“ಜನಿಸಿದ ಪ್ರತಿ ವ್ಯಕ್ತಿಗೆ ಜೀವನದಲ್ಲಿ ಎರಡು ಪ್ರಮುಖ ಅಂಶಗಳು ಖಂಡಿತ ಇರುತ್ತವೆ; ಅದು ಸಾವು ಮತ್ತು ತೆರಿಗೆಗಳು”– ಬೆಂಜಮಿನ್ ಪ್ರಾಂಕ್ಲಿನ್
ಕ್ರಿಯಾತ್ಮಕ ಚಟುವಟಿಕೆಯುಳ್ಳ ಜಗತ್ತಿನಲ್ಲಿ ಕ್ಷಣ ಕ್ಷಣಕ್ಕೂ ಬದಲಾವಣೆಗಳು ಆಗುತ್ತಿರುತ್ತದೆ. ಬೆಂಜಮಿನ್ ಪ್ರಾಂಕ್ಲಿನ್ ಹೇಳಿದಂತೆ ಪ್ರತಿಯೊಬ್ಬನ ಜೀವನಚಕ್ರದಲ್ಲಿ ಕ್ಷಣ ಕ್ಷಣವೂ ಬದಲಾವಣೆಯೆಂಬುದು ನಡೆಯುತ್ತಲೇ ಇರುತ್ತದೆ. ಉದಾಹರಣೆಗೆ ನೀವು ಸ್ವಂತ ವಾಹನದಲ್ಲಿ ಟೋಲ್ ರೋಡ್ ನಲ್ಲಿ ಪ್ರಯಣಿಸಬೇಕಾದರೆ ನಿರ್ದಿಷ್ಟ ಸುಂಕ ನೀಡಬೇಕು, ಅದೇ ರೀತಿ ನೀವು ಒಬ್ಬ ಉದ್ಯಮಿಯಾಗಿದ್ದರೆ ನಿವೃತ್ತಿ ನಿಶ್ಚಿತವಾಗಿರುತ್ತದೆ.
ಸರ್ಕಾರ ತೆರಿಗೆ ತಪ್ಪಿಸಲು ಅವಕಾಶ ನೀಡಿತೆಂದರೆ, ಯಾರೊಬ್ಬರು ತೆರಿಗೆ ಕಟ್ಟಲು ಇಚ್ಚಿಸುವುದಿಲ್ಲ. ಇದಕ್ಕಾಗಿ ಸರ್ಕಾರ ತನ್ನ ಆದಾಯ ಸಂಗ್ರಹಕ್ಕಾಗಿ ಮತ್ತು ವೃದ್ದಿಸುವ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬಜೆಟ್ ನ್ನು ಮಂಡಿಸುತ್ತದೆ. ಬಜೆಟ್ ನಲ್ಲಿ ಸರ್ಕಾರ ತೆರಿಗೆ/ ಆದಾಯ ಸಂಗ್ರಹಿಸುವ ಗುರಿ ಮತ್ತು ನೀತಿ ನಿಯಮಗಳನ್ನು ತಿಳಿಸುತ್ತದೆ. ಮತ್ತು ಸರ್ಕಾರದ ವೆಚ್ಚದ ಅಂದಾಜನ್ನು ತಿಳಿಸುತ್ತದೆ.
ತೆರಿಗೆ ಎಂದ ಕೂಡಲೇ ಭಯಪಡುವವರಿಗೆ ಮತ್ತು ತೆರಿಗೆಯ ಸೂಕ್ಷ್ಮತೆಯ ಅರಿವು ಇಲ್ಲದವರಿಗೆ ಈ ಲೇಖನವು ಆದಾಯ ತೆರಿಗೆಯ ಸೂಕ್ಷ್ಮ ವಿಚಾರ ಮತ್ತು ಆದಾಯ ತೆರಿಗೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ಒದುಗರಿಗೆ ಮನದಟ್ಟು ಮಾಡಲು ಪ್ರಯತ್ನಿಸುತ್ತದೆ.
ಆದಾಯ ತೆರಿಗೆಯನ್ನು ಪ್ರತಿ ಹಣಕಾಸು ವರ್ಷದಲ್ಲಿ ನಿಗದಿತ ವರ್ಷದ ಗಳಿಕೆಯ ಮೇಲೆ ವಿಧಿಸಲಾಗುತ್ತದೆ. ‘ಆದಾಯ’ ಎಂಬ ಪದವು ವಿಶಾಲ ಅರ್ಥವನ್ನು ಹೊಂದಿದೆ ಇದು ನಿಗದಿತ ಸಮಯದಲ್ಲಿ ನಿರಂತರವಾಗಿ ಮತ್ತು ಕೆಲವು ನಿಶ್ಚಿತ ಮೂಲಗಳಿಂದ ಬರುವ ನಿರಂತರವಾಗಿ ‘ಒಳಬರುವ’ ಅಥವಾ ‘ಆಯ‘ ಹಣ,ಆಸ್ತಿ, ಸಂಪತ್ತು ಎಂದಾಗಿದೆ.
ಆದಾಯದ ಮೂಲಭೂತ ತತ್ವಗಳು
- ನಿರಂತರ ಮತ್ತು ನಿಶ್ಚಿತ ಮೂಲ: ಉದಾ – ವೇತನ
- ವಿಭಿನ್ನ ಬಗೆಯ ಆದಾಯ– ಇದು ನಗದು ಆಗಿರಬಹುದು ಅಥವಾ ವಸ್ತುವಿನ ರೂಪದಲ್ಲಾಗಿರಬಹುದು . ನೀವು ಲಾಟರಿ ಮೂಲಕ ಕಾರು ಗೆದ್ದರೆ, ಆ ಕಾರಿನ ನಿಜವಾದ ಮೌಲ್ಯದಷ್ಟನ್ನು ನಿಮ್ಮ ಆದಾಯವೆಂದು ಪರಿಗಣಿಸಲಾಗುತ್ತದೆ.
- ಸ್ವೀಕರಿಸಿದ Vs ಗಳಿಸಿದ ಆದಾಯ– ಸ್ವೀಕೃತ ಆದಾಯ ವಾಗಿರಲಿ ಅಥವಾ ಗಳಿಸಿದ ಆದಾಯವಾಗಿರಲಿ, ಅದು ತೆರಿಗೆ ಗೊಳಪಡುತ್ತದೆ. ಸ್ವೀಕರಿಸಲ್ಪಟ್ಟ ವೇತನ ಆದಾಯಕ್ಕೆ ಸ್ವೀಕೃತಿಯ ಮೇಲೆ ಅಥವಾ ಬಾಕಿ ಆಧಾರದ ಮೇಲೆ ತೆರಿಗೆ ವಿಧಿಸಲ್ಪಡುತ್ತದೆ. ನಿಮ್ಮ ಠೇವಣಿಗೆ ಗಳಿಸಿದ ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ.
- ತಾತ್ಕಾಲಿಕ ಮತ್ತು ನಿಶ್ಚಿತ ಆದಾಯ – ಆದಾಯ ತೆರಿಗೆಯ ನಿಯಮದಂತೆ ತಾತ್ಕಾಲಿಕ ಮತ್ತು ನಿಶ್ಚಿತ ಆದಾಯಕ್ಕೆ ವಿಧಿಸುವ ತೆರಿಗೆಗೆ ಯಾವುದೇ ವ್ಯತ್ಯಾಸವಿಲ್ಲ. ಲಾಟರಿಯಲ್ಲಿ ಗೆದ್ದ ಹಣ ತಾತ್ಕಾಲಿಕ ಆದಾಯವಾದರೂ ಕೂಡಾ ತೆರಿಗೆಗೆ ಒಳಪಡುತ್ತದೆ.
- ಅನಧಿಕೃತ ಆದಾಯ – ಆದಾಯ ತೆರಿಗೆಗೆ ಅಧಿಕೃತ ಮತ್ತು ಅನಧಿಕೃತ ರಂಬ ಬೇಧವಿಲ್ಲ, ಆದಾಯ ಹೇಗೆ ಗಳಿಸಿದರೂ ಆದಾಯ ತೆರಿಗೆ ವಸೂಲಿ ಮಾಡಲಾಗುತ್ತದೆ.
- ಆದಾಯ ನಷ್ಟವನ್ನು ಒಳಗೊಂಡಿದೆ– ಇದು ಆದಾಯತೆರಿಗೆಯ ಒಂದು ವಿಭಿನ್ನ ಲಕ್ಷಣ. ರಾಜ್ಯ ಸರ್ಕಾರ ವಿಧಿಸುವ ಯಾವುದೇ ತೆರಿಗೆ (GST) , ಸ್ಥಳೀಯಾಡಳಿತ ವಿಧಿಸುವ ಮನೆ ತೆರಿಗೆ ಕಟ್ಟುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಆದಾಯ ಅಥವಾ ನಷ್ಟವನ್ನು ಪರಿಗಣಿಸುವುದಿಲ್ಲ. ಉದಾಹರಣೆಗೆ ಪುರಸಭೆ ಮನೆತೆರಿಗೆ ಸಂಗ್ರಹಿಸುವಾಗ ಮನೆಯ ಯಜಮಾನ ಆ ಮನೆಯಿಂದ ಗಳಿಸುವ ಆದಾಯವನ್ನು ಪರಿಗಣಿಸುವುದಿಲ್ಲ. ನೀವು ಪುರಸಭೆ ವ್ಯಾಪ್ತಿಯಲ್ಲಿ ನಿಮ್ಮ ಸ್ವಂತ ಮನೆಯಲ್ಲಿ ವಾಸವಾಗಿದ್ದರೂ ಮನೆತೆರಿಗೆ ಕಟ್ಟಬೇಕಾಗುತ್ತದೆ. ಅದೇ ರೀತಿ ನೀವು ಸೇವಾ ಉದ್ಯಮಿಯಾಗಿದಲ್ಲಿ 20 ಲಕ್ಷಕ್ಕಿಂತ ಹೆಚ್ಚು ಇತರ ವಲಯದ ಉದ್ಯಮಿಯಾಗಿದ್ದಲ್ಲಿ 40 ಲಕ್ಷ ವ್ಯವಹಾರದ ಉದ್ದಿಮೆ ಹೊಂದಿದ್ದರೆ ನೀವು ಮಾರಾಟದ ಮೇಲಿನ ಲಾಭದ ಮೇಲೆ GST ಕಟ್ಟಲೆಬೇಕು.
ಇದಕ್ಕೆ ತದ್ವಿರುದ್ದವಾಗಿ , ಒಂದು ವೇಳೆ ಒಂದು ಮನೆಯ ಯಜಮಾನ ತನ್ನ ಮನೆಯನ್ನು ಬಾಡಿಗೆಗೆ ಕೊಟ್ಟು ಬಂದ ಬಾಡಿಗೆಯೂ ಮನೆ ಕಟ್ಟಲು ತೆಗೆದು ಕೊಂಡ ಬಡ್ಡಿ ಕಟ್ಟಿದಾಗ ಉಳಿದ ಮೊತ್ತ ಋಣಾತ್ಮಕವಾಗಿದ್ದರೆ, ನಿಮ್ಮ ವೇತನ ಮತ್ತು ಉದ್ದಿಮೆಯ ಆದಾಯದ ಲೆಕ್ಕಕ್ಕೆ ಸೇರಿಸಬಹುದು. ಈಗಲೂ ನಿಮ್ಮ ಆದಾಯ ಲೆಕ್ಕದಲ್ಲಿ ನಷ್ಟವಿದ್ದರೆ ಅದನ್ನು ಮುಂದಿನ ಹಣಕಾಸು ವರ್ಷದ ಲೆಕ್ಕಕ್ಕೆ ಸೇರಿಸಬೇಕು.
ಸಾಮಾನ್ಯವಾಗಿ ಆದಾಯ ತೆರಿಗೆ ವಿಧಿಸುವಾಗ ಆದಾಯ ಗಳಿಸಿರುವ ನಿರ್ದಿಷ್ಟ ವ್ಯಕ್ತಿಯನ್ನು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಆದಾಯ ಗಳಿಸದೇ ಇನ್ನೊಬ್ಬರ ಆದಾಯವನ್ನು ತನ್ನ ಹೆಸರಲ್ಲಿ ಇಟ್ಟುಕೊಂಡಿರುವವರಿಂದ ತೆರಿಗೆ ಪಡೆಯಲಾಗುತ್ತದೆ.
ಇದು ಬೇರೆಯೊಬ್ಬರ ವಶದಲ್ಲಿರುವ ಆದಾಯಕ್ಕೆ ವಿಧಿಸುವ ತೆರಿಗೆಯಾಗಿದೆ. ಉದಾಹರಣೆಗೆ ತೆರಿಗೆದಾರರೊಬ್ಬನ ಹೆಂಡತಿ/ಗಂಡ ತೆರಿಗೆದಾರನ ಆದಾಯದ ಮೂಲದಿಂದ ಠೇವಣಿಯಿಟ್ಟು ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ.
ಆದಾಯ ತೆರಿಗೆಯೂ ಈ ಕೆಳಗಿನಂತೆ ಒಬ್ಬ ತೆರಿಗೆದಾರಗೆ ತೆರಿಗೆ ವಿಧಿಸುತ್ತದೆ. ಒಬ್ಬ ತೆರಿಗೆ ದಾರನೆಂದರೆ:
- ಒಬ್ಬ ವ್ಯಕ್ತಿ ನಿರ್ದಿಷ್ಟ ಹಣಕಾಸು ವರ್ಷಕ್ಕೆ ತನ್ನ ಆದಾಯದ ವಿವರ ಸಲ್ಲಿಸಿ ತೆರಿಗೆ ಪಾವತಿಸುವವನು.
- ಆದಾಯ ತೆರಿಗೆ ಕಾನೂನು ಉಲ್ಲಂಘಿಸಿದ ಕಾರಣಕ್ಕೆ ನೋಟಿಸ್ ಪಡೆದು ತೆರಿಗೆ ಸಲ್ಲಿಸಬೇಕಾದ ವ್ಯಕ್ತಿ.
- ತೆರಿಗೆದಾರ ಸೂಚಿಸಿದ ನಿರ್ದಿಷ್ಟ ವ್ಯಕ್ತಿ , ಉದಾಹರಣೆಗೆ ಕಾನೂನು ಪ್ರತಿನಿಧಿ
- ಯಾವುದೇ ಕಾಯ್ದೆಯ ನಿಬಂಧನೆಗೊಳಪಟ್ಟು ತೆರಿಗೆದಾರನೆಂದು ಪರಿಗಣಿಸಲ್ಪಟ್ಟ ವ್ಯಕ್ತಿ. ಉದಾಹರಣೆಗೆ ತನ್ನ ಇತರ ಹೂಡಿಕೆಯ ಗಳಿಕೆಗೆ ಕಡಿತವಾದ ತೆರಿಗೆಯಿಂದ ತನ್ನ ಪಾವತಿಯ ಕಡಿತ ಪಡೆಯಲು ಇಚ್ಚಿಸುವ ವ್ಯಕ್ತಿ ತೆರಿಗೆದಾರನೆಂದು ಪರಿಗಣಿಸಲ್ಪಡುತ್ತಾನೆ. (ಇದು TDS ಎಂದು ಜನಪ್ರಿಯವಾಗಿದೆ.)
(ಮುಂದುವರೆಯುವುದು….)
-
- ಸುಭಾಶ್ ಭಂಡಾರಿ ಕೊರಂಗ್ರಪಾಡಿ