September 20, 2024

ಅಮ್ಮ… ಈ ಪದದಲ್ಲಿಯೇ ಅದ್ಭುತ ಶಕ್ತಿಯಡಗಿದೆ… ಈ ಪ್ರೀತಿಯಲ್ಲಿ ಜೇನಿನ ಸಿಹಿ ಇದೆ… ಮಮತೆಯ ಸವಿ ಇದೆ. ಅಮ್ಮನೇ ಪ್ರತಿಯೊಬ್ಬರ ಬದುಕಿಗೂ ಆಧಾರ. ಅಮ್ಮನೇ ಪ್ರತ್ಯಕ್ಷ ದೇವರು ಎಂಬ ಮಾತು ಬರೀ ಮಾತಲ್ಲ ಅಕ್ಷರಶಃ ನಿಜ. ತನ್ನ ಮಕ್ಕಳು, ತನ್ನ ಕುಟುಂಬ ಎಂದು ಸದಾ ಕಾಲ ಮನೆ, ಮಕ್ಕಳ ಬಗ್ಗೆಯೇ ಚಿಂತಿಸುವ ಅಮ್ಮ ರಜೆ, ಸಂಬಳ ಪಡೆಯದ ಶ್ರಮಜೀವಿ ಎಂದರೂ ತಪ್ಪಲ್ಲ. ಯಾವತ್ತೂ ಅವರು ತನಗಾಗಿ ಯೋಚಿಸುವವರೇ ಅಲ್ಲ. ಅನುಕ್ಷಣವೂ ಮಕ್ಕಳು, ಕುಟುಂಬ ಎಂದೇ ಯೋಚಿಸುತ್ತಿರುವ ತ್ಯಾಗಮಯಿ ಅಮ್ಮ.
ಅಮ್ಮನ ಮಾತೇ ಅಮೃತ… ಅಮ್ಮನ ಪ್ರೀತಿಯೇ ಸಂಜೀವಿನಿ .ತನ್ನ ರಕ್ತವನ್ನೇ ಬೆವರಂತೆ ಬಸಿದು ಕುಟುಂಬವನ್ನು ಕಾಪಾಡುವವರು ಅಮ್ಮ. ಇಂತಹ ದೇವರಂತಹ ಅಮ್ಮನಿಗೆ ಗೌರವ, ಕೃತಜ್ಞತೆ ಸಲ್ಲಿಸುವ ಸಲುವಾಗಿ ಪ್ರತಿವರ್ಷ ಮೇ ಎಂಟರಂದು ವಿಶ್ವ ತಾಯಂದಿರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

  •  ಪ್ರಕೃತಿಯು ನಮಗೆ ನೀಡಿದ ಶ್ರೇಷ್ಠ ಸಂಪತ್ತು ಅಂದರೆ ಅಮ್ಮ….
  •  ಅತ್ತಾಗ ಕಣ್ಣೀರು ಒರೆಸಿದವರು… ಬಿದ್ದಾಗ ಎದ್ದು ನಿಲ್ಲಿಸಿದವರು… ಗೆದ್ದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಅಮ್ಮ…. ಅಮ್ಮ ಗುರುವೂ ಹೌದು, ಸ್ನೇಹಿತೆಯೂ ಹೌದು… ಅಮ್ಮ ಎಂದರೆ ಅನಂತ……ಅಮ್ಮನೇ ಶ್ರೇಷ್ಠ..
  •  ಅಮ್ಮ… ತನ್ನ ಮಕ್ಕಳಿಗಾಗಿ ಬದುಕನ್ನೇ ಮುಡಿಪಾಗಿಟ್ಟಿರುತಾಳೆ.ಅಮ್ಮನ ತ್ಯಾಗ, ಶ್ರಮಕ್ಕೆ ಬೆಲೆಕಟ್ಟಲಾಗುವುದೇ ಇಲ್ಲ.
  •  ಉಸಿರು ನೀಡಿದ ದೇವರು ಅಮ್ಮ… ಸುಂದರ ಬದುಕಿನ ಮಾರ್ಗದರ್ಶಿ ಅಮ್ಮ. ಅಮ್ಮನಿಲ್ಲದೆ ಜಗವೇ ಇಲ್ಲ
  •  ಅಮ್ಮನೇ ಮಕ್ಕಳ ಜಗತ್ತು. ಇಡೀ ವಿಶ್ವದಲ್ಲಿಯೇ ಅಮ್ಮನಷ್ಟು ಅಮೂಲ್ಯ ಬೇರೆ ಏನೂ ಇಲ್ಲ. ಅಮ್ಮನ ವಾತ್ಸಲ್ಯವೇ ಬದುಕಿನ ಶಕ್ತಿ.

