January 18, 2025
jiddu

    ಧ್ಯಾನ-8

ಮ್ಮ ಅಧಿಕಾರ ,ಸ್ಥಾನ, ಮಾನ,ಸಂಪತ್ತು, ಆಸೆಗಳ ಪೂರೈಕೆಗಾಗಿ ನಡೆಸುವ ಹೋರಾಟ ಇತ್ಯಾದಿಗಳೆಲ್ಲ “ನಾನು” ಎಂಬುದರ ಬೇರೆ ಬೇರೆ ರೂಪಗಳು. ನೀವು ಮತ್ತು ನಾನು  ನಿರ್ದಿಷ್ಟ ಗುಂಪಿಗೆ, ವರ್ಗಕ್ಕೆ, ಸಮಾಜಕ್ಕೆ, ಹವಾಮಾನದ ಪ್ರದೇಶಕ್ಕೆ ಸೇರಿದವರಾಗಿಯಲ್ಲದೆ,ಬಿಡಿ ವ್ಯಕ್ತಿಗಳಾಗಿ ಇದನ್ನು ಅರ್ಥಮಾಡಿಕೊಂಡು ಬದುಕಲು ಸಾಧ್ಯವಾದರೆ ಆಗ ನಿಜವಾದ ಕ್ರಾಂತಿಯಾಗುತ್ತದೆ.ಆದರೆ ನಾನು ಹೇಳುತ್ತೀರುವುದು ಸರ್ವಮಾನ್ಯವಾದ ,ವ್ಯವಸ್ಥಿತವಾದ ಸಂಘಟನೆಯಾಗಿಬಿಟ್ಟರೆ ಆಗ ನಮ್ಮೊಳಗಿನ ನಾನು ಆ ವ್ಯವಸ್ಥೆಯ ನೆರಳಲ್ಲಿ ಆಶ್ರಯಪಡೆದುಬಿಡುತ್ತದೆ. ನೀವು ಮತ್ತು ನಾನು ವ್ಯಕ್ತಿಗಳಾಗಿ ನಮ್ಮ ನಮ್ಮ ಬದುಕಿನಲ್ಲಿ ಪ್ರೀತಿಸಬಲ್ಲವರಾದರೆ ಆಗ ತೀರ ಅಗತ್ಯವಾಗಿ ಆಗಬೇಕಾಗಿರುವ ಕ್ರಾಂತಿ ಸಂಭವಿಸುತ್ತದೆ…

ನಾನು ಎಂಬ ಮಾತನ್ನು ಯಾವ ಅರ್ಥದಲ್ಲಿ ಬಳಸುತ್ತಿದ್ದೇನೆ,ಗೊತ್ತೆ ? ನಾನು ಎಂಬುದು ಒಂದು ಐಡಿಯಾ, ನೆನಪು, ತೀರ್ಮಾನ, ಅನುಭವ, ಹೇಳಿಕೊಳ್ಳಬಹುದಾದ ಮತ್ತು ಹೇಳಿಕೊಳ್ಳಲಾರದ ಆಸೆಗಳು, ಏನೋ ಆಗುವ ಅಥವಾ ಆಗದಿರುವ ಪ್ರಜ್ಞಾಪೂರ್ವಕ ಪ್ರಯತ್ನಗಳು, ಸುಪ್ತ ಪ್ರಜ್ಞೆಯಲ್ಲಿರುವ ವೈಯಕ್ತಿಕವಾದ,ಗುಂಪಿಗೆ ಸಂಬಂಧಿಸಿದ,ಕುಲ ಸಂಬಂಧಿಯಾದ ನೆನಪುಗಳ ಇಡೀ ಉಗ್ರಾಣ;  ಇವುಗಳನ್ನೆಲ್ಲ ಬಹಿರಂಗವಾಗಿ ಕ್ರಿಯೆಯಲ್ಲಿ ವ್ಯಕ್ತಪಡಿಸುವ ಅಥವಾ ಆಧ್ಯಾತ್ಮಿಕ ಬಿಂಬಗಳಾಗಿ ಮೂಡಿಸುವ ಪ್ರಯತ್ನದಲ್ಲಿ ತೊಡಗಿರುವುದೇ “ನಾನು” ಇದು ಸ್ಪರ್ಧೆಯಲ್ಲಿ ಏನೋ ಆಗುವ ಆಸೆಯಲ್ಲಿ ಸೇರಿಕೊಂಡಿರುತ್ತದೆ. ನಾನು ಎಂಬುದು ನಿಜವಾಗಿ ನಮಗೆದರಾದಾಗ ಅದು ಕೆಡುಕೆಂದು ತಿಳಿಯುತ್ತದೆ. ನಾನು ಎಂಬುದು ಸದಾ ಭೇದವನ್ನು ಹುಟ್ಟಿಸುತ್ತಿರುತ್ತದೆ,ಸ್ವಮಗ್ನವಾಗಿರುತ್ತದೆ,ತನ್ನನ್ನೇ ಬೇರೆಯಾಗಿ ಎಣಿಸುತ್ತಿರುತ್ತದೆ. ನಾನು ತೊಡಗುವ ಯಾವುದೇ ಚಟುವಟಿಕೆ,ಅದು ಎಷ್ಟೇ ಉದಾತ್ತವಾದದ್ದಾಗಿರಲಿ, ಪ್ರತ್ಯೇಕವಾದ, ಖಂಡವಾದ ಚಟುವಟಿಕೆಯೇ ಆಗಿರುತ್ತದೆ. ನಾನು ಇಲ್ಲದ,ಪ್ರಯತ್ನಪಡುವುದೆಂಬುದಿಲ್ಲದ,ಹೋರಾಟವಿಲ್ಲದ ಅಪರೂಪದ ಕೆಲವು ಕ್ಷಣಗಳನ್ನೂ ನಾವು ಬಲ್ಲೆವು.  ಪ್ರೀತಿ ಇದ್ದಾಗ ಇಂಥ ಕ್ಷಣಗಳು ಇರುತ್ತವೆ..

ವಾಸ್ತವವನ್ನು, ಸತ್ಯವನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಸತ್ಯವು ಇರಬೇಕೆಂದರೆ ಆಗ ನಂಬಿಕೆ,ಜ್ಞಾನ, ಅನುಭವಿಸುವುದು,ಗುಣವನ್ನು ಬೆಂಬತ್ತುವುದು ಇವೆಲ್ಲವೂ ಇಲ್ಲವಾಗಬೇಕು. ಗುಣವೇ ಬೇರೆ,ಗುಣವಂತರಾಗಿರುವುದೇ ಬೇರೆ.ಗುಣವನ್ನು ಪಡೆಯಬೇಕೆಂದು ಉದ್ದೇಶಪೂರ್ವಕವಾಗಿ ಪ್ರಯತ್ನ ಪಡುತ್ತಿರುವವರು ಎಂದೂ ಸತ್ಯವನ್ನು ಕಾಣಲಾರರು. ಅವರು ಸಜ್ಜನರಾಗಿರಬಹುದು,ಅದರೆ ಸತ್ಯವಂತರು,ಅರಿವುಳ್ಳವರು ಆಗಿರಲು ಸಾಧ್ಯವಿಲ್ಲ. ಸತ್ಯವಂತರಲ್ಲಿ ಸತ್ಯ ತಾನೇ ತಾನಾಗಿ ಇರುತ್ತದೆ. ಗುಣವಂತನಾದವನು ಒಳ್ಳೆಯ ಮನುಷ್ಯ ‌.ಒಳೆಯ ಮನುಷ್ಯ ಸತ್ಯವೆಂದರೇನು ಎಂದು ಅರಿಯಲಾರ.ಏಕೆಂದರೆ ಗುಣವೆಂಬುದು ಅವನಲ್ಲಿರುವ “ನಾನು” ಎಂಬುದನ್ನು ಹೊದಿಕೆಯಂತೆ ಅವರಿಸಿರುತ್ತದೆ.ಆತ ಆತ ಗುಣದ ಬೆನ್ನು ಹತ್ತಿರುವುದರಿಂದ ಅವನೊಳಗಿನ “ನಾನು” ಮತ್ತಷ್ಟು ಬಲಗೊಳ್ಳುತ್ತಿರುತ್ತದೆ. ನಾನು ದುರಾಸೆ ಇಲ್ಲದವನಾಗಬೇಕು,ಎಂದು ಬಯಸುತ್ತಿರುವಾಗ ಆತ ದುರಾಸೆ ಇಲ್ಲದ ಸ್ಥಿತಿಯನ್ನು ಒಂದು ಅನುಭವವಾಗಿ ಪಡೆಯುತ್ತಾ ತನ್ನೊಳಗಿನ “ನಾನು” ಎಂಬುದನ್ನು ಬಲಗೊಳಿಸಿಕೊಳ್ಳುತ್ತಿರುತ್ತಾನೆ. ಆದ್ದರಿಂದ ಈ ಲೋಕದ ವಸ್ತುಗಳಲ್ಲಿ ಮಾತ್ರವಲ್ಲ ಜ್ಞಾನ ಮತ್ತು ನಂಬಿಕೆಗಳಲ್ಲೂ ಬಡವರಾಗಿರುವುದೇ ವಾಸಿ.ಲೌಕಿಕವಾಗಿ .

ಆದರೆ ನೀವು ಮತ್ತು ನಾನು ವ್ಯಕ್ತಿಗಳಾಗಿ “ನಾನು” ಎಂಬುದರ ಕೆಲಸಗಳನ್ನು ಇಡಿಯಾಗಿ ಕಾಣಲು ಸಾಧ್ಯವಾದಾಗ ಪ್ರೀತಿ ಎಂದರೇನು ಎಂಬುದು ನಮಗೆ ತಿಳಿಯುತ್ತದೆ.ಕೇವಲ ಈ ಸುಧಾರಣೆಯೊಂದೇ ಜಗತ್ತನ್ನು ಬದಲಾಯಿಸಬಹುದು. ಪ್ರೀತಿ ಎಂದರೆ “ನಾನು “ ಎಂಬುದಲ್ಲ,ನಾನು ಎಂಬುದು ಪ್ರೀತಿಕಾಣಲಾರದು.ನಾನು ಪ್ರೀತಿಸುತ್ತೇನೆ ಎನ್ನುತೀರಿ,ಆದರೆ ಹಾಗೆನ್ನುತ್ತೀರುವಾಗಲೇ,ಹಾಗೆ ಅನುಭವಿಸುತ್ತಿರುವಾಗಲೇ ಪ್ರೀತಿ ಇಲ್ಲವಾಗಿರುತ್ತದೆ.ನಿಮಗೆ ಪ್ರೀತಿ ತಿಳಿದಾಗ “ನಾನು” ಇರುವುದಿಲ್ಲ.ಪ್ರೀತಿ ಇದ್ದಾಗ “ನಾನು” ಇರುವುದಿಲ್ಲ…

ಮೂಲ:ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
ಭಂಡಾರಿವಾರ್ತೆಗಾಗಿ;ವೆಂಕಟೇಶ ಭಂಡಾರಿ ಕುಂದಾಪುರ.

1 thought on “ಪ್ರೀತಿ ಇರುವಲ್ಲಿ “ನಾನು” ಇರುವುದಿಲ್ಲ ( ಧ್ಯಾನ-8)-ವೆಂಕಟೇಶ ಭಂಡಾರಿ ಕುಂದಾಪುರ.

  1. ಮನುಷ್ಯ ಹಣದ ಉಚುತನ ಬಿಡ ಬೇಕು ಅತಿ ಆಸೆ ಗಾತಿ ಗೇಡು.
    ಅಸೀಗೆ ಇದಷ್ಟೆ ಕಾಲು ಚಚು.

Leave a Reply

Your email address will not be published. Required fields are marked *