ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತಿಳಿಯುತ್ತದೆ ಭವಾನಿಗೆ. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಶಮಿಕಾಳ ಮನೆಯಲ್ಲಿ ನೋಡಿ ಪರಸ್ಪರ ಪ್ರೀತಿಸುತ್ತಾರೆ. ಪವನ್ ಆರತಿಯ ಕುಟುಂಬದ ಕುರಿತು ಭವಾನಿಯಲ್ಲಿ ಕೇಳಿ ತಿಳಿದುಕೊಂಡು ಅವಳ ಬಗ್ಗೆನೇ ಯೋಚನೆ ಮಾಡುತ್ತಿರುತ್ತಾನೆ……..ಪವನ್ ನ ಅಮ್ಮ ಪದ್ಮಜಾ ಬಳಿ ಮದುವೆ ಆಗಿ ಮಗು ಇದ್ದು ಗಂಡ ತೀರಿ ಕೊಂಡ ಹೆಣ್ಣನ್ನು ಮದುವೆ ಆಗಬಹುದೇ ಎಂದು ಕೇಳುತ್ತಾನೆ. ಅಮ್ಮ ಯಾರಿಗೆ ಎಂದಾಗ ನೀವು ಮೊದಲು ಉತ್ತರ ಹೇಳಿ ಎಂದು ಹಟ ಮಾಡುತ್ತಾನೆ…ಭವಾನಿ ನೀಡಿದ ಡೈರಿ ನೆನಪಾಗಿ ಪದ್ಮಜಾ ಓದಿ ಮಗ ಪವನ್ ಗೂ ಓದಲು ನೀಡುತ್ತಾರೆ.. ಡೈರಿ ಶಮಿಕಾ ಓದಿದರೆ ಅಥವಾ ಬೇರೆಯವರು ಓದಿದರೆ ಅದು ಅವರ ಮುಂದಿನ ಜೀವನಕ್ಕೆ ಹಾನಿ ಆಗಬಹುದು ಎಂದು ಪವನ್ ಹೇಳುತ್ತಾನೆ. ಪದ್ಮಜಾ ಭವಾನಿ ಮನೆಗೆ ಬಂದು ಪವನ್ ಹೆಣ್ಣಿನ ವಿಚಾರ ಹೇಳಿರುವುದು ತನ್ನ ನಿರ್ಧಾರ ಎಲ್ಲವನ್ನೂ ಹೇಳುತ್ತಾಳೆ. ಅದಕ್ಕೆ ಭವಾನಿ ನೀನು ಹಟ ಮಾಡಿ ಎಡವಟ್ಟು ಮಾಡಬೇಡ. ಪವನ್ ಅವಳನ್ನೇ ಮದುವೆ ಆಗಿ ನಿನ್ನನು ಬಿಟ್ಟು ಹೋದರೆ ಅಥವಾ ಜೀವನ ಕೊನೆಗೊಳಿಸಿದರೆ ಎರಡರಿಂದಲೂ ನೀನೇ ತೊಂದರೆಗೆ ಸಿಲುಕಿ ಬಿಡುತ್ತಿ… ಹಾಗೆ ಆತುರದ ನಿರ್ಧಾರ ಮಾಡಬೇಡ ಎಂದು ಗೆಳತಿಗೆ ಬುದ್ಧಿ ಹೇಳಿ ಅವಳನ್ನು ಶಾಂತವಾಗಿ ಯೋಚನೆ ಮಾಡಲು ಹೇಳುತ್ತಾಳೆ…ಉಡುಪಿಯಿಂದ ರಮಣಿ ಗಂಡನಿಗೆ ಹುಶಾರ್ ಇಲ್ಲ ಎಂದು ಹೇಳಿದ್ದಕ್ಕೆ ಶಮಿಕಾ, ಆರತಿ ಮತ್ತು ಪವನ್ ಅಲ್ಲಿಗೆ ನೋಡಲು ಹೋಗುತ್ತಾರೆ.. ಅಲ್ಲಿ ಪವನ್ ಮತ್ತು ಆರತಿ ಪರಸ್ಪರರನ್ನು ಅರಿತುಕೊಳ್ಳಲು ಪ್ರೀತಿಯನ್ನು ಹಂಚಿಕೊಳ್ಳಲು ಇಷ್ಟ ಪಡುತ್ತಾರೆ. ಶಮಿಕಾ ಉಡುಪಿಗೆ ಹೋದ ಮೇಲೆ ಭವಾನಿಗೆ ಶಮಿಕಾಳ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾಳೆ.. ಇತ್ತ ಪವನ್ ಮತ್ತು ಆರತಿ ಉಡುಪಿಯ ಪೇಟೆಗೆ ಹೊರಟರು.. ಬಸ್ ನಲ್ಲಿ ಜೊತೆಯಲ್ಲಿ ಕುಳಿತಿದ್ದಾಗ ಆರತಿಯ ಮನಸ್ಸಿನಲ್ಲಿ ವಿವಿಧ ಯೋಚನೆಗಳು ಬರಲಾರಂಭಿಸಿತು.ಉಡುಪಿಗೆ ಬಸ್ ನಲ್ಲಿ ಹೊರಟ ಪವನ್ ಮತ್ತು ಆರತಿ ದಾರಿ ಮಧ್ಯೆ ಮಲ್ಪೆಯಲ್ಲಿ ಇಳಿದು ಬೀಚ್ ಗೆ ತೆರಳಿದರು .. ಬೀಚ್ ನಲ್ಲಿ ಒಟ್ಟಿಗೆ ಕುಳಿತಿದ್ದಾಗ ಇಬ್ಬರ ಮನಸ್ಸಿನಲ್ಲೂ ಒಂದು ರೀತಿಯ ಅವಿನಾಭಾವ ಕಾಡುತ್ತಿತ್ತು ..ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುವ ಬಗ್ಗೆ ಹೇಳಿಕೊಳ್ಳದಿದ್ದರೂ ಮನಸ್ಸಿನಲ್ಲಿ ಆ ಭಾವನೆಯಿಂದ ಅರಿತುಕೊಳ್ಳಲು ಪ್ರಯತ್ನಿಸುತ್ತಾರೆ. ರಮಣಿಯ ಗಂಡ ಸಂಜೀವ ಶಮಿಕಾಳ ಬಳಿ ತಾನು 22 ವರುಷದ ಹಿಂದೆ ಮಾಡಿದ ತಪ್ಪನು ಹೇಳಲು ಇಚ್ಛಿಸುತ್ತಾನೆ….. ಮರೆಯಲ್ಲಿ ನಿಂತು ರಮಣಿ ಕೇಳಿಸಿಕೊಳ್ಳುತ್ತಾ ಇರುವುದು ಅವರಿಬ್ಬರಿಗೂ ತಿಳಿದಿಲ್ಲ……
ಅಂತರಾಳ – ಭಾಗ 29
ಗ್ರಂಥಾಲಯದಲ್ಲಿ ಓದಲು ಎರಡು ದಿನಕ್ಕೆ ಒಮ್ಮೆ ಹೋಗುವುದರಿಂದಲೋ ಅಥವಾ ಓದುವವರು ಎಂಬ ಅಭಿಮಾನದಿಂದವೋ ಗೊತ್ತಿಲ್ಲ ನನ್ನಲ್ಲಿ ಆ ಹುಡುಗಿ ಮುಗುಳು ನಗೆಯನ್ನು ಬೀರುತಿದ್ದಳು…..ಅವಳ ಆ ಮುಗುಳು ನಗೆ ನನಗೆ ಕಾರ್ಗತ್ತಲೆಯಲ್ಲಿ ಕೋಲ್ಮಿಂಚು ಕಂಡಂತೆ, ಮನಸ್ಸಿಗೆ ಅಮೃತವನ್ನು ನೀಡುವಂತೆ ಭಾಸವಾಗುತ್ತಿತ್ತು…..ಅವಳ ಆ ನಗೆಯು ನನಗೆ ಬೇರೆ ಊರಿಗೆ ಹೋಗಿ ಉದ್ಯೋಗ ಹುಡುಕುವ ಆಸೆಯನ್ನು ತಡೆಯಿತು… ಅಮ್ಮ ಅಪ್ಪನಿಗೆ ಮಗ ಓದಿದ್ದರೂ ನಮ್ಮ ಮೇಲಿನ ಗೌರವ ಪ್ರೀತಿಯಿಂದ ಮಗ ತೋಟದಲ್ಲಿ ಕೆಲಸ ಮಾಡುತ್ತಾನೆ ….ಮೊದಲ ಎರಡು ಮಕ್ಕಳಂತೆ ಊರು ಬಿಟ್ಟು ಪರ ಊರಿಗೆ ಹೋಗಿಲ್ಲ ಎಂದು ಆನಂದವಾಗಿತು….
ಆದರೆ ನನ್ನ ಲೆಕ್ಕಾಚಾರವೇ ಬೇರೆ ಆಗಿತ್ತು… ಅವಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪೂಜೆ ಮಾಡುತಿದ್ದೆ ಎಂದರೆ ತಪ್ಪಾಗಲಾರದು!!! ಅವಳ ಪ್ರೀತಿ ಸಂಪಾದಿಸಿ ಅವಳ ಒಪ್ಪಿಗೆ ಪಡೆದು ಅವಳನ್ನು ಬಾಳ ಸಂಗಾತಿಯಾಗಿ ಮಾಡಿ ನಾನು ಅವಳು ಜೊತೆಯಾಗಿ ಪ್ರೀತಿ ಕಾದಂಬರಿಯನ್ನು ಓದಬೇಕು ಆಗ ಅವಳ ತೀಕ್ಷ್ಣ ನೋಟದಲ್ಲಿ ನಾನು ಪ್ರೀತಿಯ ಧಾರೆಯನ್ನು ಹರಿಸಬೇಕು…. ಹಗಲು ರಾತ್ರಿ ನಾನು ಅವಳ ನೆನಪಲ್ಲೇ ಇರುತ್ತಿದ್ದೆ…. ಗ್ರಂಥಾಲಯಕ್ಕೆ ದಿನಾ ಹೋಗಲು ನನಗೆ ಸಾಧ್ಯವಿರಲಿಲ್ಲ ಆದರೆ ಹೇಗಾದರೂ ಮಾಡಿ ಎರಡು ದಿನಕ್ಕೆ ಒಮ್ಮೆ ಹೋಗಿ ಕಥೆ ಕಾದಂಬರಿ ಓದಲು ತರುತ್ತಿದ್ದೆ… ನಾನು ಬೇರೆ ಊರಿಗೆ ಹೋಗಿ ಉದ್ಯೋಗ ಮಾಡಿದರೆ ಅವಳು ಎಲ್ಲಿ ನನ್ನ ಕೈಯಿಂದ ಜಾರಿ ಹೋಗುತಾಳೋ ಎಂಬ ಭಯದಿಂದಲೇ ಇದ್ದೆ…. ಈಗಿನ ಹಾಗೆ ಒಮ್ಮೆಲೇ ಮಾತನಾಡಲು ಭಯ ಅಥವಾ ವಿಳಾಸ ಕೇಳುವ ಎಂದು ತುಂಬಾ ಸಲ ಪ್ರಯತ್ನ ಪಟ್ಟರೂ ಅಲ್ಲಿ ಯಾರಾದರೂ ಒಬ್ಬರು ಇರುತ್ತಿದ್ದರು…. ಈಗಿನ ಯುವ ಜನರ ಹಾಗೆ ಆಗ ಯುವಕ ಯುವತಿಯರಿಗೆ ಅವಕಾಶ ಇರಲಿಲ್ಲ ಸ್ವಾತಂತ್ರ್ಯ ಕೂಡ ಇದ್ದಿರಲಿಲ್ಲ……. ಕಥೆ, ಕಾದಂಬರಿಯ ಹಾಳೆಯ ಮಧ್ಯದಲ್ಲಿ ಪ್ರೇಮ ಪತ್ರ ಬರೆದು ಕಳಿಸುತ್ತೇನೆ ಎಂದು ಸಾವಿರ ಸಲ ಬರೆದು ಅದರಲ್ಲಿ ಇಟ್ಟು ಕೊಡುವ ಧೈರ್ಯ ಸಾಲದೆ ಹರಿದು ಬಿಸಾಕಿದ ಪತ್ರಕ್ಕೆ ಲೆಕ್ಕವೇ ಇಲ್ಲ…….. ಪ್ರತಿ ದಿನ ರಾತ್ರಿ ಪತ್ರ ಬರೆಯುವುದು ಹಗಲು ಈ ಪತ್ರ ಓದಿ ಇದು ಚೆನ್ನಾಗಿಲ್ಲ ಬೇರೆ ಬರೆಯೋಣ ಎಂದು ಹರಿಯುವುದು ಹೀಗೆ ಮಾಡುತ್ತಾ, ಮಾಡುತ್ತಾ ಹತ್ತಿರ ಹತ್ತಿರ ಒಂದು ವರುಷ ಆಗುತ್ತಾ ಬರುತಿತ್ತು……….
ಯಾವುದೇ ಕಥೆ ಕಾದಂಬರಿ ಓದಿದರೂ ಅಲ್ಲಿ ಬರುವ ಹೆಣ್ಣು ಗಂಡು ಪಾತ್ರಧಾರಿಗಳು ನಾವಿಬ್ಬರೇ ಎಂದು ಎನಿಸಿಕೊಂಡು ಕುಶಿ ಪಡುತ್ತಿದ್ದೆ…. ಅವಳ ಹೆಸರನ್ನು ಬಾರೀ ಪ್ರಯತ್ನ ಪಟ್ಟು ಬೇರೆಯವರಿಂದ ಕೇಳಿ ತಿಳಿದುಕೊಂಡು ಅವಳ ಹೆಸರಿನ ಜೊತೆ ನನ್ನ ಹೆಸರು ಬರೆದು ತಾಳೆ ಹಾಕುತ್ತಿದ್ದೆ……. ನಾನು ಉಸಿರಾಡುವ ಉಸಿರಿನಲ್ಲಿ ಅವಳೇ ತುಂಬಿಕೊಂಡಿದ್ದಳು …..ಬೀಸುವ ತಂಗಾಳಿ ಅವಳದೇ ನೆನಪು ತರುವಂತೆ ಬೀಸುತ್ತಿತ್ತು….. ಕೆಲವೊಮ್ಮೆ ಅವಳು ನನ್ನನ್ನು ಪ್ರೀತಿಸದೆ ಇದ್ದರೆ ಎಂದು ಭಯವಾಗುತ್ತಿತ್ತು!!!!!!! “ಪ್ರೇಮ ಅನ್ನೊದು ಫಲಿಸಿದರೆ ತಾವರೆ ದಳದಂತೆ ಮೃದುವಾಗಿ ಇರುತ್ತದೆ. ವಿಫಲವಾದರೆ ಕತ್ತಿಗಿಂತ ಹರಿತವಾಗಿರುತ್ತದೆ”
ಆದರೆ ನಾನು ಗಮನಿಸಿದಂತೆ ತುಂಬಾ ಜನ ಓದುಗರು ಬರುತ್ತಿದ್ದರು.. ಬೇರೆಯವರಲ್ಲಿ ತುಂಬಾ ಗಂಭೀರವಾಗಿ ಇರುತ್ತಿದ್ದವಳು ನನ್ನನ್ನು ಕಂಡ ತಕ್ಷಣ ತುಂಬಾನೇ ಆಹ್ಲಾದಕರವಾಗಿ ಮನಸ್ಸು ಪ್ರಫುಲ್ಲ ಗೊಂಡಿರುವಂತೆ ಕಣ್ಣಿನಲ್ಲಿ ಆನಂದ ಛಾಯೆ ಎದ್ದು ಕಾಣುತ್ತಿತ್ತು…. ಅವಳು ಒಂದು ವೇಳೆ ನನ್ನನ್ನು ಪ್ರೀತಿಸದೆ ಇದ್ದರೂ ನಾನು ಅವಳದೇ ನೆನಪಿನಿಂದ ಒಂಟಿಯಾಗಿ ಜೀವನ ನಡೆಸುತ್ತೇನೆ !!! ತಪ್ಪಿಯೂ ಅವಳಿಗೆ ಯಾವುದೇ ರೀತಿಯ ನೋವು ನನ್ನಿಂದ ಆಗಬಾರದು ಎಂದು ಕೂಡಾ ನಿರ್ಧಾರ ಮಾಡಿದ್ದೆ.
“ಪ್ರೀತಿ ಎಂದರೆ ಸಂತೋಷ ಮಾತ್ರವೇ ಅಲ್ಲ.ಅದು ಮನುಷ್ಯ ಜೀವನದಲ್ಲಿ ನಿರಂತರವಾಗಿ ಸಂತೋಷವನ್ನು ನೀಡುವಂತಹುದು. ಪ್ರೀತಿ ಜೀವನಕ್ಕೆ ಸುಖವನ್ನು ನೀಡಬೇಕೆ ಹೊರತು ದುಃಖವನ್ನು ನೀಡಬಾರದು”
ಅವಳು ನನಗೆ ಸಿಕ್ಕಿಲ್ಲ ಎಂಬ ಮಾತ್ರಕ್ಕೆ ಅವಳಿಗೆ ತೊಂದರೆ ಕೊಡುವುದು, ಅವಳ ಬಗ್ಗೆ ಇಲ್ಲ ಸಲ್ಲದ ಅಪವಾದ ಹಾಕುವುದು, ಅವಳನ್ನು ಎತ್ತರಕ್ಕೆ ಬೆಳೆಯುವ ಅವಕಾಶವನ್ನು ಕುಂಠಿತಗೊಳಿಸುವಂತೆ ಮಾಡುವುದು ಒಳ್ಳೆಯ ಪುರುಷನ ಲಕ್ಷಣವಲ್ಲ ಎಂದು ನನಗೆ ಚೆನ್ನಾಗಿ ಗೊತ್ತಿದೆ…ಆ ರೀತಿ ನಾನು ಮಾಡಬಾರದು ಅಂದುಕೊಂಡಿದ್ದೆ……ಅವಳ ಮನಸ್ಸು ಒಪ್ಪಲಿಲ್ಲ ಅಂದ್ರೆ ಅದನು ವಿರೋಧ ಮಾಡುವ ಅಧಿಕಾರ ನನಗೆ ಇಲ್ಲ ಎಂದು ಗೊತ್ತು….ಅವಳ ಪರಿಸ್ಥಿತಿ ಅವಳ ಮನೆಯವರ ನಡವಳಿಕೆ ಅದಕ್ಕೆ ನಾನು ಶಿರ ಬಾಗುತ್ತೇನೆ ….. ಆದರೆ ನನ್ನ ಜೀವನ ಎನ್ನುವ ಶಬ್ದ ಕೋಶದಲ್ಲಿ ಪ್ರೇಮ ಎನ್ನುವ ಪದಕ್ಕೆ ಅರ್ಥ ಅವಳು ಆಗಿದ್ದಳು….ಅವಳ ಬಗ್ಗೆ ಯೋಚಿಸದೇ ಒಂದೇ ಒಂದು ದಿನವೂ ಕಳೆಯಲು ನನಗೆ ಸಾಧ್ಯವಿರಲಿಲ್ಲ..ಈ ಪ್ರಪಂಚದಲ್ಲಿ ನಾನು ಪ್ರಾಯಶಃ ಇನ್ಯಾರ ಬಗ್ಗೆಯೂ ಇಷ್ಟೊಂದು ಯೋಚಿಸಲಾರೆ………!!!!!
ಜೀವ ಜಗತ್ತಿನ ನಿಸರ್ಗದಲ್ಲಿ ಲಕ್ಷ ಜನರಲ್ಲಿ ಒಬ್ಬ ಅಥವಾ ಇಬ್ಬರು ಅವರು ಎನಿಸಿದಂತೆ ಆಗಬಹುದಾ ಏನೊ!!! ಅದು ಕೂಡ ನನಗೆ ಅನುಮಾನವಿದೆ…… ಯಾಕೆಂದರೆ ಯಾರೂ ಎನಿಸಿದಂತೆ ಆಗಲಾರದು ಅದು ನಡೆದ ಹಾಗೆ ಇವರು ಹೊಂದಿಕೊಂಡು ಹೋಗುತ್ತಾರೆ ಅಷ್ಟೆ… ಮತ್ತೆ ಹೇಳುತ್ತಾರೆ ನಾನು ಹೀಗೆಯೇ ಆಗಬೇಕು ಎಂದು ಕನಸ್ಸು ಕಂಡಿದ್ದೆ ಅಷ್ಟು ಪ್ರಯತ್ನ ಪಟ್ಟೆ ಇಷ್ಟು ಪ್ರಯತ್ನ ಪಟ್ಟೆ ಎಂದು….. ಪ್ರಕೃತಿ ನಡೆದಂತೆ ನಾವು ಅದಕ್ಕೆ ಹೊಂದಿಕೊಂಡು ಇರುವುದು…. ನಾವು ಎಲ್ಲಿಗೋ ಹೋಗಬೇಕು ಎಂದು ಅಂದುಕೊಂಡು ಇರುತ್ತೇವೆ ಹೊಗುವ ಸಮಯಕ್ಕೆ ನಮ್ಮ ಬಂಧುಗಳು ಅಥವಾ ಪ್ರೀತಿ ಪಾತ್ರರ ಮರಣದ ಸುದ್ದಿ ಬಂದರೆ ಹೋಗಲು ನಿಶ್ಚಯ ಮಾಡಿದ ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ ಅಲ್ಲವೇ? ಹಾಗೆಯೇ ಹುಟ್ಟು-ಸಾವು,ಪ್ರಕೃತಿ- ವಿಕೋಪಗಳು,ರೋಗ -ರುಜಿನಗಳು ಆಕಸ್ಮಾತ್ ಬಂದರೆ ನಾವು ಎನಿಸಿದ ಕೆಲಸ ಮಾಡಲು ಸಾಧ್ಯವಿಲ್ಲ. ಹೇಳುವುದು ಮಾತ್ರ ನಾನು ಹೀಗೆಯೇ ಆಗುತ್ತದೆ ಎಂದು ಮೊದಲೇ ಅಂದುಕೊಂಡಿದ್ದೇನೆ ಎಂದು. ಇದೆಲ್ಲ ಮನುಷ್ಯ ಪ್ರಾಣಿಯ ಬೊಗಳೆಗಳು……
“ನಾವು ಕೋಪಿಷ್ಟರಾಗಿದ್ದರೆ ಬೇರೆ ಯಾವ ವೈರಿಯು ಬೇಕಾಗಿಲ್ಲ…. ನಾವು ಬುದ್ಧಿವಂತರಾಗಿದ್ದಾರೆ ನಮಗೆ ಸಿರಿವಂತರ ಅಗತ್ಯವಿಲ್ಲ. ನಾವು ಹೇಗಿರಬೇಕೆಂಬ ವಿವೇಕವನ್ನು ನಾವೇ ಬೆಳೆಸಿಕೊಳ್ಳಬೇಕು”
ಈ ಮಾತನ್ನು ಯಾಕೆ ಹೇಳಿದೆ ಎಂದರೆ ನಾನು ಈ ನನ್ನ ಮನದನ್ನೆಯನು ನನ್ನ ಕೈಯಾರೇ ನಾನೇ ನನ್ನ ಬಾಳಿನಿಂದ ದೂರ ಮಾಡಿದೆ ………ಅಷ್ಟೇ ಆಗಿದ್ದರೆ ಈ ಪ್ರಕೃತಿ ನನ್ನನ್ನು ಕ್ಷಮಿಸಿ ಬಿಡಬಹುದಿತ್ತು.... ಆದರೆ ಆಗ ತಾನೇ ಬೀಜದಿಂದ ಇಣುಕಿ ಪ್ರಪಂಚವನ್ನು ನೋಡಬೇಕು ಎಂದು ಕಾಯುತ್ತಿರುವ ಮೊಳಕೆಯನ್ನು ಬರೀಗಾಲಿನಿಂದ ಅಲ್ಲ ಬೂಟು ಕಾಲಿನಿಂದ ತುಳಿದು ಹಾಕುವ ರೀತಿಯಲ್ಲಿ ಆ ಕೋಮಲ ಬಾಲೆಯನ್ನು ಬಾಯಿ ಮುಚ್ಚಿ ನಾನು ಸೇರಿ ಮೂರು ಜನ ರಾಕ್ಷಸರು ಎಂದರೆ ತಪ್ಪು ಆಗುತ್ತದೆ ಕಾರಣ ರಾಕ್ಷಸರು ಯಾರು ಹೆಣ್ಣನ್ನು ಬಲಾತ್ಕಾರ ಮಾಡಿ ವಶ ಪಡಿಸಿಕೊಂಡ ಪ್ರಕರಣ ನಾನು ಓದಿಲ್ಲ ಕೇಳಿಲ್ಲ… ರಾಕ್ಷಸರಿಗೂ ಹೆಣ್ಣು ತಾನಾಗಿ ಒಲಿದು ಬರಬೇಕು ಎಂಬುದು ತಿಳಿದಿದೆ.
ಆದರೆ ನಾಗರಿಕರು ಎನಿಸಿಕೊಂಡಿರುವ ನಾವು ಮೂರು ಪುರುಷ ರೂಪದ ಪಿಶಾಚಿಗಳು ಅವಳನ್ನು ಭೂಮಿ ಮೇಲೆ ಸ್ವಾಭಿಮಾನಿಯಾಗಿ ತಲೆ ಎತ್ತದಂತೆ ಹೊಸಕಿ ಬಿಟ್ಟೆವು !!!!!!!!!!!!
“ಗೆಳತನ ಮಾಡಿದರೆ ನಮಗಿಂತ ಶ್ರೇಷ್ಠರಾದವರೊಡನೆ ಮಾಡಬೇಕು ಇಲ್ಲವೇ ಸಮಾನರೊಡನೆ ಮಾಡಬೇಕು ಇವೆರಡು ಸಾಧ್ಯವಾಗದಿದ್ದಲ್ಲಿ ಏಕಾಂಗಿಯಾಗಿರುವುದೇ ಲೇಸು “ ಹೀಗೆಂದು ಗೌತಮ ಬುದ್ಧ ಹೇಳಿದ್ದಾರೆ…. ಇದು ತಿಳಿದು ನನಗಿಂತ ಶ್ರೇಷ್ಠರು ಅಲ್ಲದ ಸಮಾನರು ಅಲ್ಲದ ಕ್ರೂರಿಗಳೊಡನೆ ನಾನು ಸ್ನೇಹ ಮಾಡಿದೆ. ಸ್ನೇಹ ಮಾಡಿದ್ದು ಮಾತ್ರ ತಪ್ಪು ಅಲ್ಲ ನನ್ನ ಮಾನಸಿನ ಭಾವನೆಗಳನ್ನು ಹೇಳಿಕೊಂಡು ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಒಬ್ಬ ಹೆಣ್ಣು ಮಗಳ ಬಗ್ಗೆ ಅವರಲ್ಲಿ ಹೇಳಿ, ಅವಳನ್ನು ಅವರಿಗೆ ತೋರಿಸಿದೆ!!!!!
ಇದು ಕುರಿಯನ್ನು ಕಟುಕನಿಗೆ ತೋರಿಸಿದ ಹಾಗೆ ಆಯಿತು….
( ಮುಂದುವರಿಯುವುದು)
✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