November 23, 2024
Vanita

ಶಿಕ್ಷಕರ ದಿನ ಪ್ರತಿಯೊಬ್ಬರಿಗೂ ವಿಶೇಷ ಸಂದರ್ಭವಾಗಿದೆ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5ರಂದು  ಶಿಕ್ಷಕರ ದಿನವನ್ನಾಗಿ ಪ್ರತೀ  ವರ್ಷ ಆಚರಿಸಲಾಗುತ್ತದೆ.

ಮಕ್ಕಳ ಭವಿಷ್ಯವನ್ನು ರೂಪಿಸುವ , ಪಠ್ಯಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ವಿವೇಕ , ತಾಳ್ಮೆ , ದೂರದೃಷ್ಟಿ , ಮಾನವತೆಯನ್ನು ಬೋಧಿಸುವ  ತನ್ಮೂಲಕ ವಿದ್ಯಾರ್ಥಿಗಳನ್ನು ಭವ್ಯ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಅತೀ ಮಹತ್ವದಾಗಿದೆ.

 

ಮಕ್ಕಳ ವಿದ್ಯಾಭ್ಯಾಸ ದೇಶದ ಭವಿಷ್ಯವನ್ನು ಬದಲಿಸಿ ಬಿಡಬಲ್ಲುದು ಒಂದು ವೇಳೆ ಯಾವುದಾದರೂ ವ್ಯಕ್ತಿ ಜೀವನದಲ್ಲಿ ಅತ್ಯಂತ ಉನ್ನತ ಸ್ಥಾನ ಪಡೆದರೆ ಅದಕ್ಕೆ ತಳಹದಿಯಾದ ಶಿಕ್ಷಕರ ಶ್ರಮವನ್ನು ಯಾರೂ ಗಮನಿಸುವುದೇ ಇಲ್ಲ.

ಮಗುವಿಗೆ ಜಗತ್ತಿನಲ್ಲಿ ಶಿಕ್ಷಕರೇ ರೋಲ್ ಮಾಡೆಲ್ ಆಗಿರುತ್ತಾರೆ. ಒಂದು ಮಗು ಮೊದಲು ತನ್ನ ಗುರುಗಳಿಗೆ ತಿಳಿಯದ ವಿಷಯವೇ ಇಲ್ಲ ಎಂದು ಭಾವಿಸಿಕೊಳ್ಳುತ್ತದೆ. ಇಂಥಾ ಕಾಲದಲ್ಲಿಯೇ ಶಿಕ್ಷಕರ ಜವಾಬ್ದಾರಿ ನಿಜವಾಗಿ ಮಹತ್ವದ್ದಾಗಿರುತ್ತದೆ.

ಎಲ್ಲ ವಿಷಯಗಳಲ್ಲಿ ಸಮಾನತೆ ಕಾಯ್ದುಕೊಂಡು ಆರೋಗ್ಯಕರ ಸಮಾಜಕ್ಕಾಗಿ ಮಾನವೀಯತೆಯ ಆರೋಗ್ಯ ಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರದ್ದು .ಹಾಗಾಗಿ ಶಿಕ್ಷಕರೆಲ್ಲರೂ ಮೊದಲು ಉತ್ತಮ ಹಾಗೂ ಆದರ್ಶ ಶಿಕ್ಷಕರಾಗಿ ಎಲ್ಲರಿಗೂ ಮಾದರಿಯಾಗಬೇಕು .

ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಗುರುವೊಬ್ಬರು ಬೇಕೇ ಬೇಕು. ಜಗತ್ತಿನಲ್ಲಿ ಅಮ್ಮನ ಹೊರತಾಗಿ ಎಲ್ಲ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಸೃಷ್ಟಿ  ಎಂದರೆ ಅದು ಶಿಕ್ಷಕರು ಮಾತ್ರ. ವಿದ್ಯೆ , ಜ್ಞಾನ , ಮಾಹಿತಿ ಪಡೆಯುವುದು ಈಗ ಸುಲಭವಾದರೂ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ತಿಳಿ ಹೇಳಲು ಶಿಕ್ಷಕರ ಅಗತ್ಯ ಇದ್ದೇ ಇರುತ್ತದೆ.

ಪ್ರಸ್ತುತ ಸಮಾಜ ಬದಲಾವಣೆ ಆಗಿದೆ ಹಿಂದೆ ಶಿಕ್ಷಕರಿಗೆ ಇದ್ದ ಗೌರವ ಈಗ  ಬಹಳಷ್ಟುಕಡಿಮೆಯಾಗಿದೆ. ಹಿಂದೆ ಶಿಕ್ಷಕರು ಎಲ್ಲೇ ಸಿಕ್ಕರೂ ಮಕ್ಕಳು ಮತ್ತು ಅವರ ಪೋಷಕರು ತುಂಬ ಮರ್ಯಾದೆ ನೀಡುತ್ತಿದ್ದರು. ಆದರೆ ಸಮಾಜ ಬದಲಾದಂತೆ ವ್ಯಕ್ತಿಗಳು ಕೊಡುವ ಗೌರವ ಕೂಡ ಬದಲಾವಣೆಯಾಗಿದೆ. ಇದಕ್ಕೆ ಕಾರಣಗಳು ಹಲವಾರು  ಮುಖ್ಯವಾಗಿ 

1. ಹಿಂದೆ ಪೋಷಕರು ಮತ್ತು ಮಕ್ಕಳಿಗೆ ಎಲ್ಲಾ ಮಾಹಿತಿಗಳು ತಿಳಿದಿರಲಿಲ್ಲ. ಈಗ ಹಾಗಲ್ಲ  ಮೊಬೈಲ್ ಎಂಬ ಯಕ್ಷಿಣಿಯಿಂದ ಎಲ್ಲರಿಗೂ ಜಗತ್ತಿನಲ್ಲಿ ಏನೇ  ನಡೆದರೂ ತಿಳಿಯುತ್ತದೆ. ಬೇರೆ ಬೇರೆ ಮಾಹಿತಿಗಳನ್ನು ಮನೆಯಲ್ಲೇ ಕೂತು ಪಡೆಯಬಹುದು. ಹೀಗಿರುವಾಗ ಶಿಕ್ಷಕರ ಬಗ್ಗೆ ಉದಾಸೀನ ಭಾವ ತೋರುತ್ತಾರೆ.

2. ಶಿಕ್ಷಕರ ಓದುವಿಕೆ ತುಂಬನೇ ಕಡಿಮೆಯಾಗಿದೆ. ಮೊದಲು ಶಿಕ್ಷಕರ ಓದು ಎಂಬುದು  ಒಂದು ಗ್ರಂಥ ದೊಡ್ಡ ಭಂಡಾರವೇ ಆಗಿತ್ತು. ಕಲೆ , ಸಾಹಿತ್ಯ, ಕಥೆ, ಕಾದಂಬರಿ , ವಿಮರ್ಶೆ ,ಟೀಕೆ ಎಲ್ಲವನ್ನು ಶಿಕ್ಷಕರು ಓದುತ್ತಿದ್ದರು.   ಈಗ ಹಾಗಲ್ಲ ಬರೀ ಪಾಠಕ್ಕೆ ಸೀಮಿತವಾಗಿದೆ ಅವರ ಓದು . ಇದರಿಂದ ಕೂಡಾ ಶಿಕ್ಷಕರ ಗೌರವ ಕಡಿಮೆಯಾಗಿದೆ.

3.ಕೆಲವು ಪೋಷಕರು ಮನೆಯಲ್ಲಿ ಮಕ್ಕಳೆದುರಿಗೆ ಶಿಕ್ಷಕರನ್ನು ಏಕವಚನದಲ್ಲಿ ಆಡಿಕೊಳ್ಳುತ್ತಾರೆ. ಇದರಿಂದ ಮಕ್ಕಳು ಕೂಡ ಗೌರವ ನೀಡುವುದಿಲ್ಲ.

4. ಕೆಲವು ಶಿಕ್ಷಕರು ಶಾಲೆಯಲ್ಲಿ ಉತ್ತಮ ಬೋಧನೆಯನ್ನು  ಮಾಡದೆ ಮನೆಯಲ್ಲಿ ಮನೆ ಪಾಠ ಮಾಡುತ್ತಾರೆ. ಇದರಿಂದ ಕೂಡ ಅವರ ಗೌರವ ಕಡಿಮೆಯಾಗುತ್ತದೆ.

5. ಕೆಲವು ಪುರುಷ ಶಿಕ್ಷಕರು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿ ಕೊಂಡಿರುತ್ತಾರೆ ಇದರಿಂದ ಶಿಕ್ಷಕರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ.

6. ಇತ್ತೀಚೆಗೆ ಶಿಕ್ಷಣದಲ್ಲಿ ಬರೀ ಪಾಠಕ್ಕೆ ಮಾತ್ರ ಒತ್ತು ನೀಡುವುದರಿಂದ ಶಿಕ್ಷಕರಿಗೂ ತಮ್ಮ  ಪಠ್ಯೇತರ ಚಟುವಟಿಕೆಯನ್ನು ಅಭಿವ್ಯಕ್ತಿ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಕೂಡ ಶಿಕ್ಷಕರಿಗೆ ನೀಡುವ ಗೌರವ ಕಡಿಮೆ ಆಗುತ್ತಿದೆ.

7. ಮೊದಲಿನ ಶಿಕ್ಷಕರ ಹಾಗೆ ಈಗಿನ ಶಿಕ್ಷಕರು ಸರಳತೆಯಿಂದ ಕೂಡಿರುವುದಿಲ್ಲ. ತಮ್ಮ ಉಡುಗೆ ತೊಡುಗೆಯಲ್ಲಿ ಆಡಂಬರ ಪ್ರದರ್ಶನ ಮಾಡುವುದರಿಂದ  ಕೂಡಾ ಶಿಕ್ಷಕರ ಮೇಲಿನ  ಗೌರವ ಕಡಿಮೆ ಆಗುತ್ತಿದೆ.

8. ಹೆಚ್ಚಿನ ಶಿಕ್ಷಕರು ನಿಷ್ಪಕ್ಷಪಾತವಾಗಿ ಕೆಲಸ ಮಾಡುವುದಿಲ್ಲ. ಯಾವುದೋ ಪಕ್ಷದ ಪರವಾಗಿ, ಯಾವುದೋ ವರ್ಗದ ಪರವಾಗಿ, ಯಾವುದೋ ಲಿಂಗದ ಪರವಾಗಿರುವುದರಿಂದ ಶಿಕ್ಷಕರ ಗೌರವ ಕಡಿಮೆಯಾಗುತ್ತಿದೆ.

ಮುಖ್ಯವಾಗಿ ಮಕ್ಕಳ ಪೋಷಕರು ಶಿಕ್ಷಕರಿಗೆ ಗೌರವ ನೀಡುವುದನ್ನು ಕಲಿಯಬೇಕು.   ಮಕ್ಕಳ ಎದುರಿಗೆ ಯಾವುದೇ ಶಿಕ್ಷಕರನ್ನು ವೈಯಕ್ತಿಕ ನಿಂದನೆ ಮಾಡಬಾರದು. ಹಾಗಾದಾಗ ಮಕ್ಕಳು ಖಂಡಿತವಾಗಿಯೂ  ಶಿಕ್ಷಕರಿಗೆ ಗೌರವ ನೀಡುತ್ತಾರೆ.

ಶಿಕ್ಷಕರು ಕೂಡ ಮೊಬೈಲ್ ಎಂಬ ಯಕ್ಷಿಣಿ ಲೋಕದಲ್ಲಿ ಕಣ್ಮರೆಯಾಗಬಾರದು. ಕತ್ತಿ ಹೇಗೆ ಇಟ್ಟಲ್ಲಿ ಇಟ್ಟರೆ ತುಕ್ಕು ಹಿಡಿಯುತ್ತದೆಯೋ ಹಾಗೆಯೇ ನಮ್ಮ ಜ್ಞಾನ ಕೂಡ ನಿಂತ ನೀರಾಗಬಾರದು . ಹೆಚ್ಚಿನ ಓದು ನಮ್ಮ ವೈಯಕ್ತಿಕ ಬೆಳವಣಿಗೆಗೆ ಬೇಕು ಎಂಬ ಧ್ಯೇಯದೊಂದಿಗೆ ಓದಲು ನಾವು ಅಣಿಯಾಗಬೇಕು.

ಏನೇ ಆದರೂ ಕೂಡ ಶಿಕ್ಷಕರ ಸ್ಥಾನವನ್ನು ಯಾರಿಗೂ ಕಸಿಯಲು ಸಾಧ್ಯವಿಲ್ಲ. ಯಾಕೆಂದರೆ ಶಿಕ್ಷಕರಿಗೆ ಇರುವ ತಾಳ್ಮೆ, ದೂರದೃಷ್ಟಿ, ಸಮಾನತೆ, ವಾಕ್ಚಾತುರ್ಯ  ಬೇರೆ ಯಾವ ಕೆಲಸದಲ್ಲೂ ಬರಲು ಸಾಧ್ಯವಿಲ್ಲ ಇದಕ್ಕೆ ಶಿಕ್ಷಕರೇ ಸಾಟಿ …

ಯಾವುದೇ ಆಡಂಬರವಿಲ್ಲದೆ ಸರಳತೆಯಿಂದ ಮೇಲು ಕೀಳು ಎಂಬ ಭೇದ ಇಲ್ಲದೆ ಯಾರ ಮರ್ಜಿಗೂ ಒಳಗಾಗದೇ ಮಗುವಿನ  ಸರ್ವತೋಮುಖ ಬೆಳವಣಿಗೆಯೇ ನನ್ನ ಪರಮ ಗುರಿ ಎಂದು ತಿಳಿದುಕೊಂಡು ಕೆಲಸ ಮಾಡುವ ಲಕ್ಷ ಲಕ್ಷ ಶಿಕ್ಷಕರು ಖಂಡಿತಾ ಇದ್ದಾರೆ . ಅವರಿಗೆ ನಾವು ತಲೆಬಾಗಲೇಬೇಕು .

ಯಾರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಕಲಿಸಿದ ಗುರು ಎದುರಿಗೆ ಬಂದಾಗ ಅವನ ಜಾಗ್ರತ ಮನಸ್ಸು ಎಚ್ಚೆತ್ತುಕೊಳ್ಳುತ್ತದೆ ಅದು ಶಿಕ್ಷಕರಿಗೆ ಇರುವ ತಾಕತ್ತು ಎಂದರೆ ತಪ್ಪಾಗಲಾರದು .

 

ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮಕ್ಕಳ ಮಾನಸಿಕ ಅಭಿವೃದ್ಧಿಗಾಗಿ ತುಡಿಯುತ್ತಿರುವ ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು …..

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ, ಮಂಗಳೂರು

Leave a Reply

Your email address will not be published. Required fields are marked *