November 24, 2024
1

ಲೈಫ್‌ನಲ್ಲಿ ಕಣ್ಣಿನ ಸಮಸ್ಯೆಗಳು ಬರಬಾರದೆಂದರೆ, ಈ ಆಹಾರಗಳನ್ನು ತಿನ್ನಲೇಬೇಕು!

ನೈಸರ್ಗಿಕವಾಗಿ ಸಿಗುವ ಹಣ್ಣು-ತರಕಾರಿಗಳು, ಧಾನ್ಯಗಳು, ಬೀಜಗಳನ್ನು, ಮಿತಪ್ರಮಾಣದಲ್ಲಿ ಮೀನು ಸೇವನೆ ಮಾಡುತ್ತಾ ಬಂದ್ರೆ, ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು….

ಕೆಲವೊಮ್ಮೆ ಇದ್ದಕ್ಕಿದ್ದಂತೆ ಕಣ್ಣುಗಳ ಭಾಗದಲ್ಲಿ ನೀರು ತುಂಬಿಕೊಳ್ಳುವುದು, ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗುವುದು, ಇಲ್ಲಾಂದ್ರೆ ಉರಿ ಕಂಡು ಬರುವುದು, ಇವೆಲ್ಲಾ ಕಣ್ಣುಗಳಿಗೆ ಸಮಸ್ಯೆಗಳು ಎದುರಾದಾಗ, ಕಂಡುಬರುವ ಸಾಮಾನ್ಯ ಲಕ್ಷಣಗಳು. ಆದರೆ ಇದನ್ನು ದೊಡ್ಡದಾಗಲು ಬಿಟ್ಟರೆ ಮುಂದಿನ ದಿನಗಳಲ್ಲಿ ಕಣ್ಣುಗಳ ಸೋಂಕು ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ! ಹೀಗಾಗಿ ಆರಂಭದ ಲ್ಲಿಯೇ ಇದರ ಬಗ್ಗೆ ಗಮನಹರಿಸಿದರೆ ಕಣ್ಣುಗಳನ್ನು ನೀವು ರಕ್ಷಣೆ ಮಾಡಿಕೊಳ್ಳಬಹುದು.

ಮೊಟ್ಟ ಮೊದಲು ಕಣ್ಣುಗಳ ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಕೆಲವೊಂದು ಒಳ್ಳೆಯ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು. ಉದಾಹರಣೆ ವಿಪರೀತ ಕಂಪ್ಯೂಟರ್ ಮುಂದೆ ಅಥವಾ ಮೊಬೈಲ್ ಮುಂದೆ ಮುಂದೆ ಸಮಯವನ್ನು ಕಳೆಯಬಾರದು. ಜೊತೆಗೆ ಕಣ್ಣುಗಳ ಆರೋಗ್ಯವನ್ನು ಕಾಪಾಡಲು ಕೆಲವು ಆಹಾರಗಳನ್ನು ಆಹಾರ ಕ್ರಮದಲ್ಲಿ ಬಳಕೆ ಮಾಡಬೇಕು. ಹೀಗಾಗಿ ಪ್ರಕೃತಿಯಲ್ಲಿ ಸಿಗುವಂತಹ ಕೆಲವೊಂದು ನೈಸರ್ಗಿಕ ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಬೀಜಗಳು ಇತ್ಯಾದಿಗಳನ್ನು ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು ಮುಂದೆ ಓದಿ…

ಮೀನು

  • ನಮ್ಮ ಕರಾವಳಿ ಕಡೆಗಳಲ್ಲಿ ಕೆಲವರಿಗೆ ಮೀನು ಕರಿ ಇಲ್ಲಾಂದ್ರೆ ಊಟನೇ ಸೇರಲ್ಲ! ಹೆಚ್ಚಿನವರಿಗೆ ಚಿಕನ್‌ ಕ್ಕಿಂಲೂ, ಮೀನು ಎಂದರೆ ತುಂಬಾನೇ ಇಷ್ಟ! ಆದ್ರೆ ಮೀನು ಇಷ್ಟಪಡುವವರಿಗೆ ಒಂದು ಸಿಹಿ ಸುದ್ದಿ ಇದೆ, ಅದೇನೆಂದರೆ ಮೀನಿನಷ್ಟು ಆರೋಗ್ಯಕರ ಆಹಾರ ಮತ್ತೊಂದಿಲ್ಲ ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ.
  • ಇದಕ್ಕೆ ಬಹು ಮುಖ್ಯ ಕಾರಣಗಳು ಏನೆಂದರೆ ಈ ಮೀನುಗಳಲ್ಲಿ ಮನುಷ್ಯನ ದೇಹಕ್ಕೆ ಬೇಕಾಗುವ, ಒಳ್ಳೆಯ ಕೊಬ್ಬಿನ ಅಂಶ ಎಂದೇ ಗುರುತಿಸಿಕೊಂಡಿರುವ ಒಮೆಗಾ -3 ಫ್ಯಾಟಿ ಆಸಿಡ್‌ಗಳು ಹೇರಳವಾಗಿ ಲಭ್ಯವಿವೆ. ಇವು ಮನುಷ್ಯನ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ಕಣ್ಣಿನ ರಕ್ಷಣೆ ಮಾಡುವುದು.
  • ಹೀಗಾಗಿ ನಿಯಮಿತವಾಗಿ ಮೀನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸಾಧ್ಯವಾದರೆ ಸಾಲ್ಮನ್, ಟ್ಯೂನಾ ಮೀನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

ಬೇಯಿಸಿದ ಮೊಟ್ಟೆ!

  • ದಿನಕ್ಕೊಂದು ಮೊಟ್ಟೆ ತಿಂದರೆ ವೈದ್ಯರಿಂದ ದೂರವಿಡಬಹುದು ಎನ್ನುವ ಧ್ಯೇಯ ವಾಕ್ಯವನ್ನು ನಾವು ಸಣ್ಣವರಿಂದಲೂ ಕೂಡ ಕೇಳುತ್ತಾ ಬಂದಿದ್ದೇವೆ. ಹೌದು ಇದು ನಿಜ ಕೂಡ…ತಜ್ಞರು ಕೂಡ ಅಷ್ಟೇ ಮೊಟ್ಟೆಯನ್ನು ವಿಶ್ವದಲ್ಲಿ ಅತೀ ಪೌಷ್ಟಿಕ ಸತ್ವಗಳು ಇರುವ ಆಹಾರ ಎಂದೇ ಪರಿಗಣಿಸಿದ್ದಾರೆ.
  • ಇದರಲ್ಲಿ ಕೂಡ ಸತು, ವಿಟಮಿನ್ ಎ, ಲ್ಯೂಟೀನ್ ಮತ್ತು ಜಿಯಾಗ್ಸಾಂಥಿನ್ ಎಂಬ ಎರಡು ಶಕ್ತಿಯುತವಾದ ಆಂಟಿ-ಆಕ್ಸಿಡೆಂಟ್ ಗಳು ಕಣ್ಣುಗಳಿಗೆ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿ ಕೊಳ್ಳುತ್ತವೆ. ಮುಖ್ಯವಾಗಿ ಮೊಟ್ಟೆಯಲ್ಲಿ ಕಂಡು ಬರುವ ವಿಟಮಿನ್ ಎ ಅಂಶ ಹೆಚ್ಚಾಗಿದ್ದು, ಇದು ವಯಸ್ಸಾದಂತೆ ಕಾಡುವ ಕಣ್ಣಿನ ಕುರುಡುತನ ಸಮಸ್ಯೆಯನ್ನು ಹತ್ತಿರ ಕೂಡ ಸುಳಿಯದಂತೆ ನೋಡಿಕೊಳ್ಳುತ್ತದೆ.

ಬಾದಾಮಿ ಬೀಜಗಳು

  • ಬಾದಾಮಿ ಬೀಜಗಳು ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಉಳಿದೆಲ್ಲಾ ವಿಷ್ಯದಲ್ಲೂ ಕೂಡ ಈ ಒಣಫಲದ ಬಗ್ಗೆ ಎರಡು ಮಾತಿಲ್ಲ. ಈ ಒಣಫಲದಲ್ಲಿ, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಹಲವಾರು ಬಗೆಯ ಅಗತ್ಯ ಪೋಷಕಾಂಶಗಳು ಕಂಡು ಬರುತ್ತದೆ.
  • ಇದರಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳು ಯಥೇಚ್ಛವಾಗಿ ಕಂಡು ಬರುತ್ತದೆ. ಇದರಲ್ಲೂ ಈ ಬೀಜಗಳಲ್ಲಿ ಕಂಡು ಬರುವ ವಿಟಮಿನ್ ಇ, ಹಾಗೂ ವಿಟಮಿನ್ ಎ ಕಣ್ಣಿನ ಅಂಗಾಂಶಗಳನ್ನು ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೀಗಾಗಿ ಪ್ರತಿದಿನ ಒಂದೆರಡು ನೆನೆಸಿಟ್ಟ ಬಾದಾಮಿ ಬೀಜಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.

ಹಾಲಿನ ಉತ್ಪನ್ನಗಳು

ಹಾಲು ಹಾಗೂ ಹಾಲಿನ ಉಪ ಉತ್ಪನ್ನಗಳಾದ ಮೊಸರು, ಮಜ್ಜಿಗೆ ತುಪ್ಪ, ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ವಿಷಯಗಳು ನಮಗೆಲ್ಲಾ ಗೊತ್ತೇ ಇದೆ. ಇವುಗಳಲ್ಲಿ ಪ್ರಮುಖ ಖನಿಜಾಂಶಗಳಾದ ಸತು ಹಾಗೂ ವಿಟಮಿನ್ ಎ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ, ಕಣ್ಣಿನ ಪೊರೆ ತಡೆಯುವುದು ಮತ್ತು ರಾತ್ರಿ ಕುರುಡು ಸಮಸ್ಯೆಯನ್ನು ದೂರಮಾಡುವುದು. ಹೀಗಾಗಿ ಆದಷ್ಟು ಹಾಲು, ಮೊಸರು, ಮಜ್ಜಿಗೆ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಕ್ಯಾರೆಟ್

ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್‌ ಬಹಳ ಬಳ್ಳೆಯದು. ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಎ ಹಾಗೂ ಬೆಟಾ ಕ್ಯಾರೋಟಿನ್ ಹೊಂದಿರುವ ಈ ತರಕಾರಿಯನ್ನು ಸೇವನೆ ಮಾಡುವುದರಿಂದ, ಇಲ್ಲಾಂದ್ರೆ ಇದರಿಂದ ಜ್ಯೂಸ್ ಮಾಡಿಕೊಂಡು ಸೇವನೆ ಮಾಡುವುದರಿಂದ, ಕಣ್ಣಿನ ದೃಷ್ಟಿ ಅಭಿವೃದ್ಧಿ ಆಗುವುದರ ಜೊತೆಗೆ ಕಣ್ಣಿನ ಪೊರೆ ದೂರವಾಗಿ ರಾತ್ರಿ ಕುರುಡು ಸಮಸ್ಯೆ ಇಲ್ಲವಾಗುತ್ತದೆ ಇದರ ಜೊತೆಗೆ ಜೊತೆಗೆ ಕಣ್ಣುಗಳಿಗೆ ಸಂಬಂಧಪಟ್ಟಂತೆ ಕಂಡುಬರುವ ಇತರ ಸಮಸ್ಯೆಗಳು ಕೂಡ ದೂರವಾಗುತ್ತದೆ.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *