ತುಲುವರು ಕೈ ಮತ್ತು ಪೂಲು ಎಂಬ ಎರಡು ತುಲು ಪದಗಳನ್ನು ಸೇರಿಸಿ “ಕೈಪೂಲು”ಎಂದು ಕರೆದಿದ್ದಾರೆ. ಕೈ ಎಂದರೆ ಹಿಡಿ (handle)ಎಂದರ್ಥ. ಪೂಲು ಎಂದರೆ ಭಾಗ (Pieces)ಅಥವಾ ತುಂಡುಗಳು ಎಂಬ ಅರ್ಥವಾಗಿದೆ. ತುಲುನಾಡಿನಾದ್ಯಂತ ಕೃಷಿಕರ ಮನೆಗಳಲ್ಲಿ ಇದು ಸರ್ವೇಸಾಮಾನ್ಯವಾಗಿ ಇರುತ್ತದೆ. ಕೃಷಿಕರ ವಿವಿಧ ಸಲಕರಣೆಗಳಲ್ಲಿ ಕೈಪೂಲು ಕೂಡಾ ಒಂದಾಗಿದೆ. ಆದಿ ಆರಂಭದಲ್ಲಿ ಇದನ್ನು ಮರದಿಂದಲೇ ಮಾಡಲಾಗುತ್ತಿತ್ತು. ತುಲುನಾಡಿನ ಕೆಲವೆಡೆ ಇದನ್ನು “ನೆಲ್ಲಿಕೋರಿ”ಎಂತಲೂ ಕರೆಯುತ್ತಾರೆ. ನೆಲ್ಲಿ+ಗೋರಿ ಪದಗಳನ್ನು ಒಟ್ಟಾಗಿ “ನೆಲ್ಲಿಗೋರಿ”ಎಂದಿದ್ದಾರೆ. ಕ್ರಮೇಣ ನೆಲ್ಲಿಕೋರಿ ಎಂದು ಕರೆದರು. “ನೆಲ್ಲಿ” ಎಂದರೆ ಚಿಕ್ಕ,ಪುಟ್ಟ,ಸಣ್ಣ ಎಂಬ ಅರ್ಥಗಳು. “ಗೋರಿ” ಅಥವಾ “ಕೋರಿ”” ಎಂದರೆ ಬಾಚುವುದು ಎಂದಾಗುತ್ತದೆ.
ಅಡಿಕೆಯನ್ನು ಭಾಗಮಾಡಿ ತುಂಡರಿಸಿದ ಸಣ್ಣಸಣ್ಣ ಭಾಗ ವನ್ನು ತುಲು ಭಾಷೆಯಲ್ಲಿ “ಪೂಲು”ಎನ್ನುತ್ತಾರೆ. ಅದೇ ರೀತಿ ಹಲಸಿನ ಹಣ್ಣನ್ನು ನಾಲ್ಕು ಭಾಗಗಳಲ್ಲಿ ಕತ್ತರಿಸಿದರೆ ಅವುಗಳನ್ನು “ಪಾಲಡಿ”ಎನ್ನುತ್ತಾರೆ. ಅದೇ ಪಾಲಡಿಗಳನ್ನು ಪುನಃ ಕತ್ತರಿಸಿದರೆ ಆ ಭಾಗಗಳನ್ನು “ಪೂಲು”ಎನ್ನುತ್ತಾರೆ. ಹಲಸಿನ ಹಣ್ಣುಗಳನ್ನು ಪೂಲುಗಳನ್ನಾಗಿ ಕತ್ತರಿಸಿ ಹಂಚಿ ತಿನ್ನುವ ರೂಢಿ ತುಲುನಾಡಲ್ಲಿದೆ .”ಪೂಲು”ಎಂದರೆ ಕಿನ್ಯ,ಎಲ್ಯ(ಚಿಕ್ಕ,ಸಣ್ಣ,ಪುಟ್ಟ)ಎಂಬ ಅರ್ಥವಾಗಿರುತ್ತದೆ. “ನೆಲ್ಲಿ”ಎಂದರೂ ಅದೇ ಮೀನಿಂಗ್ ಆಗುತ್ತದೆ. ಕೋಳಿಯ ಮೊಟ್ಟಮೊದಲ ಮೊಟ್ಟೆಯು ಸಣ್ಣದಾಗಿ ಇರುತ್ತದೆ. ಈ ಸಣ್ಣದಾದ ಮೊಟ್ಟೆಯನ್ನು “ನೆಲ್ಲಿ ಕೆತ್ತಿ”(ಚಿಕ್ಕ ಮೊಟ್ಟೆ) ಎನ್ನುವರು. ಅದೇ ರೀತಿಯಲ್ಲಿ ಬಾಳೆಗೊನೆಯು ಬಲಿತು ನಿಂತಾಗ ಅದರ ಹೂವು(ಪೂಂಬೆ)ಚಿಕ್ಕದಾಗಿ ಇರುತ್ತದೆ.
ಅದನ್ನು ತುಲುವರು”ನೆಲ್ಲಿ ಪೂಂಬೆ”ಎಂದು ಕರೆಯುತ್ತಾರೆ. “ನೆಲನೆಲ್ಲಿ” ಎಂಬ ಸಣ್ಣ ಗಿಡದಲ್ಲಿ ಚಿಕ್ಕ ಚಿಕ್ಕ ನೆಲ್ಲಿಯಂತ ಹ ಕಾಯಿ ಇದೆ.
ಕೈಪುಲು|ನೆಲ್ಲಿಕೋರಿ ಎಂದರೆ ಅದೊಂದು ಭತ್ತವನ್ನು ಹರಡಲು,ಗುಡ್ಡೆ ಮಾಡಲು,ರಾಶಿಮಾಡಲು ಬಳಸುವ ಮರದಿಂದ ತಯಾರಿಸಿದ ಸಾಧನ ಅಥವಾ ಸಲಕರಣೆ ಎಂದು ಹೇಳಿ ಬಿಡುತ್ತಾರೆ. ಇದೊಂದು ಭತ್ತವನ್ನು ಕುರ್ವೆ, ಪುಡಾಯಿ,ಕಾಂಟ್ಯ(ಬುಟ್ಟಿ,ಹೆಡಿಗೆ)ಗಳಲ್ಲಿ ತುಂಬಿಸುವ ಸಾಧನ ಎಂತಲೂ ತುಲುವರು ಹೇಳುತ್ತಾರೆ. ಆದರೆ ಇದು ತಪ್ಪು ಆಗಿರುವ ಸಂಗತಿ ಆಗಿರುತ್ತದೆ.
ಆದಿ ಮೂಲದಲ್ಲಿ ಅಂದರೆ ತುಲುನಾಡಲ್ಲಿ ಭತ್ತವನ್ನು ಬೆಳೆಸಲು ಆರಂಭ ಆದ ಕಾಲದಲ್ಲಿ ಈ ಸಾಧನದ ಜನನ ವಾಗುತ್ತದೆ. ಆದರೆ ಇದರ ಮೂಲ ಉದ್ದೇಶವು ಭತ್ತವನ್ನು ಹರಡಲು,ಗುಡ್ಡೆಮಾಡಲು,ಬುಟ್ಟಿಗೆ ತುಂಬಿಸುವ ಸಲುವಾಗಿ ಹುಟ್ಟಿರಲಿಲ್ಲ. ಬದಲಾಗಿ ವಿಶಾಲವಾದ ಅಂಗಳದಲ್ಲಿ ಎರಡೆರಡು ಪಡಿಮಂಚ(ಪೈರಿನಿಂದ ಭತ್ತವನ್ನು ಬೇರ್ಪಡಿ ಸುವ ಮರದ ಮಂಚ)ಗಳಲ್ಲಿ ತುಂಬಾ ಆಳುಗಳು ಪೈರನ್ನು ಹೊಡೆಯುತ್ತಿದ್ದ ಕಾಲವದು. ತುಂಬಾ ಜಮೀನು ಇದ್ದವರು. ಅಂಗಳದಲ್ಲಿ ದಟ್ಟವಾಗಿ ದಪ್ಪವಾಗಿ ಭತ್ತ ಹರಡಿರುತ್ತದೆ. ಪಡಿಮಂಚದ ಕೆಳಗೆ ಭತ್ತದ ರಾಶಿಯು ಇರುತ್ತದೆ. ಅದು ಬಿಟ್ಟು ಉಳಿದೆಡೆ ರಾಶಿಯಾಗಿ ಭತ್ತ ಇರುವುದಿಲ್ಲ .ಮಂಚದ ಅಡಿಯ ಭತ್ತವನ್ನು ಬಿಟ್ಟು ಬೇರೆಡೆ ಹರಡಿರುವ ಭತ್ತವನ್ನು ಅಲ್ಲಲ್ಲಿ ಈ ಕೈಪೂಲು|ನೆಲ್ಲಿಕೋರಿಯಲ್ಲಿ ಹಗುರವಾಗಿ ಎಳೆದು ಸಣ್ಣ ಸಣ್ಣ ರಾಶಿ ಮಾಡಿ ನಂತರದಲ್ಲಿ ಕೈಯಲ್ಲಿ ಕುರ್ವೆ|ಕುಕ್ಕೆ|ಹೆಡಿಗೆಗೆ ಕೈಗಳಿಂದ ಬಾಚಿ ತುಂಬಿಸಿ ದೊಡ್ಡ ರಾಶಿಗೆ ತಂದು ಹಾಕಬೇಕು ಎಂಬ ನಿಯಮ ಆದಿಮೂಲ ಆರಂಭದಲ್ಲಿ ಇತ್ತು.
ಪೈರು ಹೊಡೆದ ಬಳಿಕ ಹರಡಿದ ಭತ್ತವನ್ನು ಯಾವ ಮಾತ್ರಕ್ಕೂ ಹೆಚ್ಚು ಎಳೆಯಬಾರದು. ಈ ಸಾಧನದ ಸಹಾಯದಿಂದ ಅಲ್ಲಲ್ಲಿ ಸಣ್ಣ ಪೂಲು(ಭಾಗ)ಗಳನ್ನಾಗಿ ಮಾಡಬೇಕು. ಈ ಚಿಕ್ಕಚಿಕ್ಕ (ನೆಲ್ಲಿ) ರಾಶಿಗಳ ಭತ್ತವನ್ನು ಕುರ್ವೆಗಳನ್ನು ಕೋರೆ ಮಾಡಿ ಗೋರ(ಬಾಚ)ಬೇಕು. ಕುರ್ವೆ ಗಳಲ್ಲಿ ಕೈಯಿಂದಲೇ ಬಾಚಿ ಭತ್ತ ತುಂಬಿಸಬೇಕು. ಈ ಸಾಧನದಿಂದಲ್ಲ. ತುಂಬಿಸಿದ ಭತ್ತವನ್ನು ದೊಡ್ಡ ರಾಶಿಗೆ ಇಲ್ಲವೇ ಭತ್ತ ಸಂಗ್ರಹಿಸುವ ಸ್ಥಳಕ್ಕೆ ಸುರಿಯುವುದು. ಯಾವ ಮಾತ್ರಕ್ಕೂ ಭತ್ತದ ರಾಶಿಯಿಂದ ಭತ್ತವನ್ನು ಈ ಕೈಪೂಲು ಅಥವಾ ನೆಲ್ಲಿ ಕೋರಿ ಸಾಧನದಿಂದ ನೇರವಾಗಿ ಕುರ್ವೆ ಕುಕ್ಕೆಗಳಿಗೆ ತುಂಬಿಸಬಾರದು. ಈ ಸಾಧನವು ಬರೇ ಹತ್ತಿರದಿಂದ ಹತ್ತಿರಕ್ಕೆ ಗುಡ್ಡೆಗಳನ್ನು ಮಾಡಲು ಬಳಸುವುದು. ನಂತರ ಭತ್ತದ ಗುಡ್ಡೆಗಳನ್ನು ಕೈಗಳಿಂದ ಬಾಚಿ (ಗೋರು)ತುಂಬಿಸುವುದು. ನಂತರ ಹಿಡಿಸೂಡಿ(ಪೊರಕೆ) ಯಿಂದ ರಾಶಿ ಮಾಡುವುದು.
ಬಾರ್(ಭತ್ತ)ಎಂದರೆ ಬಾಲ್(ಬಾಳು,ಬದುಕು)ಎಂಬ ನಂಬಿಕೆ ತುಲುವರದ್ದಾಗಿತ್ತು. ಬಾರ್ ದಕ್ಕುನು(ಬಿಸಾಕುವು ದು)ಎಂದು ಹೇಳುವಂತಿಲ್ಲ. ಎಸೆಯುವುದು ಎಂದು ಹೇಳು ವಂತಿಲ್ಲ. ಬಾರ್ ಪತ್ತೊಡು(ಹಿಡಿಯಬೇಕು)ಎನ್ನಬೇಕು. ಬಾರ್ ಬಿತ್ತೊಡು(ಭತ್ತ ಬಿತ್ತ ಬೇಕು)ಎನ್ನಬಾರದು.ಬಿತ್ತ್ (ಬೀಜ)ಬಿತ್ತೊಡು,ಬಿತ್ತ್ ದಕ್ಕೊಡು(ಬೀಜ ಎಸೆಯುವುದು, ಬೀಜ ಬಿತ್ತ ಬೇಕು)ಎನ್ನುವುದು. ಭತ್ತಕ್ಕೆ ಅಷ್ಟೊಂದು ಗೌರವ ಕೊಡಬೇಕು. ಅದು ಬದುಕು,ಬಾಳು ಕೊಡುತ್ತದೆ. ಅದು ಮುಖ್ಯ ಆಹಾರದ ಧಾನ್ಯವಾಗಿದೆ. ಅದು ಹಸಿವನ್ನು ನೀಗಿಸುವ ಧಾನ್ಯವಾದ ಕಾರಣಕ್ಕೆ ಅದನ್ನು ಗೌರವದಿಂದ ಆರಾಧಿಸುವುದು. ತುಲುನಾಡಿನ ಇತರ ಧಾನ್ಯವಾದ ಹುರುಳಿ,ಹೆಸರು,ಉದ್ದು,ಎಳ್ಳು ಇವುಗಳ ಹೆಸರು ಹೇಳಿ ಬಿತ್ತುವುದು ಎನ್ನುತ್ತಾರೆ. ಆದರೆ ಭತ್ತಕ್ಕೆ ಬೀಜ ಬಿತ್ತನೆ ಎನ್ನುತ್ತಾರೆ.
ಭತ್ತವನ್ನು ಯಾವುದೇ ಸಾಧನದಿಂದ ಬಲವಾಗಿ ಎಳೆಯ ಬಾರದು. ಭತ್ತಕ್ಕೆ ಘರ್ಷಣೆ ಆಗಬಾರದು. ಏಕೆಂದರೆ ಭತ್ತದಿಂದ ಭತ್ತವನ್ನು ಪಡೆಯಲು ಅವುಗಳಿಗೆ ಏಟು ಆಗಬಾರದು. ಅದಕ್ಕಾಗಿ ಮರದ ಕೈಪೂಲು ಎಂಬ ಸಾಧನದಿಂದ ಅಲ್ಲಲ್ಲಿ ಚಿಕ್ಕ ಪುಟ್ಟ ಗುಡ್ಡೆಗಳನ್ನು ಮಾಡಿ ಕೈಯಿಂದಲೇ ಬುಟ್ಟಿಗಳಲ್ಲಿ ತುಂಬಿ ರಾಶಿಗೆ ತುಂಬಿಸುವ ಕೆಲಸ ಆಗಬೇಕು.ನಂತರ ಪೊರಕೆಯಿಂದ ಗುಡಿಸಿ ಒಟ್ಟುಗೂಡಿಸುವುದು.
ಈಗಿನವರು ಈ ಕೈಪೂಲ್|ನೆಲ್ಲಿಕೋರಿಯ ಮಹತ್ವದ ನಿಯಮಗಳನ್ನು ಪಾಲಿಸುವುದಿಲ್ಲ. ಭತ್ತವನ್ನು ನೇರವಾಗಿ ಎಳೆದು ಗುಡ್ಡೆ ಮಾಡುತ್ತಾರೆ. ಅದರಿಂದಲೇ ಬುಟ್ಟಿಗಳಲ್ಲಿ ತುಂಬಿಸುತ್ತಾರೆ. ಭತ್ತವಲ್ಲದೆ ಅಡಿಕೆ ಇತ್ಯಾದಿಗಳಲ್ಲಿ ಬಳಸು ತ್ತಾರೆ. ಕೈಪೂಲ್ ಇದರಿಂದಲೇ ಇವುಗಳನ್ನು ಹರಡಿಸುವು ದು ಕಾಣುತ್ತೇವೆ. ಈಗ ಕಬ್ಬಿಣದ ಕೈಪೂಲ್ ಬಂದಿದೆ. ಅಂದು ಭತ್ತಕ್ಕೆ ಹೆಚ್ಚಿನ ಒತ್ತಡ ಘರ್ಷಣೆ ಆಗಬಾರದು ಎಂದು ಮರದ ಕೈಪೂಲ್ ಬಳಕೆಯಲ್ಲಿತ್ತು. ಅದು ಬಾಳು ಬದುಕು ಕೊಡುವ ಧಾನ್ಯ ಎಂದು ಗೌರವದಿಂದ ಭಕ್ತಿಯಿಂದ ಕಾಣುವುದು ಇತ್ತು. ಆಗಿನ ಎಲ್ಲಾ ಕೃಷಿ ಸಾಧನಗಳು ಈಗ ಕಣ್ಮರೆಯಾಗಿದೆ. ಅಂದು ದೀಪಾವಳಿ ದಿನಗಳಲ್ಲಿ ಎಲ್ಲಾ ಕೃಷಿ ಸಲಕರಣೆಗಳನ್ನು ಒಂದು ಕಡೆ ಇಟ್ಟು ಆರಾಧಿಸುವ ಸಂಪ್ರದಾಯ ಇತ್ತು. ಈ ಕೈಪೂಲ್ ಕೂಡಾ ಎಲ್ಲರ ಗಮನ ಸೆಳೆಯುತ್ತಿತ್ತು.
ಕೈಪೂಲು,ನೆಲ್ಲಿಕೋರಿ ಎಂಬ ಪದಗಳಲ್ಲೇ ಕೈಯನ್ನು ಬಳಸಬೇಕು ಎಂದಿದೆ. ಭತ್ತದ ಚಿಕ್ಕಪುಟ್ಟ ರಾಶಿ ಮಾಡಿ ಕೈಯಿಂದಲೇ ಬಾಚಿ(ಗೋರುನು)ಕುಕ್ಕೆ,ಬುಟ್ಟಿ,ಹೆಡಿಗೆ ಗಳಲ್ಲಿ ತುಂಬಿಸಬೇಕು ಎಂದು ಹೇಳುತ್ತದೆ. ಭತ್ತವನ್ನು ಕಾಲುಗಳಿಂದಲೂ ರಾಶಿ ಮಾಡಬಹುದು. ಆದರೆ ಅದನ್ನು ಎಲ್ಲೂ ಹೇಳಿಲ್ಲ. ವಿಚಾರ ಎಂದರೆ ಭತ್ತ(ಬಾರ್)ವು ಬದುಕು ಕೊಡುತ್ತದೆ. ಅದು ಪವಿತ್ರ ಅದಕ್ಕೆ ಭತ್ತವನ್ನು ತುಳಿಯ ಬಾರದು ಎಂಬ ನಂಬಿಕೆ ಅಂದು ಇತ್ತು.
ಐ.ಕೆ.ಗೋವಿಂದ ಭಂಡಾರಿ
(ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್)
ಕಾರ್ಕಳ.9632562679