September 20, 2024

ಅಜೆಕಾರ್ ,ಅಂಡಾರ್, ಶಿರ್ಲಾಲ್, ಕೆರೆವಾಸೆ ಊರುಗಳನ್ನು ನೋಡಿ ಅಲ್ಲಿ ಅಜೆಕುಂಜ / ಲಾಲಿಕುಂಜ ನೋಡಿದ
ಬಳಿಕ ನನ್ನನ್ನು ಸೆಳೆಯಿತು ಕೊಂಡ್ಜ/ ಕೋಣಾಜೆ ಕಲ್ಲುಗಳು.

ನಮ್ಮ ಬಾಲ್ಯದಲ್ಲಿ ಈ ಕಲ್ಲನ್ನು ಬಲು ದೂರದಿಂದ ದಿನಾ ನಮ್ಮ ಪದ್ಮನ ಬೊಟ್ಟು ಜಮೀನಿನಲ್ಲಿ ನೋಡುತ್ತಿದ್ದೆ. ಇದರ
ಹತ್ತಿರ ಹೋಗಿ ಕಲ್ಲಿನ ಬೆಟ್ಟವನ್ನು ಹತ್ತಿ ಅಲ್ಲಿನ ಪೃಕೃತಿಯ ಮಡಿಲಲ್ಲಿ ಖುಷಿ ಪಡುವೆ ಎಂದು ಅಂದು ತಿಳಿದಿರಲಿಲ್ಲ.

ಅಜೆಕುಂಜ/ಲಾಲಿಕುಂಜ ಹೇಗೆ ಕಾರ್ಕಳದ ಸುತ್ತೆಲ್ಲ ಕಾಣಿಸುತ್ತದೋ ಅದೇ ರೀತಿಯಲ್ಲಿ ಕೊಂಡ್ಜ ಕಲ್ಲುಗಳು ಮೂಡಬಿದ್ರೆಯ ಸುತ್ತಲಿನ ಹಳ್ಳಿಗಳಲ್ಲಿ ಕಾಣಿಸುತ್ತದೆ.

ಕಾರ್ಕಳದಿಂದ ಮೂಡಬಿದ್ರೆಗೆ ಹೋಗಿ ಬಿಟ್ಟು ಅಲ್ಲಿ ನಾರಾವಿ ಬಸ್ ಹಿಡಿದು ಬಿಟ್ಟು ಕೋಣಾಜೆಯಲ್ಲಿ ಇಳಿದೆ. ಅಲ್ಲಿ ದಾರಿಯಲ್ಲೇ ಅಣ್ಣಿ ಶೆಟ್ಟರ ಪರಿಚಯ ಆಯಿತು. ಅವರು ನನ್ನನ್ನು ಈ ಬೆಟ್ಟದ ತಪ್ಪಲಿನವರೆಗೆ ಬಂದು ಬೆಟ್ಟ ಹತ್ತುವ ದಾರಿ ತೋರಿಸಿದರು. ಇಲ್ಲಿಂದ ಗುಡ್ಡದ ತುದಿಯವರೆಗೂ ಎಳೆದ ದಪ್ಪನೆಯ ಕರೆಂಟ್ ಕೇಬಲ್ ತೋರಿಸಿದರು. ಈ ಕೇಬಲ್ ನೋಡುತ್ತಾ ನಡೆದರೆ ಆಯಿತು.ನೇರವಾಗಿ ಬೆಟ್ಟದ ತುದಿಗೆ ದೇವರುಗಳ ಮಂದಿರಕ್ಕೆ ಹೋಗುತ್ತೆ ಅಂದರು.

ಕೆಳಗೆ ಬೆಟ್ಟಕ್ಕೆ ಮುಖ ಮಾಡುವ ಸ್ಥಳದಲ್ಲೇ ಕೊರಗಜ್ಜರ ಕಲ್ಲು ಇದೆ.”ಶೆಟ್ರೇ,ನೀವು ಹೋಗಿ ನಾನು ಇಲ್ಲೇ ಅರ್ಧ ಗಂಟೆ ಕಾಯುತ್ತೇನೆ. ಯಾರಾದರೂ ಬಂದರೆ ಅವರೊಂದಿಗೆ ಶಿಖರ ಹತ್ತುವೆ.ಬಾರದೆ ಇದ್ದರೆ ವಾಪಸ್ ಹೋಗುತ್ತೇನೆ. ಮಳೆ ನಿಂತ ಮೇಲೆ ಇನ್ನೊಂದು ದಿನ ಹೋಗುತ್ತೇನೆ”ಎಂದೆ. ಶೆಟ್ಟರು ಧೈರ್ಯ ತುಂಬಿದರೂ ಏನೋ ಒಂದು ರೀತಿಯ ಅಳುಕು ಆಯಿತು. ದಾರಿ ತಪ್ಪಿದರೆ ಪಚೀತಿ ಆಗುವ ಬದಲು ಇನ್ನೊಮ್ಮೆ ನೋಡುವ ಎಂದು ಅಂದಾಜು ಮಾಡಿದೆ. ಮೇಲಿಂದ ಕಲ್ಲುಗಳು ಬಾ ಬಾ ಎಂದು ಕರೆಯುತ್ತಿದ್ದವು. ಅವುಗಳ ಫೋಟೋ, ವೀಡಿಯೋ ತೆಗೆದು ಪಕ್ಕದಲ್ಲಿಇರುವ ಪಾದೆಕಲ್ಲಿನ ಮೇಲೆ ಕೂರುವಷ್ಟರಲ್ಲಿ ಮೇಲಿಂದ
ಮೂರು ಜನರು ಕೆಳಗೆ ಬಂದರು.ಅವರು “ಯಾವುದೇ ಭಯ ಇಲ್ಲಿ ಇಲ್ಲ.ನೀವು ಮೇಲೆ ಹತ್ತಿ. ಭಯವಾದರೆ ಇಲ್ಲಿಅಜ್ಜರಿಗೆ ಕೈ ಮುಗಿದು ಹೊರಡಿ”ಅಂದರು.

ಅಜ್ಜರ ಕಲ್ಲಿಗೆ ಕೈ ಮುಗಿದ ತಕ್ಷಣವೇ ಒಂದು ಹೊಸ ಹುರುಪು ಬಂತು. ಭಯ,ದಣಿವು ಕಾಣಲೇ ಇಲ್ಲ.ಕರೆಂಟ್ ಕೇಬಲ್ ದಾರಿಯನ್ನು  ತೋರಿಸುತ್ತಿತ್ತು. ವರುಣನ ಕೃಪೆ ಒಡನೆ ಸೂರ್ಯನೂ ತನ್ನ ಎಲ್ಲಾ ಕಿರಣಗಳನ್ನು ಪಸರಿಸಿ ಕತ್ತಲೆಯ ಕಾಡಿನಲ್ಲಿ ತಿಂಗಳ ಬೆಳಕಿನಾಟ ತೋರಿಸಿದ. ಮುಕ್ಕಾಲು ಗಂಟೆಯಲ್ಲಿ ನಾನು ಕೋಣಾಜೆ ಕಲ್ಲಿನ ಮಂದಿರದಲ್ಲಿದ್ದೆ.ಇಲ್ಲಿನ ಸ್ವಾಮೀಜಿಯವರು ನನ್ನ ವಿಚಾರಿಸಿ ಆಶೀರ್ವಾದ ಮಾಡಿದರು.ಗಂಧ ಪ್ರಸಾದ ಕೊಟ್ಟರು.

ಈ ಕಲ್ಲುಗಳ ತುದಿಗೆ  ಮಳೆಗಾಲದಲ್ಲಿ ಹತ್ತಲು ಪ್ರವೇಶ ಇಲ್ಲ. ಸೆಕೆಗಾಲದಲ್ಲಿ ನಿಷೇಧವನ್ನು ಸಡಿಸಲಾಗುವುದು ಎಂಬ ಮಾಹಿತಿಯನ್ನು ಸ್ವಾಮೀಜಿ ಕೊಟ್ಟರು. ವಾಪಸ್ ಬರುವಾಗ ಇನ್ನೊಬ್ಬರು ಸಿಕ್ಕಿದರು. ಅವರೊಂದಿಗೆ ಮಾತಾಡುತ್ತಾ ಅಜ್ಜರ ಜಾಗಕ್ಕೆ ಬಂದೆವು. ಅವರು ಅವರ ದಾರಿ ಹಿಡಿದರೆ ನಾನು ನನ್ನ ದಾರಿ ಹಿಡಿದು ಮನೆ ಸೇರಿದೆ.ಬದುಕಿನಲ್ಲಿ ಇದೊಂದು ದೊಡ್ಡ ಅನುಭವ ನೀಡಿತು.

ಈ ಕಲ್ಲುಗಳು ಇರುವ ಬೆಟ್ಟವನ್ನು ಹತ್ತುವಾಗ ಕೈಲಾಸ ಪರ್ವತವನ್ನು ಏರುತ್ತಿದ್ದೇನೋ ಎಂದೆನಿಸುತ್ತಿತ್ತು.ಇಲ್ಲಿ ನನ್ನ ತಂದೆಯವರ ನೆನಪು ಬಂದು ಬಿಡ್ತು.ನನ್ನ ಬಾಲ್ಯದ ಕಾಲದಲ್ಲಿ ಅವರು ಈ ಶಿಖರವನ್ನು ಏರಿ ಈ ಕಲ್ಲುಗಳನ್ನು ನೋಡಿ ಇಲ್ಲಿನ ಎಲ್ಲಾ ದೇವರಿಗೆ ವಂದಿಸಿದ್ದ ಅನುಭವದ ಕಥೆ ಹೇಳಿದ್ದರು.ನಾನು ಕಿವಿ ಅರಳಿಸಿ ಕೇಳುತ್ತಿದ್ದೆ.

“ಕೊಂಡ್ಜ” ಪದದಲ್ಲಿ ಎರಡು ಪದಗಳು ಇವೆ.ಅವೆಂದರೆ ಕೊಂಡ ಮತ್ತು ಕುಂಜ.ಕೊಂಡ ಎಂದರೆ ಕುಂಡ,ಗುಳಿ(ಗುರಿ) ,ಕೊಂಡೆ ಇತ್ಯಾದಿ.ಎಂದರೆ ಕೆಳಗಿನ ಆಳದ ಪ್ರದೇಶ.ಇನ್ನುಕುಂಜ ಎಂದರೆ ಬೆಟ್ಟ,ಪರ್ವತ,ಗವಿ ಇತ್ಯಾದಿ ಅರ್ಥಗಳು.ಎಂದರೆ ಎತ್ತರದ ಪ್ರದೇಶ.ಈ ಕುಂಜದಲ್ಲಿ ವಿಸ್ತಾರವಾದ ಗವಿ ಇದೆ.ಅದು ಮಾಡಿನಂತೆ ಹರಡಿದೆ.ಒಟ್ಟಾರೆ ಮೇಲಿನ ಕುಂಜದ ಪ್ರದೇಶ ಮತ್ತು ಅದರ ಕೆಳಗಿನ ಗುಳಿ ಪ್ರದೇಶವನ್ನು ಸೇರಿಸಿ ಒಟ್ಟಿಗೆ “ಕೊಂಡ್ಜ”ಎಂದು ಕರೆದಿದ್ದಾರೆ.

“ಕೋಣಾಜೆ” ಎಂಬ ಪದದಲ್ಲೂ ಎರಡು ಪದಗಳು ಸೇರಿವೆ.ಅವೆಂದರೆ ಕೋಣ ಮತ್ತು ಅಜೆ.ಅಜೆ ಎಂದರೆ ಎತ್ತರ ಅಥವಾ ಮೇಲಿನ ಎಂಬ ಅರ್ಥ.ಮೇಲೆ ಕಾಣುವ ಎರಡು ಕಲ್ಲುಗಳನ್ನು ನೋಡಿ “ಮೇಲೆ ಎರಡು ಕೋಣಗಳು ನಿಂತಿವೆ“ಎಂದು ಕನ್ನಡದ ಜೈನರು ಕರೆದಿರಬಹುದು.ಇಲ್ಲವೇ “ಕೊಂಡಾಜೆ” ಎಂಬ ಪದವೇ ಉಚ್ಛಾರದಲ್ಲಿ “ಕೊಣಾಜೆಆಗಿರುವ ಸಾಧ್ಯತೆ ಹೆಚ್ಚಿದೆ.“ಕೊಂಡಾಜೆ”ಎಂಬ ಶಬ್ಧದಲ್ಲಿ ಕೊಂಡ ಮತ್ತು ಅಜೆ ಪದಗಳು ಇವೆ.ಕೊಂಡ ಅಂದರೆ ಕೆಳಗೆ ಮತ್ತು ಅಜೆ ಎಂದರೆ ಮೇಲೆ.ಈ ಕಲ್ಲುಗಳು ಇರುವ ಬೆಟ್ಟ,ಅದರ ಕೆಳಗಿನ ಪ್ರದೇಶ ಮತ್ತು ಇನ್ನೂ ಕೆಳಗಿನ ಬೈಲು ಗದ್ದೆಗಳ ಪ್ರದೇಶ ಒಟ್ಟಾಗಿ “ಕೊಂಡ್ಜ”, “ಕೊಣಾಜೆ” ಎಂದು  ಕರೆದುಕೊಂಡು ಬಂದಿದ್ದಾರೆ.ತುಲು ಭಾಷೆಯಲ್ಲಿ ಅಕ್ಷರಗಳಲ್ಲಿ ಹಿಂದೆ ಮುಂದೆ ಮಾಡಿ ಕರೆಯುತ್ತಾರೆ.ಇಲ್ಲಿ “ಡ”ಕಾರದ ಬದಲು ನಂತರದ “ಣ” ಕಾರದಲ್ಲಿ ಪ್ರಯೋಗ ಮಾಡಿ “ಕೊಂಡಾಜೆ”ಪದವನ್ನು “ಕೊಣಾಜೆ” ಎಂದಿದ್ದಾರೆ.

✍️ ಐ.ಕೆ.ಗೋವಿಂದ ಭಂಡಾರಿ, ಕಾರ್ಕಳ
(ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್)

Leave a Reply

Your email address will not be published. Required fields are marked *