September 20, 2024

ಹೆಣ್ಣು

“ಹೆಣ್ಣು ಸಂಸಾರದ ಕಣ್ಣು”, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಹೀಗೆ ಹೆಣ್ಣಿನ ಬಗೆಗೆ ಅನೇಕ ಲೋಕೋಕ್ತಿಗಳನ್ನು ನಾವು ಕೇಳುತ್ತ ಬಂದಿದ್ದೇವೆ. “ ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ” ಮಹಿಳೆಯರನ್ನು ಎಲ್ಲಿ ನಾವು ಪೂಜಿಸುತ್ತೇವೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸ್ತ್ರೀಯನ್ನು ಆರಾಧಿಸುವುದು ನಮ್ಮ ದೇಶದ ಸಂಸ್ಕೃತಿ. ಆದರೆ ಇಂದು ನಮ್ಮ ಸಮಾಜದಲ್ಲಿ ನಾವು ಹೆಣ್ಣಿಗೆ ಎಷ್ಟು ಗೌರವ, ಬೆಲೆ ನೀಡುತ್ತಿದ್ದೇವೆ?

ಪ್ರತಿಯೊಬ್ಬರ ಜೀವನದಲ್ಲಿ ಹೆಣ್ಣಿನ ಪಾತ್ರ ಬಹಳ ಮಹತ್ವದ್ದು. ಹುಟ್ಟಿನಿಂದ ಸಾಯವವರೆಗೂ ನಾವು ಹೆಣ್ಣನ್ನು ಅವಲಂಬಿಸಿದ್ದೇವೆ . ಈ ಜಗದ ಕಾರಣವೇ ಹೆಣ್ಣು. ತಾಳ್ಮೆ, ತ್ಯಾಗದ ಪ್ರತೀಕವೇ ಹೆಣ್ಣು.

ಆದರೆ ಹೆಣ್ಣೆಂದರೆ ಎಲ್ಲರಿಗೂ ಅಸಡ್ಡೆ, ಹೆಣ್ಣು ಮಗು ಜನಿಸಿದರಂತೂ ಕೆಲವರು ದರಿದ್ರ ಅಂದುಕೊಳ್ಳುವರು. ಇಂದು ನಮ್ಮ ಕಣ್ಣ ಮುಂದೆಯೇ ಹೆಣ್ಣಿನ ಮೇಲೆ ಅನೇಕ ದೌರ್ಜನ್ಯಗಳು ನಡೆಯುತ್ತಿದ್ದರೆ ನಾವೇನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದೇವೆ. ಅವಳಿಗೆ ಸಹಾಯ ಮಾಡುವ ಬದಲಾಗಿ ಕೆಟ್ಟ ಪಟ್ಟ ಕಟ್ಟುವ ಜನರಿದ್ದಾರೆ.

ಕಳೆದೆರಡು ವರ್ಷಗಳಲ್ಲಿ ನಾವು ಕಂಡ ಲಾಕ್ಡೌ ನ್ ಸಂದರ್ಭದಲ್ಲಿ ಎಲ್ಲಾ ಕೆಲಸ ಕಾರ್ಯಗಳು ಸ್ಥಬ್ಧವಾಗಿದ್ದವು, ಎಲ್ಲ ಉದ್ಯೋಗಸ್ಥರು ಕೆಲಸವಿಲ್ಲದೆ ಮನೆಯಲ್ಲಿ ಆರಾಮವಾಗಿ ಕೂತಿದ್ದರು, ಆದರೆ ನಮ್ಮ ಮನೆಯಲ್ಲಿ ಯಂತ್ರದಂತೆ ವಿಶ್ರಾಂತಿಯಿಲ್ಲದೆ ನಿರಂತರವಾಗಿ ಕೆಲಸ ಮಾಡುತ್ತ ನಮ್ಮ ಬೇಕು ಬೇಡಗಳನ್ನು ನೋಡುತ್ತಿದ್ದವಳು ಒಬ್ಬ ಹೆಣ್ಣು. ಎಲ್ಲರೂ ತಮ್ಮ ಉದ್ಯೋಗದಿಂದ ನಿವೃತ್ತಿ ಹೊಂದಿದರೂ, ಯಾವುದೇ ನಿವೃತ್ತಿ ಜೀವನವನ್ನು ಹೊಂದದೆ ಜೀವನಪೂರ್ತಿ ಇನ್ನೊಬ್ಬರಿಗಾಗಿ ಬದುಕುವ ನಿಸ್ವಾರ್ಥ ಜೀವಿ ಹೆಣ್ಣು.

