November 22, 2024
Greeshma Article

ಎಂದಿನ ದಿನಚರಿಯಂತೆ ಕಾಲೇಜು ಮುಗಿಸಿ  ಬಸ್ ಸ್ಟಾಪ್ ಗೆ ಬಂದೆ.ಮನೆ ತಲುಪಲು ಸುಮಾರು ಎರಡು ಗಂಟೆ ಪ್ರಯಾಣ.ಬಸ್ ಹತ್ತಿದವಳೇ ಮೊದಲು ಹುಡುಕಿದ್ದು ಕಿಟಕಿ ಪಕ್ಕದ ಸೀಟು.ಈ ಕಿಟಕಿ ಬದಿ ಆಸನಕ್ಕೂ ಹುಡುಗಿಯರಿಗೂ ಏನೂ ನಂಟು ಇರುವುದಂತು ನಿಜ ಬಿಡಿ.ಯಾಕೆಂದರೆ ಕಾಮನ್ ಆಗಿ ಹುಡುಗಿಯರಿಗೆ ಅಲ್ಲಿ ಕುಳಿತು ಪಯಾಣಿಸುವುದೆಂದರೆ ಬಾರಿ ಖುಷಿ

ಅದಾಗಲೇ ಸಂಜೆ ಆರು ಗಂಟೆಯಾಗಿತ್ತು.ಅಮ್ಮ ಫೋನ್ ಕರೆ ಆಗಾಗ ಮಾಡಿ ಎಲ್ಲಿದ್ದೀಯಾ ಎಂದು ಕೇಳುತ್ತಲೇ ಇದ್ದಳು.ಬಸ್ಸಿಗೆ ಹತ್ತಿದ ಯುವತಿಯೊಬ್ಬಳು ಎಲ್ಲಿ ಖಾಲಿ ಸೀಟು ಇದೆಯೆಂದು ನೋಡುತ್ತಿದ್ದಳು.ನನ್ನ ಹತ್ತಿರದ ಸೀಟು ಖಾಲಿಯಾಗಿತ್ತು.ಅದನ್ನು ನೋಡಿದಾಕೆ ನನ್ನ ಬಳಿ ಬಂದು ಕುಳಿತಳು.ನೋಡಲು ಅಕ್ಷರಸ್ಥೆಯಾಗಿ ಕಾಣುತ್ತಿದ್ದಳು.ಕಿವಿಗೆ ಶ್ರವಣವಾಣಿ(ಇಯರ್ ಪೋನ್) ಹಾಕಿದ್ದ ಆಕೆ ಸಂಗೀತ ಕೇಳುತ್ತಿದ್ದಳು ಅನಿಸುತ್ತೆ.ಆಕೆಗೆ ಒಂದು ಕರೆ ಬಂತು.ಸುಮಾರು ಅರ್ಧಗಂಟೆ ಆದ ಮೇಲೆ ಕರೆ ಇಟ್ಟಳು.ನನ್ನ ಪಕ್ಕದಲ್ಲೇ ಕುಳಿತದ್ದರಿಂದ ಆಕೆಯ ಪ್ರತಿ ಚಲನವಲನಗಳು ನನ್ನ ಗಮನಕ್ಕೆ ಬರುತ್ತಿತ್ತು

ಅಷ್ಟೂ ಹೊತ್ತು ಖುಷಿಯಾಗಿ ಮಾತನಾಡುತ್ತಿದ್ದ ಆಕೆ ಇನ್ನೊಂದು ಕರೆ ಬಂದಾಗ ಅವರ ಮೇಲೆ ರೇಗಲೂ ಶುರು ಮಾಡಿದ್ದಳು.ಅಯ್ಯೋ ಏನಾಯಿತು ಈ ಹುಡುಗಿಗೆ ಅಂದುಕೊಂಡೆ.ಹೀಗಿರುವಾಗ ಅವಳಿಂದ ಜೋರಾಗಿ ಮಾತು ಹೊರ ಬಂತು.“ಯಾಕಮ್ಮ ಪದೇ ಪದೇ ಕಾಲ್ ಮಾಡ್ತೀಯಾ ನಿನಗೆ ಬೇರೆ ಕೆಲಸ ಇಲ್ಲವೇ” ಎಂದವಳೇ ಪೋನ್ ಇಟ್ಟು ಸಂಗೀತ ಕೇಳಲು ಆರಂಭಿಸಿ ನಿದ್ರೆಗೆ ಜಾರಿದಳು

         ಎಲ್ಲದಕ್ಕೂ ಸಮಯವಿದೆ.ಆದರೆ ತಾಯಿಯೊಂದಿಗೆ ಕಿಂಚಿತ್ತು ಹೊತ್ತು ಕಳೆಯಲು ಟೈಮ್ ಇಲ್ಲ.ಇದೊಂದು ನಾನು ಕಂಡ ಸಣ್ಣ ಉದಾಹರಣೆಯಷ್ಟೇ ಇಂತಹದ್ದೂ ಜಗದಲ್ಲಿ ಬೇಕಾದಷ್ಟಿದೆ

 

     ಮಕ್ಕಳು ಎಲ್ಲಿದ್ದರೊ,ಊಟ ಮಾಡಿದರೊ, ಇಲ್ಲವೋ,ಖುಷಿಯಾಗಿದ್ದರೊ ಇಲ್ಲವೋ ಎಂದು ಪ್ರತಿ ಕ್ಷಣ ಹಾತೊರೆಯುವ ಜೀವ ಒಂದಿದ್ದರೆ ಅದು ಅಮ್ಮ ಮಾತ್ರ ಅಲ್ಲವೇ

     ಉಸಿರು ಕೊಟ್ಟು,ಹೆಸರನ್ನಿಟ್ಟು ,ಮುತ್ತು ನೀಡಿ, ತುತ್ತು ನೀಡಿದಾಕೆಗೆ ನಮ್ಮ ದಿನಚರಿಯಲ್ಲಿ ಆಕೆಗೆ ಸ್ವಲ್ಪ ಸಮಯ,ಪ್ರೀತಿಯ ಮಾತು ನೀಡಲಾಗುವುದಿಲ್ಲವೇ….!!!

      

ಗ್ರೀಷ್ಮಾ ಭಂಡಾರಿ

ಪ್ರಥಮ ಎಂ.ಎ

ಅರ್ಥಶಾಸ್ತ್ರ ವಿಭಾಗ

ವಿಶ್ವವಿದ್ಯಾನಿಲಯ ಕಾಲೇಜು

ಮಂಗಳೂರು

Leave a Reply

Your email address will not be published. Required fields are marked *