ಅಮ್ಮ ವಾತ್ಸಲ್ಯ ಮತ್ತು ಪ್ರೀತಿಯ ಪ್ರತಿಮೆ. ಅಮ್ಮನ ಮಡಿಲೇ ಮಗುವಿನ ಮೊದಲ ಜಗತ್ತು. ಮಗು ಅವಳ ಮಡಿಲಲ್ಲಿ ಕೂತು ಪ್ರಪಂಚದಲ್ಲಿ ಹೊಸ ಬಣ್ಣಗಳನ್ನು ಕಾಣುತ್ತದೆ.ಪ್ರತಿ ಮಗುವಿಗೆ ಅಮ್ಮ ಬಹಳ ವಿಶೇಷ ಮತ್ತು ಪ್ರಮುಖ ವ್ಯಕ್ತಿ. ವಾಸ್ತವವಾಗಿ ಅವಳು ಯಾರಿಗಾದರೂ ದೇವರ ಅತ್ಯಂತ ಅಮೂಲ್ಯ ಕೊಡುಗೆ. ಮಗು ಅವಳಿಂದ ಮಾತ್ರ ಜಗತ್ತನ್ನು ನೋಡುತ್ತದೆ. ಅವಳು ತನ್ನ ಮಗುವಿಗೆ ಸ್ನೇಹಿತೆ, ಪೋಷಕರು, ಮಾರ್ಗದರ್ಶಿ ಮತ್ತು ಶಿಕ್ಷಕಿ.ಅವಳು ತನ್ನ ಮಕ್ಕಳನ್ನು ಅತ್ಯಂತ ಕಾಳಜಿ, ಸಹಾನುಭೂತಿ ಮತ್ತು ಪ್ರೀತಿಯಿಂದ ಬೆಳೆಸುತ್ತಾಳೆ. ಅಮ್ಮ ಎಂಬ ಪದವು ನಮಗೆ ಭಾವನೆಗಳನ್ನು ತರುತ್ತದೆ ಮತ್ತು ಪ್ರತಿ ಮಗುವೂ ತನ್ನ ಅಮ್ಮನೊಂದಿಗೆ ಭಾವನಾತ್ಮಕವಾಗಿ ಬೆಳೆದಿರುತ್ತದೆ. ಮಗುವು ತನ್ನ ಅಮ್ಮನ ಮಡಿಲಲ್ಲಿ ಬೆಚ್ಚಗಿನ ಭಾವವನ್ನು, ಸುರಕ್ಷತೆಯನ್ನು ಅನುಭವಿಸುತ್ತದೆ.ಈ ಜಗತ್ತಿನಲ್ಲಿ ಅಮ್ಮನ ಪ್ರೀತಿ, ಪ್ರಾಮಾಣಿಕತೆ, ಸತ್ಯ ಮತ್ತು ಸಹಾನುಭೂತಿಯ ಸಂಕೇತವಾಗಿದೆ.ಮಗು ಕಾಯಿಲೆ ಬಿದ್ದಾಗ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವುದು ಅಮ್ಮ. ಅವಳು ಯಾವಾಗಲೂ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸಂತೋಷದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾಳೆ. ಅವಳು ಪ್ರತಿ ಕ್ಷಣವೂ ಮಕ್ಕಳ ಸಂತೋಷವನ್ನು ಬಯಸುತ್ತಾಳೆ… ಅಮ್ಮ ತನ್ನ ಅಗತ್ಯಗಳನ್ನು ರಾಜಿ ಮಾಡಿಕೊಳ್ಳುತ್ತಾಳೆ ಮತ್ತು ಮಕ್ಕಳ ಅಗತ್ಯಗಳನ್ನು ಮೊದಲು ನೋಡಿಕೊಳ್ಳುತ್ತಾಳೆ. ಜೀವನದಲ್ಲಿ ಸರಿಯಾದ ಕೆಲಸಗಳನ್ನು ಮಾಡಲು ಮತ್ತು ಸರಿಯಾದ ದಿಕ್ಕನ್ನು ಆಯ್ಕೆ ಮಾಡಲು ಅಮ್ಮ ಯಾವಾಗಲೂ ಮಾರ್ಗದರ್ಶನ ನೀಡುತ್ತಾಳೆ.

ಪ್ರತಿ ಮನೆಯಲ್ಲೂ ಬೆಳಿಗ್ಗೆ ಎದ್ದು ಮನೆ ಗುಡಿಸುವುದರಿಂದ ಹಿಡಿದು ಅದು ಇದು ಎನ್ನದೆ ಎಲ್ಲ ಕೆಲಸವನ್ನೂ ಅಮ್ಮ ನೋಡಿಕೊಳ್ಳುತ್ತಾಳೆ. ಜೊತೆಗೆ ಈ ಅಧುನಿಕ ಯುಗದಲ್ಲಿ ಹೊರಗೆ ಹೋಗಿ ದುಡಿದು ತರುವ ಕೆಲಸವನ್ನು ನಡೆಸುತ್ತಾಳೆ. ಅವಳು ಮನೆ ಮತ್ತು ವ್ಯವಹಾರ ಎರಡನ್ನೂ ನಿರ್ವಹಿಸಲು ಪಟ್ಟುಬಿಡದ ಛಲ ಹೊಂದಿದ್ದಾಳೆ. ದೈನಂದಿನ ಸವಾಲುಗಳು ಮತ್ತು ವ್ಯವಹಾರ ಮತ್ತು ಮನೆಯಲ್ಲಿ ಅಡೆತಡೆಗಳನ್ನು ಜಯಿಸಲು ಅಮ್ಮ ಅಪಾರವಾದ ಭಾವನಾತ್ಮಕ ಮತ್ತು ದೈಹಿಕ ಶಕ್ತಿಯನ್ನು ಹೊಂದಿದ್ದಾಳೆ. ಅವಳು ಒಂದೇ ಸಮಯದಲ್ಲಿ ಎಲ್ಲವನ್ನೂ ಹೇಗೆ ನಿರ್ವಹಿಸುತ್ತಾಳೆ ಎಂದು ಕೆಲವೊಮ್ಮೆ ನಾವು ಆಶ್ಚರ್ಯ ಪಡುತ್ತೇವೆ. ಆದರೆ ಪ್ರಕೃತಿ ಅವಳಿಗೆ ಈ ಶಕ್ತಿಯನ್ನು ನೀಡುತ್ತದೆ.ಅವಳ ಸಕಾರಾತ್ಮಕ ಮನೋಭಾವ ಮತ್ತು ಕೌಶಲ್ಯಗಳು ಸವಾಲಿನ ಸಮಯದಲ್ಲಿ ಶಾಂತವಾಗಿರಲು ಶಕ್ತಿಯನ್ನು ವಿಸ್ತರಿಸಿದೆ.

ಅಮ್ಮ ಪ್ರಕೃತಿ ಮಾತೆಯಂತೆ ಯಾವಾಗಲೂ ಪ್ರತಿಯಾಗಿ ಯಾವುದೇ ನಿರೀಕ್ಷೆಗಳಿಲ್ಲದೆ ಪ್ರೀತಿಯನ್ನು ಬೇಷರತ್ತಾಗಿ ನೀಡುತ್ತಾಳೆ. ಯಾರಿಗಾದರೂ ಜೀವಂತ ಸ್ಫೂರ್ತಿಯಾಗುವುದು ಸುಲಭವಲ್ಲ ಮತ್ತು ಹಾಗೆ ಮಾಡಲು ಸಕಾರಾತ್ಮಕತೆ, ಬುದ್ಧಿವಂತಿಕೆ, ವಿಶ್ವಾಸ ಮತ್ತು ಉತ್ಸಾಹದಿಂದ ತುಂಬಿದ ಜೀವನ ಅಗತ್ಯವಿದೆ. ಅಮ್ಮ ಎಂದರೆ ಸುಮ್ಮನೆ ಮಾತಲ್ಲ; ವಾಸ್ತವವಾಗಿ, ಪ್ರತಿಯೊಬ್ಬರ ಜೀವನದಲ್ಲಿ ಅಮ್ಮ ನಿಜವಾಗಿಯೂ ಪ್ರಮುಖ ವ್ಯಕ್ತಿ.ನಮ್ಮ ಜೀವನದಲ್ಲಿ ಅಮ್ಮನಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಏಕೆಂದರೆ ಅವಳಿಲ್ಲದೆ ನಮ್ಮ ಜೀವನ ಸಾಧ್ಯವಿಲ್ಲ; ಅವಳು ನಮ್ಮನ್ನು ಈ ಜಗತ್ತಿಗೆ ತರುತ್ತಾಳೆ.ನಮ್ಮ ಜನನದ ಸಮಯದಲ್ಲಿ ಅವಳು ಅಸಹನೀಯ ನೋವನ್ನು ಅನುಭವಿಸುತ್ತಾಳೆ ಆದರೆ ನಮಗಾಗಿ ಅವಳ ನೋವನ್ನು ಸಹಿಸಿಕೊಳ್ಳುವ ಮೂಲಕ ನಮಗೆ ಇನ್ನೂ ಜೀವ ನೀಡುತ್ತಾಳೆ.ಅವಳು ತನ್ನ ಇಡೀ ಜೀವನವನ್ನು ತ್ಯಾಗ ಮಾಡುತ್ತಾಳೆ ಮತ್ತು ತನ್ನ ಇಡೀ ಜೀವನವನ್ನು ನಮಗೆ ಅರ್ಪಿಸುತ್ತಾಳೆ; ಅವಳು ಯಾವಾಗಲೂ ತನ್ನ ದುಃಖಗಳನ್ನು ಮರೆತು ನಮ್ಮ ಸಂತೋಷದ ಬಗ್ಗೆ ಯೋಚಿಸುತ್ತಾಳೆ.ಮಕ್ಕಳು ಸಂತೋಷವಾಗಿರುವಾಗ ಅಮ್ಮನು ಸಂತೋಷವಾಗಿರುತ್ತಾಳೆ. ತಾಯಿಯಂತೆ ಯಾರೂ ನಿರ್ಭೀತಿಯಿಂದ ಇರಲು ಸಾಧ್ಯವಿಲ್ಲ ಏಕೆಂದರೆ ನಮಗೆ ಯಾವುದೇ ಸಮಸ್ಯೆ ಬಂದಾಗ ನಮ್ಮ ಮುಂದೆ ಮೊದಲು ನಿಂತು ನಮ್ಮನ್ನು ರಕ್ಷಿಸುವುದೇ ಅಮ್ಮ.

