ಕಥೆ – 4
“ಅರಳುವ ಮುನ್ನ”
“ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ ” ಕವಿ ಕುವೆಂಪುರವರ ಹಾಡಿನ ಸಾಲುಗಳನ್ನು ಗುನುಗುತ್ತ ಸೋಫಾದಮೇಲೆ ಒರಗಿದ್ದ ನನ್ನನ್ನು ಸ್ಕೂಲ್ ಬಸ್ಸಿನ ಹಾರ್ನ್ ಎಚ್ಚರಿಸಿತು.ಅಷ್ಟರಲ್ಲಿ ಅಮ್ಮ ಎನ್ನುತ್ತಾ ‘ಖುಷಿ’ಯು ಒಳ ಬಂದಾಯಿತು. ಕೆನ್ನೆಗೆ ಮುತ್ತಿಟ್ಟು ಫ್ರೆಶ್ ಆಗಲು ಕೋಣೆ ಸೇರಿದ “ಖುಷಿ”ಯ ಕಂಡು ನಾನು ತಿಂಡಿ ರೆಡಿ ಮಾಡಲು ಅಡುಗೆ ಕೋಣೆಯತ್ತ ನಡೆದೆ. ಅವಳಿಷ್ಟದ ಬೆಣ್ಣೆ ದೋಸೆ ಮತ್ತು ಹಾಲನ್ನು ಕೊಟ್ಟು ತರಗತಿಯ ವಿಷಯ ಮಾತನಾಡುತ್ತ ಕುಳಿತೆವು. ಅಷ್ಟರಲ್ಲಿ ಏನೋ ನೆನಪಾದವಳಂತೆ ಖುಷಿ ತನ್ನ ಬ್ಯಾಗಿನಿಂದ ಒಂದು ಪೊಟ್ಟಣವನ್ನು ಹಿಡಿದುಕೊಂಡು ಬಂದಳು. ಅಮ್ಮ ಇಂದು ನಮ್ಮ ಶಾಲೆಯಲ್ಲಿ ಎಲ್ಲರಿಗೂ ‘ವಿಸ್ಪರ್ ಪ್ಯಾಡ’ನ್ನು ನೀಡಿದ್ದಾರೆ. ಅದೇ ರೀತಿ ಹದಿಹರೆಯದ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಎಂದು ನುಡಿದಳು. ಅವಳ ಮಾತನ್ನು ಕೇಳಿ ಬೆಚ್ಚಿ ಬೀಳುವ ಸರದಿ ನನ್ನದಾಗಿತ್ತು. ಅವಳು ಮತ್ತೆ ತನ್ನ ಗೆಳತಿಯರ ವಿಚಾರಗಳನ್ನು ಮಾತನಾಡ ತೊಡಗಿದಳು.ಆದರೆ ನಾನದಾವುದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.ನೇರವಾಗಿ ಸಿಡಿಯುತ್ತಿದ್ದ ತಲೆಯನ್ನು ಒತ್ತಿ ಹಿಡಿಯುತ್ತಾ ರೂಮಿನೊಳಗೆ ಬಂದು ಮಲಗಿದೆ. ಸಿಡಿಯುವ ತಲೆಗೆ ನಿದ್ದೆಯನ್ನು ಬರಸೆಳೆಯುವ ಮನಸ್ಸಿರಲಿಲ್ಲ .ಮನಸು ಹಿಂದಕ್ಕೋಡಿತ್ತು.
ಹೌದು ನಾನಾಗ ಹದಿನಾಲ್ಕರ ಬಾಲೆ. ದೊಡ್ಡಮ್ಮ-ಚಿಕ್ಕಮ್ಮ,ಮಾವನ ಮಕ್ಕಳು,ಜತೆಗೆ ಸಹಪಾಠಿಗಳು “ನಾನು ದೊಡ್ಡವಳಾದೆ” ಎಂದೆನುತ half saree ಫಂಕ್ಷನ್ ನ್ನು ಮಾಡಿಕೊಂಡಾಗಿತ್ತು. ಆದರೆ ನನ್ನಲ್ಲಿ ಅಂತಹ ಬದಲಾವಣೆ ಕಾಣಿಸಲಿಲ್ಲ.ಅಮ್ಮ, ಅದಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಹೇಳಿದ್ದೂ ಆಯಿತು. ಅದೊಂದು ದಿನ ವಿಪರೀತ ಹೊಟ್ಟೆನೋವು, ಸೊಂಟನೋವು ಜತೆಗೆ ವಿಪರೀತ ಸುಸ್ತು. ನನ್ನೊಳಗೆ ಏನಾಗುತ್ತಿದೆ ಎಂಬ ಅರಿವಾಗುತ್ತಲೇ ಇರಲಿಲ್ಲ. ಏನೋ ಸಂಕಟ. ಅಮ್ಮನಿಗೆ ಹೇಳಿದರೆ ಆಕೆ ಮುಟ್ಟಾಗಬಹುದೆಂದು ಹೇಳಿ ಸಮಾಧಾನಿಸಿದಳು. ಜೀರಿಗೆ ಕಷಾಯವನ್ನು ಕುಡಿಸಿದಳು. ಜಾಗರೂಕತೆಯಿಂದ ಇರಲು ಹೇಳಿದಳು. ಆದರೆ ಅವಳಂದಂತೆ ಆಗಲೇ ಇಲ್ಲ.ಎರಡು ದಿನದಲ್ಲಿ ನಾನು ಚೇತರಿಸಿಕೊಂಡೆ.
ಮುಂದೆ ಎಂದಿನಂತೆ ಶಾಲೆಯತ್ತ ನಡೆದೆ. ಪರೀಕ್ಷೆಗಳು ಮುಗಿದು ಅಮ್ಮ ನಾನು ಚಿಕ್ಕಮಗಳೂರಿನ ಅಜ್ಜಿ ಮನೆಯತ್ತ ನಡೆದೆವು. ಅಲ್ಲಿ ಹೋದ ಒಂದು ವಾರಕ್ಕೆ ಮತ್ತೆ ಹೊಟ್ಟೆನೋವು ಕಾಣಿಸಿತು. ಅಮ್ಮನಿಗೆ ಹೇಳಿದರೆ ಸರಿ ಮಲಗಿಕೋ ಬಿಡು ಎಂಬ ಸಮಾಧಾನ. ಅಜ್ಜಿಯು ಏನೋ ಕಷಾಯವನ್ನು ಮಾಡಿ ಕುಡಿಸಿ ಮಲಗಿಸಿದರು. ಆದರೆ ನನಗೆ ಈ ಬಾರಿ ನಡೆಯಲು ಕಷ್ಟವಾಗುವ ಪರಿಸ್ಥಿತಿ. ಹೆಣ್ಣಿನ ಅಂಗದ ಬಳಿ ಏನು ಗೋಲಿ ಗಾತ್ರದ ನೀಲಿ ಚೆಂಡು ಮೂತ್ರ ಮಾಡಲು ಕೂಡ ಬಿಡದಂತೆ ಮುಚ್ಚಿತ್ತು. ಯಾಕೋ ಅಮ್ಮನಲ್ಲಿ ಹೇಳಲು ಭಯ. ನೀರನ್ನೇ ಕುಡಿಯುವುದನ್ನು ಬಿಟ್ಟು ಮಲಗುವುದೊಂದೆ ಆಗಿತ್ತು.ನೋವಿಗೂ ,ಉಪವಾಸವಿದ್ದದಕ್ಕೂ ಜ್ವರ ಬಂದಾಗಿತ್ತು. ಮತ್ತೆ ಎರಡು ಮೂರು ದಿನಗಳಲ್ಲಿ ಮೊದಲಿನಂತೆ ಆಗಿದ್ದೆ. ಇಪ್ಪತ್ತು ದಿನಗಳಿದ್ದು ಊರಿಗೆ ಹಿಂದುರುಗಿ ಬಂದಾಯಿತು.ಅಜ್ಜಿಯೂ “ಇಂಚರಾ “ ಮೊದಲಿನಂತೆ ಲವಲವಿಕೆಯಾಗಲ್ಲ.ಗಮನಿಸಿಕೋ ಎಂದು ಅಮ್ಮನನ್ನು ಎಚ್ಚರಿಸಿ ಕಳುಹಿಸಿದ್ದರು.ಈ ಬಾರಿ ಮತ್ತೆ ಸೊಂಟನೋವು, ಹೊಟ್ಟೆನೋವು, ಜ್ವರ ನನ್ನನ್ನು ನಿತ್ಯಕರ್ಮಗಳನ್ನು ಮಾಡಲಾಗದ ಸ್ಥಿತಿಗೆ ತಂದಿತ್ತು. ಮೊದಲು ಕಾಣಿಸಿಕೊಂಡಿದ್ದ ಗಂಟು ಮತ್ತಷ್ಟು ದೊಡ್ಡದಾಗಿತ್ತು.ಎದ್ದು ನಡೆಯಲಾಗದಷ್ಟು ಯಾತನೆ.ಒಳ ಉಡುಪುಗಳನ್ನು ಧರಿಸಲಾಗುತ್ತಿರಲಿಲ್ಲ. ಕಾಲು ಅಗಲಿಸಿ ನಡೆಯುತ್ತಿದ್ದ ನನ್ನನ್ನು ಕಂಡು ಅಪ್ಪ,ಅಮ್ಮನ ಜೊತೆ ಅದೇ ಬೀದಿಯಲ್ಲಿದ್ದ ಡಾಕ್ಟರ್ ಮಾಲಿನಿ ಬಳಿ ಕಳುಹಿಸಿದರು. ನನ್ನ ಪರೀಕ್ಷಿಸಿದ ಡಾಕ್ಟರ್ ಕೂಡಲೇ ಅಪ್ಪನನ್ನು ಬರಹೇಳಿದರು. ಅವರು ಕೊಟ್ಟ ಉತ್ತರ ಅವರಷ್ಟೇ ಕುತೂಹಲಕಾರಿಯಾಗಿತ್ತು. ಕಾರಣ ಅವರು ಹೇಳಿದ ಪ್ರಕಾರ ನಾನು ಗರ್ಭಿಣಿಯಾಗಿದ್ದೆ. ಇದನ್ನು ಒಪ್ಪುವ ಸ್ಥಿತಿಯಲ್ಲಿ ಅಪ್ಪ-ಅಮ್ಮ ಇಬ್ಬರೂ ಇರಲಿಲ್ಲ .ನಾನಂತೂ ಏನೂ ಅರಿಯದ ಗೊಂದಲದಲ್ಲಿದ್ದೆ.ಹೆತ್ತವರ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ಇರಲಿಲ್ಲ. ಅಂತೂ ಇಂತೂ ಆ ದಿನ ನರಕ ಮಯವಾಗಿ ಕಳೆದು ಹೋಗಿತ್ತು. ಅಮ್ಮ ಅಳುತ್ತಾ ಕುಳಿತಿದ್ದರೆ ಅಪ್ಪ ಮಾತು ಬಿಟ್ಟಾಗಿತ್ತು.ನನ್ನದಲ್ಲದ ತಪ್ಪಿಗೆ ನಾನು ಅಪರಾಧಿಯಾಗಿದ್ದೆ.ಅಪ್ಪ ಅಮ್ಮ ಏನು ಮಾತನಾಡಿದರು ಗೊತ್ತಿಲ್ಲ.ಆದರೆ ಮರುದಿನ ಅಪ್ಪ ತನ್ನ ಸ್ನೇಹಿತರಾದ ಡಾಕ್ಟರ್ ಮಧುಕರ್ ಅವರ ಹಾಸ್ಪಿಟಲ್ಗೆ ಕರೆತಂದಾಯಿತು. ಅಲ್ಲಿ ಅವರ ಪತ್ನಿ ಡಾಕ್ಟರ್ ಸಮನ್ವಿ ನನ್ನನ್ನು ಪರೀಕ್ಷಿಸಿ ಸ್ಕ್ಯಾನಿಂಗ್ ಕೊಠಡಿಯತ್ತ ಕರೆದೊಯ್ದರು. ಅಪ್ಪ ಅಮ್ಮನ ಆತಂಕದ ಮುಖ ನೋಡಲಾಗುತ್ತಿರಲಿಲ್ಲ. ಡಾಕ್ಟರ್ ಮಧುಕರ್ ಹಾಗೂ ಸಮನ್ವಿ ಅಪ್ಪನನ್ನು ಅಮ್ಮನನ್ನು ಸಮಾಧಾನಿಸುತ್ತಾ, ವಿಷಯವನ್ನು ಹೇಳತೊಡಗಿದರು . ‘ಇವಳು ರಸ ಜ್ವಾಲೆಯಾಗಿ ಮೂರು ನಾಲ್ಕು ತಿಂಗಳು ಕಳೆದಿದೆ. ಆದರೆ ಹೊರಗೆ ಹೋಗಬೇಕಾದ ದ್ರವ ಹೊರಹೋಗದಂತೆ ಕನ್ಯಾಪೊರೆ ತಡೆಹಿಡಿದಿದೆ. ಸುಲಭವಾಗಿ ಹೇಳಬೇಕೆಂದರೆ “ಮೊಗ್ಗು ಬಿರಿಯದ ಹಾಗೆ ಎಳೆಯೊಂದು ಸುತ್ತಿರುವ ಹಾಗೆ” ಒಂದು ಸಣ್ಣ ಶಸ್ತ್ರಚಿಕಿತ್ಸೆ ಮಾಡಿ ಸರಿಮಾಡಬಹುದು. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಇಂಪರ್ಫೋರತೆ ಹೈಮೆನ್’ ಎಂದು ಕರೆಯುತ್ತೇವೆ. ಪ್ರತಿ ಹೆಣ್ಣು ಮಗುವಿನಲ್ಲೂ ಕನ್ಯಾಪೊರೆ ಇರುತ್ತದೆ ಆದರೆ ಅದು ಸಂಪೂರ್ಣವಾಗಿ ಜನನಾಂಗದ ಒಳಭಾಗವನ್ನು ಮುಚ್ಚುವುದಿಲ್ಲ. ಸ್ವಲ್ಪ ಸಣ್ಣ ಕಿರಿದಾದ ರಂದ್ರ ತೆರೆದಿರುತ್ತದೆ.ಹಾಗಾಗಿ ತಿಂಗಳ ಯಾವುದೇ ತಡೆಯಿಲ್ಲದೆ ಹೊರಗೆ ಹೋಗುತ್ತದೆ. ಆದರೆ ಸಾವಿರದಲ್ಲಿ ಒಬ್ಬರಿಗೆ ಅಪರೂಪಕ್ಕೆ ಕನ್ಯಾಪೊರೆ ಸಂಪೂರ್ಣವಾಗಿ ಆವರಿಸಿರುತ್ತದೆ . ಅವರಿಗೆ ಇಂತಹ ಸಮಸ್ಯೆ ಆಗುತ್ತದೆ. ಕೆಲವೊಮ್ಮೆ ಇದು ಅಲ್ಲೇ ಹಾನಿಕರ ಜೀವಕೋಶಗಳನ್ನು ಬೆಳೆಯಲು ಬಿಟ್ಟು ಕ್ಯಾನ್ಸರ್ ನಂತಹ ಮಾರಕ ರೋಗಕ್ಕೂ ಕಾರಣವಾಗಬಲ್ಲದು. ಪ್ರಾಣಾಪಾಯವನ್ನುತಂದೊಡ್ಡಬಲ್ಲದು.ಕೆಲವರಲ್ಲಿ ರಕ್ತನಾಳವೇ ಮುಚ್ಚಿರುವ ಸಾಧ್ಯತೆ ಇರುತ್ತದೆ.ಇವಳ ವಿಷಯದಲ್ಲಿ ಹಾಗಾಗಿಲ್ಲ ಎಂದು ತಿಳಿಸಿ ಶಸ್ತ್ರ ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿ ಕೊಂಡರು.ಜತೆಗೆ ಡಾ.ಮಾಲಿನಿಯವರಿಗೆ ಫೋನಾಯಿಸಿ ಅವರ ತಪ್ಪು ತಿಳುವಳಿಕೆಯ ಬಗ್ಗೆಯೂ ತಿಳಿಸಿದರು. ಒಂದು ಸೂಕ್ಷ್ಮವಾದ ಪದರ ಎಷ್ಟು ಒತ್ತಡವನ್ನು ಹಿಡಿದುಕೊಳ್ಳಬಹುದು?ಅಂತೂಇಂತೂ ಮೂರು-ನಾಲ್ಕು ತಿಂಗಳ ಉಳಿಕೆ ಯೆಲ್ಲವೂ ನೀರು ತುಂಬಿದ ಬಲೂನಿನಂತೆ ಒಡೆದುಹೋಗಿತ್ತು. ವಿಪರೀತವಾದ ರಕ್ತಸ್ರಾವ ನನ್ನನ್ನು ಅರೆ ಪ್ರಜ್ಞಾವಸ್ಥೆಗೆ ದೂಡಿತ್ತು. ವೈದ್ಯರೊಬ್ಬರ ಅಲ್ಪಜ್ಞಾನ ನನ್ನನ್ನು ನನ್ನ ಮನೆಯವರನ್ನು ಸಾವಿನ ದವಡೆಗೆ ದೂಡುವುದರಲ್ಲಿತ್ತು.ಅಮ್ಮ ನನ್ನ ತಬ್ಬಿ ಅತ್ತಿದ್ದರೆ,ಅಪ್ಪ ಮೌನವಾಗಿ ಕಣ್ಣೀರಾಗಿದ್ದರು. ಡಾಕ್ಟರ ಸಮನ್ವಿಯವರ ಕೂಲಂಕುಷವಾದ ಪರಿಶೀಲನೆ ಮುಗಿದು ನಾನು ಕ್ಯಾನ್ಸರ್ ರೋಗದ ಬಳಿಯು ಸುಳಿಯದಂತೆ ಮುತುವರ್ಜಿವಹಿಸಿದ್ದರು.ಅವರ ನಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿತ್ತು.
ಆಧುನಿಕ ಜಗತ್ತು ಈಗ ತುಂಬಾ ಮುಂದುವರಿದಿದೆ.ಹೆಣ್ಣುಶಿಶು ಹುಟ್ಟಿದಾಗಲೇ ಈ ಸಮಸ್ಯೆಯನ್ನು ಗುರುತಿಸಬಹುದು. ಹೆಣ್ಣು ಮಗುವಿನ ದೈಹಿಕ ಪರೀಕ್ಷೆಯಿಂದ ಯಾವಾಗ ಬೇಕಾದರೂ ಗುರುತಿಸಿ ಚಿಕಿತ್ಸೆ ಪಡೆಯಬಹುದು.ಹೆಣ್ಣು ಹರೆಯಕ್ಕೆ ಬಂದಾಗ ಆಕೆ ರಸಜ್ವಲೆಯಾಗಲು ತಡವಾದರೆ ಈ ಪರೀಕ್ಷೆ ಅತಿ ಅಗತ್ಯ.ಕೆಲವೊಮ್ಮೆ ಹಾರ್ಮೋನ್ ಗಳ ಕಾರಣದಿಂದಲೂ ಋತುಮತಿಯಾಗಲು ತಡವಾಗಬಹುದು ಎಂಬುದನ್ನು ತಿಳಿಸಿದರು.ನನಗೆ ಬೇಕಾದ ಆಪ್ತ ಸಮಾಲೋಚನೆಯನ್ನೂ ನಡೆಸಿದರು. ಮುಂದೆ ಅಪ್ಪನಿಗೆ ಆ ಊರಿನಿಂದ ವರ್ಗವಾಯಿತು .ನಾವು ಬೆಂಗಳೂರನ್ನು ಬಿಟ್ಟು ಉಡುಪಿ ಸೇರಿಯಾಯ್ತು. ನಾನು ಎಲ್ಲರಂತಾದೆ ಎಂಬ ತೃಪ್ತಿ ಅಪ್ಪ ಅಮ್ಮನಲ್ಲಿತ್ತು.
ಪದವಿ ಕೊನೆಯ ಹಂತದಲ್ಲಿರುವಾಗ ಕಾಸರಗೋಡಿನಿಂದ ವಿಕ್ರಂ ಎಂಬ ಇಂಜಿನಿಯರ್ ಹುಡುಗನ ವರಪರೀಕ್ಷೆಯ ನನಗೆ ಎದುರಾಯಿತು. ಸಂಬಂಧ ಎಲ್ಲರಿಗೂ ಇಷ್ಟವಾಗಿ ನಿಶ್ಚಿತಾರ್ಥವು ಮುಗಿಯಿತು.ಮದುವೆಯ ಬಗ್ಗೆ ಹೊಂಗನಸುಗಳನ್ನು ಕಾಣುತ್ತಾ ನಾನು ಹಸೆಮಣೆ ಏರಿದೆ. ಆದರೆ ಕೊನೆಯ ಕ್ಷಣದಲ್ಲಿ ವಿಕ್ರಮನ ಚಿಕ್ಕಮ್ಮ ಎನಿಸಿಕೊಂಡಿದ್ದ ಅದೇ ಡಾಕ್ಟರ್ ಮಾಲಿನಿ ನನ್ನ ಹೆತ್ತವರನ್ನು ಕಂಡು ನಾನು ಹದಿಹರೆಯದಲ್ಲಿ ಗರ್ಭಿಣಿಯಾಗಿದ್ದೇನೆ ಎಂಬ ಸ್ಪೋಟಕ ಮಾಹಿತಿಯನ್ನು ಹೇಳಿ ವಿಕ್ರಂ ಹೆತ್ತವರ ಬಳಿ ಹೇಳಾಯಿತು.ಅವರ ಲೋಪವನ್ನು ಮಧುಕರ್ ದಂಪತಿಗಳು ತಿಳಿಸಿ ಎಚ್ಚರಿಸಿದ ಅಸಮಾಧಾನ ಅವರಲ್ಲಿ ಮನೆ ಮಾಡಿತ್ತು.. ಮತ್ತೆ ನಮ್ಮ ಸಂಸಾರಕ್ಕೆ ಬರಸಿಡಿಲು ಅಪ್ಪಳಿಸಿತ್ತು. ಆದರೆ ಅಂದು ಕೂಡ ಸಮನ್ವಿ – ಮಧುಕರ್ ದಂಪತಿಗಳು ನಮ್ಮ ಪಾಲಿಗೆ ದೇವರಾಗಿ ಬಂದರು. ಡಾಕ್ಟರ್ ಮಾಲಿನಿಯವರ ಅರೆಬರೆ ವೈದ್ಯಕೀಯ ಜ್ಞಾನದ ಬಗ್ಗೆ ತಿಳಿಸಿದರು. ಜತೆಗೆ ಅವರಿಂದ ತೊಂದರೆಗೊಳಗಾದ ಇನ್ನಿತರ ರೋಗಿಗಳ ಬಗ್ಗೆ ತಿಳಿಸಿದರು.ನನ್ನನ್ನು ಕಳಂಕಿತೆ ಎಂಬ ಪಟ್ಟದಿಂದ ಹೊರ ತರುವುದರೊಂದಿಗೆ ಇಂತಹ ಸಂಬಂಧವೇ ಬೇಡವೆಂದು ತಮ್ಮ ಅಕ್ಕನ ಮಗಡಾಕ್ಟರ್ ಸುಶಾಂತ್ ಗೆ ನನ್ನನ್ನು ಧಾರೆಯೆರೆದು, ಮನೆ ತುಂಬಿಕೊಂಡಿದ್ದರು. ನಮ್ಮಿಬ್ಬರ ಸುಖ ದಾಂಪತ್ಯದಲ್ಲಿ ಮೂಡಿದ ಚಿತ್ತಾರವೇ ಖುಷಿ.ಈಗವಳು ಹದಿಮೂರರ ಬಾಲೆ.ಎಲ್ಲವನ್ನೂ ಮರೆತು ನೆಮ್ಮಂದಿಯಿಂದಿದ್ದರೂ ಅನುಭವಿಸಿದ ಅಪಮಾನ ಮನದ ಮೂಲೆಯಲ್ಲಿ ಹಾಗೆ ಕುಳಿತಿದೆ.ಇಂದೇಕೋ ಮತ್ತೆ ಮನಬಿರಿಯುವಂತೆ ಅಳಬೇಕನಿಸುತಿದೆ.ಅಷ್ಟರಲ್ಲಿ ಸುಶಾಂತ್ ಕೋಣೆಯೊಳಗೆ ಬಂದಾಗಿತ್ತು.ಖುಷಿಯನ್ನು ಮಾತನಾಡಿಸಿ ಬಂದವರಿಗೆ ನನ್ನ ಅಳುವಿಗೆ ಕಾರಣ ಗೊತ್ತಾಗಿತ್ತು.“ಖುಷಿಯ ವಿಚಾರದಲ್ಲಿ ನೀನು ಭಯಪಡಬೇಡ ಇಂಚರಾ.ಅವಳು ಎಲ್ಲರಂತೆ ನಾರ್ಮಲ್ ಹುಡುಗಿ ಎಂದು ಚಿಕ್ಕಮ್ಮ ಸಮನ್ವಿ ಹೇಳಿಲ್ವಾ…”ಎಂದವರನ್ನು ತಬ್ಬಿ ಬಿಕ್ಕಳಿಸಿದೆ.ಈ ಡಾಕ್ಟರ್ ಜತೆಲ್ಲಿರುವಾಗ ಮಾಸಿ ಹೋಗಿರುವ ಗಾಯವನ್ನು ಕೆದಕಿ ಮತ್ತಷ್ಟು ಗಾಯಮಾಡಿಕ್ಕೊಳ್ಳುವ ಆಸೆನಾ? ಖುಷಿಯೆಂಬ ಔಷಧಿ ಇರುವಾಗ ಇನ್ನೊಂದು ointment ಬೇಕೇನು? ಎಂದವರತ್ತ ನಸು ನಗು ಬೀರಿದೆ.ಅವರ ಸಾಮೀಪ್ಯದಲ್ಲಿ ಹಾಗೆಯೇ ಜೊಂಪು ಹತ್ತ ತೊಡಗಿತು.
✍🏻 ಎ.ಆರ್.ಭಂಡಾರಿ.ವಿಟ್ಲ.
,👌👌👌👌👌👌👌👌👌