ಮಕ್ಕಳಿಗೆ ಪ್ರೀತಿ, ಸುರಕ್ಷತೆ ಸಿಗಬೇಕೆಂದರೆ ತಾತ-ಅಜ್ಜಿ ಬೇಕೇಬೇಕು, ಇಲ್ಲದಿದ್ದರೆ ಏನಾಗುತ್ತೆ ಗೊತ್ತಾ?
ಈಗ ತುಂಬಾ ಪೋಷಕರಿಗೆ ಅದರಲ್ಲೂ ಇಬ್ಬರೂ ದುಡಿಯುತ್ತಿದ್ದರೆ ಒಂದು ಅಥವಾ ಎರಡು ಮಕ್ಕಳನ್ನು ಸಾಕುವುದು ತುಂಬಾ ಕಷ್ಟವಾಗುವುದು. ಈ ಕಡೆ ಜಾಬ್ ಬಿಡೋಕೆ ಆಗಲ್ಲ, ಆ ಕಡೆ ಮಕ್ಕಳ ಬಗ್ಗೆ ಆತಂಕ, ಕೊರಗು ಇದ್ದೇ ಇರುತ್ತದೆ.
ಸ್ವಲ್ಪ ದುಡ್ಡು ಕೊಟ್ಟು ಮಕ್ಕಳನ್ನು ನೋಡಿಕೊಳ್ಳಲು ಇರಿಸಿದರೂ ಅವರು ಪ್ರೀತಿಯಿಂದ ನೋಡಿಕೊಳ್ಳುತ್ತಾರೋ ಅಥವಾ ಇಲ್ವಾ ಎಂಬ ಆತಂಕ ಹಾಗಾಗಿ ಅವರನ್ನು ಮಾನಿಟರ್ ಮಾಡಲು ಸಿಸಿಟಿವಿ ಅಳವಡಿಕೆ, ಇನ್ನು ಡೇ ಕೇರ್‌ನಲ್ಲಿ ಬಿಡೋಣ ಅಂದ್ರೆ ಅಲ್ಲಿ 20-30 ಮಕ್ಕಳಿರುತ್ತದೆ, ಅಲ್ಲಿ ಮಕ್ಕಳು ಬೆಳೆಯುತ್ತಾರೆ, ಆದರೆ ಪ್ರೀತಿ ಸಿಗಲ್ಲ, ಅಲ್ಲದೆ ಹಲವಾರು ಡೇ ಕೇರ್ ಗಳ ಬಗ್ಗೆ ಕಂಪ್ಲೇಂಟ್ ಕೇಳುವಾಗ ನಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ, ಗಲಾಟೆ ಮಾಡದೆ ನಿದ್ದೆ ಮಾಡಲಿ ಎಂಬ ಕಾರಣಕ್ಕೆ ಮಾತ್ರೆ ಹಾಕುತ್ತಾರಾ? ಎಂಬೆಲ್ಲಾ ಸಂಶಯ ಮೂಡುವುದು.
ಒಟ್ಟಿನಲ್ಲಿ ಇತ್ತ ಮಕ್ಕಳನ್ನು ನೋಡಿಕೊಳ್ಳಲು ಬಂದವರ ಮೇಲೂ ಪೂರ್ಣ ನಂಬಿಕೆ ಇರಲ್ಲ, ಅತ್ತ ಡೇ ಕೇರ್, ಕ್ರೀಚ್‌ಗಳ ಮೇಲೂ ನಂಬಿಕೆ ಇರಲ್ಲ ಆದರೂ ಮಕ್ಕಳನ್ನು ಬಿಡಲೇಬೇಕಾದ ಅನಿವಾರ್ಯತೆ, ಇಲ್ಲಿದ್ದರೆ ಕೆಲಸ ಬಿಡಬೇಕಾಗುತ್ತದೆ, ಅದು ಸಾಧ್ಯವಿಲ್ಲದ ಮಾತು.. ಹೀಗೆ ನಾವು ಬೇಸರಪಟ್ಟುಕೊಂಡು-ನಮ್ಮ ಮಕ್ಕಳು ನಮ್ಮ ಜೊತೆ ಸಮಯ ಕಳೆಯಲು ಹಂಬಲಿಸುತ್ತಾ ಬೆಳೆಯಬೇಕಾದ ಅನಿವಾರ್ಯತೆ ಇಂದು ಎಷ್ಟೋ ಕುಟುಂಬಗಳಲ್ಲಿ ಇವೆ, ನಿಜ ತಾನೆ?
ಅದೇ ಮನೆಯಲ್ಲಿ ಅಜ್ಜಿ-ತಾತ ಇರುವ ಮಕ್ಕಳನ್ನು ನೋಡಿ, ಅವರಿಗೆ ಅಜ್ಜಿ-ತಾತ ಇದ್ದರೆ ಸಾಕು, ಇನ್ನು ಆ ಪೋಷಕರಿಗೆ ಕೆಲಸ ಹೋದ ಮೇಲೆ ಮಕ್ಕಳ ಹೊಟ್ಟೆ ಕೊಟ್ಟಿರುತ್ತಾರಾ? ಚೆನ್ನಾಗಿ ನೋಡಿಕೊಂಡಿರುತ್ತಾರಾ ಎಂಬ ಯಾವ ಆತಂಕವೂ ಇರಲ್ಲ, ಆರಾಮವಾಗಿ ಟೆನ್ಷನ್ ಫ್ರೀಯಾಗಿ ಕೆಲಸ ಮುಗಿಸಿ ಮನೆಗೆ ಬರಬಹುದು, ಮಕ್ಕಳು ಕೂಡ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುವ ಅಜ್ಜ-ಅಜ್ಜಿ ಜೊತೆ ಖುಷಿ-ಖುಷಿಯಾಗಿ ಇರುತ್ತಾರೆ, ನೀವು ಮನೆಗೆ ಬಂದ ಮೇಲೂ ಅವರು ನಿಮ್ಮ ಬಳಿ ಬಂದು ಆಡಲು ಬಯಸುವುದಿಲ್ಲ, ಅಜ್ಜ-ಅಜ್ಜಿ ಜೊತೆನೇ ಇರುತ್ತಾರೆ… ಅಜ್ಜ-ಅಜ್ಜಿ ಬಳಿ ಸಿಗುವ ಸುರಕ್ಷತೆ-ಪ್ರೀತಿ ಮಕ್ಕಳಿಗೆ ಬೇರೆಲ್ಲಿ ಸಿಗಲು ಸಾಧ್ಯ? ಅಲ್ವಾ? ಸಂಶೋಧನೆಗಳು ಅದೇ ಹೇಳುತ್ತಿವೆ, ಮಕ್ಕಳಿಗೆ ಅವರ ಅಜ್ಜ-ಅಜ್ಜಿ ಪ್ರೀತಿ ಅವಶ್ಯಕವಂತೆ.
ನಮ್ಮ ಮಕ್ಕಳು ಅಜ್ಜ-ಅಜ್ಜಿ ಜೊತೆ ಇರಲು ಇಷ್ಟಪಡಲು ಪ್ರಮುಖ ಕಾರಣಗಳಿವು:
1. ಅವರು ಮಕ್ಕಳ ಮಾತು ಕೇಳುತ್ತಾರೆ
ನಿಮ್ಮ ಅಪ್ಪ-ಅಮ್ಮನಿಗೆ ಮೊಮ್ಮಗ/ಮೊಮ್ಮಗಳು ಹೇಳಿದಂತೆ ಕೇಳಬೇಡ ಎಂದು ಎಷ್ಟೇ ಹೇಳಿ ಅವರು ಕೇಳಲ್ಲ, ನಮ್ಮ ಮೊಮ್ಮಕ್ಕಳು ಹೇಳಿದ್ದಕ್ಕೆ ಸೈ ಎನ್ನುತ್ತಾರೆ, ನೀವು ಮಕ್ಕಳಿಗೆ ಐಸ್‌ಕ್ರೀಂ ಕೊಡಬೇಡಿ ಎಂದು ಹೇಳಿದ್ದರೆ ಮಗು ಕೇಳ್ತಾ ಇದೆಯಲ್ಲಾ ಎಂದು ನಿಮಗೆ ಕಾಣದಂತೆ ಐಸ್‌ಕ್ರೀಮ್ ತಂದು ಕೊಡುತ್ತಾರೆ…ಮೊಮ್ಮಕ್ಕಳು ಏನು ಹೇಳುತ್ತಾರೋ ಎಲ್ಲವನ್ನೂ ಕೇಳುವುದು ಅಜ್ಜ-ಅಜ್ಜಿ ಮಾತ್ರ, ಪೋಷಕರಾದ ನಾವು ಕೇಳಲ್ಲ, ಈ ಕಾರಣಕ್ಕೆ ಮಕ್ಕಳಿಗೆ ಅಜ್ಜ-ಅಜ್ಜಿ ಅಂದ್ರೆ ಪ್ರೀತಿ ಹೆಚ್ಚು.
2. ಮನೆಯಲ್ಲಿ ಅಜ್ಜ-ಅಜ್ಜಿಯಿದ್ದರೆ ಮಕ್ಕಳು ಸುರಕ್ಷತೆಯ ಕೈಗಳಲ್ಲಿ ಇದ್ದಂತೆ
ಎಲ್ಲಾ ಸಮಯದಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ನೋಡಿಕೊಂಡು ಕೂರಲು ಪೋಷಕರಿಗೆ ಖಂಡಿತ ಸಾಧ್ಯವಾಗಲ್ಲ, ಆದರೆ ಅಜ್ಜ-ಅಜ್ಜಿ ಹಾಗಲ್ಲ, ಮೊಮ್ಮಕ್ಕಳ ಪ್ರತಿಯೊಂದು ಚಟುವಟಿಕೆ ಗಮನಿಸುತ್ತಾರೆ, ಎಷ್ಟು ಪ್ರೀತಿ ತೋರಿಸುತ್ತಾರೋ ಅಷ್ಟೇ ಗದರುತ್ತಾರೆ, ಹೇ.. ಮೇಲೆ ಹತ್ತಬೇಡ ಬೀಳುತ್ತಿ, ಬಾಯಿಗೆ ಹಾಕಬೇಡ ಗಂಟಲಿನಲ್ಲಿ ಸಿಕ್ಕಿಕೊಳ್ಳುತ್ತೆ, ಹೀಗೆ ಅವರನ್ನು ಪ್ರತಿಯೊಂದು ಕ್ಷಣ ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ, ಆದ್ದರಿಂದ ಅಜ್ಜ-ಅಜ್ಜಿ ಮಕ್ಕಳಿದ್ದರೆ ಪೋಷಕರು ನೆಮ್ಮದಿಯಾಗಿ ತಮ್ಮ ಕೆಲಸ ಮಾಡಿ ಮುಗಿಸಬಹುದು.
3.ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಗೆ ಅಜ್ಜ-ಅಜ್ಜಿ ಬೇಕು
ಅಜ್ಜ-ಅಜ್ಜಿ ಜೊತೆ ಇದ್ದರೆ ಮಕ್ಕಳು ತುಂಬಾ ಖುಷಿ-ಖುಷಿಯಾಗಿ ಇರುತ್ತಾರೆ, ಇದರಿಂದ ಮಾನಸಿಕ ಆರೋಗ್ಯ ಹೆಚ್ಚುತ್ತೆ, ತುಂಬಾ ಚಿಕ್ಕ ಪ್ರಾಯದಲ್ಲಿ ಪ್ರೀತಿಯ ಕೊರತೆ ಮಕ್ಕಳ ಮನಸ್ಸಿನಲ್ಲಿ ತುಂಬಿದರೆ ಅದು ಅವರನ್ನು ತುಂಬಾ ಕಾಡುತ್ತೆ, ಆದ್ದರಿಂದ ನಿಮ್ಮ ಮಕ್ಕಳು ನಿಮ್ಮ ಪೋಷಕರ ಜೊತೆ ಇರುವುದೇ ಒಳ್ಳೆಯದು. ಪೋಷಕರನ್ನು ನೋಡಿಕೊಳ್ಳುವುದು ಗಂಡ-ಹೆಂಡತಿ ನಾವಿಬ್ಬರೇ ಇರೋಣ ಎಂದು ಮದುವೆಯಾದಾಗ ಹೇಳಿದರೆ ನಂತರ ಮಕ್ಕಳಾದ ಮೇಲೆ ತಾವು ಮಾಡಿರುವ ದೊಡ್ಡ ತಪ್ಪೇನು ಎಂಬುವುದು ತಿಳಿಯುತ್ತೆ. ನಾವು ನಮ್ಮ ಪೋಷಕರನ್ನ ನೋಡಿಕೊಂಡರೆ ನಮ್ಮ ಮಕ್ಕಳನ್ನು ಅವರು ನೋಡಿಕೊಳ್ಳುತ್ತಾರೆ, ವಯಸ್ಸಾದ ಅವರು, ಮಕ್ಕಳು ಇಬ್ಬರೂ ಖುಷಿಯಾಗಿರತ್ತಾರೆ.
4. ಅಜ್ಜಿ-ತಾತ ಜೀವನದ ಮೌಲ್ಯಗಳನ್ನು ತಿಳಿಸುತ್ತಾರೆ
ತಮ್ಮ ಅನುಭವದ ಮೇಲೆ ಅವರು ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಹೇಳುತ್ತಾರೆ, ಜೀವನದ ಮೌಲ್ಯಗಳನ್ನು ಕಲಿಸುತ್ತಾರೆ. ಅಜ್ಜಿ-ತಾತ ಬರೀ ಮುದ್ದು ಮಾತ್ರ ಮಾಡಲ್ಲ, ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡಿಸಲು ಪ್ರತಿಕ್ಷಣ ಶ್ರಮಿಸುತ್ತಾರೆ.
5. ಮಕ್ಕಳಿಗೆ ಕುಟುಂಬದ ಮೌಲ್ಯ ತಿಳಿಯುತ್ತೆ
ಮಕ್ಕಳಿಗೆ ಕುಟುಂಬದ ಇತಿಹಾಸ, ಪೂರ್ವಜರು ಇವರ ಬಗ್ಗೆ ಎಲ್ಲಾ ಹೇಳಿ ಅವರಿಗೆ ಕುಟುಂಬದ ಬಗ್ಗೆ ಒಂದು ಸುಂದರ ಕಲ್ಪನೆಯನ್ನು ಮೂಡಿಸುವಲ್ಲಿ ಅಜ್ಜ-ಅಜ್ಜಿ ಪಾತ್ರ ದೊಡ್ಡದು. ಕೆಲವೊಂದು ಆಚಾರ-ವಿಚಾರಗಳನ್ನು, ಪರಂಪರೆಯಾಗಿ ನಡೆಸಿಕೊಂಡು ಬರುತ್ತಿರುವ ಪೂಜೆಗಳು ಇವುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಬೇಕೆಂದರೆ ಅಜ್ಜ-ಅಜ್ಜಿ ಜೊತೆ ಬೆಳೆಯಬೇಕು.
6. ಅನ್‌ಕಂಡೀಷನಲ್ ಲವ್
ಹೌದು ಇವರು ತೋರುವ ಪ್ರೀತಿಗೆ ಯಾವುದೇ ನಿರ್ಬಂಧಗಳಿರಲ್ಲ, ಮೊಮ್ಮಕ್ಕಳೇ ಅವರ ಪ್ರಪಂಚವಾಗಿರುತ್ತದೆ. ಮಕ್ಕಳು ಅವರ ಬಳಿ ಸೇಫ್ ಆಗಿ ಬೆಳೆಯುತ್ತಾರೆ, ಅಜ್ಜಅಜ್ಜಿ ಮನೆಯಲ್ಲಿದ್ದರೆ ಮಕ್ಕಳಿಗೆ ಆ ಮನೆ ಸ್ವರ್ಗವಾಗಿರುತ್ತೆ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ:ಬಿ ಎಸ್