ಇಷ್ಟೆಲ್ಲಾ ಅಮ್ಮ ನಮಗೆ ನೀಡಿದ್ದಾರೆ ಹಾಗಿರುವಾಗ ಅಮ್ಮನನ್ನು ಅವರ ಮುದಿ ಪ್ರಾಯದಲ್ಲಿ ನಾವು ಪ್ರೀತಿಯಿಂದ ಮಮತೆಯಿಂದ ನೋಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವು ಹೌದು ಜವಾಬ್ದಾರಿಯೂ ಹೌದು… ಒಬ್ಬ ಅಮ್ಮ ಹತ್ತು ಮಕ್ಕಳನ್ನು ಸಾಕುತ್ತಾಳೆ… ಆದರೆ ಹತ್ತು ಮಕ್ಕಳಿಗೆ ಒಬ್ಬ ಅಮ್ಮನನ್ನು ನೋಡಿಕೊಳ್ಳಲು ಆಗುವುದಿಲ್ಲ ಎಂಬ ಗಾದೆಯನ್ನು ಸುಳ್ಳು ಮಾಡೋಣ…ಬರೀ ಅಮ್ಮನ ದಿನಾಚರಣೆ ಬಗ್ಗೆ ಲೇಖನ, ಕಥೆ, ಕವಿತೆ ,ಭಾಷಣ, ಹಾರೈಕೆಗಳು, ಸೆಲ್ಪಿ ಫೊಟೋ, ಹೇಳಿಕೆಗಳು ಇದಕ್ಕೆ ಮಾತ್ರ ಸೀಮಿತವಾಗದೆ ಅವನು ನೋಡಲಿ ಇವಳು ಕರೆದು ಕೊಂಡು ಹೋಗಲಿ ಎಂಬ ಗಲಾಟೆಯಲ್ಲಿ ಕಳೆದು ಹೋಗದೆ ಅಮ್ಮನ ಮಡಿಲಲ್ಲಿ ತಲೆಯಿಟ್ಟು ಮಲಗಿದ ನಾವು ಅಮ್ಮನ ಮುದಿ ಪ್ರಾಯದಲ್ಲಿ ನಮ್ಮ ಮಡಿಲಲ್ಲಿ ಅಮ್ಮನನ್ನು ಮಲಗಿಸಿ ಆರೈಕೆ ಮಾಡೋಣ ಎಂದು ಆಶಿಸುತ್ತೇನೆ.

ಎಲ್ಲ ನೋವು ಮರೆತು ತಮ್ಮ ತಮ್ಮ ಮಕ್ಕಳಿಗಾಗಿ ಹಗಲಿರುಳು ದುಡಿದು ಮಕ್ಕಳ ಏಳಿಗೆಗಾಗಿ ಮಿಡಿಯುತ್ತಿರುವ ಎಲ್ಲಾ ಅಮ್ಮಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು….

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *