September 20, 2024

ಇವೆಲ್ಲಾ ಹೊಟ್ಟೆ ನೋವಿನ ವಿಧಗಳು ಎನ್ನುತ್ತಾರೆ ವೈದ್ಯರು

ಹೊಟ್ಟೆ ನೋವು ಅಲಕ್ಷಿಸುವಂತಹದ್ದಲ್ಲ. ಹೊಟ್ಟೆಯ ವಿವಿಧ ಭಾಗದಲ್ಲಿ ನೋವು ಬಂದರೆ ಅದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ಆ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಸಾಮಾನ್ಯವಾಗಿ ಒಂದಲ್ಲ ಒಂದು ಬಾರಿ ಪ್ರತಿಯೊಬ್ಬರು ಹೊಟ್ಟೆ ನೋವಿಗೆ ಒಳಗಾಗಿರುತ್ತಾರೆ. ಅನೇಕ ಕಾರಣಗಳಿಂದ ಹೊಟ್ಟೆ ನೋವು ಬರುತ್ತದೆ. ಅದೂ ಅಲ್ಲದೆ ಹೊಟ್ಟೆಯ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಕೆಲವೊಮ್ಮೆ ಆಹಾರ, ಜೀವನಶೈಲಿಯ ಬದಲಾವಣೆಯಿಂದ ಹೊಟ್ಟೆ ನೋವು ಬಂದರೆ ಇನ್ನು ಹಲವು ಬಾರಿ ಗಂಭೀರ ಕಾಯಿಲೆಗಳ ಮುನ್ಸೂಚನೆಯಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.
ಹಾಗಾದರೆ ಹೊಟ್ಟೆಯ ಯಾವ ಭಾಗದಲ್ಲಿ ನೋವು ಬಂದರೆ ಏನು ಅರ್ಥ, ಅದಕ್ಕೆ ಕಾರಣಗಳೇನು ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶ ಕು ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.

​ಹೊಟ್ಟೆಯ ಮಧ್ಯ ಭಾಗದ ನೋವು

ಇದು ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಎದೆಯ ಮಧ್ಯಭಾಗದಲ್ಲಿ ನೋವು ಬರುತ್ತದೆ. ಆಹಾರ ಸೇವನೆಯಲ್ಲಿ ವ್ಯತ್ಯಾಸವಾದರೆ, ಹೊಟ್ಟೆ ಕೆಟ್ಟಾಗ ಅಥವಾ ಗ್ಯಾಸ್ಟ್ರಿಕ್‌,ಆಸಿಡಿಟಿಯ ಸಮಸ್ಯೆಯಿಂದ ಹೊಟ್ಟೆಯ ಮಧ್ಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಇದರ ಜೊತೆಗೆ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು, ಪುರುಷರ ಪ್ರೋಸ್ಟರೇಟ್‌ಗೆ ಸಂಬಂಧಿಸಿದ ಕಾಯಿಲೆಗಳಿದ್ದರೆ ಅಥವಾ ಮೂತ್ರನಾಳದ ಸಮಸ್ಯೆ ಇದ್ದರೆ ಹೊಟ್ಟೆಯ ಮಧ್ಯಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಬಲಭಾಗದ ಹೊಟ್ಟೆಯ ನೋವು

ಕೆಲವೊಮ್ಮೆ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ಅಲಕ್ಷಿಸುವಂತಹದಲ್ಲ. ಪಿತ್ತ ಕೋಶದ ಕಲ್ಲು, ಅಥವಾ ಪಿತ್ತ ಕೋಶದ ಸಮಸ್ಯೆ ಇದ್ದರೆ, ಹರ್ನಿಯಾ ಇದ್ದರೆ, ಅಪೆಂಡಿಕ್ಸ್‌ ಸಮಸ್ಯೆ ಇದ್ದರೆ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಇನ್ನು ಮಲಬದ್ದತೆ, ಬಲಭಾಗದ ಕಿಡ್ನಿಯಲ್ಲಿ ಕಲ್ಲು ಉಂಟಾದರೆ, ಕರುಳಿನ ಸಮಸ್ಯೆ ಇದ್ದರೆ ಕೂಡ ಹೊಟ್ಟೆಯ ಬಲಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.

​ಎಡಭಾಗದಲ್ಲಿ ನೋವಿದ್ದರೆ

ಎಡಭಾಗದ ಕಿಡ್ನಿಯಲ್ಲಿ ಕಲ್ಲಾಗಿದ್ದರೆ ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮಲಬದ್ಧತೆ ಸಮಸ್ಯೆ, ಕರುಳಿನ ಸಮಸ್ಯೆಅಥವಾ ಮೂತ್ರದ ಸೋಂಕಿದ್ದರೆ ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಸಿಕೊಳ್ಳುತ್ತದೆ.

ಇನ್ನು ಮುಖ್ಯವಾಗಿ ಮಹಿಳೆಯರಲ್ಲಿ ಮುಟ್ಟಿನ ದಿನಗಳ ಸಮಸ್ಯೆ ಇದ್ದರೆ ಅಂತಹ ಸಂದರ್ಭದಲ್ಲಿ ಹೊಟ್ಟೆಯ ಕೆಳಭಾಗ ಅಥವಾ ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಸಾಮಾನ್ಯ ಹೊಟ್ಟೆ ನೋವಿಗೆ ಈ ಮದ್ದು ಮಾಡಿ

  • ಗ್ಯಾಸ್ಟ್ರಿಕ್‌ ಅಥವಾ ಆಸಿಡಿಟಿಯಿಂದ ಹೊಟ್ಟೆ ನೋವು ಬರುತ್ತಿದ್ದರೆ ಮಧ್ಯಾಹ್ನ ಊಟ ಮಾಡುವ ಮೊದಲು ಸಣ್ಣ ಶುಂಠಿ ಚೂರು ಮತ್ತು ಚಿಟಿಕೆ ಉಪ್ಪು ಸೇರಿಸಿ ಸೇವನೆ ಮಾಡಿ. ಇದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಡುವುದಿಲ್ಲ.
  • ಇನ್ನು ಆಗಾಗ ಮಜ್ಜಿಗೆ ಸೇವನೆ ಮಾಡುತ್ತಿರಿ. ಇದರಿಂದ ಎದೆಯುರಿ ಸಮಸ್ಯೆ, ಮಲಬದ್ಧತೆಯನ್ನು ತಡೆಯಬಹುದು. ಅಲ್ಲದೆ ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ಕಿಡ್ನಿ ಸ್ಟೋನ್‌ ಕೂಡ ನಿವಾರಣೆಯಾಗುತ್ತದೆ.
  • ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಸೋಸಿಕೊಂಡು ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಸೇವನೆ ಮಾಡಿದರೆ ಮುಟ್ಟಿನ ದಿನಗಳ ಹೊಟ್ಟೆ ನೋವು ನಿವಾರಣೆಯಾಗುತ್ತದೆ.
  • ಹೊಟ್ಟೆಯಲ್ಲಿ ಜಂತು ಹುಳುಗಳ ಸಮಸ್ಯೆ ಇದ್ದರೆ ಆಗ ಓಂಕಾಳನ್ನು ಹಾಗೆಯೇ ತಿನ್ನಬಹುದು ಅಥವಾ ಅದನ್ನು ನೀರಿನಲ್ಲಿ ಹಾಕಿ ಕುದಿಸಿ ಸೋಸಿಕೊಂಡು ಅದಕ್ಕೆ ಚಿಟಿಕೆ ಉಪ್ಪು ಹಾಗೂ ಸ್ವಲ್ಪ ಲಿಂಬು ರಸ ಸೇರಿಸಿ ಸೇವನೆ ಮಾಡಬಹುದು. ಇದರಿಂದಲೂ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

Dr. SK

BAMS, MS

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *