September 20, 2024

ಲೈಂಗಿಕ ಕಿರುಕುಳ- ಬದಲಾಗಬೇಕಿದೆ ಗಂಡಿನ ಮನಸ್ಥಿತಿ

ಹೆಣ್ಣುಮಕ್ಕಳು ಲೈಂಗಿಕ ಕಿರುಕುಳಕ್ಕೆ, ಅತ್ಯಾಚಾರಕ್ಕೆ ಒಳಗಾಗಲು ಸ್ವತಃ ಆ ಹೆಣ್ಣುಮಕ್ಕಳೇ ಕಾರಣ. ಅಂಗಾಂಗ ಪ್ರದರ್ಶಿಸುವ, ದೇಹದ ಉಬ್ಬು ತಗ್ಗುಗಳನ್ನು ಎತ್ತಿತೋರಿಸುವ ಅವರ ‘ಪ್ರಚೋದಕ’ ಉಡುಪು ಕಾರಣ. ಹೊತ್ತಲ್ಲದ ಹೊತ್ತಿನಲ್ಲಿ ಅವರು ಮನೆಯಿಂದ ಹೊರಗಿರುವುದು ಕಾರಣ,ಅವಳ ನಡತೆ ಸರಿ ಇಲ್ಲದ ಕಾರಣ, ಅವಳು ಎಲ್ಲರಲ್ಲೂ ಚೆಲ್ಲು ಚೆಲ್ಲಾಗಿ ಇರುವ ಕಾರಣ, ಅವಳು ಅಂತವಳೇ ಆಗಿರುವ ಕಾರಣ ಎಂದು ಇಷ್ಟೆಲ್ಲಾ ಕಾರಣಗಳನ್ನು ಸಾಮಾನ್ಯವಾಗಿ ಸಂಪ್ರದಾಯವಾದಿ ಪುರುಷ ಪ್ರಧಾನ ಮನಸ್ಸುಗಳು ಹೇಳುವುದಿದೆ. ಅನ್ಯಾಯಕ್ಕೆ ಬಲಿಪಶುವನ್ನೇ ಹೊಣೆ ಮಾಡುವ ಈ ಮಾತನ್ನು ಪುರುಷರು ಮಾತ್ರವಲ್ಲ, ಅನೇಕ ಮಹಿಳೆಯರೂ ಸಮರ್ಥಿಸುವುದನ್ನು ಬಹಳ ಕಾಲದಿಂದ ನೋಡುತ್ತ ಬಂದಿದ್ದೇವೆ.

ಪ್ರಚೋದಕ ಅಂದರೆ ಏನು?

‘ಹೆಣ್ಣೊಬ್ಬಳು ಲೈಂಗಿಕವಾಗಿ ಪ್ರಚೋದಕ ಉಡುಪು ಧರಿಸಿದರೆ ತಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಆಕೆ ಹೇಳಿಕೊಳ್ಳುವಂತಿಲ್ಲ (ನ್ಯಾಯ ಕೇಳುವಂತಿಲ್ಲ)’ ಎಂದು ಕೋಝಿಕೋಡ್ ನ್ಯಾಯಾಲಯದ ನ್ಯಾಯಾಧೀಶರಾದ ಎಸ್ ಕೃಷ್ಣಕುಮಾರ್ ಇತ್ತೀಚೆಗೆ ಘೋಷಿಸಿಬಿಟ್ಟಿದ್ದಾರೆ. ಇಂಥ ಮಾತು ಕೇಳುವಾಗಲೆಲ್ಲ ನಮ್ಮಲ್ಲಿ ಬೇಡವೆಂದರೂ ಕೆಲವು ಪ್ರಶ್ನೆಗಳು ಮೂಡುತ್ತವೆ. ಈ ‘ಪ್ರಚೋದಕ’ ಅಂದರೆ ಏನು? ‘ಸಭ್ಯತೆ’ ಅಂದರೆ ಏನು? ಇವುಗಳ ವ್ಯಾಖ್ಯೆ ಏನು? ಯಾವುದು ಪ್ರಚೋದಕ, ಯಾವುದು ಪ್ರಚೋದಕ ಅಲ್ಲ,  ಯಾವುದು ಸಭ್ಯ ಯಾವುದು ಅಸಭ್ಯ ಎಂದು ನಿರ್ಧರಿಸುವವರು ಯಾರು? ಇವೆಲ್ಲ ತೊಟ್ಟ ಉಡುಪಿಗೆ ಸಂಬಂಧಿಸಿದ್ದೋ ಅಥವಾ ನೋಡುವ ಕಣ್ಣುಗಳಿಗೆ ಮತ್ತು ಆ ಕಣ್ಣಿನ ಹಿಂದಿನ ಮನಸ್ಥಿತಿಗೆ ಸಂಬಂಧಿಸಿದ್ದೋ?

ಉದಾಹರಣೆಗೆ, ನಮ್ಮಲ್ಲಿ ತುಂಬಾ ಸಭ್ಯ ಎಂದು ಹೇಳಲಾಗುವ ಸೀರೆಯನ್ನೇ ತೆಗೆದುಕೊಳ್ಳೋಣ. ಸೀರೆ ಉಟ್ಟ ತಕ್ಷಣ ಎಂತಹ ಹೆಣ್ಣೂ ಅಪ್ರತಿಮ ಸುಂದರಿಯಾಗಿ ಕಾಣುವುದಿದೆ. ಇದಕ್ಕೆ ಸೀರೆ ಮಾತ್ರ ಕಾರಣವಾಗಿರಬೇಕಾಗಿಲ್ಲ. ಪರಂಪರೆಯಿಂದ ಅದನ್ನು ನೋಡಿ ನೋಡಿ ನಮ್ಮ ಕಣ್ಣು ಅದಕ್ಕೆ ಒಗ್ಗಿರುವುದೂ ಕಾರಣ ಇರಬಹುದು. ಆದರೆ, ದೇಹವನ್ನು ಪ್ರದರ್ಶಿಸುವಲ್ಲಿ ಸೀರೆ ಇತರ ತಥಾಕಥಿತ ಯಾವ ಅಸಭ್ಯ ಉಡುಪಿಗಿಂತ ಕಡಿಮೆಯಿದೆ? ಮೈಗಂಟಿ ನಿಂತ ರವಿಕೆ ಹೆಣ್ಣಿನ ಎದೆಯ ಪೂರ್ಣ ಆಕಾರವನ್ನು ಪ್ರದರ್ಶಿಸುವಂತಿದ್ದರೆ, ಹಿಂಬದಿಯಲ್ಲಿ ಡೀಪ್ ನೆಕ್ ಎಂದರೆ ಬಹುತೇಕ ಬೆನ್ನು ಕಾಣುವಂತಿರುತ್ತದೆ. ಇದಕ್ಕೆ ಭಿನ್ನವಾಗಿ ಚೂಡಿದಾರ್, ಸಲ್ವಾರ್ ಕಮೀಜ್, ಜೀನ್ಸ್ ಮತ್ತಿತರ ಉಡುಪುಗಳು ಮೈಯನ್ನು ಸಂಪೂರ್ಣವಾಗಿ ಮುಚ್ಚುತ್ತವೆ.ಸೀರೆಯಿರಲೀ, ಇತರ ಆಧುನಿಕ ಉಡುಪೇ ಇರಲೀ ಅವುಗಳ ಸ್ವರೂಪ ಹೇಗಿದೆ ಎಂಬುದು ಮುಖ್ಯವಲ್ಲ. ಕೆಲವರು ಸೀರೆ ಅಶ್ಲೀಲ ಅಲ್ಲ ಎಂದರೆ ಕೆಲವರು ಚೂಡಿದಾರ್, ಜೀನ್ಸ್, ಸಲ್ವಾರ್ ಕಮೀಜ್ ಅಶ್ಲೀಲ ಎನ್ನುತ್ತಾರೆ….. ಉಡುಪು ಯಾವುದೇ ಇರಲಿ. ಅತ್ಯಾಚಾರಕ್ಕೆ ಗಂಡಿನ ಮನಸ್ಥಿತಿ ಅವಲಂಬಿಸಿರುತ್ತದೆ.

ಲೈಂಗಿಕ ಅತ್ಯಾಚಾರಕ್ಕೆ ಸಂತ್ರಸ್ತೆಯ ವಯಸ್ಸು, ಮೈ ಪ್ರದರ್ಶನ ಕಾರಣವೇ?

ಲೈಂಗಿಕ ಅತ್ಯಾಚಾರಕ್ಕೆ ಸಂತ್ರಸ್ತೆಯ ವಯಸ್ಸು ಕಾರಣ ಎನ್ನೋಣವೇ? ತಿಂಗಳ ಹಸುಗೂಸಿನಿಂದ ಹಿಡಿದು ಹಣ್ಣು ಹಣ್ಣು ಮುದುಕಿಯನ್ನು ಅತ್ಯಾಚಾರ ಮಾಡಿದ ಉದಾಹರಣೆ ನಮ್ಮಲ್ಲಿ ಬಹಳಷ್ಟಿದೆ. ಅತ್ಯಾಚಾರಕ್ಕೆ ಹೆಣ್ಣಿನ ಮೈ ಪ್ರದರ್ಶನ ಕಾರಣ ಎನ್ನೋಣವೇ? ಬುರ್ಕದಂತಹ ಸಂಪೂರ್ಣ ಮೈ ಮುಚ್ಚಿಕೊಂಡ ಹೆಣ್ಣನ್ನು ಅತ್ಯಾಚಾರ ಮಾಡಿದ ಉದಾಹರಣೆಯೂ ನಮ್ಮಲ್ಲಿದೆ. ಅತ್ಯಾಚಾರಕ್ಕೆ ಜಾತಿ, ಧರ್ಮ, ವಯಸ್ಸು, ಶ್ರೀಮಂತ, ಬಡವ, ರೂಪ, ಕುರೂಪ ಯಾವುದು ಮುಖ್ಯ ಅಲ್ಲ, ಒಂದಂತೂ ಸ್ಪಷ್ಟ. ಗಂಡಿಗೆ ಪ್ರಚೋದನೆಗೊಳಗಾಗಲು ಹೆಣ್ಣು ಕಾರಣವಾಗಿರಬೇಕಾಗಿಲ್ಲ, ಬದಲಿಗೆ ಆ ಹೆಣ್ಣನ್ನು ನೋಡುವ ಗಂಡಿನ ಕಣ್ಣು ಮತ್ತು ಅಂತಹ ಗಂಡಿನ ಮನಸ್ಥಿತಿ ಕಾರಣ .

ಒಂದು ಹೆಣ್ಣು ತನ್ನ ದೇಹವನ್ನು ಸಂಪೂರ್ಣ ಮುಚ್ಚಿಕೊಂಡಿದ್ದಾಳೆ ಅಂದುಕೊಳ್ಳಿ. ಆಕೆಯ ಮೇಲಿರುವುದು ಒಂದು ಸಾಧಾರಣ ಉಡುಪು ಅಷ್ಟೇ. ಆದರೆ, ನಮ್ಮ ಮಿದುಳು ಎಷ್ಟು ಶಕ್ತಿಶಾಲಿಯೆಂದರೆ ಉಡುಪನ್ನು ತೂರಿ ಹೋಗಿ ಆ ಹೆಣ್ಣನ್ನು ಸಂಪೂರ್ಣ ಬೆತ್ತಲೆಯಾಗಿ ಕಲ್ಪಿಸಿಕೊಳ್ಳುವುದು, ಆ ಕಲ್ಪನೆಯ ಮೂಲಕವೇ ಕಾಮೋದ್ರೇಕಕ್ಕೆ ಒಳಗಾಗುವುದು, ಮನಸಿನೊಳಗೆಯೇ ಸುಖಿಸುವುದು ಅಸಂಭವವೇ? ಅಂದಮೇಲೆ ಆಕೆ ಯಾವ ಉಡುಪನ್ನು ಹೇಗೆ ಧರಿಸಿಕೊಂಡರೆ ಏನು? ಗಂಡು ಮಾಡುವ ತಪ್ಪಿಗೆ ಹೆಣ್ಣು ಹೇಗೆ ಹೊಣೆ ಆಗುತ್ತಾಳೆ? ಅವಳ ಉಡುಪು ಹೇಗೆ ಕಾರಣ ಆಗುತ್ತದೆ?

 

ಬದುಕಿನ ಮೇಲೆ ಲೈಂಗಿಕ  ಪ್ರಭಾವ ಅಗಾಧ ಮತ್ತು ನಿರಂತರ.

ನಿಜ, ನಮ್ಮ ಇಡೀ ಬದುಕಿನ ಮೇಲೆ ಲೈಂಗಿಕ ಪ್ರಭಾವ ಅಗಾಧ ಮತ್ತು ನಿರಂತರ. ಮನ ಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಪ್ರಕಾರ ಪುಟ್ಟ ಮಗುವಾಗಿದ್ದ ಕಾಲದಿಂದ ಸಾಯುವ ತನಕವೂ ಈ ಪ್ರಕ್ರಿಯೆ ಮುಂದುವರಿಯುತ್ತಲೇ ಇರುತ್ತದೆ. ಕ್ಷಣ ಕ್ಷಣವೂ ಅದು ನಮ್ಮ ಮೇಲೆ ಒಂದಿಲ್ಲೊಂದು ಪ್ರಭಾವ ಬೀರುತ್ತಲೇ ಇರುತ್ತದೆ. ಗಂಡಿನ ಬಗ್ಗೆ ಹೆಣ್ಣಿಗೆ ಮತ್ತು ಹೆಣ್ಣಿನ ಬಗ್ಗೆ ಗಂಡಿಗೆ ಸೆಳೆತ ಇರುವುದು, ಹೆಣ್ಣನ್ನು ನೋಡಿದಾಗ ಗಂಡಿಗೆ ಮತ್ತು ಗಂಡನ್ನು ನೋಡಿದಾಗ ಹೆಣ್ಣಿಗೆ ಕಾಮ ಪ್ರಚೋದನೆಯಾಗುವುದು, ಬಯಕೆ ಉಂಟಾಗುವುದು ಸಹಜ ಮತ್ತು ಅದು ತೀರಾ ನೈಸರ್ಗಿಕ ಸಂಗತಿ. ಸಂತಾನದ ಮುಂದರಿಕೆಗೆ ಪ್ರಕೃತಿಯೇ ಉಂಟು ಮಾಡಿರುವ ವ್ಯವಸ್ಥೆಗಳು ಇವು.

ಒಂದು ಹೆಣ್ಣನ್ನು ನೋಡಿದಾಗ ಗಂಡಿನಲ್ಲಿ ಜೈವಿಕವಾಗಿ ಏನೇನು ಪರಿಣಾಮ ಉಂಟಾಗಬಹುದು ಎಂಬುದನ್ನು ಜೀವ ವಿಜ್ಞಾನ ಹೀಗೆ ಹೇಳುತ್ತದೆ- “ಮಿದುಳಿನಲ್ಲಿರುವ  ಹೈಪೋಥಲಾಮಸ್ ಪಿಟ್ಯೂಟರಿ ಗ್ರಂಥಿಯನ್ನು ಚೋದಿಸುತ್ತದೆ, ಮತ್ತು ಅದು ಆಂತರಿಕವಾಗಿ ನರ ಇಂಪಲ್ಸ್ ಗಳನ್ನು ಪ್ರಚೋದಿಸುತ್ತದೆ. ಎಂಡೋಕ್ರೈನ್ ಗ್ರಂಥಿಯು ವೃಷಣಗಳಲ್ಲಿನ ಟೆಸ್ಟೋಸ್ಟಿರೋನ್ ಹಾರ್ಮೋನನ್ನು ಚೋದಿಸುತ್ತದೆ. ಇದು ನೇರವಾಗಿ ರಕ್ತದಲ್ಲಿ ಪರಿಚಲನೆಯಾಗುತ್ತದೆ. ಪಿಟ್ಯೂಟರಿ ಗ್ರಂಥಿಯಲ್ಲಿರುವ ಚೋದಕ ಹಾರ್ಮೋನುಗಳಾದ ಆಕ್ಸಿಟೋಸಿನ್ ಮತ್ತು ಆಲ್ಫಾ ಮೆಲನೋಸೈಟ್ ಗಳು ಗಂಡಿನಲ್ಲಿ ಎಲೆಕ್ಟ್ರೋ ಫಿಸಿಯಾಲಜಿಕಲ್ ಉತ್ಕರ್ಷಕ್ಕೆ ಕಾರಣ. ಇದು ಗಂಡಿನಲ್ಲಿ ಲೈಂಗಿಕ ಉದ್ರೇಕ ಉಂಟು ಮಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಂದರೆ ಹೆಣ್ಣನ್ನು ನೋಡುವಾಗ ಗಂಡಿನಲ್ಲಿ ಲೈಂಗಿಕ ಉದ್ರೇಕವಾಗುವುದು ನಿಸರ್ಗ ಸಹಜವಾದುದು.

ಪಶುತ್ವವನ್ನು ಮೀರಲು ಪ್ರಯತ್ನಿಸಬೇಕು

ಆದರೆ ನಿಸರ್ಗ ಸಹಜವಾಗಿ ಲೈಂಗಿಕ ಉದ್ರೇಕವಾಗುತ್ತದೆ ಎಂದ ಮಾತ್ರಕ್ಕೆ ನಾವು ಪಶುಗಳಂತೆ ವರ್ತಿಸಲಾಗುತ್ತದೆಯೇ? ನಾವು ಕಾಡು ಮಾನವರಲ್ಲ, ನಾಡಿನ ಮಾನವರು. ಸಾಮಾಜಿಕ ಪ್ರಾಣಿಯಾಗಿ ವಿಕಾಸದ ಹಾದಿಯಲ್ಲಿ ಬಹುದೂರ ಸಾಗಿಬಂದು ನಾಗರಿಕರೆನಿಸಿಕೊಂಡವರು. ಗಂಡು ಈ ಪಶುತ್ವವನ್ನು ಮೀರಲು ನಿರಂತರ ಯತ್ನಿಸಬೇಕು. ಹೆಣ್ಣನ್ನು ಕಂಡಾಗ ಕಾಮೋದ್ರೇಕವಾಗುವುದು ನಿಸರ್ಗ ಸಹಜವಾದರೂ ಇದು ಹಿಂಸೆಗೆ ದೌರ್ಜನ್ಯಕ್ಕೆ ದಾರಿ ಮಾಡಿಕೊಡದಂತೆ, ಗಂಡಿನ ವರ್ತನೆಯಿಂದ ಹೆಣ್ಣಿಗೆ ನೋವಾಗದಂತೆ, ಆಕೆ ಹಿಂಸೆಗೆ ಒಳಗಾಗದಂತೆ ಗಂಡು ಗೆರೆಗಳನ್ನು ಹಾಕಿಕೊಂಡು ಬದುಕುವುದು ಮತ್ತು ವರ್ತಿಸುವುದು ಅತ್ಯಗತ್ಯ. ಮತ್ತು ಇದರಿಂದಲೇ  ಗಂಡು  ಸಂಸ್ಕಾರವಂತ ನಾಗರಿಕರೆನಿಸಿಕೊಳ್ಳುವುದು.

ಏನಿದು ಪ್ರಕರಣ?

ಲೇಖಕ ಸಿವಿಕ್ ಚಂದ್ರನ್ ಗೆ ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ಜಾಮೀನು ನೀಡುವಾಗ ಕೇರಳದ ಕೋಝಿಕೋಡ್ ಸೆಶನ್ಸ್ ನ್ಯಾಯಾಧೀಶರಾದ ಎಸ್ ಕೃಷ್ಣಕುಮಾರ್ ಅವರು ‘ಸಂತ್ರಸ್ತ ಹೆಣ್ಣುಮಗಳು ಲೈಂಗಿಕವಾಗಿ ‍ಪ್ರಚೋದಿಸುವ ಉಡುಗೆ ತೊಟ್ಟರೆ outraging woman’s modesty ಕಾನೂನು ಅನ್ವಯವಾಗುವುದಿಲ್ಲ’ ಎಂದು ಹೇಳಿದ್ದರು. ಮಾತ್ರವಲ್ಲ ‘74 ವರ್ಷ ವಯಸ್ಸಿನ ಲೇಖಕ, ಅದೂ ಅಂಗವೈಕಲ್ಯ ಹೊಂದಿರುವ ವ್ಯಕ್ತಿ ಬಲವಂತವಾಗಿ ಹೆಣ್ಣೊಬ್ಬಳನ್ನು ಎಳೆದು ತೊಡೆಯಲ್ಲಿ ಕೂರಿಸಿ, ಲೈಂಗಿಕವಾಗಿ ಆಕೆಯ ಎದೆಯನ್ನು ಒತ್ತಬಲ್ಲ ಎಂಬುದನ್ನು ನಂಬುವುದೂ ಅಸಾಧ್ಯ’ ಎಂದು ಮಾತು ಸೇರಿಸಿದ್ದರು.

ಈ ಆದೇಶವು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಹೈಕೋರ್ಟ್ ಗೆ ಸಲ್ಲಿಸಿರುವ ತನ್ನ ಮನವಿಯಲ್ಲಿ ಕೇರಳ ಸರಕಾರವು ‘ಸದರಿ ಆದೇಶವು ಕಾನೂನು ಬಾಹಿರ, ಅನ್ಯಾಯ, ಮಾತ್ರವಲ್ಲ ಇದು ದೂರುದಾರರಿಗೆ ಮಾನಸಿಕ ಯಾತನೆ ನೀಡುವಂಥದ್ದು’ ಎಂದು ಹೇಳಿದೆ. ‘ಸೆಶನ್ಸ್ ನ್ಯಾಯಾಲಯವು ಕಂಡು ಕೊಂಡಿರುವ ಅಂಶಗಳು ಮತ್ತು ಮಾಡಿರುವ ಟಿಪ್ಪಣಿಗಳು ತುಂಬಾ ಆಕ್ಷೇಪಾರ್ಹ, ಡಿಮೀನಿಂಗ್ ಮತ್ತು ಮಹಿಳಾ ವಿರೋಧಿಯಾಗಿದ್ದು ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ಜನರು ವಿಶ‍್ವಾಸ ಕಳೆದುಕೊಳ್ಳುವಂತೆ ಮಾಡಿದೆ, ಸೆಶನ್ಸ್ ನ್ಯಾಯಾಧೀಶರಿಗೆ ಇಂತಹ ಆದೇಶ ಹೊರಡಿಸುವ ಅಧಿಕಾರವಾಗಲೀ, ಅಧಿಕಾರ ವ್ಯಾಪ್ತಿಯಾಗಲೀ ಇಲ್ಲ’ ಎಂದೂ ಅದು ಸೇರಿಸಿದೆ.

ಇನ್ನೊಂದು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದಲಿತ ಲೇಖಕಿಯೊಬ್ಬಳು ಇದೇ ಚಂದ್ರನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಳು. ಐಪಿಸಿ ಸೆಕ್ಷನ್ 354 ಅಡಿಯಲ್ಲಿ, ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯ ಅಡಿಯಲ್ಲಿ ಆತನ ಮೇಲೆ ಕೇಸು ದಾಖಲಿಸಲಾಗಿತ್ತು ಕೂಡಾ. ಆಗಲೂ, ಅಂದರೆ ಕಳೆದ ಆಗಸ್ಟ್ 2 ರಂದು ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗಲೂ ಇದೇ ನ್ಯಾಯಾಧೀಶರು, “ಆಕೆಯು ಪರಿಶಿಷ್ಟ ಜಾತಿಗೆ ಸೇರಿದ ಹೆಣ್ಣು ಎಂಬುದು ತಿಳಿದಿದ್ದೂ ಆತ ಆಕೆಯ ದೇಹವನ್ನು ಮುಟ್ಟುತ್ತಾನೆ ಎಂಬುದನ್ನು ನಂಬುವುದು ಕಷ್ಟ” ಎಂದಿದ್ದರು. ದೌರ್ಜನ್ಯ ಕಾಯಿದೆ ಅನ್ವಯವಾಗಬೇಕಾದರೆ, ಆರೋಪಿಗೆ ಆಕೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂಬುದು ಗೊತ್ತಿರಬೇಕು ಎಂದು ಹೇಳಿದ್ದರು.

ಹೆಣ್ಣಿಗೆ ಯಾಕೆ ಅನಿಸುವುದಿಲ್ಲ?

ಇಲ್ಲಿ ಇನ್ನೂ ಒಂದು ವಿಷಯವನ್ನು ಗಮನಿಸಬೇಕು. ಹೆಣ್ಣಿನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಬೇಕು ಎಂದು ಗಂಡಿಗೆ ಅನಿಸುವಂತೆ ಹೆಣ್ಣಿಗೆ ಯಾಕೆ ಅನಿಸುವುದಿಲ್ಲ? ಅಥವಾ ಗಂಡಿನ ಮೇಲೆ ಹೆಣ್ಣು ಯಾಕೆ ದೊಡ್ಡ ಪ್ರಮಾಣದಲ್ಲಿ ಲೈಂಗಿಕ ಅತ್ಯಾಚಾರ ಎಸಗುವುದಿಲ್ಲ? ಈ ಪ್ರಶ್ನೆಗೆ ಒಂದು ಉತ್ತರವೆಂದರೆ, ಹೆಣ್ಣು ತನಗಿಂತ ಕೆಳಗಿನವಳು, ಅವಳು ತನಗೆ ಸುಖ ನೀಡಲು ಇರುವ ಸರಕು . ನಾನು ಏನು ಮಾಡಿದರೂ ನಡೆಯುತ್ತದೆ,ನಾನು ಗಂಡು ಎಂದು ತಲಾ ತಲಾಂತರದಿಂದ ಬೆಳೆದು ಬಂದ ಪುರುಷಪ್ರಧಾನ ಮನಸ್ಥಿತಿ. ಈ ಮನಸ್ಥಿತಿಯು ಗಂಡನ್ನು ಪ್ರಚೋದಿಸುತ್ತದೆ, ಹೆಣ್ಣಿನ ಮೇಲೆ ದಾಳಿ ಮಾಡಲು ಗಂಡಿಗೆ ಧೈರ್ಯ ನೀಡುತ್ತದೆ. ಹೆಣ್ಣನ್ನು ಯಾವ ರೀತಿಯಲ್ಲಾದರೂ ಬಳಸಿಕೊಳ್ಳುವುದು ತನ್ನ ಹಕ್ಕು ಎಂಬ ಭಾವನೆ ಆತನಲ್ಲಿ ಮೂಡಿಸುತ್ತದೆ.

ಪ್ರಚೋದನೆಯಲ್ಲಿ ಮನಸ್ಥಿತಿಯ ಪಾತ್ರವೇ ದೊಡ್ಡದು

ಸಾರಾಂಶದಲ್ಲಿ ಹೇಳುವುದಾದರೆ, ಗಂಡು ಬೆಳೆದು ಬಂದ ರೀತಿಯಿಂದ, ಅಂತಹ ಪರಿಸರ ಹೆಣ್ಣಿನ ದೇಹವನ್ನು ನೋಡಿದಾಗ ಪುರುಷರು ಪ್ರಚೋದನೆಗೊಳಗಾಗಬಹುದು. ಆದರೆ ಆ ಪ್ರಚೋದನೆಯಲ್ಲಿ ಆ ಹೆಣ್ಣಿಗಿಂತಲೂ ಗಂಡಿನ ಮನಸ್ಥಿತಿಯ ಪಾತ್ರವೇ ದೊಡ್ಡದು ಎಂಬುದು ನಮಗೆ ಗೊತ್ತಿರಬೇಕು. ಆ ಮನಸ್ಥಿತಿಯನ್ನು ಶಿಕ್ಷಣದ ಮೂಲಕ, ಸಂಸ್ಕಾರದ ಮೂಲಕ ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳಲು ನಿರಂತರ ಯತ್ನಿಸುತ್ತಿರಬೇಕು. ಎಲ್ಲಿ ಸಮಾನತೆ, ಪ್ರೀತಿ ಮತ್ತು ಗೌರವ ಇರುತ್ತದೋ ಅಲ್ಲಿ ದೌರ್ಜನ್ಯ ಇರುವುದಿಲ್ಲ. ನಿಜ ಅರ್ಥದಲ್ಲಿ ಪ್ರೀತಿಸುವ, ಗೌರವಿಸುವ ಹೆಣ್ಣನ್ನೂ ನೋಡುವಾಗ ಗಂಡಿಗೆ ಕಾಮ ಪ್ರಚೋದನೆ ಆಗಬಹುದು, ಆದರೆ ಆಕೆಯನ್ನು ಎಂದೂ ಹಿಂಸಿಸುವುದಿಲ್ಲ, ನಮ್ಮ ಮನಸ್ಥಿತಿ ಸರಿ ಇದ್ದರೆ ಇನ್ನೊಬ್ಬರು ಧರಿಸುವ ಉಡುಪು ನಮ್ಮನ್ನು ಪ್ರಚೋದಿಸದು, ನಮ್ಮ ವರ್ತನೆಯನ್ನು ಬದಲಾಯಿಸದು. ಹಾಗಾಗಿ ಆಗಬೇಕಿರುವುದು ಹೆಣ್ಣನ್ನು ನೋಡುವ ಗಂಡಿನ ಮನಸ್ಥಿತಿಯಲ್ಲಿ ಬದಲಾವಣೆಯೇ ಹೊರತು ಹೆಣ್ಣು ಧರಿಸುವ ಉಡುಪಿನಲ್ಲಿ ಅಲ್ಲ.

ಈ ಹಿನ್ನೆಲೆಯಲ್ಲಿ, ಸದರಿ ತೀರ್ಪನ್ನು ನೋಡುವಾಗ ಅನ್ನಿಸುವುದು ಇಷ್ಟು- ನ್ಯಾಯಾಂಗವು ಶೀಘ್ರಲಿಂಗ ಸೂಕ್ಷ್ಮಗೊಳ್ಳಬೇಕಿದೆ. ಮಹಿಳೆಯ ಸ್ಥಾನದಲ್ಲಿ ನಿಂತು ಯೋಚಿಸಿ ತೀರ್ಪನ್ನು ನೀಡಬೇಕಿದೆ…..

 

✍️ ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *