November 22, 2024
7

ದಿನದಲ್ಲಿ 4 ಗಂಟೆ ಮೊಬೈಲ್‌ ಮುಟ್ಟಲೇಬೇಡಿ, ಆರೋಗ್ಯದಲ್ಲಿ ಬದಲಾವಣೆ ನೀವೇ ಕಾಣುವಿರಿ

ಕೆಲವರು ಗ್ಯಾಜೆಟ್‌ಗಳಿಗೆ ಎಷ್ಟು ಅಂಟಿಕೊಂಡು ಬಿಟ್ಟಿರುತ್ತಾರೆಂದರೆ ಟಾಯ್ಲೆಟ್‌ಗೆ ಕೂಡಾ ತೆಗೆದುಕೊಂಡು ಹೋಗುವವರಿದ್ದಾರೆ. ಇಂಥವರು ಒಂದು ಕ್ಷಣವೂ ತಮ್ಮ ಫೋನ್‌ ಆಗಲಿ, ಐಪ್ಯಾಡ್‌ ಆಗಲಿ ಬಿಟ್ಟಿರಲಾರರು. ಕೆಲವರಿಗೆ ಈ ಗ್ಯಾಜೆಟ್‌ಗಳಿಂದ ಅಷ್ಟೇನೂ ಕೆಲಸವಿಲ್ಲದಿದ್ದರೂ ಸ್ಕ್ರಾಲ್‌ ಮಾಡುವುದೊಂದೇ ಕೆಲಸವಾಗಿರುತ್ತದೆ. ಹೆಚ್ಚಿನವರು ಇಂಟರ್ನೆಟ್ ಮತ್ತು ಡಿಜಿಟಲ್ ಸ್ಕ್ರೀನ್‌ಗಳ ವ್ಯಸನಿಗಳಾಗಿರುತ್ತಾರೆ. ಎಷ್ಟು ಬಳಸುತ್ತೇವೋ ಅಷ್ಟು ನಮ್ಮ ಜೀವನ ಮೇಲೆ ಪರಿಣಾಮ ಬೀರುವುದಂತೂ ಸತ್ಯ. ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿಯೂ ಆಗಿರುತ್ತೆ ಇದು. ಇದರಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳುವುದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಒಳ್ಳೆಯದು. ಗ್ಯಾಜೆಟ್‌ಗಳಿಂದ ಸ್ವಲ್ಪ ಕಾಲ ದೂರವಿರುವುದನ್ನು ಡಿಜಿಟಲ್‌ ಡಿಟಾಕ್ಸ್‌ ಎಂದು ಕರೆಯುತ್ತಾರೆ. ಇದು ಪ್ರಯೋಜನಕಾರಿಯೇ, ಇದನ್ನು ಅಳವಡಿಸಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಡಿಜಿಟಲ್‌ ಡಿಟಾಕ್ಸ್‌ನ ಪ್ರಯೋಜನಗಳು

ಡಿಜಿಟಲ್‌ ಡಿಟಾಕ್ಸ್‌ ನಿಮ್ಮ ಮೊಬೈಲ್‌, ಲ್ಯಾಪ್‌ಟಾಪ್‌, ಐಪಾಡ್‌ಗಳಾಗಲಿ ಇದನ್ನು ಸ್ವಲ್ಪ ಹೊತ್ತಿ ಅನ್‌ಪ್ಲಗ್‌ ಮಾಡುವುದು ಅಥವಾ ಕಡಿಮೆ ಬಳಸಲು ಪ್ರಯತ್ನಿಸುವುದರಿಂದ ನಿಮ್ಮ ಜೀವನ ಗುಣಮಟ್ಟವನ್ನು ಸುಧಾರಿಸಬಹುದು. ಈ ಡಿಜಿಟಲ್‌ ಡಿಟಾಕ್ಸ್‌ ಪ್ರಕ್ರಿಯಯೆನ್ನು ಸಾಧ್ಯವಾದರೆ ನಾಲ್ಕು ಗಂಟೆಗಳವರೆಗೂ ಮಾಡಿ.ಇದರಿಂದಾಗುವ ಪ್ರಯೋಜನಗಳೆಂದರೆ,

ಮನೋಸ್ಥಿತಿ ಶಾಂತವಾಗುವುದು

ಡಿಜಿಟಲ್‌ ಮಾಧ್ಯಮಗಳಿಂದ ಸ್ವಲ್ಪ ಮಟ್ಟಿನ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ನಿಮ್ಮ ಒತ್ತಡದ ಮಟ್ಟಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಂಶೋಧನೆಯೂ ತೋರಿಸಿಕೊಟ್ಟಿದೆ. ಇದು ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಗ್ಯಾಜೆಟ್‌ ಬದಿಗಿರಿಸಿ, ಸುತ್ತಮುತ್ತಲಿನವರೊಂದಿಗೆ ಸಂಪರ್ಕ ಹೊಂದುವ ಮೂಲಕ ಆ ಕಡೆಗೆ ಹೆಚ್ಚು ಗಮನವಹಿಸಬಹುದು.

ಉತ್ಪಾದಕತೆ ಹೆಚ್ಚುವುದು

ಡಿಜಿಟಲ್‌ ಡಿಟಾಕ್ಸ್‌ ಪ್ರಕ್ರಿಯೆಯನ್ನು ಪ್ರಾರಂಭಿಸಿದ ನಂತರ ನೀವು ಎಷ್ಟು ಸಮಯ ಉಳಿಸುತ್ತೀರಿ ಎನ್ನುವುದನ್ನು ತಿಳಿದುಕೊಳ್ಳಬಹುದು. ಕೆಲವರು ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಸ್ಕ್ರಾಲ್‌ ಮಾಡುವುದು, ಸರ್ಫಿಂಗ್‌, ಪೋಸ್ಟ್‌ ಮಾಡುವುದರ ಮೂಲಕ ಸಮಯವನ್ನು ವ್ಯರ್ಥ ಮಾಡುತ್ತಾರೆ. ಮೊಬೈಲ್‌ನಲ್ಲಿ ಮುಳುಗಿ ಹೋದರೆ ಕೆಲವರಿಗೆ ಗಂಟೆಗಳ ಪರಿವೇ ಇರುವುದಿಲ್ಲ. ಈ ರೀತಿಯಾಗಿ ಸ್ವಲ್ಪ ಸಮಯ ಡಿಜಿಟಲ್‌ ಸಾಧನಗಳಿಂದ ದೂರವಿರುವುದರ ಮೂಲಕ ನಿಮ್ಮ ಮೇಲೆ ನಿಮಗೆ ಗಮನ ಕೊಡಲು ಸಮಯವೂ ಸಿಗುತ್ತದೆ. ನಿಮ್ಮ ಬಾಕಿ ಉಳಿದಿರುವ ಕೆಲಸಗಳನ್ನು ಮಾಡಬಹುದು. ಸಾಧ್ಯವಾಗದೇ ಇದ್ದ ಕೆಲಸಗಳನ್ನೂ ಈ ವಿರಾಮದ ಸಮಯದಲ್ಲಿ ಮಾಡಬಹುದು.

ನಿಮ್ಮ ಬಗ್ಗೆ ಉತ್ತಮ ಭಾವನೆ

ಈಗೀಗ ತಮ್ಮ ಖಾಸಗೀ ವಿಚಾರಗಳ ಬಗ್ಗೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡುತ್ತಾರೆ. ತಿನ್ನುವುದರಿಂದ ಹಿಡಿದು ಮಲಗುವ ತನಕವೂ ಟೈಮ್‌ ಟು ಟೈಮ್‌ ಅಪ್‌ಡೇಟ್‌ ಮಾಡದಿದ್ದರೆ ನಿದ್ದೆ ಬರದು ಕೆಲವರಿಗೆ. ಇದು ಒಂದು ರೀತಿಯ ವ್ಯಸನವಾಗಿ ಮುಂದೆ ಸಮಸ್ಯೆಯನ್ನೂ ತಂದೊಡ್ಡಬಹುದು. ಸೋಷಿಯಲ್‌ ಮೀಡಿಯಾದಲ್ಲಿ ನೋಡುವ ಎಲ್ಲವನ್ನೂ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಲು ಹೋದರೆ ಅದು ಇತರರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಮನೋಸ್ಥಿತಿಯೂ ಹಾಳಾಗುತ್ತದೆ.
ಡಿಜಿಟಲ್‌ ಮಾಧ್ಯಮದಲ್ಲಿ ಕೆಲವೊಮ್ಮೆ ಪೋಸ್ಟ್‌ ಮಾಡುವ ವಿಚಾರದಲ್ಲಿ ಪೈಪೋಟಿಯೂ ಬೆಳೆಯುತ್ತದೆ ಇದು ಒಂದು ರೀತಿಯಲ್ಲಿ ಅನಾರೋಗ್ಯಕರವಾದದ್ದು. ಹಾಗಾಗಿ ಇದರಿಂದ ಲಾಗ್‌ಔಟ್‌ ಆಗಿ ಸ್ವಲ್ಪ ಸಮಯ ಸಾಮಾಜಿಕ ಮಾಧ್ಯಮಗಳಿಂದ ದೂರವಿರುವುದು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಸಾಮಾಜಿಕ ಮಾಧ್ಯಮಗಳಿಂದಾಗಿ ಕೆಲವರು ತಮ್ಮ ನೈಜ ವ್ಯಕ್ತಿತ್ವವನ್ನೇ ಮರೆತುಬಿಡುತ್ತಾರೆ, ಈ ಡಿಜಿಟಲ್‌ ಡಿಟಾಕ್ಸ್‌ ನಿಮ್ಮ ಮನಸ್ಸನ್ನು ನಿಮ್ಮೊಂದಿಗೆ ಮರು ಸಂಪರ್ಕಿಸಲು ಸಹಾಯ ಮಾಡುತ್ತದೆ.

ಆರೋಗ್ಯವೂ ಉತ್ತಮಗೊಳ್ಳುವುದು

ಹೆಚ್ಚು ಸ್ಕ್ರೀನ್‌ ನೋಡುವುದು ನಿಮ್ಮ ಕಣ್ಣುಗಳಿಗೆ ತುಂಬಾ ಕೆಟ್ಟದು. ಇದು ಐ ಡ್ರೈನೆಸ್‌ಗೆ ಕಾರಣವಾಗಬಹುದು ಅಥವಾ ನೀವು ಮಸುಕಾದ ದೃಷ್ಟಿ, ಕಣ್ಣಿನಲ್ಲಿ ನೀರು, ಕಣ್ಣುಗಳು ಆಯಾಸ ಮತ್ತು ತಲೆನೋವು ಅನುಭವಿಸಬಹುದು. ಎಲೆಕ್ಟ್ರಾನಿಕ್ಸ್‌ನ ಅತಿಯಾದ ಬಳಕೆಯು ಭುಜ ಮತ್ತು ಬೆನ್ನಿನ ಸಮಸ್ಯೆಗಳಿಗೆ ಕಾರಣವಾಗಬಹುದು, ಏಕೆಂದರೆ ನೀವು ಭಂಗಿಯಲ್ಲಿ ಕುಳಿತುಕೊಂಡು ಹೆಚ್ಚು ಸಮಯ ಸ್ಕ್ರೀನ್‌ಗಳನ್ನು ನೋಡುತ್ತೀರಿ. ಈ ಗ್ಯಾಜೆಟ್‌ಗಳ ಸಂಪರ್ಕ ಕಡಿತಗೊಳಿಸುವಿಕೆಯು ನಿಮ್ಮ ದೇಹದ ವಿವಿಧ ಭಾಗಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ. ನಿಮ್ಮ ಪರದೆಯ ಮೇಲೆ ನೀವು ಎಷ್ಟು ಸಮಯ ಅಂಟಿಕೊಂಡಿರುತ್ತೀರೋ ಅಷ್ಟು ಸಮಯ ನೀವು ನಿಷ್ಕ್ರಿಯವಾಗಿ ಕುಳಿತುಕೊಳ್ಳುತ್ತೀರಿ. ಇದು ತುಂಬಾ ಅನಾರೋಗ್ಯಕರ ಅಭ್ಯಾಸ.

ಉತ್ತಮ ನಿದ್ರೆ

ಕೆಲವರಿಗೆ ಮಲಗುವಾಗ ಮೊಬೈಲ್‌ ಸ್ಕ್ರೀನ್‌ ಸ್ಕ್ರಾಲ್‌ ಮಾಡದಿದ್ರೆ ನಿದ್ದೆ ಬರದು. ಆದರೆ ನಿಮ್ಮ ದೇಹ ಮತ್ತು ಮೆದುಳು ನಿಮ್ಮ ದಿನಚರಿಯೊಂದಿಗೆ ಹೊಂದಿಕೊಳ್ಳುತ್ತದೆ. ನೀವು ಮಲಗುವ ಸಮಯ ಬಂದಾಗ, ಮೆದುಳು ಮೆಲಟೋನಿನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ನಿಮಗೆ ಉತ್ತಮ ರಾತ್ರಿ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಆದರೆ, ಎಲೆಕ್ಟ್ರಾನಿಕ್ ಸಾಧನಗಳು ಮೆದುಳನ್ನು ಎಚ್ಚರವಾಗಿರಿಸುತ್ತದೆ ಮತ್ತು ಮೆಲಟೋನಿನ್ ಬಿಡುಗಡೆಯನ್ನು ವಿಳಂಬಗೊಳಿಸುತ್ತದೆ. ಇದು ನಿದ್ರಾಹೀನತೆಯ ಲಕ್ಷಣಗಳಿಗೆ ಅಥವಾ ಗುಣಮಟ್ಟದ ನಿದ್ರೆ ಪಡೆಯಲು ಅಸಮರ್ಥತೆಗೆ ಕಾರಣವಾಗಬಹುದು. ಮಲಗುವ ನೀವು ವಿಶೇಷವಾಗಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಬಾರದು.

ಟೆಕ್‌ ಡಿಟಾಕ್ಸ್‌ ಮಾಡುವುದು ಹೇಗೆಂದರೆ..

ಕೆಲವರಿಗೆ ಲ್ಯಾಪ್‌ಟಾಪ್‌ ಆಗಲಿ ಮೊಬೈಲ್ ಆಗಲಿ ವೃತ್ತಿಯನ್ನು ಮುನ್ನಡೆಸಲು ಬೇಕೆ ಬೇಕು. ಅದರಿಂದಲೇ ಎಲ್ಲಾ ಕೆಲಸವು ನಡೆಯುವಂತಿದ್ದರೆ ಈ ಡಿಟಾಕ್ಸ್‌ ಮಾಡುವುದು ಸ್ವಲ್ಪ ಕಷ್ಟ. ಕೆಲವರಿಗೆ ಆಫೀಸ್‌ ಕೆಲಸದಿಂದಾಗಿ ದಿನವಿಡೀ ಆನ್‌ಲೈನ್‌ನಲ್ಲೇ ಇರಬೇಕಾಗುತ್ತೆ. ಇದು ಒಂದು ರೀತಿಯಲ್ಲಿ ಅನಾರೋಗ್ಯಕರವೂ ಹೌದು. ಇಂತವರು ಕಣ್ಣಿಗೆ ವಿಶ್ರಾಂತಿ ನೀಡುವುದಕ್ಕಾದರೂ ಸ್ವಲ್ಪ ಸಮಯ ಲ್ಯಾಪ್‌ಟಾಪ್‌, ಮೊಬೈಲ್‌ ಪರದೆಯನ್ನು ಆಫ್‌ ಮಾಡಲೇಬೇಕು. ಐದರಿಂದ ಹತ್ತು ನಿಮಿಷವಾದರೂ ಗ್ಯಾಜೆಟ್‌ ಮುಚ್ಚಿ ಕಣ್ಣುಗಳಿಗೆ ವಿಶ್ರಾಂತಿ ನೀಡಿ

ನಿಮ್ಮ ಸ್ಕ್ರೀನಿಂಗ್‌ ಟೈಮ್‌ ಮಿತಿಗೊಳಿಸಲು ಎರಡು ಪರಿಹಾರಗಳಿವೆ. ನಿಮ್ಮ ವೃತ್ತಿಯೇ ಆನ್‌ಲೈನ್‌ ಮೂಲಕವಾದರೆ ಅದು ನಿಮ್ಮ ಆದ್ಯತೆಯಾಗಿರುತ್ತದೆ. ಹಾಗಾಗಿ ಕೆಲಸ ಮಾಡುವಾಗ ಮಾತ್ರ ಎಲೆಕ್ಟ್ರಾನಿಕ್‌ ಸ್ಕ್ರೀನ್‌ ಬಳಸಿ. ಎರಡನೆಯದಾಗಿ ನಿಮ್ಮ ವೈಯಕ್ತಿಕ ಸಮಯದಲ್ಲಿ ತಂತ್ರಜ್ಞಾನದ ಬಳಕೆಯನ್ನು ಕಡಿಮೆ ಮಾಡಿ. ಅನಗತ್ಯವಾಗಿ ಫೇಸ್‌ಬುಕ್‌ ಅಥವಾ ಇನ್ಸ್ಟಾಗ್ರಾಂನಲ್ಲಿ ಸ್ಕ್ರಾಲ್‌ ಮಾಡುವ ಸಮಯವನ್ನು ಕಡಿತಗೊಳಿಸಿ. ಇದರ ಬದಲಾಗಿ ಬೇರೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ ಅಥವಾ ಪುಸ್ತಕ ಓದಿ. ಎಲೆಕ್ಟ್ರಾನಿಕ್‌ ಗ್ಯಾಜೆಟ್‌ ಬಿಟ್ಟು ಬೇರೆ ವಿಷಯಗಳತ್ತ ಗಮನ ಕೇಂದ್ರೀಕರಿಸಿ.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ಟಿ ೧೯

Leave a Reply

Your email address will not be published. Required fields are marked *