ಬಾಟಲನ್ನು ತೆಗೆದುಕೊಂಡು ಅದರ ಅಡಿಭಾಗದಲ್ಲಿ 4 ಅಥವಾ 5 ಸಾಧಾರಣ ತೂತುಗಳನ್ನು ಕೊರೆಯಬೇಕು. (ತೂತು ಕೊರೆಯಲು ಕಬ್ಬಿಣದ ತುಂಡು ಅಥವಾ ತೆಳುವಾದ ಚೂರಿ ಅಥವಾ ಚಿತ್ರದಲ್ಲಿ ತೋರಿಸಿದಂತಹ ಚಮಚ ಬೆಂಕಿಗೆ ಇಟ್ಟು ಬಿಸಿ ಮಾಡಿ ತಕ್ಷಣ ಬಕೆಟ್ ಗೆ ತೂತು ಕೊರೆಯ ಬೇಕು)
ತೂತು ಕೊರೆದಿರುವ ಬಕೆಟ್ಟನ್ನು ನಿಮ್ಮಲ್ಲಿ ಜಾಗ ಇದ್ದರೆ ನೇರವಾಗಿ ಮಣ್ಣಲ್ಲೇ ಇಡಬಹುದು. ಟೆರೆಸ್ ಮೇಲೆ ಇಡುವವರು ಬಕೆಟ್ ನ ಅಡಿಭಾಗದಲ್ಲಿ ಬೇರೆ ಬಕೇಟ್ ನ ಅಥವಾ ಯಾವುದಾದರೂ ಮುಚ್ಚಳವನ್ನು ಇಟ್ಟು ಅದರ ಮೇಲೆ ತುತೂ ಕೊರೆದಿರುವ ಬಕೆಟ್ಟನ್ನು ಇಡಬೇಕು ಅಡಿಯಲ್ಲಿ ಮುಚ್ಚಳವನ್ನು ಇಟ್ಟುಕೊಳ್ಳುವ ಉದ್ದೇಶ ನಾವು ಮಾಡುವ ಗೊಬ್ಬರದಿಂದ ಬಕೇಟ್ ನ ತೂತಿನ ಮೂಲಕ ಅದರ ರಸ ಬೀಳಬಹುದು ಅದಕ್ಕಾಗಿ.
ಈ ರಸವನ್ನು ಯಾವುದೇ ಗಿಡಕ್ಕೆ ಹಾಕಬಹುದು ಇದು ತುಂಬಾ ರಸಭರಿತ ದ್ರವ ವಾಗಿರುತ್ತದೆ.
ಈಗ ಬಕೆಟ್ ಗೆ ಸ್ವಲ್ಪ ಮಣ್ಣನ್ನು ಹಾಕಬೇಕು. ನಂತರ ಅದರ ಮೇಲೆ ಮನೆಯಲ್ಲಿ ಅಡುಗೆ ಮಾಡಿದಾಗ ಉಳಿದ ತರಕಾರಿಯ ಸಿಪ್ಪೆ, ದೇವರಿಗೆ ಇಟ್ಟ ಒಣಗಿರುವ ಹೂವು, ಪೆನ್ಸಿಲ್ ಕಸ, ಮೊಟ್ಟೆಯ ಸಿಪ್ಪೆ, ಈರುಳ್ಳಿ, ಬೀನ್ಸ್ ,ಕುಂಬಳಕಾಯಿ, ಸೌತೆ, ಅನನಾಸು, ಕಿತ್ತಳೆ, ಮೂಸಂಬಿ ಹೀಗೆ ಚಿತ್ರದಲ್ಲಿ ತೋರಿಸಿದಂತೆ ಮನೆಗೆ ಏನು ತಂದರೂ ಅದರ ಸಿಪ್ಪೆ, ಬೀಜ, ಎಲೆ ,ದಂಟು ಎಲ್ಲವನ್ನು ಈ ಬಕೆಟ್ ಗೆ ಹಾಕಿ ಅದರ ಮೇಲೆ ಅದು ಕಾಣದಷ್ಟು ಸ್ವಲ್ಪಸ್ವಲ್ಪವೇ ಮಣ್ಣು ಹಾಕಿ ಮುಚ್ಚಳ ಮುಚ್ಚಿ ಬಿಡಿ.
ಮುಚ್ಚಳ ಗಟ್ಟಿಯಾಗಿ ಮುಚ್ಚಬೇಕು ಎಂದೇನು ಇಲ್ಲ, ಅದಕ್ಕೆ ನೀರು ಬೀಳದ ಹಾಗೆ ಇಡಬೇಕು ಅಷ್ಟೇ. ಸಿಪ್ಪೆಗಳನ್ನು ಹಾಕುವಾಗ ಯಾವುದೇ ಕಾರಣಕ್ಕೂ ನೀರು,ಅನ್ನ,ಸಾರು, ಪಲ್ಯ ಸಾಂಬಾರು, ಮೀನಿನ ಮುಳ್ಳು, ಮಾಂಸದ ಎಲುಬುಗಳನ್ನು ಇದಕ್ಕೆ ಹಾಕಬಾರದು.ಮುಚ್ಚಳ ಮುಚ್ಚಿದ ಬಕೆಟ್ಟನ್ನು ಹಾಗೆ ಬಿಡಿ ದಿನ ನಿಮ್ಮಲ್ಲಿ ತುಂಬಾ ತರಕಾರಿಗಳ ,ಹಣ್ಣುಗಳ ಸಿಪ್ಪೆ ಇದ್ದರೆ ಅದಕ್ಕೆ ಹಾಕಿ ಹಾಗೆಯೇ ಮಣ್ಣು ಹಾಕಿ ಮುಚ್ಚಿಬಿಡಿ. ತುಂಬಾ ಸಿಪ್ಪೆ ಇಲ್ಲದಿದ್ದಾಗ ಎರಡು ಮೂರು ದಿನಗಳ ಸಿಪ್ಪೆಗಳನ್ನು ಸಂಗ್ರಹಿಸಿ ನಂತರ ಹಾಕಿ , ಮೊದಲು ಹಾಕಿದ ಹಾಗೆ ಮಣ್ಣನ್ನು ಹಾಕಬೇಕು,
ಬಕೆಟ್ ಗೆ ಮಣ್ಣು ಸಿಪ್ಪೆ ಹಾಕುವಾಗ ಒತ್ತಿ ಒತ್ತಿ ಹಾಕಬೇಕು. ಸಿಪ್ಪೆಯ ಜೊತೆಗೆ ಮನೆಯ ಸುತ್ತ ಮುತ್ತ ಒಣಗಿದ ಎಲೆಗಳು ಹಸಿ ಎಲೆಗಳನ್ನು ಇದ್ದರೆ ಹಾಕಬಹುದು. ಬಕೆಟ್ ಪೂರ್ತಿಯಾದ ಮೇಲೆ ಅದನ್ನು ಮುಚ್ಚಿ 2ತಿಂಗಳು ಬಿಡಬೇಕು.
2 ತಿಂಗಳ ಬಳಿಕ ತೆಗೆದಾಗ ಎಲ್ಲ ತರಕಾರಿ ಹಣ್ಣುಗಳ ಸಿಪ್ಪೆ ಪೂರ್ತಿಯಾಗಿ ಕರಗಿ ನಿಮಗೆ ಸಾವಯವ ಗೊಬ್ಬರ ಸಿಗುತ್ತದೆ.ಚಿತ್ರದಲ್ಲಿ ಕರಗಿದ ಮಣ್ಣನ್ನು ನೋಡಬಹುದು.
ಇದನ್ನು ನೀವು ಬಕೆಟ್, ಗೋಣಿ ಚೀಲ, ಕುಂಡದಲ್ಲಿ ತುಂಬಿಸಿ ಗಿಡ ನೆಡಬಹುದು ಅಥವಾ ಈ ಸಾವಯವ ಗೊಬ್ಬರವನ್ನು ಗೋಣಿ ಚೀಲದಲ್ಲಿ ತುಂಬಿಸಿ ಪುನಃ ಇದೇ ಬಕೆಟ್ಟಿನಲ್ಲಿ ನಾವು ಮಾಡಿದ ಹಾಗೆ ಇದೇ ಮಣ್ಣನ್ನು ಉಪಯೋಗಿಸಿ ತರಕಾರಿ ಸಿಪ್ಪೆ ಬಳಸಿ ಇನ್ನೊಂದು ಬಕೆಟ್ ಸಾವಯವ ಗೊಬ್ಬರ ತಯಾರಿಸಬಹುದು . ಒಮ್ಮೆನೀವು ಈ ಗೊಬ್ಬರ ತಯಾರಿಸುವ ಕೆಲಸ ಶುರು ಮಾಡಿದರೆ ಮಾಡುತ್ತಲೇ ಇರುತ್ತೀರಿ. ಅಷ್ಟು ಖುಷಿ ಕೊಡುವ ಕೆಲಸ ಇದು. ಅಲ್ಲದೆ ಈ ಮಣ್ಣಿನಲ್ಲಿ ತರಕಾರಿ ಗಿಡಗಳನ್ನು ನೆಟ್ಟರೆ ತುಂಬಾ ಸುಲಭವಾಗಿ ತರಕಾರಿಗಳನ್ನು ಪಡೆಯಬಹುದು.
ನಿಮಗೆ ಇದರಲ್ಲಿ ಏನಾದರೂ ಸಂದೇಹ ಗಳಿದ್ದರೆ ನನ್ನನ್ನು ಮೊಬೈಲ್ ಮೂಲಕ ಸಂಪರ್ಕಿಸಬಹುದು.
ವನಿತಾ ಅರುಣ್ ಭಂಡಾರಿ
8660450845