ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಗೌರವದ ಸ್ಥಾನವಿದೆ. ಗುರುವಿನಲ್ಲೇ ದೇವರನ್ನು ಕಾಣುವ ಪರಂಪರೆ ನಮ್ಮದು.ಉಪನಿಷತ್ ನಲ್ಲಿ “ಆಚಾರ್ಯ ದೇವೋ ಭವ” ಎಂದು ಹೇಳುವುದರ ಮೂಲಕ ಶಿಕ್ಷಕರನ್ನು ದೇವರಿಗೆ ಹೋಲಿಸಲಾಗಿದೆ. ಗುರುವಿನಲ್ಲಿ ದಿವ್ಯತ್ರಯರಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನನ್ನು ಕಾಣುವ ಸಂಸ್ಕೃತಿ ನಮ್ಮದು.
ಒಬ್ಬ ಶಿಕ್ಷಕ ಸಾವಿರಾರು ಮಕ್ಕಳ ಬದುಕಿನಲ್ಲಿ ಬೆಳಕನ್ನು ತರಬಲ್ಲ. ನಿತ್ಯದ ಕೆಲಸದ ಗೊಡವೆ ಎಂದುಕೊಳ್ಳದೆ ತಮ್ಮ ವೃತ್ತಿಯನ್ನು ಪ್ರೀತಿಸುತ್ತಲೇ ಎಲ್ಲರ ಬಾಳಿಗೆ ಬೆಳಕಾಗಿ ಬೆಳೆಯುತ್ತಾರೆ. ಎಷ್ಟೋ ಮಂದಿ ಆ ಬೆಳಕಿನಲ್ಲಿ ತಮ್ಮ ಬಾಳನ್ನು ಬೆಳಗಿಕೊಳ್ಳುತ್ತಾರೆ. ಗುರುವಿನ ಕಾರಣ್ಯವಿಲ್ಲದೆ ಏನನ್ನು ಸಾಧಿಸಲಾಗದು ಎಂಬ ಅರಿವು ಇರುವುದರಿಂದಲೇ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಸಂತರು ಹಾಡಿದ್ದಾರೆ. ವಿದ್ಯಾರ್ಥಿಗಳನ್ನು ಜೀವನದುದ್ದಕ್ಕೂ ತಿದ್ದುವ, ಆತ್ಮಸ್ಥೈರ್ಯ ತುಂಬುವ ಕೆಲಸವನ್ನು
ಶಿಕ್ಷಕರು ಮಾಡುತ್ತಲೇ ಇರುತ್ತಾರೆ. ತಾಯಿ ಮಗುವಿಗೆ ಜೀವ ನೀಡಿದರೆ ಶಿಕ್ಷಕರು ಜೀವನವನ್ನೇ ನೀಡುತ್ತಾರೆ.ವಿದ್ಯಾರ್ಥಿಗಳ ಬಾಳ ಹೊಂಗಿರಣ ಶಿಕ್ಷಕರು ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಹಿಂದೆ ಶಿಕ್ಷಕರ ಪಾತ್ರ ಮಹತ್ತರವಾದುದು.
ತನ್ನ ಜ್ಞಾನವನ್ನು ಶಿಷ್ಯನಿಗೆ ಧಾರೆಯೆರೆದು ಅವನ ಏಳ್ಗೆಯಲ್ಲಿಯೇ ತನ್ನ ಸುಖವನ್ನು ಕಾಣುವ ಸದ್ಗುಣ ಶಿಕ್ಷಕನಲ್ಲಿರಬೇಕು.ಶಿಕ್ಷಕ ವೃತ್ತಿ ಎಂಬುದು ಸೇವಾ ಸಾಧನೆಯ ಕ್ಷೇತ್ರವೇ ಹೊರತು ಲಾಭದಾಯ ಕ ಹುದ್ದೆಯಲ್ಲ.ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುವ ಇಚ್ಚಾಶಕ್ತಿ ಪ್ರದರ್ಶಿಸಬೇಕು. ಸೃಜನಶೀಲ ಶಿಕ್ಷಕರಿಂದ ಹೊಸತನ ಆವಿಷ್ಕರಿಸಲು ಸಾಧ್ಯ. ಹೊಸ ವಿಚಾರಗಳನ್ನು ಸ್ವೀಕರಿಸುವಲ್ಲಿ ಶಿಕ್ಷಕರ ಹೃದಯ ಸದಾ ತೆರೆದಿರಬೇಕು. ವಿದ್ಯಾರ್ಥಿಗಳೊಂದಿಗೆ ಸ್ನೇಹಪರ ಸಂಬಂಧವನ್ನು ಬೆಳೆಸಿಕೊಂಡು ಮಗು ಮುಕ್ತವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ಶಿಕ್ಷಕರ ಗುರುತರ ಜವಾಬ್ದಾರಿಯಾಗಿದೆ. ಶಿಕ್ಷಕನಾದವನು ತನ್ನ ವಿದ್ಯಾರ್ಥಿಗಳಿಗೆ ಹೊಟ್ಟೆ ತುಂಬಿಸಿಕೊಳ್ಳುವ ಮಾರ್ಗವನ್ನು ಮಾತ್ರ ತೋರಿಸಿಕೊಡುವುದಲ್ಲ. ಅದರಾಚೆಗೆ ಅವನ ವ್ಯಕ್ತಿತ್ವವನ್ನು ಬೆಳೆಸಿ, ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿ, ಆದು ಸಮಾಜದ ಉನ್ನತಿಗೆ, ಸಮೃದ್ಧಿಗೆ ಬಳಕೆಯಾಗುವಂತೆ ಬದುಕುವ ಕಲೆಯನ್ನು ಮಕ್ಕಳಲ್ಲಿ ಜಾಗೃತಗೊಳಿಸಬೇಕಾಗಿದೆ. ಯಾವುದೇ ರಾಷ್ಟ್ರಕ್ಕೆ ಉಜ್ವಲ ಭವಿಷ್ಯ ಸಾಧ್ಯವಾಗುವುದು ಅಲ್ಲಿ ಗುಣಮಟ್ಟದ ಶಿಕ್ಷಕರಿದ್ದಾಗ ಮಾತ್ರ.
ಇಂದು ಮಕ್ಕಳು ಎದುರಿಗಿಲ್ಲದೆ ಅವರಿಗೆ ಪಾಠ ಹೇಳಿ ಕೊಡುವ ಸಂದಿಗ್ಧತೆ ಶಿಕ್ಷಕರದ್ದಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಒಬ್ಬರನ್ನೊಬ್ಬರು ಇಷ್ಟಪಡುವುದು ಮತ್ತು ಅರ್ಥಮಾಡಿಕೊಳ್ಳುವುದು ಪರಿಣಾಮಕಾರಿ ಕಲಿಕೆಗೆ ಪೂರಕವಾದ ಅಂಶ.ಆದರೆ ಆನ್ ಲೈನ್ ಬೋಧನೆಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಹೊಸ ಶಿಕ್ಷಕರನ್ನು ಅನುಸರಿಸುವುದು ಕಷ್ಟಕರವಾಗಿದೆ. ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಎಷ್ಟು ಹೊಸತೊ ಶಿಕ್ಷಕರಿಗೂ ಅಷ್ಟೇ ಹೊಸತು.ತಮಗೆ ತಿಳಿದಿರುವ ಅಲ್ಪ ಸ್ವಲ್ಪ ತಾಂತ್ರಿಕ ಜ್ಞಾನದ ಅನುಭವದಿಂದ ಪಾಠ ಮಾಡುವ ಶಿಕ್ಷಕ ವರ್ಗ ಒಂದು ಕಡೆಯಾದರೆ, ತರಬೇತಿಯ ಮೂಲಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆಯನ್ನು ಹೊಂದಿರುವ ಶಿಕ್ಷಕ ವರ್ಗ ಇನ್ನೊಂದೆಡೆ . ಕಾಲದ ಓಟಕ್ಕೂ, ವಿಜ್ಞಾನದ ಓಟಕ್ಕೂ ಒಗ್ಗಿಸಿಕೊಳ್ಳುವ ಅನಿವಾರ್ಯತೆ ಶಿಕ್ಷಕರಿಗಿದೆ. ಶಿಕ್ಷಕ ಎಂಬ ವೃತ್ತಿಯನ್ನು ಮನಸಾರೆ ಮೆಚ್ಚಿ ಕೈ ಹಿಡಿದು ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವ ಶಿಕ್ಷಕರ ಭವಿಷ್ಯವು ಕೊರೋನಾ ಮಹಾಮಾರಿಯಿಂದಾಗಿ ಕತ್ತಲೆಗೆ ಸರಿಯುತ್ತಿದೆ.
ಎಲ್ಲಾ ವೃತ್ತಿಗಳಂತೆಯೇ ಶಿಕ್ಷಕ ವೃತ್ತಿಯಷ್ಟೇ ಎಂಬ ಕಾಲ ಘಟ್ಟದಲ್ಲಿ ನಾವಿದ್ದೇವೆ. ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದಾಗಿರುವ ಶಿಕ್ಷಕ ವೃತ್ತಿಗೆ ಸಿಗುತ್ತಿದ್ದ ಗೌರವ, ಪ್ರೀತಿ ಆದರ ಈಗ ಸವಕಲಾಗಿದೆ. ಮತ್ತೆ ಅದನ್ನು ಬಲಪಡಿಸಿ ಸ್ವಸ್ಥ ಸಮಾಜವನ್ನು ಕಟ್ಟಬೇಕಾದ ಅನಿವಾರ್ಯತೆ ಇದೆ. ಎಷ್ಟೋ ಸಾರಿ ಗುರುವಿನ ಬಳಿಯೇ ಇದ್ದಾಗ ಅವರ ಮಹತ್ವ ಗೊತ್ತಾಗುವುದಿಲ್ಲ. ಅಂದರೆ ಗುರುವಿನ ಶ್ರಮದ ಫಲವನ್ನು ತಿಳಿಯುವ ಹೊತ್ತಿಗೆ ತುಂಬಾ ಸಮಯ ಕಳೆದು ಹೋಗಿರುತ್ತದೆ. ‘ನದಿಯನ್ನು ದಾಟಿದ ಮೇಲೆ ಅಂಬಿಗನ ಹಂಗೇಕೆ?’ ಎಂಬ ಧೋರಣೆಯಂತೆ ನಾವಿಂದು ನಮ್ಮ ಗುರಿಯನ್ನು ತಲುಪಲು ಕಾರಣರಾದ ಗುರು ವೃಂದವನ್ನು ಮರೆಯುತ್ತಿರುವುದು ಖೇದಕರ ಸಂಗತಿ.’ವರ್ತನೆಯ ನರ್ತನಕೆ ಪರಿವರ್ತನೆಯ ಶೃಂಗಾರ’ ಎಂಬ ಕವಿವಾಣಿಯಂತೆ ವಿದ್ಯಾರ್ಥಿಗಳ ವರ್ತನೆಯನ್ನು ತಿದ್ದಿ ತೀಡಿ, ಮೌಲ್ಯವನ್ನು ವೃದ್ಧಿಸಿ ಉತ್ತಮ ಸಮಾಜವನ್ನು ಸೃಷ್ಟಿಸುವ ಪಣ ತೊಡೋಣ.
✍️ಸುಪ್ರಿಯಾ ಪ್ರಕಾಶ್ ಭಂಡಾರಿ ,ಬೈಲೂರು ಕಾರ್ಕಳ