ಮ್ಯಾಮ್, “ರೇಪ್ ಅಂದ್ರೆ ಏನು? ”
ನಾನು ತರಬೇತಿ ನೀಡಲು ಹೋದ ಶಾಲೆಯಲ್ಲೆಲ್ಲಾ ಈ ಒಂದು ಪ್ರಶ್ನೆಯನ್ನು ನನಗೆ ಕೇಳಲಾಗುತ್ತದೆ. ನಾವು ಜವಾಬ್ದಾರಿಯುತ ವಯಸ್ಕರಾಗಿ ನಮ್ಮ ಮೌನವನ್ನು ಮುರಿದು ಇಂತಹ ವಿಷಯಗಳ ಬಗ್ಗೆ ತೆರೆದ ಮನಸ್ಸಿನಿಂದ ಮಾತನಾಡುವ ಸಮಯ ಬಂದಿದೆ. ಮಕ್ಕಳಿಗೂ ಇಂತಹ ಜ್ಞಾನದ ಮಾಹಿತಿಯ ಅವಶ್ಯಕತೆಯಿದೆ.
ಜವಾಬ್ದಾರಿಯುತ ಪಾಲಕರಾಗಿ ಈ ವಿಷಯದ ಬಗ್ಗೆ ನಾವು ಮಕ್ಕಳೊಂದಿಗೆ ಮಾತನಾಡದಿದ್ದಲಿ ಅವರು ತಪ್ಪು ಹಾಗೂ ಸುಳ್ಳು ಮಾಹಿತಿ ಇತರರಿಂದ ಪಡೆಯಬಹುದು.
ಮಕ್ಕಳಲ್ಲಿ ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲದ ಸ್ವಭಾವ ಸರ್ವೇ ಸಾಧಾರಣವಾಗಿರುತ್ತದೆ. ಈ ಕುತೂಹಲಗಳಿಗೆ ಸರಿಯಾದ ದಾರಿ ತೋರದಿದ್ದಲಿ, ಅತ್ಯಾಚಾರಿಗಳು ಈ ಅವಕಾಶದ ಉಪಯೋಗ ಮಾಡಬಲ್ಲರು ಮತ್ತು ಮಕ್ಕಳು ಅವರಿಗೆ ಬಲಿಯಾಗಬಹುದು. ಇಂಥವುದನ್ನೆಲ್ಲಾ ತಡೆಗಟ್ಟಲು ಮತ್ತು ನಮ್ಮ ಮಕ್ಕಳ ಬಗ್ಗೆ ಕಾಳಜಿ ಇದ್ದಲ್ಲಿ ಅವರಿಗೆ ನಾವು ಸರಿಯಾದ ಮಾಹಿತಿಗಳನ್ನು ನೀಡಬೇಕು.
ಬಹುತೇಕ ಸಂದರ್ಭಗಳಲ್ಲಿ ಲೈಂಗಿಕ ಕಿರುಕುಳಕ್ಕೆ 5 ನೇ ವರ್ಷ ಪ್ರಾಯಕ್ಕೆ ಶುರುವಾಗಿ, ಸಾಧಾರಣ 12- 14 ವರ್ಷಕ್ಕೆ ಉತ್ತುಂಗ ಸ್ಥಿತಿಯಲ್ಲಿರುತ್ತದೆ. ಹೆಚ್ಚಿನಾಂಶ ಇಂತಹ ಕಿರುಕುಳ ನೀಡುವವರು ಪರಿವಾರದ ಪರಿಚಯಸ್ಥರೇ ಆಗಿರುತ್ತಾರೆ. ಕುಟುಂಬದ ನಂಬುಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಈ ಕಿರುಕುಳ ನೀಡುವವರು ಸ್ವಭಾವದಿಂದ ಪುಕ್ಕಲಾಗಿರುತ್ತಾರೆ.
ಮೊದಲಿಗೆ ಮಗುವಿನ ಸ್ನೇಹ ಮತ್ತು ವಿಶ್ವಾಸ ಪಡೆಯುತ್ತಾರೆ ಆಮೇಲೆ ನಿಧಾನವಾಗಿ ತಮ್ಮ ಬಣ್ಣ ಬಯಲು ಮಾಡುತ್ತಾರೆ ಇದಕ್ಕೆ 5 ತಿಂಗಳ ಮಗುವಿನಿಂದ 2 ವರ್ಷದ ಮಕ್ಕಳು ಬಲಿಯಾಗುತ್ತಾರೆ ಎಂಬುದು ನಮಗೆ ತಿಳಿದಿರಬೇಕು.
ವೈಯಕ್ತಿಕ ರಕ್ಷಣೆ ಬಗ್ಗೆ ಮಕ್ಕಳಿಗೆ ತಿಳಿ ಹೇಳುವಾಗ ಈ ಕೆಳಗಿನ ಅಂಶಗಳಿಗೆ ಗಮನ ನೀಡಬೇಕು ದೊಡ್ಡ ಮಕ್ಕಳಿಗೆ ಮಾತ್ರ ಇದನ್ನು ಸೀಮಿತಗೊಳಿಸಬಾರದು. ಯಾಕೆಂದರೆ ಲೈಂಗಿಕ ಕಿರುಕುಳಕ್ಕೆ ಐದು ವರ್ಷದ ಮಕ್ಕಳು ಕೂಡ ಬಲಿಯಾಗುತ್ತಾರೆ .
ಮುಖ್ಯವಾಗಿ ಮಗುವಿಗೆ ಇಷ್ಟವಿಲ್ಲದ ಸ್ಪರ್ಶವನ್ನು ಇಷ್ಟವಿಲ್ಲ ಎಂದು ಧೈರ್ಯವಾಗಿ ಹೇಳುವ ಅಥವಾ ಚೀರುವ ಮೂಲಕ ಅಭಿವ್ಯಕ್ತಿಗೊಳಿಸುವ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸಬೇಕಿದೆ. ನಮ್ಮ ಭಾರತೀಯ ಸಮಾಜದ ಮುಖ್ಯ ಸಮಸ್ಯೆ ಎಂದರೆ ಮಗುವಿಗೆ ಮೊದಲಿನಿಂದಲೇ ಅಮ್ಮ ಅಪ್ಪನ ಬಳಿ ನನಗೆ ಇಂಥ ಸಮಸ್ಯೆ ಇದೆ, ಇಂಥದ್ದು ಇಷ್ಟವಾಗುತ್ತಿಲ್ಲ ಎಂದು ಹೇಳುವ ಒಂದು ವಾತಾವರಣವನ್ನು ನಾವು ಹುಟ್ಟು ಹಾಕುವುದಿಲ್ಲ. ಮಗು ಏನೋ ತೊಂದರೆ ಇದೆ ಎಂದಾಗಲು ಪೋಷಕರು ಅದಕ್ಕೆ ಸ್ಪಂದಿಸದೆ ಇದ್ದರೆ ಮಗು ನಂಬಿಕೆ ಕಳೆದುಕೊಳ್ಳುತ್ತದೆ. ಶಾಲೆಯಲ್ಲಿ ಏನು ಮಾಡಿದೆ? ಯಾರು ಯಾರೊಂದಿಗೆ ಒಡನಾಡಿದೆ? ಸ್ನೇಹಿತರೊಂದಿಗೆ ಏನು ಮಾಡಿದೆ? ಎಂಬ ಚಿಕ್ಕಪುಟ್ಟ ವಿವರಗಳನ್ನು ಕೇಳುತ್ತಿದ್ದರೆ ಮಗುವಿಗೆ ಅಪ್ಪ ಅಮ್ಮನಿಗೆ ನನ್ನ ಬಗ್ಗೆ ಕಾಳಜಿ ಇದೆ, ಆಲಿಸುತ್ತಾರೆ ಎಂಬ ನಂಬಿಕೆ ಮೂಡುತ್ತದೆ. “ಹಾಗಿದ್ದರೆ ನನ್ನ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು ನನಗೆ ಯಾವುದು ಹಿತವೆನಿಸುವುದಿಲ್ಲ, ಏನು ಕಿರಿಕಿರಿ ಇರುತ್ತದೆ ಎಂದು ಹೇಳಿಕೊಳ್ಳಬಹುದು“ ಎಂದು ಮಗು ಧೈರ್ಯ ಮತ್ತು ಸುರಕ್ಷಿತ ಭಾವನೆ ತಾಳುತ್ತದೆ. ಸ್ನೇಹಿತರು ಕೈ ಕೈ ಹಿಡಿದುಕೊಳ್ಳುವುದು ಭುಜವನ್ನು ಬಳಸುವುದು ಒಳ್ಳೆಯ ಸ್ಪರ್ಶ, ಶಿಕ್ಷಕರು ಪ್ರೋತ್ಸಾಹಿಸುವಂತೆ ಬೆನ್ನು ತಟ್ಟಿದರೆ ಭುಜ ತಟ್ಟಿದರೆ ಒಳ್ಳೆಯ ಸ್ಪರ್ಶ, ಆದರೆ ಎದೆಯ ಭಾಗವನ್ನು ತೊಡೆಯನ್ನು ಮುಟ್ಟತೊಡಗಿದರೆ ಅದು ಕೆಟ್ಟ ಸ್ಪರ್ಶ ಹೀಗೆ ಉದಾಹರಣೆಗಳ ಮೂಲಕ ನಿಧಾನವಾಗಿ ಅರಿವು ಮೂಡಿಸಬಹುದು. ಮಗುವಿಗೆ ತನ್ನ ದೇಹದ ಬಗ್ಗೆ ಗೌರವ ಭಾವನೆ ತಳೆಯುವಂತೆ ತನ್ನ ಸ್ನೇಹಿತರ ಸಹಪಾಠಿಗಳ ದೇಹದ ಯಾವ ಭಾಗಗಳನ್ನು ಮುಟ್ಟಬಾರದು ಎಂದು ಅರಿವು ಮೂಡಿಸುವುದು ಬೇರೆಯವರ ದೇಹದ ಬಗ್ಗೆ ಚಿಕ್ಕಂದಿನಿಂದಲೇ ಗೌರವದ ಭಾವನೆ ಮೂಡಿಸುವುದು (ವಿಶೇಷವಾಗಿ ಗಂಡು ಮಕ್ಕಳಿಗೆ) ಬಹಳ ಅಗತ್ಯವಿದೆ ಮಗುವಿಗೆ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಅರಿವು ಮೂಡಿಸುವುದು ಮಾತ್ರವಲ್ಲದೆ ಆ ಕುರಿತು ಮಗು ಏನಾದರೂ ಹೇಳಿದಾಗ ಆಲಿಸಬೇಕು. ನಿರಂತರ ಮಾತುಕತೆ ಸಂವಾದದಲ್ಲಿರಬೇಕು.
“ನಿನ್ನ ತುಟಿಗಳು, ಎದೆ, ತೊಡೆಗಳ ಮಧ್ಯದ ಭಾಗ ಮತ್ತು ಹಿಂಭಾಗವನ್ನು ಯಾರೂಮುಟ್ಟಬಾರದು ಅದು ಕೇವಲ ನಿನಗೆ ಮಾತ್ರ ಸೇರಿದ್ದು, ನಿನ್ನದು” ಎಂಬುದನ್ನು ಒತ್ತಿ ಹೇಳಿಕೊಡಬೇಕು. ಯಾರಾದರೂ ಮುಟ್ಟಿದರೆ ದೃಢವಾಗಿ ಧೈರ್ಯದಿಂದ ಮುಟ್ಟಬೇಡ ಎಂದು ಹೇಳುವುದನ್ನು ಮಗುವಿಗೆ ಕಲಿಸಬೇಕು. ಮಗು ದೃಢತೆಯಿಂದ ಚೀರುವುದು ಮೊದಲನೇ ಹೆಜ್ಜೆ. ಮಗುವಿಗೆ ಅಲ್ಲಿಂದ ಅಥವಾ ಅಂತಹ ವ್ಯಕ್ತಿಯ ಹಿಡಿತದಿಂದ ತಪ್ಪಿಸಿಕೊಂಡು ಧೈರ್ಯದಿಂದ ಓಡಿಹೋಗುವಂತೆ ಹೇಳಿಕೊಡುವುದು ಎರಡನೇ ಹೆಜ್ಜೆ. ಇಂತದ್ದು ನಡೆದಾಗ ಮಗು ತಕ್ಷಣವೇ ಅಮ್ಮ ಅಥವಾ ಅಪ್ಪ ಅಥವಾ ಮಗುವಿಗೆ ಸುರಕ್ಷಿತ ಎನಿಸಬಲ್ಲ ಕುಟುಂಬದ ಹಿರಿಯರ ಬಳಿ ಹೇಳಿಕೊಳ್ಳುವುದನ್ನು ಕಲಿಸುವುದು ಮೂರನೇ ಹೆಜ್ಜೆ. ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಅದು ನಡೆದ ಎಷ್ಟೋ ದಿನಗಳ ನಂತರ ಬೆಳಕಿಗೆ ಬರಲು ಮುಖ್ಯ ಕಾರಣವೆಂದರೆ ಮಗು ಇಂಥ ಕ್ರೂರ ಸ್ಪರ್ಶದ ಬಗ್ಗೆ ಮುಕ್ತವಾಗಿ ಅಮ್ಮನಲ್ಲಿ ಅಥವಾ ಅಪ್ಪನಲ್ಲಿ ಹಂಚಿಕೊಳ್ಳುವ ವಾತಾವರಣ ಮನೆಯಲ್ಲಿ ಇಲ್ಲದೇ ಇರುವುದು. ಎಂಥಹುದೇ ರೀತಿಯ ಕೆಟ್ಟ ಸ್ಪರ್ಶಕ್ಕೆ ಒಳಗಾದಾಗಲೂ ತಕ್ಷಣವೇ ಮಗು ಮನೆಯಲ್ಲಿ ಅಮ್ಮ ಮತ್ತು ಅಪ್ಪನೊಂದಿಗೆ ಹಂಚಿಕೊಳ್ಳುವ ವಾತಾವರಣವನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಪೋಷಕರು ಗಂಭೀರವಾಗಿ ಆಲೋಚಿಸಬೇಕಿದೆ. ಮಗು ಎಷ್ಟು ಬೇಗನೆ ತನಗಾದ ಕೆಟ್ಟ ಸ್ಪರ್ಶದ ಬಗ್ಗೆ ಹಂಚಿಕೊಳ್ಳುವುದು ಅಷ್ಟು ಬೇಗನೆ ಮಗುವಿಗೆ ವೈದ್ಯಕೀಯ ಚಿಕಿತ್ಸೆ ನೀಡಿ ಆ ಆಘಾತದಿಂದ ಹೊರಬರುವಂತೆ ಮಾಡಬಹುದು. ನೆನಪಿಡಿ ಇದೆಲ್ಲ ಹೆಣ್ಣು ಮಗುವಿಗೆ ಮಾತ್ರವಲ್ಲ ಗಂಡು ಮಗುವಿಗೂ ಅನ್ವಯಿಸುತ್ತದೆ ಮತ್ತು ಗಂಡು ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತದೆ ಹೀಗಾಗಿ ಕೆಟ್ಟ ಸ್ಪರ್ಶದ ಬಗ್ಗೆ ಹೇಳಿಕೊಳ್ಳುವುದು ಸಾಮಾಜಿಕ ಕಳಂಕವೆಂಬ ಭಾವನೆಯಿಂದ ಮೊದಲು ಪೋಷಕರು ಹೊರಗೆ ಬರಬೇಕಿದೆ ಜೊತೆಗೆ ಮಗುವಿನ ಮನಸ್ಸನ್ನು ಓದಲು ಮಗುವಿನ ಭಾವನೆಗಳನ್ನು ಗೌರವಿಸುವುದನ್ನು ಪೋಷಕರು ಕಲಿಯಬೇಕಿದೆ. ಮತ್ತು ನಿನಗೆ ಏನೇ ಆದರೂ ನಾನಿದ್ದೇನೆ ನಾನು ಎಲ್ಲವನ್ನು ಆಲಿಸುತ್ತೇನೆ ಎಂಬ ಸುರಕ್ಷಿತ ಭರವಸೆಯನ್ನು ಪೋಷಕರು ಮಗುವಿನಲ್ಲಿ ಮೂಡಿಸಬೇಕಿದೆ.
ಕೆಲವು ಮಿಥ್ಯೆಗಳು: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕೇವಲ ಪಾಶ್ಚಿಮಾತ್ಯ ದೇಶಗಳಲ್ಲಿ ನಮ್ಮ ಭಾರತದಲ್ಲಿ ಅಲ್ಲ . ಇದೆಲ್ಲಾ ಸ್ಲಂ ಗಳಲ್ಲಿ ನಡೆಯುತ್ತದೆ ಮಾಧ್ಯಮ ಮತ್ತು ಶ್ರೀಮಂತ ವರ್ಗದಲ್ಲಿ ನಡೆಯುವುದಿಲ್ಲ ಹುಡುಗಿಯರು ಮಾತ್ರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಮನೆಯಲ್ಲಿ ಅಪ್ಪ ಅಮ್ಮ ಸರಿಯಾಗಿಲ್ಲದಿದ್ದರೆ ಒಡೆದ ಕುಟುಂಬಗಳಲ್ಲಿ ಮಾತ್ರ ನಡೆಯುತ್ತೆ. ಲೈಂಗಿಕ ದೌರ್ಜನ್ಯ ಎಸಗುವವರು ಅಪರಿಚಿತರು. ಹೀಗಾಗಿ ಅಪರಿಚಿತರೊಂದಿಗೆ ಎಚ್ಚರಿಕೆಯಿಂದ ಇರಬೇಕು. ಮಗುವಿಗಿಂತ ದೊಡ್ಡವರು ಮುಟ್ಟಿ, ಮುದ್ದಿಸಿದರೆ ತಪ್ಪೇನಿಲ್ಲ. ಮಗು ಇದರಿಂದ ಸಾಮಾಜಿಕ ನಡವಳಿಕೆಯನ್ನು ಕಲಿಯುತ್ತದೆ.
ವಾಸ್ತವ ಹೀಗಿದೆ: ಲೈಂಗಿಕ ದೌರ್ಜನ್ಯ ನಮ್ಮಲ್ಲಿಯೂ ತುಂಬಾ ವ್ಯಾಪಕವಾಗಿದೆ ಆದರೆ ಬೆಳಕಿಗೆ ಬರುತ್ತಿಲ್ಲ. ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ನಮ್ಮ ಸಮಾಜವಿಲ್ಲ. ಲೈಂಗಿಕ ದೌರ್ಜನ್ಯಕ್ಕೆ ಯಾವುದೇ ವರ್ಗ, ಅಂತಸ್ತುಗಳ ಭೇದವಿಲ್ಲ ಹುಡುಗಿಯರು ಮಾತ್ರವಲ್ಲ, ಗಂಡು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ವ್ಯಾಪಕವಾಗಿ ನಡೆಯುತ್ತೆ. ಬೆಚ್ಚನೆಯ ಕೌಟುಂಬಿಕ ಪರಿಸರದಲ್ಲಿಯೂ ಲೈಂಗಿಕ ದೌರ್ಜನ್ಯ ನಡೆಯಬಹುದು. ಅಪರಿಚಿತರು ಮಾತ್ರವಲ್ಲ ಹೆಚ್ಚಿನ ವೇಳೆ ಪರಿಚಿತರು ತೀರಾ ಹತ್ತಿರದ ಬಂಧುಗಳೇ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ. ಮನೆಯೊಳಗೆ ನಮ್ಮ ಮೂಗಿನ ಕೆಳಗೇ ನಮ್ಮ ಮಗುವಿನ ಮೇಲೆ ಯಾರೋ ತೀರಾ ಹತ್ತಿರದವರೇ ಮುದ್ದಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ ಎಂಬುದನ್ನು ಮರೆಯಬಾರದು. ಮಗುವನ್ನು ಮುದ್ದಿಸುವಾಗಲೂ ದೊಡ್ಡವರು ದೇಹದ ಕೆಲವು ಭಾಗಗಳನ್ನು ಮುಟ್ಟಲೇ ಬಾರದು. ಪ್ರತಿ ಮಗುವಿಗೂ ತನ್ನ ದೇಹದ ಮೇಲೆ ಹಕ್ಕಿರುತ್ತದೆ.
–✍️ಶ್ರೀಮತಿ ವನಿತಾ ಅರುಣ್ ಭಂಡಾರಿ, ಬಜ್ಪೆ
ಹದಿಹರೆಯದ ಶಿಕ್ಷಣ
ಬಾಲ್ಯದಿಂದ ಹದಿ ಹರೆಯಕ್ಕೆ ಕಾಲಿಡುವ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ವಿವಿಧ ರೀತಿಯ ಬದಲಾವಣೆಗಳು ಕಂಡುಬರುತ್ತವೆ. ಹದಿಹರೆಯದ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ವಯಸ್ಸಿಗೆ ಬೇಕಾದ ಮಾಹಿತಿಯನ್ನು ನೀಡುವುದು ಮಾತ್ರವಲ್ಲದೆ , ಸೂಕ್ಷ್ಮ ವಿಷಯಗಳ ಬಗ್ಗೆ ತಿಳುವಳಿಕೆ ಕೊಡಬೇಕಾದ ಅಗತ್ಯವೂ ಇದೆ. ಹದಿಹರೆಯದ ಮಾಹಿತಿಯನ್ನು ನುರಿತ ತರಬೇತಿ ಪಡೆದವರ ಮೂಲಕ ಶಾಲೆಯಲ್ಲಿಯೇ ಈ ಬಗ್ಗೆ ಮಾಹಿತಿ ಒದಗಿಸುವ ಮುಖಾಂತರ ಮಕ್ಕಳು ತಮ್ಮ ಮುಂದಿನ ಜೀವನದಲ್ಲಿ ಬರುವ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಿದೆ.
5 ನೇ ತರಗತಿಯಿಂದ ಪಿ ಯು ಸಿ ಯ ವರೆಗಿನ ಹೆಣ್ಣು ಮಕ್ಕಳಿಗೆ ಹದಿಹರೆಯದಲ್ಲಾಗುವ ದೈಹಿಕ ಬೆಳವಣಿಗೆಯ ವಿವಿಧ ಹಂತಗಳು,ಮಾನಸಿಕ ಬೆಳವಣಿಗೆ, ಭಾವಾನಾತ್ಮಕ ಮತ್ತು ಸಾಮಾಜಿಕ ಬದಲಾವಣೆಗಳು, ವೈಯಕ್ತಿಕ ಶುಚಿತ್ವ , ಮಕ್ಕಳ ಹಕ್ಕುಗಳ ಬಗ್ಗೆಯೂ ಮಾಹಿತಿ ಒದಗಿಸಲಾಗುವುದು.
ಈ ವಿಷಯಗಳ ಬಗ್ಗೆ ಆಯಾ ಶಾಲೆಗಳಲ್ಲಿಯೇ ಕಾರ್ಯಾಗಾರದ ಮೂಲಕ ಮಾಹಿತಿ ನೀಡಲಾಗುವುದು.