September 20, 2024

ಇಲ್ಲಿಯವರೆಗೆ…..

ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದಿನ ಪವನ್ ಶಮಿಕಾಳನು ಬೈಕ್ ನಲ್ಲಿ ಕರೆದುಕೊಂಡು ಅವರ ಮನೆಗೆ ಹೋಗಿ ಬೇಕಾದ ವಸ್ತುಗಳನ್ನು ತರುತ್ತಾರೆ. ಭವಾನಿ, ಶಮಿಕಾ, ಪವನ್ ಅವರ ಅವರ ಮನಸ್ಥಿತಿಗೆ ಅನುಗುಣವಾಗಿ ಯೋಚನೆ ಮಾಡುತ್ತಿರುತ್ತಾರೆ……

ಅಂತರಾಳ – ಭಾಗ 13

ಪವನ್ ಪವನ್.. ಎಂಬ ಧ್ವನಿ ಕೇಳಿ ಎಚ್ಚರವಾಯಿತು ಪವನ್ ಗೆ. ಅಕ್ಕ ಬಂದು ಕರೆಯುವಾಗಲೇ ಎಚ್ಚರ ಆಗಿದ್ದು. ರಾತ್ರಿ ಯೋಚನೆ ಮಾಡುತ್ತಾ ಅಲ್ಲೇ ನಿದ್ದೆ ಬಂದಿದ್ದು ಗೊತ್ತೇ ಆಗಲಿಲ್ಲ…….. ಗಂಟೆ ಏಳು ಆಯಿತು ತಿಂಡಿ ಆಗಿದೆ. ಆಸ್ಪತ್ರೆಗೆ ಹೋಗಿ ತಿಂಡಿ ಕಾಫಿ ಕೊಟ್ಟು ಬಾ… ಎಂದು ಅಕ್ಕ ಹೇಳಿದಾಗಲೇ ಪವನ್ ಗೆ ಭವಾನಿ ಮತ್ತು ಶಮಿಕಾಳ ನೆನಪು ಬಂದಿದ್ದು. ಲಗುಬಗೆಯಿಂದ ಎದ್ದು ಬೇಗ ಬೇಗನೆ ಸ್ನಾನ ಮಾಡಿ ಬಂದು ಅಕ್ಕ ನಾನು ಆಸ್ಪತ್ರೆಯಲ್ಲಿ ತಿಂಡಿ ಕೊಟ್ಟು ಆಮೇಲೆ ಬಂದು ತಿಂಡಿ ತಿನ್ನುತ್ತೇನೆ ಎಂದಾಗ ಸರಿ ಎಲ್ಲಾ ಹಾಕಿ ಇಟ್ಟಿದ್ದೇನೆ. ಆಮೇಲೆ ನಾನು ಅಮ್ಮ ನೋಡಿಕೊಂಡು ಬರುತ್ತೇವೆ. ನೀನು ಹೋಗು ಎಂದಾಗ ಪವನ್ ತಿಂಡಿ ಮತ್ತು ಕಾಫೀ ತೆಗೆದುಕೊಂಡು ಬೈಕ್ ನಲ್ಲಿ ಆಸ್ಪತ್ರೆಗೆ ಬಂದನು.

ಭವಾನಿ ಮತ್ತು ಶಮಿಕಾ ಎದ್ದು ಮುಖ ತೊಳೆದು ಕುಳಿತಿದ್ದರು. ಶಮಿಕಾ ಆಗ ತಾನೇ ಅಮ್ಮನಲ್ಲಿ ಹೇಳಿದ್ದು ನಾನು ಆಸ್ಪತ್ರೆಯ ಕ್ಯಾಂಟೀನ್ ಗೆ ಹೋಗಿ ತಿಂಡಿ ತರುತ್ತೇನೆ ಎಂದು ಅದಕ್ಕೆ ಭವಾನಿ ಈಗಲೇ ಬೇಡಾ ಶಮಿಕಾ. ಎಂಟು ಗಂಟೆ ಆಗಲಿ ಎಂದಾಗ ಸರಿ ಅಮ್ಮ ಎಂದಳು. ಅದೇ ಕ್ಷಣದಲ್ಲಿ ಪವನ್ ಕೈಯಲ್ಲಿ ತಿಂಡಿಯ ಚೀಲ ಮತ್ತು ಕಾಫೀ ತಂದು ಶಮಿಕಾಳ ಕೈಯಲ್ಲಿ ಕೊಟ್ಟು ಭವಾನಿಯಲ್ಲಿ ಹೇಗಿದ್ದೀರಿ ಅಂಟಿ ನೋವು ಹೇಗಿದೆ ರಾತ್ರಿ ನಿದ್ದೆ ಬಂತಾ? ಎಂದನು. ನೋವು ಹೆಚ್ಚೇನೂ ಇಲ್ಲ.. ಇವತ್ತು ಮನೆಗೆ ಕಳುಹಿಸಿದ್ದರೆ ಚೆನ್ನಾಗಿತ್ತು ಪವನ್ ಎಂದರು ಭವಾನಿ. ಒಂದೇ ರಾತ್ರಿಯಲ್ಲಿ ಬೇಜಾರು ಆಯಿತಾ ಎಂದಾಗ ಶಮಿಕಾ ಹೌದು ನನಗೆ ರಾತ್ರಿ ಆಗಾಗ ಎಚ್ಚರ ಆಗುತಿತ್ತು ನಿದ್ದೆ ಸರಿಯಾಗಿ ಬಂದಿಲ್ಲ ಎಂದಳು.. ಹೌದು ಆಸ್ಪತ್ರೆ ಜೀವನ ಯಾರಿಗೂ ಬರಬಾರದು ಎಂದೇ ನಾನು ಭಾವಿಸುತ್ತೇನೆ ಆದರೆ ನಾವು ಎನಿಸಿದ ಹಾಗೆ ಇಲ್ಲ.. ಎಷ್ಟೋ ತಿಂಗಳು ಗಟ್ಟಲೆ ಆಸ್ಪತ್ರೆಯಲ್ಲಿ ಇರುವವರನ್ನು ಕಂಡಾಗ ಸಂಕಟವಾಗುತ್ತದೆ………. ಕೆಲವರು ಆಸ್ಪತ್ರೆಯಲ್ಲಿ ರೋಗಿಗಳ ಜೊತೆ ಇದ್ದು ಇದ್ದು ಹೈರಾಣಾಗಿ ಹೋಗಿದ್ದಾರೆ ಪಾಪ ………..ಎಂದು ಪವನ್ ಹೇಳಿ ನೀವಿಬ್ಬರೂ ಬಿಸಿ ಬಿಸಿ ತಿಂಡಿ ತಿಂದು ಬಿಸಿ ಕಾಫೀ ಕುಡಿಯಿರಿ ಎಂದಾಗ ಭವಾನಿ ನಿಮ್ಮ ಅಮ್ಮನಿಗೆ ಹುಷಾರಿಲ್ಲ ಅಲ್ವಾ! ಮತ್ತೇ ಯಾಕೆ ಅವರಿಗೆ ತೊಂದರೆ ನೀಡಿದ್ದೀರಿ ನಾವು ಇಲ್ಲೇ ತಿಂಡಿ ತಿನ್ನುತ್ತಿದ್ದೇವು ಎಂದರು…. ನನ್ನ ಅಕ್ಕ ನಿನ್ನೆ ಬಂದಿದ್ದಾರೆ ಅವರೇ ಬೇಗ ತಿಂಡಿ ಕೊಟ್ಟು ಬಾ ಎಂದರು ಎಂದ… ಶಮಿಕಾ ಪವನ್ ನ ಅಕ್ಕ ನೀಡಿದ ಬಟ್ಟಲು ಲೋಟ ತೊಳೆದು ಒಂದು ಬಟ್ಟಲಿನಲ್ಲಿ ನೀರು ದೋಸೆ ಮತ್ತು ಚಟ್ನಿ ಹಾಕಿ ಅಮ್ಮನಿಗೆ ನೀಡಿ ಇನ್ನೊಂದು ಬಟ್ಟಲು ಪವನ್ ಗೆ ನೀಡಿದಳು ನನಗೆ ಬೇಡ ನಾನು ಮನೆಯಲ್ಲಿ ತಿನ್ನುತ್ತೇನೆ ಎಂದಾಗ ಇಲ್ಲ ಮೂರು ಬಟ್ಟಲು ಮತ್ತು ತುಂಬಾ ದೋಸೆ ಕೊಟ್ಟಿದಾರೆ ಎಂದಾಗ ಭವಾನಿ ಕೂಡ ನಮ್ಮ ಜೊತೆ ತಿಂಡಿ ತಿಂದ ಹಾಗೆ ಆಗುತ್ತದೆ ತಿನ್ನಿ ಎಂದಾಗ ಕೈ ತೊಳೆದು ಬಂದು ಶಮಿಕಾಳಿಂದ ಬಟ್ಟಲು ತೆಗೆದು ಕೊಂಡು ಮೂವರು ಜೊತೆಯಾಗಿ ತಿಂಡಿ ತಿಂದು ಕಾಫೀ ಕುಡಿದರು… ಭವಾನಿಗೆ ಜೊತೆಯಾಗಿ ತಿಂಡಿ ತಿನ್ನುವಾಗ ಬಾಲ್ಯದ ನೆನಪುಗಳು ಬಂದವು…‌…. ಮಾವನ ಮನೆಯಲ್ಲಿ ಅತ್ತೆ, ಅಮ್ಮಾ, ಮಾವನ ಮಕ್ಕಳು ಜೊತೆಯಲ್ಲಿ ತಿಂಡಿ ತಿನ್ನುತ್ತಿದ್ದ ನೆನಪು ಬಂದು ಸಂತೋಷ ಆಯಿತು.. ಶಮಿಕಾ ಮೌನವಾಗಿ ತಿಂಡಿ ತಿನ್ನುತ್ತಿದ್ದಳು…….

ಪವನ್ ತಿಂಡಿ ತಿಂದು ದಾದಿಯ ಬಳಿ ವೈದ್ಯರು ಎಷ್ಟು ಹೊತ್ತಿಗೆ ಬರುತ್ತಾರೆ ಎಂದು ಕೇಳುತ್ತೇನೆ ಎಂದು ಹೇಳಿ ಅವರ ಬಳಿ ಹೋದನು..

ಶಮಿಕಾ ಲೋಟ ತಟ್ಟೆ ತೊಳೆದು ಬರುತ್ತಿದ್ದಂತೆ ಇವರ ಕೋಣೆಯ ಹತ್ತಿರ ಒಬ್ಬರು ಹೆಂಗಸು ಬಂದು ನಿಂತಿರುವುದು ಭವಾನಿಗೆ ಕಾಣಿಸಿತು ಅದಕ್ಕೆ ಅವರು “ಶಮಿಕಾ ಯಾರು ಒಬ್ಬರು ನಿಂತಿದ್ದಾರೆ ಒಮ್ಮೆ ಇಣುಕಿದರು” ನೋಡು ಎಂದರು. ಶಮಿಕಾ ಹೋಗಿ ನೋಡಿದಾಗ ಅದು ರಮಣಿ ಆಗಿದ್ದರು.. ಓಹೋ ನೀವು ಅಂಟಿ ಬನ್ನಿ ಎಂದು ಒಳಗೆ ಕರೆದು ಅಮ್ಮನಿಗೆ ಪರಿಚಯ ಮಾಡಿದಳು …. ಭವಾನಿ ಕೂಡ ರಮಣಿ ಯಲ್ಲಿ ಮಾತನಾಡಿದರು… ಶಮಿಕಾ ರಮಣಿಯ ಮೊಬೈಲ್ ಸಂಖ್ಯೆ ತೆಗೆದುಕೊಂಡು ತನ್ನ ಮೊಬೈಲ್ ಸಂಖ್ಯೆ ಅವರಿಗೆ ನೀಡಿದಳು…ಆಗ ರಮಣಿ ನಮಗೆ ವೈದ್ಯರು ನಾಳೆ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಹೇಳಿದ್ದಾರೆ.. ನನ್ನ ಗಂಡನನ್ನು ಒಂದು ತಿಂಗಳ ನಂತರ ಪರೀಕ್ಷೆಗೆ ಬರ ಹೇಳಿದ್ದಾರೆ ಎಂದು ಹೇಳಿದರು. ಅದಕ್ಕೆ ಶಮಿಕಾ ನೀವು ನಾಳೆ ಉಡುಪಿಗೆ ಹೋಗುತ್ತೀರಾ ಅಥವಾ ನಿಮ್ಮ ತಂಗಿ ಮನೆಯಲ್ಲಿ ಇರುತ್ತೀರಾ ? ಎಂದು ಕೇಳಿದಳು . ನಾವು ನಾಳೆ ಉಡುಪಿಗೆ ಹೋಗುತ್ತೇವೆ ಬಂದು ತುಂಬಾ ದಿನಗಳೇ ಆಯಿತು…….. ಮನೆಯ ಹತ್ತಿರ ಒಬ್ಬರಲ್ಲಿ ಹೇಳಿ ಬಂದಿದ್ದೇವೆ ಈಗ ಹೇಗೆ ಆಗಿದೆಯೋ ಗೊತ್ತಿಲ್ಲ ಎಂದು ಹೇಳಿದರು….. ರಮಣಿ ಶಮಿಕಾ ಮತ್ತು ಭವಾನಿ ಯಲ್ಲಿ ಹೇಳಿ ಫೋನ್ ಮಾಡಿ ಮಾತನಾಡಿ ನಿಮ್ಮ ಪರಿಚಯ ನನಗೆ ನನ್ನ ಮಗಳು ಸಿಕ್ಕಿದ ಹಾಗೆ ಆಯಿತು ಮರೆಯಬೇಡಿ ಎಂದು ಹೇಳಿ ಅವರು ಹೋದರು..‌…

ಪವನ್ ಬಂದು ವೈದ್ಯರು 11 ಗಂಟೆಗೆ ಬರುತ್ತಾರೆ ಅಂತೆ ಆಗ ಡಿಸ್ಚಾರ್ಜ್ ಬಗ್ಗೆ ಕೇಳೋಣ ಎಂದು ಹೇಳುತ್ತಿದ್ದಂತೆ
ಅವನಿಗೆ ಅಕ್ಕನ ಫೋನ್ ಬಂತು…. ಸ್ವಲ್ಪ ಹೊತ್ತಿನಲ್ಲಿ ಪವನ್ ನ ಅಮ್ಮ ಅಕ್ಕ ಇಬ್ಬರೂ ಮಕ್ಕಳು ಭವಾನಿ ಇರುವ ಕೊಠಡಿಗೆ ಬಂದರು…….
ಭವಾನಿ ಮತ್ತು ಪವನ್ ನ ಅಮ್ಮ ಪರಸ್ಪರ ನೋಡಿ ಮೂಕವಿಸ್ಮಿತರಾದರು…. ಒಂದು ಕ್ಷಣ ಮಾತೇ ಹೊರಡಲಿಲ್ಲ ಇಬ್ಬರಿಗೂ….. ಶಮಿಕಾ, ಪವನ್, ಪಂಕಜಾ ಇವರಿಗೆ ಏನೆಂದು ಅರ್ಥವೇ ಆಗಲಿಲ್ಲ… ಯಾಕೆ ಹೀಗೆ ಇಬ್ಬರು ಮಾಡುತ್ತಿದ್ದಾರೆ ಎಂದು ಇವರು ಮೂವರು ಕಕ್ಕಾಬಿಕ್ಕಿಯಾದರು……….. ಇವರಿಗೆ ಮೊದಲೇ ಪರಿಚಯ ಇತ್ತೇ ಅಥವಾ ಇವರು ಮೊದಲೇ ಆತ್ಮೀಯರ ಎಂದು ಶಮಿಕಾ ಮತ್ತು ಪವನ್ ಯೋಚನೆ ಮಾಡುತ್ತಿದ್ದರು……. ಭವಾನಿ ಮತ್ತು ಪವನ್ ನ ಅಮ್ಮ ಇಬ್ಬರೂ ಜೋರಾಗಿ ಅತ್ತು ತಬ್ಬಿಕೊಂಡರು ಅವರಿಬ್ಬರ ಕಣ್ಣಲ್ಲೂ ಸಂತೋಷದ ಕಣ್ಣೀರು ಅಥವಾ ದುಃಖವಾ ಯಾವುದು ಯಾರಿಗೂ ತಿಳಿಯಲಿಲ್ಲ…. ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ ಅಲ್ಲಿ ಆವರಿಸಿತ್ತು… ಮಕ್ಕಳು ಕೂಡ ಏನೊಂದೂ ಮಾತನಾಡದೆ ಇವರನ್ನೇ ನೋಡುತಿದ್ದರು……..


ಪವನ್ ತಾನೇ ಅಮ್ಮನನ್ನು ಮುಟ್ಟಿ ಯಾರು ಎಂದು ಕೇಳುವಂತೆ ಕಣ್ಣಲ್ಲೇ ಕೇಳಿದ.‌.‌…. ಆಗ ಪವನ್ ನ ಅಮ್ಮ ಶಮಿಕಾ ಬಳಿ ಬಂದು” ನಾನು ಪದ್ಮಜಾ ಎಂದು………
ನಿನ್ನ ಅಮ್ಮ ನಿನಗೆ ನನ್ನ ಬಗ್ಗೆ ಹೇಳಿದ್ದರಾ ಗೊತ್ತಿಲ್ಲ ನಿನ್ನ ಅಮ್ಮ ಮತ್ತು ನಾನು ಜೊತೆಯಲ್ಲಿ ಇದ್ದು ಓದಿದವರು ಈ ಕ್ಷಣದ ವರೆಗೂ ನಾನು ಪ್ರತಿ ದಿನ ಭವಾನಿ ಎಲ್ಲಿ ಇದ್ದಾಳೋ ಹೇಗೆ ಇದ್ದಾಳೊ ಎಂದು ಯೋಚಿಸುತ್ತಿದ್ದೆ.. ನಿನ್ನೆ ಪವನ್ ನ ಬೈಕ್ ತಾಗಿ ಒಬ್ಬರು ಮಹಿಳೆ ಬಿದ್ದಿರುವುದು ಕೇಳಿ ನೋವು ಬೇಸರ ಆಗಿತ್ತು… ಆದರೆ ನಿನ್ನೆ ದಿನ ಪವನ್ ನ ಬೈಕ್ ತಾಗಿದ್ದು ಇವತ್ತು ತುಂಬಾ ಖುಷಿ ಆಯಿತು…..
ಎಲ್ಲವೂ ಆಗುವುದು ಒಳ್ಳೆಯದಕ್ಕೆ ಇನ್ನೂ ಆಗಲಿರುವುದು ಒಳ್ಳೆಯದಕ್ಕೆ.. ತುಂಬಾ ಯೋಚನೆ ಮಾಡಲು ಬರುವಾಗ ನೀನು ಏನು ತಂದಿದ್ದಿ…. ಹೋಗುವಾಗ ನೀನು ಏನು ತೆಗೆದುಕೊಂಡು ಹೋಗುತ್ತಿ ಎಂದು ಗೀತೆಯಲ್ಲಿ ಒಂದೆಡೆ ಇದೆ…. ಎಷ್ಟು ನಿಜ ಅಲ್ವಾ ಎಂದು ಈ ಕ್ಷಣ ಅರಿವು ಆಗುತ್ತದೆ………………
ಜೊತೆಯಾಗಿ ಬಾಲ್ಯದಿಂದಲೇ ಇದ್ದು ಮಧ್ಯದಲ್ಲಿ ತಪ್ಪಿ ಹೋದಾಗ ಭವಾನಿ ಹೇಡಿ ಅಲ್ಲ ಯಾಕೆ ಹೀಗೆ ಮಾಡಿದಳು ಏನಾಯಿತು ಇವಳಿಗೆ ಎಂದು ತುಂಬಾನೇ ತಲೆಕೆಡಿಸಿಕೊಂಡೆ….. ನಮ್ಮಿಬ್ಬರ ಸ್ನೇಹ ನಿಜ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ….. ಈಗ ನೀನು ಮಾತ್ರವಲ್ಲದೆ ನಿನ್ನ ಮುದ್ದು ಮಗಳು ನನಗೆ ಸಿಕ್ಕಿದ್ದು ತುಂಬಾ ಬಾಯಾರಿದವನಿಗೆ ನೀರು ಮಾತ್ರವಲ್ಲದೆ ಎಳನೀರು ದೊರೆತಂತಾಗಿದೆ ಎಂದು ಭವಾನಿ ಪಕ್ಕನೆ ಪದ್ಮಜಾ ಕುಳಿತು ಕೊಂಡರು….

ಶಮಿಕಾಳಿಗೆ ಅಮ್ಮನ ಡೈರಿ ಓದಿದಾಗ ಮುಖ್ಯೋಪಾಧ್ಯಾಯರ ಮಗಳು ಇವರು ಜೊತೆಯಾಗಿ ಓದಿದ್ದು ತಿಂಡಿ ತಂದು ಅಮ್ಮನಿಗೂ ಅವರು ನೀಡಿದ್ದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಸಹಾಯ ಮಾಡಿದ್ದು ಎಲ್ಲವೂ ನೆನಪಿಗೆ ಬಂದು ಅವರ ಮೇಲಿನ ಗೌರವ ಪ್ರೀತಿಯಾಗಿ ಇನ್ನಾದರೂ ನನ್ನ ಅಮ್ಮ ಅವರಲ್ಲಿ ಮಾತನಾಡುತ್ತಾ ಖುಷಿಯಾಗಿ ಇರಲಿ….. ಎಂದು ಮನಸಾರೆ ಹಾರೈಸಿದಳು..

ಪವನ್ ಗೆ ಅಮ್ಮ ಯಾವಾಗಲೂ ಕಾಯಿಲೆ ಉಳ್ಳವರ ರೀತಿ ಇರುವುದು ತುಂಬಾ ಬೇಸರವಾಗಿತ್ತು…. ಇನ್ನಾದರೂ ಶಮಿಕಾಳ ಅಮ್ಮನಿಂದ ಇವರು ಸಂತೋಷವಾಗಿ ಇರಲಿ ಎಂದು ಮನಸಲ್ಲೇ ಅಂದುಕೊಂಡನು.‌‌….ಪಂಕಜಾಳಿಗೆ ತುಂಬಾ ಸಲ ಅಮ್ಮ ಪದ್ಮಜಾ ಹೇಳಿದ್ದರು…. ಹಾಗಾಗಿ ಭವಾನಿ ಅಂಟಿ ಸಿಕ್ಕಿದ್ದು ಅವಳಿಗೂ ಆನಂದವನ್ನೇ ನೀಡಿತು…. ಅಂತೂ ಅದು ಆಸ್ಪತ್ರೆ ಆಗಿದ್ದರೂ ಅವರಿಗೆ ಅದು ಬೇಡಿದ್ದು ನೀಡುವ ಆಲಯವೇ ಆಯಿತು… ಅಲ್ಲಿ ಯಾವೊಂದು ಕಪಟವು ಇಲ್ಲದೆ ಒಬ್ಬರಿಗೊಬ್ಬರು ಸಂತೋಷವಾಗಿರಲಿ ಎಂದೇ ಪ್ರತಿಯೋರ್ವರು ಆಶಿಸಿದರು…..
ಭವಾನಿ ಮತ್ತು ಪದ್ಮಜಾನಿಗೆ ಯಾವುದು ಮಾತನಾಡುವುದು ಯಾವುದು ಬಿಡುವುದು ಎಂದೇ ತಿಳಿಯಲಿಲ್ಲ ಅಷ್ಟು ವಿಷಯ ಇದೆ ಮಾತನಾಡಲು ಇವರಿಬ್ಬರ ನಡುವೆ!!!
ಪಂಕಜಾ ಮತ್ತು ಮಕ್ಕಳು ಏನೊ ತರಲು ಇದೆ ಎಂದು ಅಮ್ಮ ಮತ್ತು ಭವಾನಿ ಅಂಟಿಯಲ್ಲಿ ಹೇಳಿ ಹೊರಗೆ ಹೋದರು…… ಪವನ್ ಯಾರಲ್ಲೂ ಮೊಬೈಲಿನಲ್ಲಿ ಮಾತನಾಡಲು ಹೊರಗೆ ಬಂದ… ಪದ್ಮಜಾ, ಭವಾನಿ, ಮತ್ತು ಶಮಿಕಾ ಇವರು ಮೂವರೇ ಉಳಿದರು…. ಆಗ ಪದ್ಮಜಾ ಹೇಳು ಭವಾನಿ ನೀನು ಇಲ್ಲಿವರೆಗೆ ಎಲ್ಲಿ ಇದ್ದೆ ಎಂದಾಗ ನನ್ನ ವಿಷಯ ಆಮೇಲೆ ಹೇಳುತ್ತೇನೆ ಮೊದಲು ನಿನ್ನ ವಿಷಯ ಹೇಳು ಈ ಪಂಕಜಾ ಯಾರು ಪವನ್ ನಿನ್ನ ಮಗನೇ ತಾನೇ…. ನಿನ್ನ ಅಮ್ಮ ಹೇಗಿದ್ದಾರೆ? ನಿನ್ನ ಗಂಡ ಎಲ್ಲಿ ಎಂದಾಗ ಅಷ್ಟು ವಿಷಯ ಒಟ್ಟಿಗೆ ಕೇಳಬೇಡ ಭವಾನಿ ಒಮ್ಮೆಲೇ ಅಷ್ಟು ವಿಷಯ ಹೇಳಿದರೆ ನನಗೆ ಎದೆ ಉಸಿರು ಬಿಗಿ ಹಿಡಿಯಬಹುದು ಎಂದು ಪದ್ಮಜಾ ನಕ್ಕಾಗ ಮೂವರು ಸೇರಿ ಜೋರಾಗಿ ನಕ್ಕರು………

( ಮುಂದುವರಿಯುವುದು)

ಲೇಖಕರು : ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *