November 22, 2024
Guru Poornima3

ಆಷಾಢ ಶುದ್ದ ಪೂರ್ಣಿಮೆಯ ದಿನವಾದ ಇಂದು ಸಮಸ್ತ ಪ್ರಪಂಚಕ್ಕೆ ಪರಮೋಚ್ಚ ಸಂದೇಶ ನೀಡಿದ ವ್ಯಾಸ ಮಹರ್ಷಿಗಳನ್ನು ಸ್ಮರಿಸುವ ದಿನ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ಗುರುಗಳು ಜನರಲ್ಲಿ ಆವರಿಸಿರುವ ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುತ್ತಾರೆ. ನವಗ್ರಹಗಳ ಪೈಕಿ ಗುರು ಬೃಹಸ್ಪತಿಯೇ ದೊಡ್ಡ ಗ್ರಹವಾಗಿದೆ.  ಗುರುವಿನಷ್ಟು ಹಿರಿಯದಾದುದು ಬೇರಾವುದೂ ಇಲ್ಲ. ಮಾತೃದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎನ್ನುವಂತೆ ಆಚಾರ್ಯರನ್ನು ದೇವರಿಗೆ ಸಮಾನವೆಂದೇ ಪರಿಗಣಿಸಲಾಗಿದೆ.

ಗುರು ಎನ್ನುವ ಎರಡು ಪದಗಳೇ ಅತ್ಯುತ್ತಮ ಅರ್ಥವನ್ನು ನೀಡುತ್ತವೆ. ಗು ಮತ್ತು ರು ಎನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ “ಗು” ಅಂದರೆ ಅಂಧಕಾರ ಅಥವಾ ಅಜ್ಞಾನ. “ರು” ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ.

ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ನಮ್ಮ ಬುದ್ಧಿಯಲ್ಲಿ ಇದ್ದ ಕತ್ತಲು ಅಥವಾ ಅಜ್ಞಾನವನ್ನು ಓಡಿಸಿ, ಜ್ಞಾನ ಎನ್ನುವ ಬೆಳಕನ್ನು ನೀಡುವವನೇ ಗುರು. ಅಂತಹ ಗುರುವಿಗೆ ಗುಲಾಮನಾದರೆ ಸಾಕಷ್ಟು ವಿದ್ಯೆ ಮತ್ತು ಜ್ಞಾನ ದೊರೆಯುವುದು. ಜೀವನದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಎಂದು ಹೇಳಲಾಗುತ್ತದೆ.

ಪುರಂದರದಾಸರು ಹೇಳಿದೆ ಹಾಗೆ ” ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ” ಯಾವುದೇ ವಿದ್ಯೆ ಫಲಪ್ರದವಾಗಬೇಕಾದರೆ ಗುರುಕೃಪೆ , ಆಶೀರ್ವಾದ ಬೇಕೇ ಬೇಕು. ಯಾಕೆಂದರೆ ಗುರುಕೊಟ್ಟ ವಿದ್ಯೆಯೇ ಸಂಪತ್ತು, ಗುರು ನೀಡುವ ಸಂಪತ್ತು ಕಳೆದುಹೋಗದು. ಗುರುಗಳು ಜನರಿಗೆ ಮಾತ್ರವಲ್ಲದೆ ದೇವತೆಗಳಿಗೂ ಇದ್ದರು ಎನ್ನುವುದನ್ನು ಪುರಾಣಗಳಿಂದ ಓದಿದ್ದೇವೆ. ಶ್ರೀರಾಮಚಂದ್ರನಿಗೆ ವಸಿಷ್ಠ ಮಹರ್ಷಿಗಳಿದ್ದಂತೆ ಎಲ್ಲಾ ರಾಜ ಮಹಾರಾಜರಿಗೂ ರಾಜಗುರುಗಳಿದ್ದರು.

ಜನರಿಗೆ ವಿದ್ಯೆ ಮತ್ತು ಜ್ಞಾನದ ಬೆಳಕನ್ನು ನೀಡಿ ಮನಸ್ಸನ್ನು ಶುದ್ದಗೊಳಿಸಿ ಉತ್ತಮ ಮಾರ್ಗ ತೋರುವ ಗುರುಗಳನ್ನು ಶ್ರದ್ದಾ ಭಕ್ತಿಯಿಂದ ಗೌರವಿಸುವ ದಿನವಾದ ಇಂದು ಶಿಷ್ಯರೆಲ್ಲಾ ಸೇರಿ ತಮ್ಮ ಗುರುಗಳನ್ನು ಪೂಜಿಸಿ ಗೌರವಿಸಿ ಭಕ್ತಿ ಸಮರ್ಪಿಸುವುದು ಭಾರತೀಯ ಪರಂಪರೆಯ ಅವಿಭಾಜ್ಯ ಅಂಗ.ನೀವು ನಿಮ್ಮ ಗುರುಗಳಿಗೆ ‘ಗುರುವಂದನೆ’ ಸಲ್ಲಿಸಿ.

-ಕುಶಲ್ ಭಂಡಾರಿ , ಬೆಂಗಳೂರು

 

Leave a Reply

Your email address will not be published. Required fields are marked *