November 25, 2024
bengaluru bhandary sangha

ಭಂಡಾರಿ ಸಮಾಜ ಸಂಘ (ರಿ)   ಬೆಂಗಳೂರು ವಲಯದ ವಾರ್ಷಿಕ ಮಹಾಸಭೆ ಮತ್ತು ಸ್ನೇಹ ಕೂಟದ ಪೂರ್ವಬಾವಿ ಸಭೆ  ದಿನಾಂಕ 1.10.22.ಶನಿವಾರ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಸರ್ಕಾರಿ ಅತಿಥಿ ಗೃಹ ದಲ್ಲಿ ಕೇಂದ್ರ ವಲಯದ ಅಧ್ಯಕ್ಷ ಶ್ರೀ ಪ್ರಸಾದ್ ಭಂಡಾರಿ ಮುನಿಯಾಲ್ ರವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಬಾಳೆಹೊನ್ನೂರು ಘಟಕದ ಅಧ್ಯಕ್ಷರಾಗಿರುವ ಶ್ರೀ ಸುನಿಲ್ ರಾಜ್ ಭಂಡಾರಿ ಆಗಮಿಸಿದ್ದ ವಲಯದ ಅಧ್ಯಕ್ಷರಾದ ಶ್ರೀ ಪ್ರಸಾದ್ ಭಂಡಾರಿ ಮುನಿಯಾಲ್, ಗೌರವಾಧ್ಯಕ್ಷರಾಗಿರುವ ಶ್ರೀ ಲಕ್ಷ್ಮಣ್ ಕರಾವಳಿ , ಉಪಾಧ್ಯಕ್ಷ ಹಾಗೂ ಘಟಕಗಳ ಪ್ರತಿನಿಧಿಯಾಗಿರುವ ಶ್ರೀ ಸುಧಾಕರ್ ಭಂಡಾರಿ ಶಿರಾಳಕೊಪ್ಪ , ಪ್ರಧಾನ ಕಾರ್ಯದರ್ಶಿಯವರಾಗಿರುವ ಕುಶಲ್ ಭಂಡಾರಿ, ಮಾಜಿ ಅಧ್ಯಕ್ಷರಾದ ಅಡ್ವೋಕೇಟ್ ಉಮೇಶ್ ರವರನ್ನು, ಬಾಳೆಹೊನ್ನೂರು, ಮೂಡಿಗೆರೆ, ತೀರ್ಥಹಳ್ಳಿ, ಕಳಸ, ಶೃಂಗೇರಿ, ಜಯಪುರ, ಕೊಪ್ಪ , ಸೊರಬ- ಶಿರಾಳಕೊಪ್ಪ ಘಟಕಗಳ  ಅಧ್ಯಕ್ಷರು ಮತ್ತು  ಪ್ರತಿನಿಧಿಗಳನ್ನು, ಸಭೆಯಲ್ಲಿ ಹಾಜರಿದ್ದ ಬಂಧುಗಳನ್ನು ಸ್ವಾಗತಿಸಿದರು.

ಕೇಂದ್ರ ವಲಯದ ಅಧ್ಯಕ್ಷ ಶ್ರೀ ಪ್ರಸಾದ್ ಭಂಡಾರಿ ಮುನಿಯಾಲ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ವಾರ್ಷಿಕ ಮಹಾಸಭೆ ಹಿಂದೆ ಪ್ರತೀ ವರ್ಷ ಡಿಸೆಂಬರ್ 25 ರಂದು ಬೆಂಗಳೂರಿನಲ್ಲಿ  ನಡೆಯುತ್ತಿದ್ದು, ಕಳೆದ 2017 ರಿಂದ ಘಟಕಗಳಲ್ಲಿ ಆಯೋಜಿಸುವ ನಿರ್ಧಾರ ತೆಗೆದುಕೊಂಡು ಉಮೇಶ್ ರವರ ಅಧ್ಯಕ್ಷತೆಯಲ್ಲಿ ತೀರ್ಥಹಳ್ಳಿಯ ಕೋಣಂದೂರಿನಲ್ಲಿ ಡಿಸೆಂಬರ್ 25  ರಂದು ಯಶಸ್ವಿಯಾಗಿ ನಡೆಸಿದ್ದೇವೆ. ನಂತರ 2019 ರ ಡಿಸೆಂಬರ್ ನಲ್ಲಿ ಸೊರಬ -ಶಿರಾಳಕೊಪ್ಪ ಘಟಕದ ಜಂಟಿ ಉಸ್ತುವಾರಿಯಲ್ಲಿ ಶ್ರೀ ಮಾಧವ ಭಂಡಾರಿ ಸಾಗರ ರವರ ಅಧ್ಯಕ್ಷತೆಯಲ್ಲಿ ಕೂಡ ಯಶಸ್ವಿಯಾಗಿ ನೆರವೇರಿತು.

ಆ ನಂತರ ಕೋವಿಡ್ ಕಾರಣದಿಂದ 2020 ರ ಮಹಾಸಭೆಯು ನಡೆಯದೆ, 2021 ರಲ್ಲಿ ನೂತನ ಸಮಿತಿ ಬಂದ ಬಳಿಕ ಈ ವರ್ಷದ ಮಹಾಸಭೆಯ ಸ್ಥಳ ನಿಗದಿಗಾಗಿ ಬಾಳೆಹೊನ್ನೂರು ಘಟಕದ ಪದಾಧಿಕಾರಿಗಳ ಜೊತೆಗೆ ಕಳೆದ ಆಗಸ್ಟ್ ನಲ್ಲಿ  ನಡೆದ ಸಂಘದ ಮಾಸಿಕ ಸಭೆಯಲ್ಲಿ ಆನ್ಲೈನ್ ಮೂಲಕ ಚರ್ಚಿಸಲಾಯಿತು. ಬಾಳೆಹೊನ್ನೂರು ಘಟಕವು ಅಂದಿನ ಸಭೆಯಲ್ಲಿ ತಾತ್ಕಾಲಿಕ ಒಪ್ಪಿಗೆ ಕೊಟ್ಟು ಕೇಂದ್ರ ವಲಯವು ಘಟಕಕ್ಕೆ ಬಂದು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಭರವಸೆ ಕೊಟ್ಟ ಕಾರಣ ಇಂದು ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ ಎಂದರು ಮತ್ತು ಈ ಬಗ್ಗೆ ಚರ್ಚೆ ನಡೆಸಿ ಸ್ಥಳ ಮತ್ತು ದಿನಾಂಕವನ್ನು ನಿಗದಿಪಡಿಸಿ ಮುಂದೆ ಸಭೆಯು ಅತ್ಯಂತ ಯಶಸ್ವಿಯಾಗಿ ನಡೆಯುವಲ್ಲಿ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ನಂತರ ಘಟಕದ ಹಿರಿಯರಾದ ಹಿರಿಯಣ್ಣ ಬಾಳೆಹೊನ್ನೂರುರವರು ಈ ಬಾರಿ ಡಿಸೆಂಬರ್ 25 ಭಾನುವಾರ ಬಂದಿರುವ ಕಾರಣ ಮತ್ತು ನಮ್ಮ ಸಮಾಜದ ಕುಲ ವೃತ್ತಿ ಮಾಡುವವರಿಗೆ ಭಾನುವಾರವೇ ಸ್ವಲ್ಪ ಮಟ್ಟಿನ ಕೆಲಸ ಜಾಸ್ತಿ ಇರುವುದರಿಂದ ದಿನಾಂಕವನ್ನು ಬದಲಿಸಲು ಸಾಧ್ಯವೇ ಎಂದು ಕೇಂದ್ರ ವಲಯದ ಪದಾಧಿಕಾರಿಗಳಿಗೆ ಮನವಿ ಮಾಡಿದರು. ಈ ಬಗ್ಗೆ ಮಾಜಿ ಅಧ್ಯಕ್ಷರಾದ ಉಮೇಶ್ ರವರು ಮಾತನಾಡಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಬಂಧುಗಳಿಗೆ ಭಾನುವಾರ ರಜಾ ದಿನವಾದ ಕಾರಣ ಅಂತಹವರಿಗೆ ಭಾನುವಾರ ನಿಗದಿಪಡಿಸಿದರೆ ಕಾರ್ಯಕ್ರಮಕ್ಕೆ ಭಾಗವಹಿಸಲು ಸಾಧ್ಯವಾಗುತ್ತದೆ ಎಂದರು ..ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಘಟಕಗಳಲ್ಲಿ ನೆಲೆಸಿರುವ ಕುಲವೃತ್ತಿ ಬಾಂಧವರು ಕಾರ್ಯಕ್ರಮಕ್ಕೆ ತಮ್ಮ ಕುಟುಂಬದೊಂದಿಗೆ ಭಾಗವಹಿಸಲು ಅನುಕೂಲವಾಗುವ ದೃಷ್ಟಿಯಿಂದ ನಂತರ ಸರ್ವಾಮನುತದಲ್ಲಿ ಡಿಸೆಂಬರ್ 27 ರ ಮಂಗಳವಾರ  ದಿನಾಂಕ ನಿಗದಿಪಡಿಸಲಾಯಿತು ಮತ್ತು ಸ್ಥಳದ ಬಗ್ಗೆ ಚರ್ಚೆ ನಡೆದಾಗ ತೀರ್ಥಹಳ್ಳಿ ಘಟಕದ ಮಂಜುನಾಥ್ ಭಂಡಾರಿಯವರು ಕಳೆದ ಬಾರಿ ಕೋಣಂದೂರಿನಲ್ಲಿ ನಾವು ಅತ್ಯಂತ ಹೆಚ್ಚಿನ ಜನ ಸೇರಿಸಿ ಕಾರ್ಯಕ್ರಮ ಮಾಡಿದ್ದೇವೆ ಈ ಬಾರಿ ಉಳಿದ ಘಟಕಗಳಿಗೆ ಆಯೋಜಿಸಲು ಕಷ್ಟವಾದರೆ ನಾವೇ ಉಸ್ತುವಾರಿ ವಹಿಸುತ್ತೇವೆ ಎಂದರು. ಬಾಳೆಹೊನ್ನೂರು ಘಟಕದ ಪದಾಧಿಕಾರಿಗಳು ನಾವೇ ವಹಿಸಿಕೊಳ್ಳುತ್ತೇವೆ ಎಂದು ಒಪ್ಪಿಕೊಂಡ ನಂತರ ಬಾಳೆಹೊನ್ನೂರಿನಲ್ಲಿಯೇ ಸ್ಥಳ ಕೂಡ ನಿಗದಿಪಡಿಸಲಾಯಿತು.

ನಂತರ ಕೇಂದ್ರ ವಲಯದ ಉಪಾಧ್ಯಕ್ಷ ಹಾಗೂ ಘಟಕಗಳ ಪ್ರತಿನಿಧಿಯಾಗಿರುವ ಶ್ರೀ ಸುಧಾಕರ್ ಭಂಡಾರಿ ಶಿರಾಳಕೊಪ್ಪರವರು ಕಳೆದ 2019 ರಲ್ಲಿ  ಸೊರಬ – ಶಿರಾಳಕೊಪ್ಪ ಘಟಕ ಮಹಾಸಭೆ ಮತ್ತು ಸ್ನೇಹ ಕೂಟದ ಉಸ್ತುವಾರಿ ವಹಿಸಿದ್ದುಅಂದಿನ ಸಭೆಯ ಖರ್ಚು ವೆಚ್ಚಗಳ ಬಗ್ಗೆ ಸಭೆಗೆ ವಿವರಿಸಿದರು. ಸಭೆಯ ಊಟದ ವ್ಯವಸ್ಥೆಯನ್ನು ಆತಿಥೇಯ ಘಟಕ ವಹಿಸಿಕೊಂಡಿದ್ದು ಸಂಗ್ರಹಗೊಂಡ ಹಣದಿಂದ ಖರ್ಚು ಕಳೆದು ಉಳಿತಾಯವಾದ ಮೊತ್ತವನ್ನು ಕೇಂದ್ರ ವಲಯದ ವಿದ್ಯಾನಿಧಿ ಖಾತೆಗೆ ವರ್ಗಾಯಿಸಿರುವ ಬಗ್ಗೆ ತಿಳಿಸಿದರು.

ಮುಂದಿನ ಮಹಾ ಸಭೆಯ ಊಟದ ವ್ಯವಸ್ಥೆಯನ್ನು ಮತ್ತು ಕೇಂದ್ರ ವಲಯ ಬೆಂಗಳೂರಿಂದ ಬರುವ ಬಂಧುಗಳಿಗೆ ವಸತಿಯ ವ್ಯವಸ್ಥೆಯನ್ನು ಆತಿಥೇಯ ಘಟಕವೇ ಭರಿಸುವ  ಬಗ್ಗೆ ಸಭೆಯಲ್ಲಿ ನಿರ್ಧಾರವಾಯಿತು ಮತ್ತು ಇತರ ಖರ್ಚುಗಳಾದ ಸಭಾ ಭವನ, ಸಭಾ ಕಾರ್ಯಕ್ರಮ, ಸನ್ಮಾನ, ಆಟೋಟ ಸ್ಪರ್ಧೆಯ ಬಹುಮಾನ ಮುಂತಾದವುಗಳ ಬಗ್ಗೆ ಇತರ ಘಟಕ ಮತ್ತು ಕೇಂದ್ರ ವಲಯ ಭರಿಸುವುದೆಂದು ತೀರ್ಮಾನವಾಯಿತು.

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಧ್ಯಕ್ಷರು ಮತ್ತು ಮಹಾಮಂಡಲದ ಅಧ್ಯಕ್ಷರನ್ನು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕರೆಯಲು ತೀರ್ಮಾನಿಸಲಾಯಿತು.ಉಳಿದ ಅತಿಥಿಗಳನ್ನು ಆಯ್ಕೆ ಮಾಡುವ ನಿರ್ಧಾರವನ್ನು ಆತಿಥೇಯ ಘಟಕಕ್ಕೆ ಬಿಟ್ಟುಕೊಡಲಾಯಿತು.

ಆಯಾ ವಲಯದಿಂದ ತಲಾ  ಒಬ್ಬರು ಕುಲವೃತ್ತಿಮಾಡುವವರು ಮತ್ತು ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಒಬ್ಬರನ್ನು ಸನ್ಮಾನಿಸಲು ನಿರ್ಧರಿಸಲಾಯಿತು. ಕುಲವೃತ್ತಿದಾರರನ್ನು ಆಯ್ಕೆ ಮಾಡುವಾಗ ಹಿರಿತನಕ್ಕೆ ಆದ್ಯತೆ ಕೊಡಬೇಕು ಮತ್ತು ಈ ಹಿಂದೆ ಸನ್ಮಾನಕ್ಕೆ ಆಯ್ಕೆ ಮಾಡದಿರುವ ಬಗ್ಗೆ ದೃಢಪಡಿಸಲು ಸಲಹೆ ನೀಡಲಾಯಿತು. ಆಟೋಟ ಸ್ಪರ್ಧೆಯನ್ನು ನಡೆಸುವ ಜವಾಬ್ದಾರಿಯನ್ನು ಆತಿಥೇಯ ಘಟಕಕ್ಕೆ ವಹಿಸಲಾಯಿತು.

ಮಹಾ ಸಭೆಯನ್ನು ಬೆಳಿಗ್ಗೆ 10 ಗಂಟೆಗೆ ನಡೆಸಿ ನಂತರ ಆಟೋಟ ಸ್ಪರ್ಧೆ ನಡೆಸುವುದು ಮತ್ತು ಮದ್ಯಾಹ್ನದ ಬಳಿಕ ಸಭಾ ಕಾರ್ಯಕ್ರಮ ಹಾಗೂ  ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಬಗ್ಗೆ ತೀರ್ಮಾನವಾಯಿತು.

ಮಹಾ ಸಭೆಗೆ ದೇಣಿಗೆ ಸಂಗ್ರಹಿಸಿ ಖರ್ಚು ಕಳೆದು ಉಳಿತಾಯವಾಗುವ ಮೊತ್ತವನ್ನು ಕೇಂದ್ರ ವಲಯದ ವಿದ್ಯಾ ನಿಧಿ ಖಾತೆಗೆ ವರ್ಗಾಯಿಸಿ ಆ ಮೂಲಕ ನಿರಖು ಠೇವಣಿ ಇರಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಂಘ ಪ್ರಾರಂಭವಾದಂದಿನಿಂದ ಈವರೆಗೆ ವಿದ್ಯಾ ಪ್ರೋತ್ಸಾಹ ಧನ ಪಡೆದುಕೊಂಡು ಈಗ ದುಡಿಯುತ್ತಿರುವ ಬಂಧುಗಳು ಸಾಧ್ಯವಾದಷ್ಟು ಮಟ್ಟಿಗೆ ಕೇಂದ್ರ ವಲಯದ ವಿದ್ಯಾ ನಿಧಿ ಖಾತೆಗೆ ದೇಣಿಗೆ ನೀಡುವಂತೆ ಕೇಂದ್ರ ವಲಯದ ಅಧ್ಯಕ್ಷರು ಘಟಕದ ಪ್ರತಿನಿಧಿಗಳಿಗೆ ಮನವಿ ಮಾಡಿದರು. ಈ ಬಗ್ಗೆ  ಮಹಾಸಭೆಯ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸುವಂತೆ ತೀರ್ಮಾನಿಸಲಾಯಿತು.

ಮಹಾಸಭೆಯ ದಿನದ ಊಟದ ಖರ್ಚಿಗೆ ಕೇಂದ್ರ ವಲಯದ ಮಾಜಿ ಅಧ್ಯಕ್ಷರಾದ ಉಮೇಶ್ ಅಡ್ವೋಕೇಟ್ ರೂ 25000 /- ದೇಣಿಗೆ ನೀಡುವುದಾಗಿ ಭರವಸೆಯಿತ್ತರು. ಗೌರವಾಧ್ಯಕ್ಷರಾದ ಲಕ್ಷ್ಮಣ್ ಕರಾವಳಿ ಮತ್ತು ಅಧ್ಯಕ್ಷರಾದ ಪ್ರಸಾದ್ ಮುನಿಯಾಲ್ ತಲಾ 10000 /- ಮತ್ತು ಸೊರಬ-ಶಿರಾಳಕೊಪ್ಪ ಘಟಕದ ಅಧ್ಯಕ್ಷರಾಗಿರುವ ಶ್ರೀ ಜೋಗುಭಂಡಾರಿ ಯವರು ರೂ. 10,000/- ನೀಡುವ ವಾಗ್ದಾನವಿತ್ತರು.

ಕೇಂದ್ರ ವಲಯದ ಗೌರವಾಧ್ಯಕ್ಷರಾಗಿರುವ ಲಕ್ಷ್ಮಣ್ ಕರಾವಳಿಯವರು ಸೂಕ್ತ ಸಲಹೆ ಸೂಚನೆ ನೀಡಿದರು. ಶ್ರೀ ರಘು ಸೊರಬ ,ಹಿರಿಯಣ್ಣ ಭಂಡಾರಿ ಬಾಳೆಹೊನ್ನೂರು ಮತ್ತು ಶ್ರೀ ಮೋಹನ್ ಭಂಡಾರಿ ಬಾಳೆಹೊನ್ನೂರುರವರು 20 ವರ್ಷಗಳ ಹಿಂದೆ ಈ ಘಟಕಗಳಲ್ಲಿ ಸದಸ್ಯತ್ವ ಮಾಡುವ ನಿಟ್ಟಿನಲ್ಲಿ ಲಕ್ಷ್ಮಣ್ ಕರಾವಳಿಯವರು ಪಟ್ಟ ಶ್ರಮವನ್ನು ನೆನಪು ಮಾಡಿದರು.

2019 ರ ಮಹಾಸಭೆ ಮತ್ತು ಸ್ನೇಹ ಕೂಟದ ಆತಿಥೇಯ ಘಟಕವಾದ ಸೊರಬ – ಶಿರಾಳಕೊಪ್ಪ ಘಟಕದ ಪದಾಧಿಕಾರಿಗಳು ಮುಂಬರುವ ಮಹಾಸಭೆ ಮತ್ತು ಸ್ನೇಹ ಕೂಟದ ಆತಿಥೇಯ ಘಟಕವಾಗಿರುವ ಬಾಳೆಹೊನ್ನೂರು ಘಟಕಕ್ಕೆ ತಾಂಬೂಲವನ್ನಿತ್ತು ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು.

ಮಹಾಸಭೆಯ ಪೂರ್ವಭಾವಿ ಸಭೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿ ನಿರ್ವಹಿಸಿ ಮದ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಿರುವ  ಬಾಳೆಹೊನ್ನೂರು ಘಟಕದ ಪದಾಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ  ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

ಹಿರಿಯ ಪದಾಧಿಕಾರಿಯಾಗಿರುವ ಹಿರಿಯಣ್ಣ ಭಂಡಾರಿ ಬಾಳೆಹೊನ್ನೂರು ರವರು ಆಗಮಿಸಿರುವ ಕೇಂದ್ರ ವಲಯದ ಪದಾಧಿಕಾರಿಗಳು ಘಟಕದ ಪ್ರತಿನಿಧಿಗಳು ಮತ್ತು ಬಾಳೆಹೊನ್ನೂರು ಘಟಕದ ಪದಾಧಿಕಾರಿಗಳು ಮತ್ತು ಇತರ ಬಂಧುಗಳಿಗೆ ಧನ್ಯವಾದಗಳನ್ನು ಅರ್ಪಿಸುವ ಮೂಲಕ ಸಭೆ ಮುಕ್ತಾಯವಾಯಿತು.

ವರದಿ : ಸುನಿಲ್ ರಾಜ್ ಭಂಡಾರಿ ಬಾಳೆಹೊನ್ನೂರು

Leave a Reply

Your email address will not be published. Required fields are marked *