November 24, 2024
Independence day Feauture image

ನನ್ನ ಬಾಲ್ಯದ ಸ್ವಾತಂತ್ರ್ಯ ದಿನಾಚರಣೆ

ಭರತ ಭೂಮಿಗೆ ಇಂದು ಅಮೃತ ಮಹೋತ್ಸವದ ಸಂಭ್ರಮ.75 ವರ್ಷಗಳ ಹಿಂದೆ ಬ್ರಿಟಿಷರ ಮುಷ್ಠಿಯಿಂದ
ಬಿಡುಗಡೆಗೊಂಡು ಸ್ವಾತಂತ್ರ್ಯ ಪಡೆದ ಸುದಿನವೇ ಈ ಆಗಸ್ಟ್ 15.

ಈ ಅಮೃತ ಮಹೋತ್ಸವವನ್ನು ಆಚರಿಸಲು ಇಡೀ ದೇಶವೆ ಸಜ್ಜಾಗಿದೆ.ಈ ಸಂಭ್ರಮ ಸಡಗರ ನೋಡುವಾಗ ನನಗೆ ನನ್ನ ಬಾಲ್ಯದ ಸ್ವಾತಂತ್ರ್ಯ ದಿನಾಚರಣೆಯ ನೆನಪಾಗುತ್ತದೆ. ಅದರಲ್ಲೂ 25 ವರ್ಷಗಳ ಹಿಂದೆ ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಆಚರಿಸಿದ ಸುವರ್ಣ ಮಹೋತ್ಸವದ ನೆನಪಂತೂ ಇನ್ನೂ ಹಚ್ಚ ಹಸಿರಾಗಿದೆ.


ಸುವರ್ಣ ಮಹೋತ್ಸವವನ್ನು ಆಚರಿಸಲು ಶಿಕ್ಷಕರು ಕೆಲವು ದಿನಗಳ ಮುಂಚಿತವಾಗಿ ನೀಡುತ್ತಿದ್ದ ಹಾಡು,ನೃತ್ಯ,ದೈಹಿಕ ಶಿಕ್ಷಣದ ತರಬೇತಿಗಳು,ಸ್ಪರ್ಧೆಗಾಗಿ ಕಲಿತ ದೇಶಭಕ್ತಿ ಗೀತೆ ಹಾಗೂ ರಾಷ್ಟ್ರಧ್ವಜ ದ ಚಿತ್ರ, ನೃತ್ಯದ ಸಲುವಾಗಿ ಧರಿಸಿಕೊಂಡ ಕೇಸರಿ ಬಿಳಿ ಹಸಿರು ಬಣ್ಣಗಳ ಕೈ ಬಳೆಗಳು, ಹಸಿರು ಬಿಳಿ ಬಣ್ಣಗಳ ಸಮವಸ್ತ್ರಜೊತೆಗೆ ಎರಡೂ ಜಡೆಗಳಲ್ಲಿ ಹೂವಿನಂತೆ ಅರಳಿಕೊಂಡಿರುವ ಹಸಿರು ರಿಬ್ಬನ್ಗಳು, ವಿಶಾಲ ಆಟದ ಮೈದಾನದಲಿ ನಿಂತು ತಲೆ ಎತ್ತಿ ನೋಡಿದಾಗ ಸುತ್ತ ಚಪ್ಪರ ಹಾಕಿದಂತೆ ಕೊಂಗೊಳಿಸುತ್ತಿದ್ದ ಕೇಸರಿ ಬಿಳಿ ಹಸಿರು ಬಣ್ಣಕಾಗದಗಳ ತೋರಣಗಳು,ಬಗೆ ಬಗೆಯ ಚಿತ್ತಾರ ಬಿಡಿಸಿದಂತೇ ಸುಮಾರು ಐದು ನೂರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ತಾಲೀಮು ಪ್ರದರ್ಶನದ ಅನುಭವ ಹೀಗೆ ಎತ್ತ ನೋಡಿದರತ್ತ ತ್ರಿವರ್ಣ ತ್ರಿವರ್ಣ ತ್ರಿವರ್ಣ.

ಧ್ವಜಾರೋಹಣದ ಬಳಿಕ ಸಿಹಿತಿಂಡಿಗಾಗಿ ಸಾಲಾಗಿ ನಿಂತು ಮಾಮೂಲು ಚಾಕಲೇಟ್ ಬದಲು ಸುವರ್ಣ ಮಹೋತ್ಸವದ ವಿಶೇಷವಾಗಿ ವಿತರಿಸದ ಅಪರೂಪದ ಸಿಹಿಲಡ್ಡನ್ನು ಮನೆಗೆ ತಂದು ಹಂಚಿ ತಿಂದ ಸವಿನೆನಪಿನ ಸಿಹಿ ಇನ್ನೂ ಮಾಸಿಲ್ಲ.

 

ಈಗ ಆ ಸುವರ್ಣ ಮಹೋತ್ಸವವು ಕಳೆದು ಹೋಗಿ ಅಮೃತ ಮಹೋತ್ಸವದ ದಿನವಾಗಿ ಬಂದು ನಿಂತಿದೆ.25 ವರ್ಷಗಳ ಹಿಂದೆ ಆಚರಿಸಿದ ಸಂಭ್ರಮ ಮತ್ತೆ “ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ”ಎಂಬ ಅಭಿಯಾನದೊಂದಿಗೆ ಆರಂಭಗೊಂಡಿದೆ.ಮತ್ತೆ ಎತ್ತ ನೋಡಿದರತ್ತ ತ್ರಿವರ್ಣ ಎಂಬಂತೆ ಮನೆ, ಶಾಲೆ,ಕಟ್ಟಡ,ಅಂಗಡಿ, ರಸ್ತೆ, ವಾಹನಗಳಲ್ಲಿ ನಮ್ಮ ರಾಷ್ಟ್ರ ಧ್ವಜ ರಾರಾಜಿಸುತ್ತಿದೆ.ಈ ಅಮೃತ ಮಹೋತ್ಸವದ ಘಳಿಗೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ.

✍️ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ

Leave a Reply

Your email address will not be published. Required fields are marked *