September 20, 2024

ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ‌ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತಿಳಿಯುತ್ತದೆ ಭವಾನಿಗೆ. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಶಮಿಕಾಳ ಮನೆಯಲ್ಲಿ ನೋಡಿ ಪರಸ್ಪರ ಪ್ರೀತಿಸುತ್ತಾರೆ. ಪವನ್ ಆರತಿಯ ಕುಟುಂಬದ ಕುರಿತು ಭವಾನಿಯಲ್ಲಿ ಕೇಳಿ ತಿಳಿದುಕೊಂಡು ಅವಳ ಬಗ್ಗೆನೇ ಯೋಚನೆ ಮಾಡುತ್ತಿರುತ್ತಾನೆ……..ಪವನ್ ನ ಅಮ್ಮ ಪದ್ಮಜಾ ಬಳಿ ಮದುವೆ ಆಗಿ ಮಗು ಇದ್ದು ಗಂಡ ತೀರಿ ಕೊಂಡ ಹೆಣ್ಣನ್ನು ಮದುವೆ ಆಗಬಹುದೇ ಎಂದು ಕೇಳುತ್ತಾನೆ. ಅಮ್ಮ ಯಾರಿಗೆ ಎಂದಾಗ ನೀವು ಮೊದಲು ಉತ್ತರ ಹೇಳಿ ಎಂದು ಹಟ ಮಾಡುತ್ತಾನೆ…ಭವಾನಿ ನೀಡಿದ ಡೈರಿ ನೆನಪಾಗಿ ಪದ್ಮಜಾ ಓದಿ ಮಗ ಪವನ್ ಗೂ ಓದಲು ನೀಡುತ್ತಾರೆ.. ಡೈರಿ ಶಮಿಕಾ ಓದಿದರೆ ಅಥವಾ ಬೇರೆಯವರು ಓದಿದರೆ ಅದು ಅವರ ಮುಂದಿನ ಜೀವನಕ್ಕೆ ಹಾನಿ ಆಗಬಹುದು ಎಂದು ಪವನ್ ಹೇಳುತ್ತಾನೆ. ಪದ್ಮಜಾ ಭವಾನಿ ಮನೆಗೆ ಬಂದು ಪವನ್ ಹೆಣ್ಣಿನ ವಿಚಾರ ಹೇಳಿರುವುದು ತನ್ನ ನಿರ್ಧಾರ ಎಲ್ಲವನ್ನೂ ಹೇಳುತ್ತಾಳೆ. ಅದಕ್ಕೆ ಭವಾನಿ ನೀನು ಹಟ ಮಾಡಿ ಎಡವಟ್ಟು ಮಾಡಬೇಡ. ಪವನ್ ಅವಳನ್ನೇ ಮದುವೆ ಆಗಿ ನಿನ್ನನು ಬಿಟ್ಟು ಹೋದರೆ ಅಥವಾ ಜೀವನ ಕೊನೆಗೊಳಿಸಿದರೆ ಎರಡರಿಂದಲೂ ನೀನೇ ತೊಂದರೆಗೆ ಸಿಲುಕಿ ಬಿಡುತ್ತಿ… ಹಾಗೆ ಆತುರದ ನಿರ್ಧಾರ ಮಾಡಬೇಡ ಎಂದು ಗೆಳತಿಗೆ ಬುದ್ಧಿ ಹೇಳಿ ಅವಳನ್ನು ಶಾಂತವಾಗಿ ಯೋಚನೆ ಮಾಡಲು ಹೇಳುತ್ತಾಳೆ…

ಅಂತರಾಳ – ಭಾಗ 23

ಶಮಿಕಾ ಬೆಳಿಗ್ಗೆ ಕಾಲೇಜಿಗೆ ಹೊರಡಲು ತಯಾರಾಗುತ್ತಿರುವ ಸಮಯದಲ್ಲಿ ಮೊಬೈಲ್ ಒಂದೇ ಸಮನೇ ರಿಂಗ್ ಆಯಿತು… ಇಷ್ಟು ಹೊತ್ತಿಗೆ ಯಾರು ಎಂದು ನೋಡುವಾಗ ಉಡುಪಿಯ ರಮಣಿ ಅಂಟಿ ಎಂದು ಹೆಸರು ಬಂತು… ಆಗ ಭವಾನಿ ಯಾರ ಫೋನ್ ಶಮಿಕಾ ಎಂದು ಕೇಳುತ್ತಾ ಹತ್ತಿರ ಬಂದರು…. ನೀವು ಆಸ್ಪತ್ರೆಗೆ ಮೊನ್ನೆ ದಾಖಲು ಆಗಿದ್ದಾಗ ಪರಿಚಯ ಅದ ಅಂಟಿ ಆ ದಿನ ನಿಮ್ಮನ್ನು ನೋಡಲು ಬಂದಿದ್ದಾರೆ ನಿಮಗೆ ನೆನಪಿರಬಹುದು ಎಂದು ಶಮಿಕಾ ಹೇಳಿದಾಗ ಹೌದು ನೆನಪು ಇದೆ ಎಂದರು ಭವಾನಿ… ರಿಂಗ್ ಆಗಿ ಫೋನ್ ಕಟ್ ಆಯಿತು.. ಈಗ ಪುನಃ ಫೋನ್ ಮಾಡಿದರೆ ಕಾಲೇಜಿಗೆ ಹೋಗಲು ಸಮಯ ಮೀರಿ ಹೋಗುತ್ತದೆ ಅಮ್ಮ. ನಾನು ಕಾಲೇಜಿನಲ್ಲಿ ಸಮಯ ಸಿಕ್ಕಾಗ ಅವರಿಗೆ ಫೋನ್ ಮಾಡಿ ವಿಚಾರಿಸುತ್ತೇನೆ ಎಂದು ಹೇಳಿ ಶಮಿಕಾ ಬೇಗ ಬೇಗ ಹೆಜ್ಜೆ ಹಾಕಿ ಕಾಲೇಜಿಗೆ ಹೋದಳು..

ಶಮಿಕಾ ಹೋದ ಮೇಲೆ ಭವಾನಿ ಆಸ್ಪತ್ರೆಯಲ್ಲಿ ಶಮಿಕಾಳಿಗೆ ಪರಿಚಯ ಆದ ರಮಣಿ ಬಗ್ಗೆ ಪಾಪ ಎನು ಕಷ್ಟವೋ ಏನೋ ಎಂದು ಯೋಚಿಸಿದರು..

ಶಮಿಕಾ ಕಾಲೇಜಿನ ಬಿಡುವಿನ ವೇಳೆಯಲ್ಲಿ ನೆನಪು ಮಾಡಿ ರಮಣಿಗೆ ಫೋನ್ ಮಾಡಿದಳು… ಅತ್ತ ಕಡೆಯಿಂದ ರಮಣಿ ತುಂಬಾ ಕಳವಳಗೊಂಡು ನನ್ನ ಗಂಡ ತುಂಬಾ ಸಮಯ ಬದುಕುವುದಿಲ್ಲ ಎಂದು ಅನ್ನಿಸುತ್ತಿದೆ ಶಮಿಕಾ… ಏನೇನೋ ಹೇಳುತ್ತಾರೆ.. ಆಹಾರ ಸರಿ ಹೋಗುತ್ತಿಲ್ಲ…. ಹಾಗೆ ಮಗಳು ಎಂದು ಎನಿಸಿ ನಿನ್ನ ನೆನಪು ಆಯಿತು ಅದಕ್ಕೆ ಫೋನ್ ಮಾಡಿದ್ದು.. ಆಸ್ಪತ್ರೆಗೆ ಹೋಗಿಲ್ಲ…..ಎಷ್ಟು ಅಂತ ಮದ್ದು ಮಾಡುವುದು ಇದ್ದ ಜಾಗ ,ಒಡವೆ ಮಾರಿ ಆಯಿತು ಎಂದು ಬಿಕ್ಕಿ ಬಿಕ್ಕಿ ಅತ್ತರು…. ಶಮಿಕಾಳಿಗೆ ಹೇಗೆ ಸಮಾಧಾನ ಮಾಡಬೇಕೋ ತಿಳಿಯದೇ ಅಂಟಿ ಹೆದರಬೇಡಿ ನಾನು ನನ್ನ ಗೆಳತಿ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿ ಸಮಾಧಾನ ಪಡಿಸಿ ಫೋನ್ ಇಟ್ಟಳು….

ರಮಣಿ ಬಳಿ ಬರುತ್ತೇನೆ ಎಂದು ಹೇಳಿ ಸಮಾಧಾನ ಮಾಡಿದಳು… ಆದರೆ ಹೋಗುವ ಯೋಜನೆ ಹೇಗೆ ಎಂದು ತುಂಬಾ ತಲೆ ಕೆಡಿಸಿಕೊಂಡು ಆರತಿಯ ಬಳಿ ಇದ್ದ ಎಲ್ಲಾ ವಿಷಯಗಳನ್ನೂ ಹೇಳಿದಳು. ಆರತಿ ನೀನು ಹೆದರಬೇಡ ಎರಡು ದಿನ ರಜೆ ಹಾಕಿ ನಾನು ನೀನು ಹೋಗೋಣ ಎಂದಾಗ ಶಮಿಕಾ ನಿನ್ನ ಮಗಳು ಪ್ರೀತಿಯನ್ನು ಎಲ್ಲಿ ಬಿಡುವುದು ಎಂದಳು. ಅಮ್ಮನಲ್ಲಿ ಕೇಳಿ ಅವರು ಏನು ಹೇಳುತ್ತಾರೆ ನೋಡೋಣ ಎಂದುಕೊಂಡು ಅಲ್ಲಿಂದ ತಮ್ಮ ತರಗತಿಗೆ ನಡೆದರು..

ಸಂಜೆ ಮನೆಗೆ ಬಂದಾಗ ಶಮಿಕಾ ರಮಣಿಯವರ ಪರಿಸ್ಥಿತಿ ತಾನು ಬರುತ್ತೇನೆ ಎಂದು ಹೇಳಿರುವುದು ಅದಕ್ಕೆ ಆರತಿ ಹೇಳಿರುವುದು ಎಲ್ಲವನ್ನೂ ಸವಿಸ್ತಾರವಾಗಿ ಭವಾನಿಯಲ್ಲಿ ಹೇಳಿದಳು. ಅದಕ್ಕೆ ಭವಾನಿ ನೀನು ಆರತಿ ಹೋಗಿ ಪ್ರೀತಿ ಇಲ್ಲಿ ಇರಲಿ.. ಅಲ್ಲದೆ ಪವನ್ ನಲ್ಲಿ ಒಂದು ಮಾತು ಕೇಳೋಣ ಅವನಿಗೆ ಸಮಯ ಇದ್ದರೆ ಅವನು ನಿಮ್ಮ ಜೊತೆ ಇದ್ದರೆ ನನಗೂ ಇಲ್ಲಿ ಸಮಾಧಾನ ಹಾಗೂ ನಿಮಗೂ ಗುರುತು ಪರಿಚಯ ಇಲ್ಲದ ಊರಿಗೆ ಹೋದಾಗ ಪವನ್ ಬಂದರೆ ಸಹಾಯ ಆಗುತ್ತದೆ ಎಂದು ತಮ್ಮ ಯೋಚನೆಯನ್ನು ಹೇಳಿದರು.. ಆಗಲೇ ಶಮಿಕಾ ಪವನ್ ಗೆ ಕಾಲ್ ಮಾಡಿ ಮಾತನಾಡಿದಳು ವಿಷಯ ಎಲ್ಲ ತಿಳಿದ ಮೇಲೆ ಪವನ್ ಬರುತ್ತೇನೆ ಅಮ್ಮ ನಿಮ್ಮ ಮನೆಯಲ್ಲಿ ನಾವು ಬರುವ ತನಕ ಇರಲಿ ಎಂದು ಮಾತನಾಡಿ ಮರುದಿನ ಶಮಿಕಾ ಮತ್ತು ಆರತಿ ಕಾಲೇಜಿನಲ್ಲಿ ಎನೂ ತೊಂದರೆ ಆಗುವುದು ಬೇಡ ಎಂದು ಇಬ್ಬರೂ ಎರಡು ದಿನದ ಬದಲು ನಾಲ್ಕು ದಿನಗಳ ರಜೆ ಕೇಳಿ ಪಡೆದು ಕೊಂಡರು.ನಾಡಿದ್ದು ಹೋಗುವ ಎಂದು ತೀರ್ಮಾನ ಮಾಡಿದರು.. ಪವನ್ ನ ಅಮ್ಮ ಪದ್ಮಜಾ ಕೂಡ ಒಪ್ಪಿಕೊಂಡರು. ಶಮಿಕಾಳಿಗೆ
ಇಷ್ಟು ಸಲೀಸಾಗಿ ಹೋಗುವ ವಿಚಾರ ತೀರ್ಮಾನ ಆಗಿದ್ದಕ್ಕೆ ಖುಷಿಗೊಂಡಳು. ಭವಾನಿ ಪವನ್ ಶಮಿಕಾ ಮತ್ತು ಆರತಿ ಜೊತೆ ಹೊಗುವುದಕ್ಕೆ ಸಮಾಧಾನ ಪಟ್ಟರು.

ಹೇಳಿದಂತೆ ಕಾಲೇಜಿನಲ್ಲಿ ರಜೆ ಪಡೆದು ಪ್ರೀತಿಯನ್ನು ಭವಾನಿ ಬಳಿ ಬಿಟ್ಟು ಆರತಿ ಮತ್ತು ಶಮಿಕಾ ಎರಡು, ಮೂರು ದಿನಕ್ಕೆ ಬೇಕಾದ ಬಟ್ಟೆ ಇತರ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿ ತಯಾರಾದರು.. ಸಮಯಕ್ಕೆ ಸರಿಯಾಗಿ ಪವನ್, ಪದ್ಮಜಾ ಒಟ್ಟಿಗೆ ಬಂದರು.. ಭವಾನಿ, ಮಗು ಪ್ರೀತಿ ಹಾಗೂ ಪದ್ಮಜಾ ಮೂವರು ಮನೆಯಲ್ಲಿ ಇದ್ದು ಮೂವರಿಗೂ ಜಾಗ್ರತೆ ಹೇಳಿ ಕಳುಹಿಸಿದರು. ಆದರೆ ಭವಾನಿ ಯಾಕೋ ತುಂಬಾ ಬೇಸರ ಪಟ್ಟರು… ಪದ್ಮಜಾ ಭವಾನಿಗೆ ಸಮಾಧಾನ ಪಡಿಸಿದರು.. ನೀನು ಹೀಗೆ ಬೇಸರ ಮಾಡಿದರೆ ಹೇಗೆ ಅವಳಿಗೆ ಮದುವೆ ಮಾಡಿ ಕಳುಹಿಸುವಾಗ ಎನೂ ಮಾಡುತ್ತಿ ಭವಾನಿ ಎಂದರು..

ಶಮಿಕಾ,ಆರತಿ ,ಪವನ್ ತುಂಬಾ ಕುಶಿ ಖುಶಿಯಾಗಿ ಮಾತನಾಡುತ್ತಾ ರಮಣಿಯವರ ಮನೆಗೆ ಹೊರಟರು. ಪವನ್ ನ ಎದೆ ಬಡಿತ ಭಯದಿಂದ ವ ಸಂತೋಷದಿಂದ ವ ಗೊತ್ತಿಲ್ಲದೆ ಡಬ ಡಬ ಎಂದು ಬಡಿದುಕೊಳ್ಳುತ್ತಿತ್ತು. ಪವನ್ ಗೆ ಶಮಿಕಾ ಉಡುಪಿಗೆ ಹೋಗುವ ವಿಚಾರ ಹೇಳಿದಾಗ ಆರತಿಯ ಹೆಸರು ಕೇಳಿ ಮನಸ್ಸು ತುಂಬಾನೇ ಅವಳೇ ತುಂಬಿಕೊಂಡಿದ್ದಳು.. ಆರತಿಗೆ ಮಾತ್ರ ಪ್ರೀತಿಯನ್ನು ಬಿಟ್ಟು ಬರುವಾಗ ಕಣ್ಣು ತುಂಬಿ ಬಂದಿತ್ತು… ಪ್ರೀತಿ ಭವಾನಿ ಅಂಟಿಯ ಜೊತೆಯಲ್ಲಿ ಇರುವುದು ಎಂದು ಬಾರೀ ಆನಂದದಿಂದ ಅಮ್ಮನನ್ನು ಎನೂ ಬೇಸರ ಇಲ್ಲದೆ ಟಾಟ ಹೇಳಿ ಕಳುಹಿಸಿದ್ದಳು.

ಬೆಳಿಗ್ಗೆ ಹೊರಟವರು ಮದ್ಯಾಹ್ನ ಹೊಟೇಲ್ ಊಟ ಮುಗಿಸಿ ಸಂಜೆ 4 ಗಂಟೆಗೆ ರಮಣಿ ಹೇಳಿದ ವಿಳಾಸ ಹುಡುಕಿ ಅವರ ಮನೆ ತಲುಪಿದರು.. ತನ್ನ ಮಗಳಂತೆ ಇರುವ ಎರಡು ಹೆಣ್ಣು ಮಕ್ಕಳು ಒಬ್ಬ ಗಂಡು ಮಗನನ್ನು ಕಂಡು ರಮಣಿಗೆ ಹೃದಯ ತುಂಬಿ ಬಂತು.. ರಮಣಿಯ ಗಂಡ ಸಂಜೀವ ಅವರು ಹೊಟ್ಟೆಗೆ ಆಹಾರ ಇಲ್ಲದೆ ಬಡಕಲು ಆಗಿದ್ದು ಜೀವ ಆಗಲೋ ಈಗಲೋ ಹೋಗುವ ಹಾಗಿತ್ತು ಕಣ್ಣು ನಿಸ್ತೇಜವಾಗಿ ಯಾರನ್ನೋ ಕಾಯುತ್ತಿತ್ತು.. ಇವರನ್ನು ಕಂಡು ಏನೋ ಹೇಳಿ ನಗುವಂತೆ ಶಬ್ದ ಬಂತು. ಮೂವರು ಇವರನ್ನು ಕಂಡು ಒಂದು ಕ್ಷಣ ಭಯಭೀತರಾಗಿ ಮಾತೇ ಹೊರಡಲಿಲ್ಲ ರಮಣಿಯೇ ಮೂವರನ್ನು ಸಮಾಧಾನ ಪಡಿಸಿದರು.

ರಾತ್ರಿ ನಾವು ಪೇಟೆಗೆ ಹೋಗಿ ಹೋಟೆಲ್ ನಲ್ಲಿ ನಿಲ್ಲುತ್ತೇವೆ ಎಂದು ಶಮಿಕಾ ಹೇಳಿದಾಗ ರಮಣಿ ಬೇಡ ನಾವಿಬ್ಬರೂ ರೂಂನಲ್ಲಿ ಮಲಗುವುದಿಲ್ಲ ನಾನು ಇವರ ಜೊತೆ ರಾತ್ರಿ ಹೊರಗೆ ಮಲಗುವುದು ಬಾಗಿಲು ಇದೆ ಹಾಗಾಗಿ ಭಯ ಇಲ್ಲ. ಎರಡು ಕೊಣೆ ಇದೆ ಒಂದರಲ್ಲಿ ಶಮಿಕಾ ಮತ್ತು ಆರತಿ ಇರಿ ಇನ್ನೊಂದು ರೂಂನಲ್ಲಿ ಪವನ್ ಇರಲಿ ನಾನು ಎಲ್ಲ ತಯಾರಿ ಮಾಡಿದ್ದೇನೆ ಎಂದಾಗ ಅವರಲ್ಲಿ ನಿಷ್ಠುರವಾಗಿ ಮಾತನಾಡಲು ಇಷ್ಟ ಇಲ್ಲದೆ ಅವರ ಮಾತಿಗೆ ಮೂವರು ಒಪ್ಪಿ ಕೊಂಡರು. ಹೆಂಚಿನ ಮನೆ ಆಗಿದ್ದರೂ ದೊಡ್ಡದೇ ಇತ್ತು.. ಅಡುಗೆ ಕೊಣೆ ಬಿಟ್ಟು ಎರಡು ಕೊಣೆ ಇದ್ದು ಮನೆ ಚೊಕ್ಕದಾಗಿ ಇಟ್ಟು ಕೊಂಡಿದ್ದರು.ಸ್ನಾನದ ಮನೆ ಸ್ವಲ್ಪ ದೂರ ಇದ್ದು ಮನೆಯಲ್ಲಿ ಟಾಯ್ಲೆಟ್ ಇದ್ದು ನೀರಿಗಾಗಿ ಬಾವಿ ಇತ್ತು. ನೀರು ಮಾತ್ರ ಸೇದಬೇಕಿತ್ತು.ಆರತಿಗೆ ಬಾವಿಯಿಂದ ನೀರು ಸೇದುವುದು ಆಸಕ್ತಿಯ ಕೆಲಸವಾಯಿತು.ಇವರು ಹೋಗುವಾಗ ಮನೆಗೆ ಬೇಕಾದ ಸಾಧಾರಣ ಎಲ್ಲಾ ಅಡುಗೆ ಸಾಮಾನುಗಳನ್ನು, ಮೂರು ನಾಲ್ಕು ಬಗೆಯ ತರಕಾರಿಗಳನ್ನು ಹಣ್ಣುಗಳನ್ನು ಪವನ್ ಎಲ್ಲ ರೆಡಿ ಮಾಡಿಕೊಂಡು ತೆಗೆದುಕೊಂಡು ಬಂದುದಕ್ಕೆ ರಮಣಿ ಇದೆಲ್ಲ ಯಾಕೆ ತಂದದು ಎಂದಾಗ ಶಮಿಕಾ ನನ್ನನ್ನು ಮಗಳು ಎಂದು ಎನಿಸಿದ ಮೇಲೆ ನಾನು ತರುವುದರಲ್ಲಿ ತಪ್ಪು ಇಲ್ಲ ಅಲ್ವಾ ಅಂಟಿ ಎಂದಾಗ ರಮಣಿ ನಕ್ಕು ಸುಮ್ಮನಾದರು… ಇವರು ಹೋದ ದಿನ ರಾತ್ರಿ ಊಟ ಮುಗಿಸಿ ಮೂವರು ಪಾತ್ರೆ ತೊಳೆದು ಸಣ್ಣ ಪುಟ್ಟ ಕೆಲಸ ಮಾಡಿ ರಮಣಿಗೆ ಸಹಾಯ ಮಾಡಿದರು ರಮಣಿ ಕೂಡ ಶಮಿಕಾನವರು ಬಂದ ತಕ್ಷಣದಿಂದ ತುಂಬಾ ಗೆಲುವು ಅದರು.. ರಾತ್ರಿ ತುಂಬಾ ಹೊತ್ತು ಮಾತನಾಡಿ, ಕಥೆ ಹೇಳುತ್ತಾ ಹಾಡು ಹೇಳಿ ನಗಿಸಿ ನಗುತ್ತಾ ಮಲಗಿದರು. ಮರುದಿನ ಬೆಳಗ್ಗೆ ಏಳುವಾಗ ರಮಣಿಯ ಗಂಡ ಸ್ವಲ್ಪ ಗೆಲುವು ಆಗಿದ್ದಾರೆ ಎಂದು ರಮಣಿ ಹೇಳಿದರು.

ಬೆಳಿಗ್ಗೆ ಎದ್ದು ಆರತಿ ನೀರು ಸೇದಲು ಬಾವಿ ಬಳಿ ಬಂದಾಗ ಪವನ್ ಏನೋ ತದೇಕಚಿತ್ತದಿಂದ ಯೋಚನೆ ಮಾಡುತಿದ್ದ. ಆರತಿ ಮೆಲ್ಲಗೆ ಕೆಮ್ಮು ತೆಗೆದು ಅವನ ಗಮನವನ್ನು ಸೆಳೆದು ಎನು ತುಂಬಾ ಗಹನವಾದ ವಿಚಾರ ಯೋಚನೆ ಮಾಡುತ್ತಿದ್ದೀರಿ ಎಂದಾಗ ಪವನ್ ಹಾಗೇನಿಲ್ಲ ಆದರೆ ಮನೆಗೆ ಯಾರೂ ಬಾರದಿದ್ದರೆ, ಮನೆಯಲ್ಲಿ ಮಕ್ಕಳು ಇಲ್ಲದಿದ್ದರೆ ಹೆಚ್ಚು ಜನ ಇಲ್ಲದಿದ್ದರೆ ನಗು ಮಾತು ಇಲ್ಲದೆ ಚಿಂತೆಯೇ ಹೆಚ್ಚಾಗಿ ಚಿತೆ ಆವರಿಸುತ್ತದೆ ಎನ್ನುವ ಮಾತು ಸುಳ್ಳಲ್ಲ ….

ಮನುಷ್ಯನ ವ್ಯಕ್ತಿತ್ವವೇ ಹಾಗೆ ಅವನು ಸಂಘ ಜೀವಿ. ಎಲ್ಲರೊಡನೆ ಸ್ನೇಹದಿಂದ ಬೆರೆತು ಮಾತು ನಗು ಇದ್ದಾಗ ಆರೋಗ್ಯ ಕೂಡ ಸಾಕಷ್ಟು ಸುಧಾರಿಸುತ್ತದೆ. ರಮಣಿ ಅಂಟಿ ಮತ್ತು ಅಂಕಲ್ ನನ್ನು ಕಂಡಾಗ ಹಾಗೆ ಅನಿಸುತ್ತದೆ ನನಗೆ. ಎಂದಾಗ ಆರತಿ ಕೂಡ ಅದು ಹೌದು ಗುಂಪಿನಲ್ಲಿ ಇದ್ದಾಗ ನಮ್ಮ ಬೇಸರ ನೋವು ಮರೆಯುತ್ತೇವೆ ಆದೇ ಒಂಟಿಯಾಗಿ ಇದ್ದಾಗ ಮೆಲ್ಲನೇ ನಮ್ಮನ್ನು ಬಂದು ಆ ಬೇಸರವೇ ಕರೆಯುತ್ತದೆ ಎಂದು ಭಾಸವಾಗುತ್ತದೆ ಎಂದಳು.. ಎನು ಇಬ್ಬರು ತುಂಬಾ ಚರ್ಚೆಯಲ್ಲಿ ಇದ್ದೀರಿ ಎಂದು ಶಮಿಕಾ ಅಲ್ಲಿಗೆ ಬಂದಳು…

( ಮುಂದುವರಿಯುವುದು)

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *