November 22, 2024
Antarala

ಇಲ್ಲಿಯವರೆಗೆ…..

ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ‌ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದಾ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತನ್ನ ತಾಯಿ ತಂದೆಯು ತೀರಿದ ಮೇಲೆ ಅಲ್ಲಿಯ ಜಾಗ ತೋಟ ಮನೆ ಮಾರಿ ಮಂಗಳೂರಿಗೆ ಬಂದು ಮಕ್ಕಳಿಗೆ ಓದಿಸಿ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ ಗಂಡು ಮಗನ ಜೊತೆ ಜೀವನ ಸಾಗಿಸುತ್ತಿದ್ದಾರೆ.

ಅಂತರಾಳ – ಭಾಗ 16

ಭವಾನಿಯವರ ಆಸ್ಪತ್ರೆ ಬಿಲ್ ಶಮಿಕಾ ತಾನು ಪಾವತಿಸುತ್ತೇನೆ ಎಂದು ಹೇಳಿದರು ನನ್ನಿಂದಾಗಿ ಅಂಟಿ ಬಿದ್ದಿದ್ದು ಎಂದು ಹೇಳಿ ಪವನ್ ಪಾವತಿಸಿದನು . ನಿನ್ನೆ ನಿಮ್ಮ ಮೇಲೆ ತುಂಬಾ ಸಿಟ್ಟು ಬಂದಿತ್ತು ಆದರೆ ಈಗ ಎನಿಸುತ್ತದೆ ನಿಮ್ಮ ಬೈಕ್ ನಿನ್ನೆ ಅಮ್ಮನಿಗೆ ತಾಗದಿದ್ದರೆ ನಿಮ್ಮ ಪರಿಚಯವೇ ಆಗುತ್ತಿರಲಿಲ್ಲ ಎಂದು ಶಮಿಕಾ ಹೇಳಿದಾಗ ಎಲ್ಲ ಆಗುವುದು ಒಳ್ಳೆಯದಕ್ಕೆ….. ಎನೂ ಕಷ್ಟ ಬಂದರೂ ನಮಗೆ ಅದರಿಂದ ಎನಾದರೂ ಪಾಠ ಕಲಿಯಲು ಸಾಧ್ಯವಿದೆ ಎಂದು ಪವನ್ ಹೇಳಿದ ಹೀಗೆ ಮಾತನಾಡುತ್ತಾ ಭವಾನಿ ಇರುವ ಕೊಣೆಗೆ ಬಂದರು.ಪವನ್ ನ ಅಕ್ಕ ಮಕ್ಕಳು ಹೊರಗೆ ಹೋದವರು ಕೂಡ ಬಂದಿದ್ದರು……

ಪವನ್ ಮತ್ತು ಮಕ್ಕಳು ಬೈಕ್ ನಲ್ಲಿ ಉಳಿದ ಭವಾನಿ, ಪದ್ಮಜಾ, ಶಮಿಕಾ ,ಪಂಕಜಾ ಇವರು ಆಟೋ ರಿಕ್ಷಾದಲ್ಲಿ ಭವಾನಿಯವರ ಮನೆಗೆ ಬಂದರು ಮನೆ ಸಣ್ಣದಾಗಿ ಇದ್ದರು ತುಂಬಾ ಚೊಕ್ಕಾಟ ಇತ್ತು ವಿವಿಧ ಪುಸ್ತಕಗಳು ಇದ್ದವು… ಮನೆಗೆ ಬಂದ ತಕ್ಷಣ ಶಮಿಕಾ ಎಲ್ಲರಿಗೂ ನಿಂಬೆ ಹಣ್ಣಿನ ಶರಬತ್ತು ಮಾಡಿ ನೀಡಿದಳು.. ಮದ್ಯಾಹ್ನ ಊಟದ ಸಮಯ ಆಗಿರುವುದರಿಂದ ಪವನ್ ಹೋಟೆಲ್ ನಿಂದ ಎಲ್ಲರಿಗೂ ಊಟ ಪಾರ್ಸೆಲ್ ತಂದನು… ಜೊತೆಯಾಗಿ ಹರಟುತ್ತಾ ನಗುತ್ತಾ ತುಂಬಾ ಸಂತೋಷವಾಗಿ ಊಟ ಮಾಡಿದರು…

ನಂತರ ಪದ್ಮಜಾ ಭವಾನಿ ಮತ್ತು ಶಮಿಕಾ ನಮ್ಮ ಮನೆಗೆ ಬನ್ನಿ ಭವಾನಿ ಎಲ್ಲ ಗುಣ ಅದ ಮೇಲೆ ಇಲ್ಲಿಗೆ ಬರಲಿ ಎಂದು ಹೇಳಿದಾಗ ಪವನ್ ಮತ್ತು ಪಂಕಜಾ ಕೂಡ ಹೌದು ಇಲ್ಲದಿದ್ದರೆ ಶಮಿಕಾಳಿಗೆ ಕೆಲಸಕ್ಕೆ ಹೋಗಲು ಕಷ್ಟ ಆಗುತ್ತದೆ ಅಲ್ಲದೆ ಶಮಿಕಾ ಇಲ್ಲದೆ ಇರುವಾಗ ಭವಾನಿ ಅಂಟಿ ಒಬ್ಬರೇ ಆಗುತ್ತಾರೆ ಎಂದು ಧ್ವನಿ ಸೇರಿಸಿದರು…. ಭವಾನಿ ಮಾತ್ರ ಇಲ್ಲ ನಾನು ಪೂರ್ತಿ ಗುಣ ಆದ ಮೇಲೆ ನಿಮ್ಮ ಮನೆಗೆ ಬರುತ್ತೇನೆ.. ಈಗ ಒತ್ತಾಯ ಮಾಡಬೇಡಿ. ನಂತರ ನೀವು ಕರೆಯದಿದ್ದರೂ ನಾನು ಬರುತ್ತೇನೆ ಏಕೆಂದರೆ ಅದು ನನ್ನ ಜೀವದ ಗೆಳತಿಯ ಮನೆ ಎಂದಾಗ ಪದ್ಮಜಾ ಸರಿ ಎಂದು ಒಪ್ಪಿಕೊಂಡರು. ಅವರೆಲ್ಲ ಹೊರಟು ನಿಂತಾಗ ಭವಾನಿ ಮೆಲ್ಲ ಎದ್ದು ತನ್ನ ಕಪಾಟಿನಿಂದ ಡೈರಿ ತಂದು ಪದ್ಮಜಾಳ ಕೈಯಲ್ಲಿ ನೀಡಿ ಇದು ನೀನು ಮಾತ್ರ ಓದು. ನನ್ನ ಬಗ್ಗೆ ಆಗ ಕೇಳಿದ್ದಿ ಅಲ್ವಾ…. ಇದರಲ್ಲಿ ವಿವರ ಇದೆ ಎಂದು ನೀಡಿದರು. ಶಮಿಕಾ ಆ ಡೈರಿ ಕಂಡು ಅದನು ಓದಲು ಅವರಿಗೆ ನೀಡಿದಾಗ ತುಂಬಾನೇ ಬೇಸರ ಪಟ್ಟುಕೊಂಡಳು. ಯಾಕೋ ಅವರು ಓದಿ ತನ್ನ ಮತ್ತು ಅಮ್ಮನ ಬಗ್ಗೆ ಎನೂ ಎನಿಸಬಹುದು! ಪವನ್ ಗೆ ಗೊತ್ತಾದರೆ ? ಎಂದು ಮನಸಿನಲ್ಲಿ ತುಂಬಾ ತಳಮಳಗೊಂಡಳು. ಎಲ್ಲರ ಎದುರಿಗೆ ಕೊಡಬೇಡಿ ಎಂದು ಅಮ್ಮನಲ್ಲಿ ಹೇಳಲು ಸಾಧ್ಯವಾಗಲಿಲ್ಲ. ಭವಾನಿ ಮತ್ತು ಶಮಿಕಾಳಿಗೆ ಜಾಗ್ರತೆ ಹೇಳಿ ಎನೂ ಸಹಾಯ ಬೇಕಾದರೂ ಪವನ್ ಗೆ ಫೋನ್ ಮಾಡಿ ಹೇಳಲೇಬೇಕು ಎಂದು ತಾಕೀತು ಮಾಡಿಯೇ ಹೊರಟರು ಪದ್ಮಜಾ.

ಅವರೆಲ್ಲ ಹೊರಟು ಹೋದ ಮೇಲೆ ಮನೆ ಮನ ಬರಿದಾಯಿತು ಭವಾನಿ ಮತ್ತು ಶಮಿಕಾಳಿಗೆ…
ಒಂದು ಮನೆಯಲ್ಲಿ ತುಂಬಾ ಜನ ಒಟ್ಟಾಗಿ ಇರುವಾಗ ಬಹುತೇಕ ಜನ ಗಂಡ ಹೆಂಡತಿ ಇಬ್ಬರೇ ಬದುಕಲು ಆಸೆ ಪಡುತ್ತಾರೆ….. ಆದರೆ ಜೊತೆಯಾಗಿ ಎಲ್ಲರೂ ಒಂದೇ ಮನೆಯಲ್ಲಿ ಇರುವ ಆನಂದವೇ ಬೇರೆ ! ಮೊದಲೆಲ್ಲ ಈಗಿನಷ್ಟು ಮನುಷ್ಯರು ಸ್ವಾರ್ಥಿಗಳು ಆಗಿರಲಿಲ್ಲ…. ಎಲ್ಲರೂ ಕೂಡಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡುತಿದ್ದರು… ಆದರೆ ಈಗ ಹಾಗಲ್ಲ…. ಯಾರು ಕೂಡಿ ಬಾಳಲು ತಯಾರಿಲ್ಲ……
ಪ್ರಾಣಿ ಪಕ್ಷಿಗಳು ಕೂಡ ಗುಂಪು ಗುಂಪಾಗಿ ವಾಸಿಸುತ್ತವೆ ಬಹುಶಃ ಅದಕ್ಕೆ ಇರಬೇಕು ಅವುಗಳು ಮನುಷ್ಯನಿಗಿಂತ ಹೆಚ್ಚು ಆನಂದವಾಗಿರುವುದು…. ಹೀಗೆಯೇ ಭವಾನಿಯ ಯೋಚನಾ ಲಹರಿ ಸಾಗುತಿತ್ತು…..

ಶಮಿಕಾಳ ಮೊಬೈಲ್ ಶಬ್ದಕ್ಕೆ ಯೋಚನೆಯಿಂದ ಎಚ್ಚೆತ್ತ ಭವಾನಿ ಶಮಿಕಾ ಎಂದು ಕರೆದಳು. ಬಟ್ಟೆ ಒಗೆಯಲು ಎಂದು ಹೊರಗೆ ಇದ್ದ ಶಮಿಕಾ ಓ ಎಂದು ಹೇಳಿ ಬೇಗ ಬಂದು ಫೋನ್ ಕೈಗೆತ್ತಿಕೊಂಡು ಮಾತನಾಡಿದಳು…. ಅಮ್ಮನಿಗೆ ಹುಷಾರಿಲ್ಲ ಎಂದು ಹೇಳಿದಳು. ನಂತರ ಆಯಿತು ಬಾ ಎಂದು ಫೋನ್ ಇಟ್ಟಾಗ ಭವಾನಿ ಯಾರು ಶಮಿಕಾ ?ಎಂದು ಕೇಳಿದಳು…. ನನ್ನ ಗೆಳತಿ ಆರತಿ..‌. ಎನೂ ಕಾಲೇಜಿಗೆ ಬಂದಿಲ್ಲ ಎಂದು ಕೇಳಿದ್ದು. ನಿಮಗೆ ಹುಷಾರಿಲ್ಲ ಎಂದೆ. ಈಗ ಬರುತ್ತೇನೆ ಎಂದು ಹೇಳಿದಳು 10 ನಿಮಿಷದಲ್ಲಿ ಬರುವಳು. ಅವಳು ಬರುವ ಮುಂಚೆ ನಾನು ಬಟ್ಟೆ ಒಗೆದು ಬರುತ್ತೇನೆ ಎಂದು ಶಮಿಕಾ ಹೊರ ಹೋದಳು…..

ಭವಾನಿಗೆ ಶಮಿಕಾಳ ಗೆಳತಿ ಆರತಿ ಕೂಡ ಮಗಳಂತೆ ಬಂದು ಮನಸಾರೆ ಮಾತನಾಡಿ ನಗಿಸಿ ಹೋಗುತ್ತಾಳೆ…. ಅವಳ ಮೂರು ವರುಷದ ಮಗಳು ಪ್ರೀತಿ ಮುದ್ದು ಮುದ್ದಾಗಿ ಇದ್ದಾಳೆ….. ಭವಾನಿಗೆ ಆರತಿಯ ಬದುಕು ಎನಿಸಿದಾಗ ಪ್ರತಿಯೋರ್ವ ವ್ಯಕ್ತಿಯ ಜೀವನದಲ್ಲಿ ಇಣುಕಿ ನೋಡಿದರೆ ಏನಾದರೂ ನೋವುಗಳು ಇದ್ದೆ ಇರುತ್ತದೆ… ಇಣುಕಿ ನೋಡುವ ಕಣ್ಣು ಮಾತ್ರ ನಿರ್ಮಲ ವಾಗಿರಬೇಕು…. ಆರತಿ ಎತ್ತರದ ಮೈಕಟ್ಟು. ಗೋಧಿ ಬಣ್ಣ ಇರುವ ಹೆಣ್ಣು …..ಅವಳ ನಗು, ಕಣ್ಣು ಯಾರನ್ನು ಬೇಕಾದರೂ ಸೆಳೆಯುತ್ತದೆ….. ಅಷ್ಟೇ ನಿರ್ಮಲ ನಗು…
ವಿಶಾಲ ಮನಸ್ಸು ಯಾರಿಗೆ ನೋವಾದರೂ ಮರುಗುವ ಹೆಣ್ಣು ಆರತಿ……
ಆರತಿಯ ಅಪ್ಪ ಅಮ್ಮನಿಗೆ ಇಬ್ಬರೇ ಮಕ್ಕಳು ಒಬ್ಬಳು ಆರತಿ….. ಇನ್ನೊಬ್ಬ ಆರತಿಯ ಅಣ್ಣ ಅಖಿಲ್.‌.‌…
ಆರತಿ ಕಾಲೇಜಿಗೆ ಹೋಗಿ ಓದು ಮುಗಿಸಿ ಕೆಲಸಕ್ಕೆ ಸೇರಿಕೊಳ್ಳಲು ತುಂಬಾ ಉತ್ಸಾಹದಿಂದ ಇದ್ದಳು.. ಮನೆಯಲ್ಲಿ ಅಪ್ಪ ಅಮ್ಮ ಅಣ್ಣ ಇವಳ ಮದುವೆಗಾಗಿ ಗಂಡು ಹುಡುಕುತ್ತಿದ್ದರು….ಇವಳ ರೂಪ ಮೈಕಟ್ಟು ನೋಡಿದವರು ಬೇಡ ಎನ್ನಲು ಸಾಧ್ಯವೇ ಇರಲಿಲ್ಲ.. ಆದರೆ ಅಣ್ಣ ಅಖಿಲ್ ನಿಗೆ ತನ್ನ ತಂಗಿಗೆ ಅನುರೂಪವಾದ ಗಂಡೇ ಬೇಕು ಎಂದು ಎಲ್ಲ ಕಡೆ ವಿಚಾರಿಸುತ್ತಿದ್ದನು…
ಇವರ ಆಸೆಯಂತೆ ಇಂಜಿನೀಯರಿಂಗ್ ಓದಿರುವ ಅನುರೂಪವಾದ ಆರತಿಯಂತೆ ಸುಂದರವಾಗಿರುವ ವರ ವಿಶಾಲ್ ಮತ್ತು ಆರತಿಯ ಮದುವೆ ಬಾರೀ ವಿಜೃಂಭಣೆಯಿಂದ ಜರುಗುತ್ತದೆ……
ಆರತಿಗೂ ತುಂಬಾ ಆನಂದವಾಗುತ್ತದೆ… ವಿಶಾಲ್ ಹೆಸರಿನಷ್ಟೆ ವಿಶಾಲ ಮನೋಭಾವದ ಎನೂ ಜಂಭ ಅಹಂಕಾರ ಇಲ್ಲದ ವ್ಯಕ್ತಿ. ಎಲ್ಲರೊಂದಿಗೆ ಬೆರೆಯುವ ಸಮಾಜದಲ್ಲಿ ಕೆಳಮಟ್ಟದಲ್ಲಿ ಇರುವ ಜನರನ್ನು ಕಂಡಾಗ ಅವರಿಗಾಗಿ ತನ್ನ ಗಳಿಕೆಯ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಟ್ಟ ಗಂಡು… ಆರತಿಯನ್ನು ತನ್ನ ಜೀವದ ಒಂದು ಭಾಗವೇ ಎಂಬಷ್ಟು ಪ್ರೀತಿ ಪ್ರೇಮ ದಿಂದ ಕಾಣುತ್ತಿದ್ದನು.‌.. ಆರತಿಗೂ ಸ್ವರ್ಗ ಎಂದರೆ ಇದೇ ಏನೋ ಎಂದು ಎನಿಸುತಿತ್ತು…. ಇದಕ್ಕಿಂತ ಮುಂಚೆಯೇ ಮದುವೆ ಆಗಬೇಕಿತ್ತು ಎಂದು ಇಬ್ಬರೂ ಮಾತನಾಡಿಕೊಳ್ಳುತ್ತಿದ್ದರು…… ಹನಿಮೂನ್ ನೆಪದಲ್ಲಿ ಹೆಚ್ಚಿನ ಎಲ್ಲಾ ಪ್ರಸಿದ್ಧ ತಾಣಗಳಲ್ಲಿ ಸುತ್ತಾಡಿ ಬಂದಿದ್ದರು……..

ಮದುವೆ ಆಗಿ ಎರಡು ತಿಂಗಳು ಕಳೆದು ಹೋದರೂ ಇಬ್ಬರಿಗೂ ತಿಳಿಯುತ್ತಿರಲಿಲ್ಲ….
ಮನಸ್ಸು ಇನ್ನೂ ಸುತ್ತಾಡಿದ್ದು ಸಾಕು ಎಂದು ಹೇಳಿರಲಿಲ್ಲ.. ಆದರೆ ದೇಹ ವಿಶ್ರಾಂತಿ ಬಯಸುತ್ತಿತು…. ಮದುವೆ ಆಗಿ ಎರಡನೇ ದಿನ ಹನಿಮೂನ್ ಎಂದು ತಿರುಗಾಟದಲ್ಲಿ ಇದ್ದವರು ಎರಡು ತಿಂಗಳು ಆದ ಮೇಲೆಯೇ ಮನೆಗೆ ವಾಪಸ್ಸು ಬಂದಿದ್ದು……
ಎಲ್ಲವೂ ನಾವು ಎನಿಸಿದ ಹಾಗೆ ಆಗುವುದಾದರೆ ವಿಧಿಗೆ ಜಾಗ ಎಲ್ಲಿದೆ? ಕೆಲವೊಮ್ಮೆ ಜನರ ಕೆಟ್ಟ ದೃಷ್ಟಿ ಬೀಳುತ್ತದಾ ಎಂದು ಅನಿಸುತ್ತದೆ………
ಆರತಿ ಮತ್ತು ವಿಶಾಲ್ ಮನೆಗೆ ಬಂದ ರಾತ್ರಿ ಆರತಿಯ ಅಣ್ಣ ಅಖಿಲ್ ನೀವಿಬ್ಬರೂ ನಿಮಗೆ ಇಷ್ಟವಾದ ಎಲ್ಲ ಸ್ಥಳಕ್ಕೆ ಹೋಗಿ ಬಂದಿರಿ….. ನಾಳೆ ನಾವು ಎಲ್ಲರೂ ಮಡಿಕೇರಿಗೆ ಹೋಗೋಣ ಎಂದಾಗ ಆರತಿ ಬೇಡ ಅಣ್ಣ ಏಕೋ ಸುಸ್ತು ಎಂದಾಗ ವಿಶಾಲ್ ಸುಸ್ತು ಎಲ್ಲ ನಾಳೆ ಬೆಳಿಗ್ಗೆ ಹೊರಟು ಹೋಗುತ್ತದೆ…… ಮಡಿಕೇರಿಗೆ ಹೋಗಿ ಬರೋಣ ಎಂದು ಹೇಳಿದಾಗ ಆರತಿಗೂ ಬೇಡ ಎಂದರೆ ಅಪ್ಪ ,ಅಮ್ಮ ,ಅಣ್ಣ ನಿಗೆ ಎಲ್ಲಿ ಬೇಸರ ಆಗುತ್ತದೊ ಎಂದು ಸರಿ ಎಂದು ಒಪ್ಪಿಕೊಂಡಳು.

ಅದರಂತೆ ಮರುದಿನ ಬೆಳಿಗ್ಗೆ ಎಲ್ಲರೂ ಮಡಿಕೇರಿಗೆ ಪ್ರಯಾಣ ಬೆಳೆಸಿದರು. ‌ ದಾರಿಯಲ್ಲಿ ಸಿಕ್ಕ ಹೋಟೆಲಿನಲ್ಲಿ ತಿಂಡಿ ತಿಂದು ಕಾಫೀ ಕುಡಿದು ಪುನಃ ಹೊರಟರು. ಕಾರಲ್ಲಿ ಎದುರು ಡ್ರೈವರ್ ಸೀಟಿನಲ್ಲಿ ಅಖಿಲ್ ಇದ್ದು ಅವರ ಜತೆ ಅಪ್ಪ ಕುಳಿತಿದ್ದರು. ಮದ್ಯ ಸೀಟಲ್ಲಿ ಆರತಿಯ ಅಮ್ಮ ಆರತಿ ಮತ್ತು ವಿಶಾಲ್ ಕುಳಿತಿದ್ದರು……
ಅಖಿಲ್ ಮತ್ತು ವಿಶಾಲ್ ಮಾತನಾಡುತ್ತಾ ಸಾಗುತ್ತಿದ್ದರು. ಮದ್ಯೆ ಮದ್ಯೆ ಆರತಿ ಅವರ ಜೊತೆ ಮಾತಿಗೆ ಸೇರುತ್ತಿದ್ದಳು . ಆರತಿಯ ಅಪ್ಪ ಅಮ್ಮ ಬೇಕಾದಾಗ ಮಾತನಾಡುತ್ತಾ ಇಲ್ಲದಿದ್ದರೆ ಕಾಡು ಮರಗಳನ್ನು ನೋಡುತ್ತಾ ಆನಂದಿಸುತ್ತಿದ್ದರು ..

ಆರತಿ‌‌ ‘ಅಣ್ಣ ಏನೋ ವಾಂತಿ ಬಂದ ಹಾಗೆ ಅನಿಸುತ್ತದೆ… ಕಾರು ಸ್ವಲ್ಪ ಬದಿಗೆ ನಿಲ್ಲಿಸು ‘ ಎಂದಾಗ ಸರಿ ಎಂದು ಅಖಿಲ್ ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸಿದ. ತಕ್ಷಣ ಆರತಿ ಕಾರಿಂದ ಇಳಿದು ಸ್ವಲ್ಪ ದೂರ ಹೋಗಿ ವಾಂತಿ ಮಾಡುತ್ತಿದ್ದಳು…
ಆರತಿ ವಾಂತಿ ಮಾಡುತ್ತಿದ್ದ ಹಾಗೆ ಕಣ್ಣು ಮುಚ್ಚಿ ತೆರೆಯುವ ಅಷ್ಟರಲ್ಲಿ ಕಿವಿ ತಮಟೆ ತೂತು ಆಗುವಷ್ಟು ಜೋರು ಶಬ್ದ ಬರುತ್ತದೆ…. ತಿರುಗಿ ನೋಡುತ್ತಾಳೆ ಏನನ್ನೂ ನೋಡುವುದು… ಬಾರೀ ದೊಡ್ಡ ದೊಡ್ದ ಮರದ ತುಂಡುಗಳನ್ನು ತುಂಬಿಸಿದ ಉದ್ದ ಇರುವ ಲಾರಿಯೊಂದು ಅಪ್ಪ,ಅಮ್ಮ, ಅಣ್ಣ, ವಿಶಾಲ್ ಕುಳಿತಿದ್ದ ಕಾರಿನ ಮೇಲೆ ಬಿದ್ದು ಅವರು ಯಾರೂ ಕಾಣುತ್ತಿಲ್ಲ!!!. ಕಣ್ಣು ಅಲ್ಲೇ ಮಂಜಾಗಿ ಕುಸಿದು ಬೀಳುತ್ತಾಳೆ ಆರತಿ… ಪೂರ್ತಿ ಎಚ್ಚರ ಆದಾಗ ಆಸ್ಪತ್ರೆಯಲ್ಲಿ ಇದ್ದಳು….. ಎಚ್ಚರ ಆಗಿ ಎಲ್ಲ ಒಂದೊಂದೇ ನೆನಪಾಗಿ ಜೋರು ಕಿರುಚಿದಳು….ಅವಳ ಹತ್ತಿರ ದೂರದ ಸಂಬಂಧಿ ಒಬ್ಬರು ನಿಂತಿದ್ದರು…..ಇವಳ ತಲೆ ನೇವರಿಸಿ ನೀನೇನು ದುಃಖ ಪಡಬೇಡ ನಾನಿದ್ದೇನೆ ಎಂದರು……

ನಂತರ ಎಲ್ಲಾ ತಿಳಿಯಿತು….ವಿಧಿಯ ಆಟದಲ್ಲಿ ಅವರೆಲ್ಲರೂ ಒಟ್ಟಾಗಿ ಇವಳನ್ನು ಒಂಟಿ ಬಿಟ್ಟು ಹೋಗಿದ್ದರು.. ಆರತಿಗೆ ಕೂಗಿ ಕೂಗಿ ಕಣ್ಣೀರು ಬತ್ತಿ ಹೋಗಿತ್ತು.. ಆಮೇಲೆ ಯೋಚಿಸಿದಾಗ ಆರತಿ ಹೊರಡುವ ಮುಂಚಿನ ರಾತ್ರಿ ಹೋಗುವುದು ಬೇಡ ಎಂದು ಹೇಳಿದ್ದಳು… ಅದರಂತೆ ಅವಳು ಒಬ್ಬಳೇ ಉಳಿದು ಹೋಗಿದ್ದಳು……. ಆಸ್ಪತ್ರೆಯಲ್ಲಿ ವೈದ್ಯರು ಹೇಳುತ್ತಾರೆ ತಪ್ಪಿಯೂ ಎನೂ ಅನಾಹುತ ಮಾಡಿಕೊಳ್ಳಬೇಡಿ ನಿಮ್ಮ ಹೊಟ್ಟೆಯಲ್ಲಿ ಮಗು ಇದೆ ಎಂದು!!!! ಎಂಥಾ ದುರ್ವಿಧಿಯೇ…. ಎಲ್ಲರನ್ನೂ ಕಸಿದುಕೊಂಡು ಹೋಗಿ ನಾನು ಒಬ್ಬಳೇ ಹೆಚ್ಚು ಹೇಗೆ ಅದೇ….. ಅಯ್ಯೋ ನಾನು ಯಾಕೆ ವಾಂತಿ ಮಾಡಲು ಎಂದು ಇಳಿದೆ…… ಕಾರು ನಿಲ್ಲಿಸಲು ಯಾಕೆ ಹೇಳಿದೆ!! ಅನಾಹುತಗಳು ನಡೆದು ಹೋದಮೇಲೆ ಮನಸ್ಸು ಹಾಗೇ ಮಾಡಬಾರದಿತ್ತು ಹೀಗೆ ಮಾಡಬಾರದಿತ್ತು ಎಂದು ಲೆಕ್ಕ ಹಾಕುತ್ತೇವೆ…… ಆದರೆ ಕಳೆದು ಹೋದ ಜೀವ ಮರಳಿ ಬರುವುದೇ?

( ಮುಂದುವರಿಯುವುದು)

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *