November 22, 2024
shivas salute (23)

ಮುಂಬಯಿ: ಭಾರತೀಯ ಸಶಸ್ತ್ರ ಪಡೆ ಹಾಗೂ ಪೊಲೀಸ್ ಇಲಾಖೆಗೆ ಸೇರಿದ ಲಾಂಛನಗಳನ್ನೊಂಡ ಅತ್ಯಾಧುನಿಕ ಶೈಲಿಯ ಹೇರ್ ಎಕ್ಸ್ ಪರ್ಟ್ ಡಾ.ಶಿವರಾಮಕೃಷ್ಣ ಭಂಡಾರಿ ಅವರ ಶಿವಾಸ್ ಸೆಲ್ಯೂಟ್ 3ನೇ ಸಿರೀಸ್ ಆಫ್ ಸೆಲೂನ್ ದಸರಾ ಹಬ್ಬದ ಸಂದರ್ಭದಲ್ಲಿ ಉತ್ತರ ಮುಂಬೈನ ಕಾಂಡಿವಲಿ ಪ್ರದೇಶದಲ್ಲಿ ಶುಭಾರಂಭಗೊಂಡಿತು.

ಅತ್ಯಂತ ವಿಶಾಲ ಹಾಗೂ ವಿಸ್ತಾರವಾದ ಸ್ಥಳಾವಕಾಶವನ್ನು ಹೊಂದಿರುವ ಈ ಸೆಲೂನ್ ನ ಗೋಡೆಗಳು ಹಾಗೂ ಶೊಕೇಸ್ ಗಳು ಮಿಲಿಟರಿ ಜೀವನವನ್ನು ಪರಿಚಯಿಸುತ್ತಿದ್ದು, ಪೊಲೀಸ್ ಇಲಾಖೆಯ ಹೆಮ್ಮೆಯ ಚಿಹ್ನೆಗಳನ್ನೂ ಒಳಗೊಂಡಿದೆ. ರಿಬ್ಬನ್ ಕತ್ತರಿಸುವ ಮೂಲಕ ಸೆಲೂನ್ ಉದ್ಘಾಟಿಸಿದ ಡಿಸಿಪಿ ವಿಶಾಲ್ ಠಾಕೂರ್ ಅವರು ಮಾತನಾಡಿ, ದೇಶದ ರಕ್ಷಣಾ ಕ್ಷೇತ್ರಕ್ಕೆ ‌ಸಮರ್ಪಣೆಯಾಗಿರುವ ಈ ಸೆಲೂನ್ ನಮ್ಮ ಹೆಮ್ಮೆಯ ಸಂಕೇತವಾಗಿದೆ ಎಂದು ಶುಭಹಾರೈಸಿದರು.‌ ಮಿಲಿಟರಿ ಹಾಗೂ ಪೊಲೀಸ್ ಪಡೆಗಳಿಗೆ ಸಂಬಂಧಿಸಿದ ಅನೇಕ ವಸ್ತುಗಳು, ಚಿತ್ರಗಳು, ಬ್ಯಾಡ್ಜ್ ಗಳು ಹಾಗೂ ಚಿಹ್ನೆಗಳು ದೇಶ ರಕ್ಷಣಾ ಕ್ಷೇತ್ರವನ್ನು ಪರಿಚಯಿಸುವ ಜತೆಗೆ ಅದರ ಕುರಿತು ಹೆಮ್ಮೆ ಮೂಡುವುದಕ್ಕೆ ಶಿವಾಸ್ ಸೆಲ್ಯೂಟ್ ಪ್ರೇರಣೆ ನೀಡಲಿದೆ ಎಂದರು.

 

ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ, ಸಂಸ್ಥೆಯ ಪ್ರವರ್ತಕ ಡಾ.ಶಿವರಾಮಕೃಷ್ಣ ಭಂಡಾರಿ ಅವರ ಸ್ನೇಹಿತ ಮಧುರ್ ಭಂಡಾರ್ಕಾರ್, ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ವಿಜೇತೆ, ಚಿತ್ರನಟಿ ಆಯೆಷಾ ಐಮಾನ್ ಸಮಾರಂಭದಲ್ಲಿ ಪಾಲ್ಗೊಂಡು ಉತ್ಕೃಷ್ಟ ಗುಣಮಟ್ಟದ ಈ ಸೆಲೂನ್ ಕುರಿತು ಹೆಗ್ಗಳಿಕೆಯ ಮಾತುಗಳನ್ನಾಡಿದರು. ಗಣ್ಯರಾದ ಡಾIಯೋಗೀಶ್ ಲಾಖಾನಿ, ರಾಜೀವ್ ಖಾಂಡೇವಾಲಾ ಹಾಗೂ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ, ಬಾರ್ಕೂರು ಇದರ ಅಧ್ಯಕ್ಷರಾದ ಸುರೇಶ್ ಭಂಡಾರಿ ಕಡಂದಲೆ ಪಾಲ್ಗೊಂಡಿದ್ದರು.

ಫಿಲ್ಮ್ ಮೇಕರ್ ರಾಜೀವ್ ಖಾಂಡೇವಾಲಾ ಅವರು ಹಲವಾರು‌ ಮೂಲಗಳಿಂದ ಸಂಗ್ರಹಿಸಿದ ಹಾಗೂ ವಿನ್ಯಾಸಗೊಳಿಸಿದ ಲಾಂಭನಗಳನ್ನು ಸೆಲ್ಯೂಟ್ ಸೆಲೂನ್ ಒಳಗೊಂಡಿದೆ. ಬಹಳ ಕಾಳಜಿಯಿಂದ ಗೌರವಯುತವಾಗಿ ಅವುಗಳನ್ನು ಕಾಪಾಡುವ ಜವಾಬ್ದಾರಿಯನ್ನೂ ಸಂಸ್ಥೆ ಹೊಂದಿರುತ್ತದೆ. ಸೆಲೂನ್ ನ ಪ್ರವೇಶ ಭಾಗದಲ್ಲಿ ಮಿಲಿಟರಿ ಜೀಪ್ ಹಾಗೂ ಮೋಟಾರ್ ಬೈಕ್, ರೈಫಲ್ ಗನ್ ಮಾದರಿಯ ಮುಖ್ಯ ಬಾಗಿಲಿನ ಹ್ಯಾಂಡಲ್, ಮಿಲಿಟರಿ ಬಾಕ್ಸ್ ಗಳು, ಕಿಟ್ ಗಳು, ಬುಲೆಟ್ ಪ್ಯಾಕೆಟ್, ನೌಕಾಪಡೆಯ  ಡೈವರ್ ಗಳ ಹಳೆಯ ಶೈಲಿಯ ಹೆಲ್ಮೆಟ್ ಗಳು, ವಾಯುಪಡೆಯಲ್ಲಿ ಬಳಸಲ್ಪಡುವ ವಿಮಾನ ಮಾದರಿಗಳು ಸೇರಿದಂತೆ ಹಲವಾರು ಆಸಕ್ತಿದಾಯಕ‌ ವಿನ್ಯಾಸಗಳನ್ನು ಸೆಲೂನ್ ಒಳಗೊಂಡಿದೆ. ಭಾರತೀಯ ರಕ್ಷಣಾ ಪಡೆಯ ನೈಜ ಜೀವನವನ್ನು ನಗರ ಪ್ರದೇಶದ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶಿವಾಸ್ ಸೆಲ್ಯೂಟ್ ನ ಪ್ರವರ್ತಕ ಡಾ.ಶಿವರಾಮಕೃಷ್ಣ ಭಂಡಾರಿ ಅವರು ಇಂತಹ ಸೆಲೂನನ್ನು ವಿನ್ಯಾಸಗೊಳಿಸಿ ರಕ್ಷಣಾ ಪಡೆಗೆ ಗೌರವ ಸಲ್ಲಿಸಿದ್ದಾರೆ.

ಸೆಲೂನ್ ನ ಗೋಡೆಗಳನ್ನು ಮಿಲಿಟರಿ ಸಿಬಂದಿ ಧರಿಸುವ ಬಟ್ಟೆಯಂತೆ ಹಸಿರು ಹಾಗೂ ಕಂದು ಬಣ್ಣದಿಂದ ವಿನ್ಯಾಸಗೊಳಿಸಲಾಗಿದೆ.

 

ದಶಕಗಳ ಹಿಂದೆ ಕ್ಷೌರಿಕನ ಬದುಕು ಹೇಗಿತ್ತು ಎಂದು ಪರಿಚಯಿಸುವ ನಿಟ್ಟಿನಲ್ಲಿ ಸೆಲೂನ್ ಒಂದು ಶೊಕೇಸ್ ನಲ್ಲಿ ಭಾರವಾದ ಲೋಹಗಳಿಂದ ಮಾಡಲಾದ ಪುರಾತನ ಕ್ಷೌರಿಕ ಉಪಕರಣಗಳನ್ನು ಪ್ರದರ್ಶಿಸಲಾಗಿದೆ. ಆಧುನಿಕ‌ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ‌ ಮಧ್ಯೆ ಹಳೆಯ ಉಪಕರಣಗಳು ಮರೆಯಾಗಿದ್ದು, ಸೆಲೂನ್ ಗಳ ಶೈಲಿಯನ್ನೂ ಬದಲಿಸಿವೆ.

 

ಮುಂಬೈ ಮಹಾನಗರದ ಉದ್ದಗಲಕ್ಕೂ ಶಿವಾಸ್ ಸೆಲೂನ್ ನ 23 ಶಾಖೆಗಳ ವಿಸ್ತರಿಸಿಕೊಂಡಿದ್ದು, ಇದು ಬಾಲಿವುಡ್ ವಲಯದಲ್ಲಿ ದೊಡ್ಡ ಹೆಸರನ್ನೇ ಗಳಿಸಿಕೊಂಡಿದೆ. ಗ್ಲಾಮರ್, ಫ್ಯಾಶನ್, ಟೆಲಿವಿಷನ್ ಹಾಗೂ ಕಾರ್ಪೊರೇಟ್ ವಲಯದ ಗ್ರಾಹಕರನ್ನು ಹೊಂದಿ ಪ್ರತಿಷ್ಠಿತ ಸಂಸ್ಥೆ ಎನಿಸಿಕೊಂಡಿದೆ.

 

ಶಿವ ಅವರು ಅಲ್ಪಸಂಖ್ಯಾತರು ಹಾಗೂ ಬಡ ವರ್ಗಕ್ಕೆ ತನ್ನ ಅಕಾಡೆಮಿಯ ಮೂಲಕ ಉಚಿತವಾಗಿ ಹೇರ್ ಸ್ಟೈಲ್ ಹಾಗೂ ಸೌಂದರ್ಯ ಕ್ಷೇತ್ರದ ತರಬೇತಿಯನ್ನೂ ನೀಡುತ್ತಿದ್ದಾರೆ. ಶಿವಾಸ್ ಸೆಲ್ಯೂಟ್ ನಲ್ಲಿ ಕೇಶ ವಿನ್ಯಾಸಕಾರಿಗೆ ಮಿಲಿಟರಿ ಶೈಲಿಯ ಹೇರ್ ಕಟ್ ಹಾಗೂ ಅವರ ಲುಕ್ ಕಾಣುವಂತೆ ಮಾಡುವ ತರಬೇತಿಯನ್ನು ನೀಡುತ್ತಿದೆ.

 

ಭಾರತೀಯ ರಕ್ಷಣಾ ಪಡೆಯು ದೇಶದ ಗಡಿ ಭಾಗದಲ್ಲಿ 24×7 ಕಾರ್ಯನಿರ್ವಹಿಸಲು ಬದ್ಧವಾಗಿದೆ ಎಂಬುದನ್ನು ನಮ್ಮ ಮುಂದಿನ ಪೀಳಿಗೆಗೆ ನೆನಪಿಸುವ ಜತೆಗೆ ಎಲ್ಲಾ ಪ್ರಕೃತಿ ವಿಪತ್ತುಗಳ ಸಮಯದಲ್ಲಿ ಭಾರತವನ್ನು ರಕ್ಷಿಸಿದೆ ಎಂಬ ಸತ್ಯವನ್ನು ತಿಳಿಸುವ ಪ್ರಯತ್ನವೂ ಶಿವಾಸ್ ಸೆಲ್ಯೂಟ್ ಮೂಲಕ ನಡೆಯುತ್ತಿದೆ ಎಂಬುದನ್ನು ಪ್ರವರ್ತಕ ಡಾ.ಶಿವರಾಮಕೃಷ್ಣ ಭಂಡಾರಿ ತೋರಿಸಿಕೊಟ್ಟಿದ್ದಾರೆ.

ದೇಶಾದ್ಯಂತ ಇನ್ನೂ ಹೆಚ್ಚಿನ ತಮ್ಮ ಸಂಸ್ಥೆಯನ್ನು ಸ್ಥಾಪಿಸಿ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

Leave a Reply

Your email address will not be published. Required fields are marked *