ತಾನು ಹುಟ್ಟಿ ಬೆಳೆದ ಮನೆಯನ್ನು, ಆಡಿ ಬೆಳೆದ ಊರನ್ನು ತೊರೆದು, ಇಷ್ಟವಿಲ್ಲದಿದ್ದರೂ ಕೈ ಹಿಡಿದವನ ಜೊತೆಗೆ ಸಾಗಿ ತನ್ನ ಹೊಸ ಜೀವನವನ್ನು ಅಪರಿಚಿತರ ಜೊತೆ ಪ್ರಾರಂಭ ಮಾಡುವಳು. ತನಗಿದ್ದ ಅಲ್ಪ ಸ್ವಲ್ಪ ಸ್ವಾತಂತ್ರ್ಯವನ್ನು ಬದಿಗಿಟ್ಟು ಇನ್ನೊಬ್ಬರಿಗಾಗಿ ದುಡಿಯುವಳು. ಅತ್ತೆಯ ಕೊಂಕು ಮಾತುಗಳನ್ನು ಕೇಳಿ ಮನನೊಂದಿದ್ದರೂ ಏನೋ ಆಗದಂತೆಯೆ ಎಲ್ಲರ ಜೊತೆಗೂ ನಗುನಗುತ್ತಾ ಮಾತನಾಡುವ ಏಕೈಕ ಜೀವ ಸ್ತ್ರೀ. ಹೆಣ್ಣು ಮಗುವಿಗೆ ಜನ್ಮ ನೀಡಿದಳೆಂದು ಎಲ್ಲರಿಂದ ತಿರಸ್ಕರಿಸಲ್ಪಡುವಳು.

ಮಕ್ಕಳಾದ ಮೇಲೆ ತನ್ನ ಮಕ್ಕಳಿಗೋಸ್ಕರ ಜೀವವನ್ನೇ ಮುಡಿಪಾಗಿಡುವಳು. ತಾನು ಪಟ್ಟ ಕಷ್ಟ ತನ್ನ ಮಕ್ಕಳಿಗೆ ಬರಬಾರದೆಂದು ಎಲ್ಲಾ ನೋವನ್ನು ತಾನು ನುಂಗಿಕೊಂಡು ಮಕ್ಕಳೊಂದಿಗೆ ತಾನು ಮಗುವಾಗುವಳು.

ಹೀಗೆ ಹೆಣ್ಣೆಂದರೆ ಅದೊಂದು ಅದ್ಭುತ ಶಕ್ತಿ, ಭಕ್ತಿ. ನಾವಿಂದು 21ನೇ ಶತಮಾನದಲ್ಲಿದ್ದರೂ ಹೆಣ್ಣಿನ ಮೇಲಿನ ಶೋಷಣೆ ನಿಂತಿಲ್ಲ. ಸ್ತ್ರೀಯರಿಗೆ ಸಮಾನತೆ ಎಂಬ ಕೂಗು ಕೇವಲ ಬಾಯಿ ಮಾತಿನಲ್ಲೇ ಉಳಿದಿದೆ. ತನ್ನ ಮನೆಯವರಿಂದಲೇ, ತನ್ನ ರಕ್ತ ಸಂಬಂಧದವರಿಂದಲೇ ದೌರ್ಜನ್ಯ ನಡೆದರೂ ಏನೋ ಮಾಡಲಾಗದ ಸ್ಥಿತಿಯಲ್ಲಿ ಅನೇಕ ಹೆಣ್ಣು ಮಕ್ಕಳು ನಮ್ಮ ಸಮಾಜದಲ್ಲಿದ್ದರೆ .

ಹೆಣ್ಣು ಎಂದು ಗೌರವ ಕೊಡಲಾಗದಿದ್ದರೂ, ಆಕೆಯೂ ಒಬ್ಬ ಮನುಷ್ಯಳು ಎಂದು ಗೌರವಿಸುವಂತಾಗಲಿ.

 

✍️ ವೈಶಾಲಿ ಭಂಡಾರಿ ಬೆಳ್ಳಿಪ್ಪಾಡಿ.

Leave a Reply

Your email address will not be published. Required fields are marked *