ಇಲ್ಲಿಯವರೆಗೆ…..
ತನ್ನ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋದ ಭವಾನಿಗೆ ನೆರೆಮನೆಯ ಹೆಂಗಸೊಬ್ಬರಿಂದ ತನ್ನ ತಾಯಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಸುದ್ದಿ ತಿಳಿಯುತ್ತದೆ. ಮತ್ತೆ ಊರಿಗೆ ಹೋಗದಿರುವ ನಿರ್ಧಾರ ಮಾಡುತ್ತಾಳೆ.ಈ ನಡುವೆ ಶಂಕರ್ ಭವಾನಿಯನ್ನು ಅವರ ಮನೆಗೆ ಕರೆದುಕೊಂಡು ಹೋಗುತ್ತಾರೆ . ಆದರೆ ಭವಾನಿತಪ್ಪಿಯೂ ಶಂಕರ್ ಜೊತೆಗೆ ಮದುವೆ ಆಗಿರುವ ಬಗ್ಗೆ ಪ್ರಸ್ತಾಪಿಸುವುದಿಲ್ಲ . ಈ ನಡುವೆ ಭವಾನಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿಗೆ ಶಮಿಕಾ ಎಂದು ಹೆಸರು ಇಡುತ್ತಾರೆ.ಮನೆಯಲ್ಲಿ ಅಕ್ಕಂದಿರು ಬಂದಿದ್ದಾರೆ ಸ್ವಲ್ಪ ದಿನ ಬರುವುದಿಲ್ಲ ಎಂದು ಹೋದ ಶಂಕರ್ ಒಂದು ತಿಂಗಳಾದರೂ ಬರುವುದಿಲ್ಲ. ಮಗುವಿನ ಜೊತೆಗೆ ಭವಾನಿ ಒಬ್ಬಳೇ ಇದ್ದಳು. ಇತ್ತ ಶಂಕರ್ ತಾಯಿಯಿಂದ ಪತ್ರ ಬರುತ್ತದೆ. ಪತ್ರದಲ್ಲಿ ಶಂಕರ್ ಗೆ ಮದುವೆ ನಿಶ್ಚಯವಾಗಿರುವ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.ಶಂಕರ್ ಕೂಡ ಮದುವೆಯ ಆಮಂತ್ರಣ ಪತ್ರಿಕೆ ಕೊಡುತ್ತಾರೆ. ಭವಾನಿಗೆ ತನ್ನ ಮತ್ತು ಮಗುವಿನ ಭವಿಷ್ಯದ ಬಗ್ಗೆ ನೆನೆದು ಚಿಂತೆಯಾಗುತ್ತದೆ. ಶಂಕರ್ ಮದುವೆಗೆ ಭವಾನಿ ಹೋಗಲಿಲ್ಲ. ಮದುವೆ ಆಗಿ ಒಂದು ತಿಂಗಳ ನಂತರ ಬಂದ ಶಂಕರ್ ಮುಂಚಿನ ರೀತಿ ಇರಲಿಲ್ಲ. ಮಾತು ಕಡಿಮೆಯಾಗಿತ್ತು. ಎರಡು ದಿನದ ನಂತರ ಮನೆಯ ಮಾಲಿಕ ಬಂದು ಶಂಕರ್ ಮನೆ ಖಾಲಿ ಮಾಡುತ್ತೇನೆ ಎಂದಿದ್ದಾರೆ ಎಂದು ಹೇಳಿ ಹೋಗುತ್ತಾರೆ . ಇದನ್ನು ತಿಳಿದು ಭವಾನಿಗೆ ದಿಕ್ಕೇ ತೋಚುವುದಿಲ್ಲ.
ಅಂತರಾಳ – ಭಾಗ 6
ಶಂಕರ್ ಅವರ ಅಮ್ಮನಿಗೆ ಪತ್ರ ಬರೆದು ನೀವು ಹೇಗಿದ್ದೀರಿ? ……ನಿಮ್ಮ ಮಗ ಸೊಸೆ ಹೇಗಿದ್ದಾರೆ ಎಂದು ಕೇಳಿದೆ…….ಅವರ ಪತ್ರಕ್ಕಾಗಿ ಕಾದೆ……..ಕಾದೆ… ತುಂಬಾ ದಿನದ ನಂತರ ಅವರಿಂದ ಪತ್ರ ಬಂತು. ಅದರಲ್ಲಿ ಶಂಕರ್ ಕೆಲಸ ಬಿಟ್ಟಿದ್ದಾನೆ. ಅವನೂ ಹೆಂಡತಿ ಮುಂಬೈಗೆ ತಿರುಗಾಡಲು ಹೋಗಿದ್ದಾರೆ. ನಾವೂ ಸಾಧ್ಯವಾದರೆ ಇಲ್ಲಿಯ ಜಾಗ ಮಾರಿ ಮುಂಬೈಗೆ ನನ್ನ ದೊಡ್ಡ ಮಗನ ಮನೆಗೆ ಹೋಗುವ ಯೋಚನೆ ಇದೆ ಎಂದು ಬರೆದಿದ್ದರು. ಈಗ ನನಗೆ ಪೂರ್ತಿಯಾಗಿ ವಿಷಯ ತಿಳಿಯಿತು ಇನ್ನೂ ಶಂಕರ್ ಬರುವುದಿಲ್ಲ ಎಂದು……… ಆದರೆ ನಾನು ಸಮುದ್ರದ ಮಧ್ಯದಲ್ಲಿ ಇದ್ದ ಹಾಗೆ ಅನ್ನಿಸಿತು………
ಆ ದಿನ ನಾನು ತಪ್ಪು ಮಾಡಿದೆ ಸಾಯದೆ ಬದುಕಿ….. ಇಂದು ನಾನು ಮಗು ಏನು ಮಾಡಲಿ!. ……..ಅಂದು ನಾನೊಬ್ಬಳೇ ಸಾಯಬಹುದಿತ್ತು!……. ಆದರೆ ಈಗ ಮಗುವನ್ನೂ ಸಾಯಿಸಲು ಮನಸ್ಸು ಬರುತ್ತಿಲ್ಲ ….. ಅವಳನ್ನು ಬಿಟ್ಟು ನಾನೊಬ್ಬಳೇ ಸಾಯಲೇ!……… ಮಗುವನ್ನು ಬಿಟ್ಟು ನಾನು ಒಬ್ಬಳೇ ಸತ್ತರೆ ಈ ಹೆಣ್ಣು ಮಗುವಿನ ಸ್ಥಿತಿ ಎನಿಸಿ ಒಮ್ಮೆ ಮೈಯೆಲ್ಲಾ ನಡುಕ ಬಂದ ಹಾಗೆ ಅನಿಸಿತು…ನಾನು ಹೆಣ್ಣಾಗಿ ತಾನೇ ಆ ಕಾಮುಕ ಪುರುಷರಿಂದ ಇಷ್ಟೆಲ್ಲಾ ಕಷ್ಟ ಅನುಭವಿಸುತಿರುವುದು .ಆ ದಿನ ಅವರ ನಾಲ್ಕು ನಿಮಿಷದ ಮೋಜಿನ ಆಟದಿಂದ ನನ್ನ ಜೀವನದ ಪಥವೇ ತಿರುಗಿತು…. ನನ್ನ ಜೀವನದ ಜೊತೆ ಆಟವಾಡಿದ ಆ ಕಾಮುಕರು ಆ ಕ್ಷಣವನ್ನು ಮರೆತು ಅವರಿಗೆ ಬೇಕಾದ ಜೀವನ ಸಂಗಾತಿಯೊಂದಿಗೆ ಆನಂದವಾಗಿರಬಹುದು.. ಇಲ್ಲ ಬೇರೊಬ್ಬ ನನ್ನಂತಹ ಒಂಟಿ ಹೆಣ್ಣು ಎಲ್ಲಿ ಸಿಗುತ್ತಾಳೆ ಎಂದು ಹೊಂಚು ಹಾಕುತ್ತಿರಬಹುದು…ಆದರೆ ಈ ಸಮಾಜ ಮಾತ್ರ ಅವರಿಗೆ ಬೇಕಾದ ಹಾಗೆ ಬೇಕಾದ ರೀತಿಯಲ್ಲಿ ಬದುಕುತ್ತಾರೆ….ಈ ಸಮಾಜದಲ್ಲಿ ಯಾವುದೇ ಅನ್ಯಾಯ, ದೌರ್ಜನ್ಯ, ಶೋಷಣೆ ನಡೆದದ್ದು ತಿಳಿದಾಗ ಒಮ್ಮೆ ಎಲ್ಲಾರೂ ಬಂದು ಮಾದ್ಯಮ ಗಳಲ್ಲಿ ಖಂಡಿಸುತ್ತಾರೆ ಅಂಗಡಿ ಮುಂಗಟ್ಟುಗಳಲಿ, ಆಫೀಸ್ , ಮಾರುಕಟ್ಟೆ , ಬೀದಿಯಲ್ಲಿ ಚರ್ಚೆ ಮಾಡುತ್ತಾರೆ.ಬರೇ ಮೂರು ದಿನ ಮಾತ್ರ ನಂತರ ಎಲ್ಲರೂ ಬೇರೆ ವಿಷಯಗಳಲ್ಲಿ ತಲ್ಲೀನ ಆಗುತ್ತಾರೆ……ನಾನು ಮಗು ಸತ್ತರೆ ಎಲ್ಲರೂ ಹೇಳುತ್ತಾರೆ…..ಯಾಕೆ ಸಾಯಬೇಕಿತ್ತು ಬದುಕಿ ತೋರಿಸಬೇಕು.ಇವಳು ಇಷ್ಟು ಸಣ್ಣ ಪ್ರಾಯದ ಹೆಣ್ಣು ಎಲ್ಲಿಯಾದರೂ ಕೆಲಸಕ್ಕೆ ಹೋಗಿ ಮಗುವನ್ನು ಸಾಕಬಹುದಿತ್ತು..……ಎಂದು ಎಲ್ಲರೂ ಹೇಳುತ್ತಾರೆ….ಆದರೆ ಒಂಟಿ ಹೆಣ್ಣು ಮಕ್ಕಳಿಗೆ ಯಾರು ಸಹಾಯ ಮಾಡುತ್ತಾರೆ. ಸಹಾಯ ಕೇಳಲು ಹೋದರೆ ಹೆಚ್ಚಿನ ಗಂಡಸರು ಉಪಯೋಗಿಸಲು ಹಾತೊರೆಯುತ್ತಾರೆ…. ಹೆಚ್ಚಿನ ಮಹಿಳೆಯರು ಇವಳಿಗೆ ಸಹಾಯ ಮಾಡಿದರೆ ತಮ್ಮ ಸಂಸಾರ ಹಾಳಾಗಬಹುದು ಎಂದು ಅಲ್ಲಿಂದ ಸಾಗ ಹಾಕುತ್ತಾರೆ.. ಎಲ್ಲಾರೂ ಯೋಚಿಸುವುದು ಬೇರೆಯವರು ಸಹಾಯ ಮಾಡಲಿ ಎಂದು……ಬೇರೆಯವರು ಎಂದರೆ ಯಾರು,? ಎಲ್ಲರೂ ಸಲಹೆ ನೀಡಲು ತಯಾರು ಇದ್ದಾರೆ….. ಸಹಾಯ ಮಾಡಲು ಯಾರೂ ತಯಾರಿಲ್ಲ…. ಸಹಾಯ ಮಾಡಲು ನಿಜವಾದ ಕಾಳಜಿ ತೊರಿಸುವವರಿಗೆ ಎನಾದರೂ ಕಾನೂನು, ಕಾಯಿದೆ, ಜಾತಿ ,ಧರ್ಮ ಎಂದು ಹೇಳಿ ಅವರನ್ನು ನಿಷ್ಕ್ರಿಯ ಮಾಡುತ್ತಾರೆ……….
ಈಗ ನಾನು ಎಲ್ಲಿಗೆ ಹೋಗಲಿ ಎನೂ ಮಾಡಲಿ ಯೋಚಿಸಿ ಯೋಚಿಸಿ ರಾತ್ರಿ ಕಳೆದೆ!…… ಅಮ್ಮನ ಸಂಕಟ ಅರ್ಥವಾಯಿತೊ ಎಂಬಂತೆ ಶಮಿಕಾ ಕೂಡ ರಾತ್ರಿ ಸರಿ ನಿದ್ದೆ ಮಾಡಿಲ್ಲ …….ಎಲ್ಲಿಗೆ ಹೋಗಲಿ? ……
ನನಗೆ ಬೇರೆ ಯಾರೂ ಇಲ್ಲ!………. ಮಾವನ ಮನೆಗೆ ಹೋಗಲೇ……. ಅವರಲ್ಲಿ ಹೋಗಿ ನೀಚ ಮಾತು ಕೇಳುವುದಕ್ಕಿಂತ ಇಲ್ಲೆ ಎಲ್ಲಿಯಾದರೂ ಸಾಯುವುದೇ ಮೇಲು….……..
ತುಂಬಾ ಯೋಚಿಸಿದಾಗ ನಾನು ಮೊದಲು ಗ್ರಂಥಾಲಯದಲ್ಲಿರುವಾಗ ಕ್ರೈಸ್ತ ಸನ್ಯಾಸಿಯೊಬ್ಬರು ಓದಲು ಬರುತ್ತಿದ್ದರು.ಅವರು ನನ್ನಲಿ ವಿಶ್ವಾಸ ಆತ್ಮೀಯತೆ ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರು ವಿಳಾಸ ನನಗೆ ಕೊಟ್ಟಿದ್ದರು. ಆದರೆ ಈಗ ಅದು ನನ್ನಲಿ ಇದೆಯಾ ಗೊತ್ತಿಲ್ಲ……. ಅವರನ್ನು ಅವರ ವಿಳಾಸವನ್ನು ಮರೆತೇ ಹೋಗಿತ್ತು….. ಈಗ ಈ ಆಪತ್ಕಾಲದಲ್ಲಿ ಅವರ ನೆನಪು ಬಂತು….ಅವರ ವಿಳಾಸವನ್ನು ಅವಸರ ಅವಸರವಾಗಿ ಹುಡುಕಿದೆ ಆದರೆ ವಿಳಾಸ ಸಿಗಲಿಲ್ಲ….. ಮತ್ತೇ ತುಂಬಾ ದುಃಖವಾಯಿತು. ಪುನಃ ನಿಧಾನವಾಗಿ ಹುಡುಕಿದರೆ ಸಿಗಬಹುದು ಎಂಬ ದೂರದ ಆಸೆಯಿಂದ ಎಲ್ಲ ಪುಸ್ತಕಗಳನ್ನು ತೆಗೆದು ಹುಡುಕಿದೆ…. ಈಗ ವಿಳಾಸ ಸಿಕ್ಕಿತು….ಆಸರೆಯೇ ಸಿಕ್ಕಷ್ಟು ಸಂತೋಷವಾಯಿತು…… ತಕ್ಷಣ ಆ ವಿಳಾಸಕ್ಕೆ ದೀರ್ಘವಾದ ಪತ್ರ ಬರೆದೆ. ನನ್ನ ಗಂಡ ನನ್ನನ್ನು ನನ್ನ ಮಗುವನ್ನು ಬಿಟ್ಟು ಹೋಗಿದ್ದಾರೆ……….. ನನಗಾರು ಇಲ್ಲ. ನನಗೆ ನಿಲ್ಲಲು ವ್ಯವಸ್ಥೆ ಮತ್ತು ಬದುಕಲು ಕೆಲಸ ಬೇಕು ಎಂದು ವಿನಂತಿಸಿಕೊಂಡೆ….. ಇದಕ್ಕೆ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆದು ಅಂಚೆಗೆ ಹಾಕಿದೆ…... ಇದಕ್ಕೆ ಉತ್ತರ ಬರಬಹುದೇ? ಬರದಿದ್ದರೆ ಎನೂ ಮಾಡುವುದು ಎಂಬುದು ಭಯವಾಗುತ್ತಿತ್ತು. ಮನಸ್ಸು ಕೆಟ್ಟದೆ ಆಲೋಚಿಸುತ್ತಿತ್ತು ……ಕಾರಣ ನಾನು ಎಲ್ಲಿ ಹೋದರೂ ಸಂತೋಷ ಹೆಚ್ಚು ದಿನ ಇರುತ್ತಿರಲಿಲ್ಲ……ಪ್ರತೀ ಕ್ಷಣ ಪತ್ರಕ್ಕಾಗಿ ಕಾದೆ…. ದಿನಗಳು ವರುಷದಂತೆ ಭಾಸವಾಗುತ್ತಿತ್ತು…… ಕಾಣದ ದೇವರಿಗೆ ಕೈ ಮುಗಿದು ಬೇಡಿಕೊಂಡೆ……. ನನ್ನ ಜೀವನದ ಹಾಗೆ ಶಮಿಕಾಳ ಜೀವನ ಆಗಬಾರದು ಎಂದು ಅಂದುಕೊಳ್ಳುತ್ತಿದ್ದೆ …………… ಶಮಿಕಾಳ ಭಾಗ್ಯವೋ ಎಂಬಂತೆ ಕ್ರೈಸ್ತ ಸನ್ಯಾಸಿ ಅವರಿಂದ ಪತ್ರ ಬಂತು…….ಅದರಲ್ಲಿ ನೀನು ನೇರ ಹೊನ್ನಾವರಕ್ಕೆ ಬಾ. ಅಲ್ಲಿ ಕಾನ್ವೆಂಟ್ ನಲ್ಲಿ ಕೆಲಸ ಇದೆ. ನೀನು ಮಗು ಅಲ್ಲೇ ಇರಬಹುದು ..ತಕ್ಷಣ ಬಾ ಎಂದು ವಿಳಾಸ ನೀಡಿ ಪತ್ರ ಬರೆದಿದ್ದರು…….ಆ ಕ್ಷಣ ನನ್ನ ಸಂತೋಷಕ್ಕೆ ಪದವೇ ಇರಲಿಲ್ಲ. ……… ಸ್ವರ್ಗ-ನರಕ ಎಲ್ಲವೂ ಈ ಭೂಮಿಯ ಮೇಲೆಯೇ ಇರುವುದು…..ಅದು ಬೇರೆ ಲೋಕದಲ್ಲಿ ಇಲ್ಲ ಎಂದು ಆ ಕ್ಷಣ ಅರಿವು ಆಯಿತು…. ಅವರು ಹೇಳಿದಂತೆ ಬೇಕಾದ ಎಲ್ಲ ವಸ್ತುಗಳನ್ನು ಹಿಡಿದು ಮಗುವಿನ ಜೊತೆ ನೇರ ಹೊನ್ನಾವರಕ್ಕೆ ಹೋದೆ…….. ಅಲ್ಲಿ ಹುಡುಕಲು ಕಷ್ಟ ಆಗಲಿಲ್ಲ …… ಅಲ್ಲಿ ನಾನು ನನ್ನ ಶಮಿಕಾಳ ಜೀವನವೇ ಅವರಿಂದ ಬದಲಾಯಿತು. ಮೊದಲು ಮೊದಲು ಅಲ್ಲಿಯ ಜೀವನಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಯಿತು…… ಅಲ್ಲಿ ಎಲ್ಲಾನೂ ಸಮಯಕ್ಕೆ ಸರಿಯಾಗಿ ನಡೆಯಬೇಕು. ಊಟ,ತಿಂಡಿ,ನಿದ್ದೆ, ಪ್ರಾರ್ಥನೆ, ಮನೋರಂಜನೆ, ಶಿಕ್ಷಣ ಎಲ್ಲಾ ವಿಷಯಕ್ಕೂ ಇಂತಿಷ್ಟು ಸಮಯ ನಿಗದಿ ಇರುತಿತ್ತು…. ಕ್ರಮೇಣ ಅಲ್ಲಿನ ಜೀವನ ನಮ್ಮಿಬ್ಬರಿಗೆ ಒಗ್ಗಿ ಹೋಯಿತು….. ಅಲ್ಲಿಗೆ ಹೋಗಿ 1 ವರ್ಷ ಕಳೆದ ಮೇಲೆ ಶಂಕರ್ ರವರ ವಿಳಾಸಕ್ಕೆ ಪತ್ರ ಬರೆದೆ …..ಅವರ ಅಮ್ಮ ನನಗೆ ಪತ್ರ ಹಿಂದೆ ಬರೆದಿದ್ದರು…….
ಅದರಲ್ಲಿ ಶಂಕರ್ ಗೆ ಗಂಡು ಮಗು ಆಗಿದೆ. ಹೆಸರು ಶರತ್ ಈಗ ಶಂಕರ್ ಮನೆಯಲ್ಲೇ ಕೃಷಿ ಮಾಡುತ್ತಾನೆ ಸೊಸೆ ಹೈಸ್ಕೂಲ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾಳೆ ಎಂದು ಬರೆದಿದ್ದರು..
ಶಂಕರ್ ನ ನೆನಪು ತುಂಬಾ ಬರುತಿತ್ತು.ಅವರು ನೀಡಿದ ಪ್ರೀತಿ, ಆತ್ಮೀಯತೆ, ಸಹಾಯ ಎಲ್ಲವೂ ನೆನಪು ಆಗುತಿತ್ತು……
(ಮುಂದುವರಿಯುವುದು……)
✍ ️ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