ಸರ್ ಎಂ ವಿಶ್ವೇಶ್ವರಯ್ಯ… ಕರುನಾಡಿನ ಹೆಮ್ಮೆಯ ಪುತ್ರ. ದೇಶದ ಶ್ರೇಷ್ಠ ಆಸ್ತಿ. ಭಾರತ ಕಂಡ ಅಪ್ರತಿಮ ಇಂಜಿನಿಯರ್ ಇವರು. ಇವರ ಇಂಜಿನಿಯರಿಂಗ್ ಕೌಶಲ್ಯ, ದೂರದರ್ಶಿತ್ವದ ಯೋಜನೆಗಳು, ಜ್ಞಾನ ಎಲ್ಲವೂ ಅದ್ಭುತ. ನಮ್ಮ ನೆಲದ ಸಾಕ್ಷಿ ಪ್ರಜ್ಞೆ ಇವರು. ಇವರ ಜೀವನ, ಆದರ್ಶ, ಸಂದೇಶಗಳು ಇಂದಿಗೂ ಎಲ್ಲರಿಗೂ ದಾರಿದೀಪ. ಇದೇ ಕಾರಣಕ್ಕೆ ಸರ್ ಎಂ ವಿ ಅವರ ಜನ್ಮದಿನವನ್ನು ಇಂಜಿನಿಯರ್ ಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಭಾರತದಲ್ಲಿ ಸೆಪ್ಟೆಂಬರ್ 15 ರಂದು ಇಂಜಿನಿಯರ್ಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಕರುನಾಡಿನ ಹೆಮ್ಮೆಯ ಪುತ್ರ, ಭಾರತ ರತ್ನ ವಿಶ್ವೇಶ್ವರಯ್ಯನವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನು ಇಂಜಿನಿಯರ್ಗಳ ದಿನವನ್ನಾಗಿ ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಇಂಜಿನಿಯರ್ಗಳು ಮಾಡಿರುವ ಸಾಧನೆಯನ್ನು ಸ್ಮರಿಸಲು ಮತ್ತು ಗೌರವಿಸುವ ಸಲುವಾಗಿ ಈ ದಿನವನ್ನು ಮೀಸಲಿಡಲಾಗಿದೆ.
ಸೆಪ್ಟೆಂಬರ್ 15, 1860ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸಾಧನೆ ಈ ಭೂಮಿ ಇರುವ ತನಕ ಶಾಶ್ವತ. ಇವರ ದೂರದರ್ಶಿತ್ವವುಳ್ಳ ಯೋಜನೆಗಳು ಇಂದಿಗೂ ವಿಶ್ವೇಶ್ವರಯ್ಯನವರ ಸಾಧನೆ, ಬುದ್ಧಿವಂತಿಕೆಗೆ ಸಾಕ್ಷಿಯಾಗಿ ನಿಂತಿವೆ. ಈ ದೇಶಕ್ಕೆ ಸರ್ ಎಂ ವಿ ನೀಡಿದ ಕೊಡುಗೆ ಅಪೂರ್ವ. ಕಾವೇರಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕಟ್ಟಲಾದ ಕೃಷ್ಣರಾಜ ಸಾಗರ ಅಣೆಕಟ್ಟು ಸರ್ ಎಂ ವಿಶ್ವೇಶ್ವರಯ್ಯನವರ ಶ್ರಮದ ಫಲ. ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ದಿವಾನರಾಗಿದ್ದ ವಿಶ್ವೇಶ್ವಯ್ಯನವರು ದೂರದೃಷ್ಟಿಯುಳ್ಳ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದರು. ಸರ್ ಎಂ ವಿಶ್ವೇಶ್ವರಯ್ಯನವರ ಸಾಧನೆಗೆ `ಭಾರತರತ್ನ’ ಎಂಬ ಶ್ರೇಷ್ಠ ಗೌರವದೊಂದಿಗೆ ಅನೇಕ ಪ್ರಶಸ್ತಿ, ಗೌರವಗಳು ಮುಕುಟಕ್ಕೇರಿದೆ.
ಮುಂಬೈ ಮಹಾನಗರಿಯಲ್ಲಿ ಮಹಾಮಳೆ ಸುರಿದರೂ ನೀರು ಇಂಗುವ ವ್ಯವಸ್ಥೆಯನ್ನು 1884ರಲ್ಲೇ ಸರ್ ಎಂ. ವಿಶ್ವೇಶ್ವರಯ್ಯ ಅವರು ರೂಪಿಸಿದ್ದರು.
ನದಿ ನೀರು ಹಂಚಿಕೆ ಸಮಸ್ಯೆ ಬಗ್ಗೆ ಮುಂಚಿತವಾಗಿ ಯೋಚನೆ ಮಾಡಿದ್ದ ಸರ್ ಎಂವಿ ಅವರು ಭಾರತದ ನದಿಗಳನ್ನು ಜೋಡಿಸುವ ಯೋಜನೆಯನ್ನು ರೂಪಿಸಿ ಅಂದಿನ ಪ್ರಧಾನಿ ಪಂಡಿತ್ ನೆಹರೂ ಅವರಿಗೆ ನೀಡಿದ್ದರು ಎಂಬ ಸುದ್ದಿಯೂ ಇದೆ.
ಕೃಷ್ಣರಾಜಸಾಗರ ನಿರ್ಮಾಣ, ಭದ್ರಾವತಿಯ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಅಭಿವೃದ್ಧಿ, ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ, ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಶ್ರೀ ಜಯಚಾಮರಾಜೇಂದ್ರ ವೃತ್ತಿಶಿಕ್ಷಣ ತರಬೇತಿ ಸಂಸ್ಥೆಯ ಸ್ಥಾಪನೆ ಹೀಗೆ ವಿಶ್ವೇಶ್ವರಯ್ಯನವರ ಪ್ರಾಮಾಣಿಕತೆ, ವೃತ್ತಿಪರತೆಗಳು ಕೂಡ ದಂತಕತೆಗಳಾಗಿ ಹೋಗಿವೆ.
ನಮ್ಮ ಸಮಾಜದ ಪ್ರತಿಯೊಬ್ಬ ಇಂಜಿನಿಯರ್, ತಾಂತ್ರಿಕ ತಜ್ಞರಿಗೆ ಈ ಸಂದರ್ಭದಲ್ಲಿ ಭಂಡಾರಿ ವಾರ್ತೆ ಶುಭಾಶಯಗಳನ್ನು ಕೋರುತ್ತಾ , ನಿಮ್ಮ ಅಮೂಲ್ಯ ಪ್ರತಿಭೆಯನ್ನು ನಮ್ಮ ಸಮಾಜದ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ನಮ್ಮ ಸಮಾಜ ಬೇರೆ ಸಮಾಜಕ್ಕಿಂತ ಕಡಿಮೆ ಇಲ್ಲ ಎಂಬುದನ್ನು ತೋರಿಸುವ ಕೆಲಸ ಮಾಡಬೇಕೆಂದು ಕಳಕಳಿಯಿಂದ ವಿನಂತಿಸುತ್ತಾ ಮತ್ತೊಮ್ಮೆ ಇಂಜಿನಿಯರ ದಿನದ ಶುಭಾಶಯಗಳು.
-ಮಾಹಿತಿ ಸಂಗ್ರಹ -ಕುಶಲ್ ಭಂಡಾರಿ, ಬೆಂಗಳೂರು