November 25, 2024
4

ಅವಿಭಕ್ತ- ವಿಭಕ್ತ ಕುಟುಂಬ ಮಾತ್ರವಲ್ಲ ಇನ್ನೂ ವಿವಿಧ ಕುಟುಂಬ ರಚನೆಯಿದೆ ನೋಡಿ..

ಹಿಂದೆಲ್ಲಾ ಕೂಡು ಕುಟುಂಬ, ಕಾಲ ಬದಲಾಗುತ್ತಾ ಬಂದಂತೆ ಕೂಡು ಕುಟುಂಬ ಅಂದರೆ ಅವಿಭಕ್ತ ಕುಟುಂಬಗಳೆಲ್ಲಾ ಕಾರಣಾಂತರಗಳಿಂದ ವಿಭಕ್ತ ಕುಟುಂಬಗಳಾಗಿ ಬದಲಾಯ್ತು. ಈಗಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳನ್ನು ಹುಡುಕುವುದು ಕಷ್ಟವೇ. ಆಧುನಿಕ ಕಾಲಕ್ಕೆ ತಕ್ಕಂತೆ, ಮನೋಸ್ಥಿತಿಗಳೂ ಬದಲಾವಣೆಯಾಗಿದೆ, ಜೊತೆಗೆ ಕುಟುಂಬದ ರಚನೆಯೇ ಬದಲಾಗಿದೆ
ನಿಮಗೆ ಕುಟುಂಬ ರಚನೆಯಲ್ಲಿ ಅವಿಭಕ್ತ ಕುಟುಂಬ ಮತ್ತು ವಿಭಕ್ತ ಕುಟುಂಬದ ಬಗ್ಗೆ ತಿಳಿದಿರಬಹುದು ಆದರೆ ಈ ಆಧುನಿಕ ಯುಗದಲ್ಲಿ ಕುಟುಂಬ ರಚನೆಯಲ್ಲಿ ಹಲವು ವಿಧಗಳೂ ಇವೆಯಂತೆ. ಅದ್ಯಾವುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ವಿಭಕ್ತ ಕುಟುಂಬ

ವಿಭಕ್ತ ಕುಟುಂಬವೆಂದರೆ ಇಬ್ಬರು ಪೋಷಕರು ಮತ್ತು ಮಕ್ಕಳನ್ನು ಒಳಗೊಂಡ ಕುಟುಂಬ ವ್ಯವಸ್ಥೆ. ವಿಭಕ್ತ ಕುಟುಂಬ ರಚನೆಯು ಮಕ್ಕಳನ್ನು ಬೆಳೆಸಲು ಆದರ್ಶ ವಿಧಾನ ಎನ್ನುವ ಕಾರಣದಿಂದಾಗಿ ಸಮಾಜದಲ್ಲಿ ಗುರುತಿಸಿಕೊಂಡಿದೆ. ಯಾಕೆಂದರೆ ವಿಭಕ್ತ ಕುಟುಂಬಗಳಲ್ಲಿನ ಮಕ್ಕಳು ಇಬ್ಬರು ಪೋಷಕರಿಂದ ಶಕ್ತಿ ಮತ್ತು ಸ್ಥಿರತೆಯನ್ನು ಪಡೆಯುತ್ತಾರೆ. ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಅಪ್ಪ ಅಮ್ಮ ಇಬ್ಬರೂ ದುಡಿಯುವವರೇ ಆಗಿದ್ದಲ್ಲಿ ವಯಸ್ಕ ಮಕ್ಕಳ ಆರ್ಥಿಕ ಬೇಡಿಕೆಗಳನ್ನು ಪೂರೈಸುವಂತಹ ಅವಕಾಶಗಳನ್ನು ಹೊಂದಿರುತ್ತಾರೆ.

ಏಕಪೋಷಕ ಕುಟುಂಬ

ಏಕಪೋಷಕ ಕುಟುಂಬವೆಂದರೆ ಒಬ್ಬ ಪೋಷಕ ಅಂದರೆ ತಂದೆಯೂ ಆಗಿರಬಹುದು, ತಾಯಿಯೂ ಆಗಿರಬಹುದು ತನ್ನ ಮಕ್ಕಳೊಂದಿಗೆ ಇರುವುದು. ಈ ಕುಟುಂಬ ರಚನೆಯಲ್ಲಿ ಮಕ್ಕಳು ತಂದೆಯೊಂದಿಗೆ ಮಾತ್ರ ಅಥವಾ ತಾಯಿಯೊಂದಿಗೆ ಮಾತ್ರ ಬೆಳೆಯುತ್ತಾರೆ. ಇದು ಸಮಾಜವು ಕಂಡ ಅತ್ಯಂತ ಪ್ರಮುಖ ಬದಲಾವಣೆಯಾಗಿದೆ. ಏಕಪೋಷಕ ಕುಟುಂಬದಲ್ಲಿ ಮಕ್ಕಳು ಒಬ್ಬರಿಗೇ ಹೆಚ್ಚು ಅಂಟಿಕೊಂಡಿರಬಹುದು. ಈ ಕುಟುಂಬ ವ್ಯವಸ್ಥೆಯ ದೊಡ್ಡ ಸವಾಲೆಂದರೆ ಮಕ್ಕಳನ್ನು ಪೋಷಿಸುವುದರ ಜೊತೆಗೆ ಇತರ ಜವಾಬ್ದಾರಿಗಳನ್ನೂ ನಿಭಾಯಿಸುವುದು. ಅನೇಕ ಬಾರಿ ಮಕ್ಕಳ ಕಡೆ ಗಮನ ಕೊಡುವುದೂ ಕಷ್ಟವಾಗಬಹುದು. ಇದು ಕೆಲವೊಂದು ಸಂದರ್ಭಗಳಲ್ಲಿ ಆದಾಯ ಮತ್ತು ಅವಕಾಶಗಳನ್ನು ಮಿತಿಗೊಳಿಸುತ್ತದೆ. ಆದರೆ ಏಕಪೋಷಕ ಕುಟುಂಬಗಳು ಹೆಚ್ಚಿನ ಸಂದರ್ಭದಲ್ಲಿ ಸಂಬಂಧಿಕರ ಮತ್ತು ಸ್ನೇಹಿತರ ಬೆಂಬಲವನ್ನು ಹೊಂದಿರುತ್ತವೆ.

ವಿಸ್ತೃತ ಕುಟುಂಬ

ವಿಸ್ತೃತ ಕುಟುಂಬ ರಚನೆಯಲ್ಲಿ ಒಂದು ರೀತಿಯಲ್ಲಿ ಅವಿಭಕ್ತ ಕುಟುಂಬವೆನ್ನಬಹುದು. ರಕ್ತಸಂಬಂಧಿಗಳು ಅಥವಾ ಹಿರಿಯ ಪೋಷಕರೊಂದಿಗೆ ಅವರ ಮಕ್ಕಳು ಮದುವೆಯಾದ ನಂತರ ಜೊತೆಯಾಗಿ ವಾಸಿಸುವುದು ಆಗಿರುತ್ತದೆ.

ಅನೇಕ ಕುಟುಂಬ ಸದಸ್ಯರು ಒಂದೇ ಸೂರಿನಡಿಯಲ್ಲಿ ವಾಸಿಸುವ ರಚನೆಯಾಗಿದೆ. ಈ ಕುಟುಂಬದಲ್ಲಿ ಮುಖ್ಯವಾಗಿ ಮಕ್ಕಳನ್ನು ಬೆಳೆಸುವುದು ಮತ್ತು ಮನೆಯ ಕರ್ತವ್ಯಗಳನ್ನು ನೋಡಿಕೊಳ್ಳುವ ಕೆಲಸವನ್ನು ಹಂಚಿಕೊಳ್ಳಲಾಗುತ್ತೆ.

ಅನೇಕ ವಿಸ್ತೃತ ಕುಟುಂಬಗಳಲ್ಲಿ ಸೋದರಸಂಬಂಧಿಗಳು, ಚಿಕ್ಕಪ್ಪ ಅಥವಾ ಚಿಕ್ಕಮ್ಮ ಮತ್ತು ಅಜ್ಜ-ಾಜ್ಜಿಯರು ಒಟ್ಟಿಗೆ ಇರುವುದನ್ನು ಕಾಣಹುದು. ಈ ರೀತಿಯ ಕುಟುಂಬ ರಚನೆಯು ಹಣಕಾಸಿನ ಸಮಸ್ಯೆಗಳಿಂದ ಅಥವಾ ವಯಸ್ಸಾದ ಹಿರಿಯರಿಗೆ ತಮ್ಮನ್ನು ತಾವು ನೋಡಿಕೊಳ್ಳಲಾಗದ ಕಾರಣ ಈ ಕುಟುಂಬ ರಚನೆಯು ರೂಪುಗೊಳ್ಳಬಹುದು.

ಮಕ್ಕಳಿಲ್ಲದ ಕುಟುಂಬ

ಮದುವೆಯಾದ ನಂತರ ಮಕ್ಕಳಾದ ಮೇಲೆ ಒಂದು ಪರಿಪೂರ್ಣ ಕುಟುಂಬ ಎಂದು ಕರೆಯಲಾಗುತ್ತೆ. ಆದರೆ ಇತ್ತೀಚೆಗೆ ಒಂದು ಟ್ರೆಂಡ್‌ ಸದ್ದಿಲ್ಲದೇ ಯುವ ಜನರಲ್ಲಿ ಬೆಳೆಯುತ್ತಿದೆ. ಅದೇನೆಂದರೆ ಮಕ್ಕಳಿಲ್ಲದ ಕುಟುಂಬ. ಕೆಲವರು ಮಕ್ಕಳು ಬೇಡವೆಂದು ನಿರ್ಧರಿಸಿದದರೂ ಕೆಲವರಿಗೆ ಕಾರಣಾಂತರಗಳಿಂದ ಮಕ್ಕಳಾಗದೆಯೂ ಇರಬಹುದು.

ಮಕ್ಕಳಿಲ್ಲದ ಕುಟುಂಬವನ್ನು ಸಾಮಾನ್ಯವಾಗಿ ಸಮಾಜವು ಮರೆತುಬಿಡುತ್ತದೆ. ಯಾಕೆಂದರೆ ಸಮಾಜವು ನಿಗದಿಪಡಿಸಿದಂತೆ ಸಾಂಪ್ರದಾಯಿಕ ನಿಯಮಗಳನ್ನು ಆ ಕುಟುಂಬವು ಹೊಂದಿರುವುದಿಲ್ಲ. ಮಕ್ಕಳಿಲ್ಲದ ಕುಟುಂಬದಲ್ಲಿ ಸಾಮಾನ್ಯವಾಗಿ ಇಬ್ಬರೇ ಸಂಗಾತಿಗಳು ಇರುತ್ತಾರೆ. ಅನೇಕ ಮಕ್ಕಳಿಲ್ಲದ ಕುಟುಂಬಗಳು ಸಾಕುಪ್ರಾಣಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಅಲ್ಲದೇ ಅವರ ಸೋದರ ಸಂಬಂಧಿಗಳ ಮಕ್ಕಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರುತ್ತಾರೆ.

ಮಲತಂದೆ-ತಾಯಿ ಕುಟುಂಬ

ಇತ್ತೀಚಿಗೆ ವಿವಾಹ ವಿಚ್ಚೇದನದ ಜೊತೆಗೆ ಮರುವಿವಾಹಗಳೂ ಹೆಚ್ಚಾಗಿ ನಡೆಯುತ್ತಿದೆ. ಎರಡನೇ ವಿವಾಹವಾದಾಗ ಸಂಗಾತಿಯ ಮಕ್ಕಳನ್ನೂ ಒಪ್ಪಿಕೊಂಡು ಅವರೊಂದಿಗೆ ಜೀವನ ನಡೆಸಬೇಕಾಗುತ್ತದೆ. ಇದು ಒಂದು ರೀತಿಯ ಸಂಯೋಜಿತ ಕುಟುಂಬ ರಚನೆಯಾಗಿದೆ. ಇದರಲ್ಲಿ ಎರಡು ಪ್ರತ್ಯೇಕ ಕುಟುಂಬಗಳು ಹೊಸ ಕುಟುಂಬವಾಗಿ ವಿಲೀನವಾಗುತ್ತದೆ.

ಈ ಮಲ ಕುಟುಂಬಗಳು ವಿಭಕ್ತ ಕುಟುಂಬದಂತೆ ಸಾಮಾನ್ಯವಾದರೂ ಅನೇಕ ಸವಾಲುಗಳೂ ಇದೆ. ಯಾಕೆಂದರೆ ಒಂದು ಹೊಸ ಕುಟುಂಬಕ್ಕೆ ಹೊಂದಿಕೊಳ್ಳಬೇಕಾದರೆ ಈ ಹೊಂದಾಣಿಕೆಯ ಅವಧಿ ಕಷ್ಟಕರವಾಗಿರುತ್ತದೆ ಜೊತೆಗೆ ಶಿಸ್ತಿನ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಕುಟುಂಬವು ಸಮಸ್ಯೆಯಿಲ್ಲದೇ ಮುನ್ನಡೆಯಬೇಕಾದರೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಮತ್ತು ಮಾಜಿ ಸಂಗಾತಿಯಿಂದ ಈ ಹೊಸ ಕುಟುಂಬಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ.

ಅಜ್ಜಿಯ ಕುಟುಂಬ

ಇಂದು ಅನೇಕ ಹಿರಿಯರು ತಮ್ಮ ಮೊಮ್ಮಕ್ಕಳನ್ನೂ ನೋಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದು ವಿವಿಧ ಕಾರಣಗಳಿಂದಲೂ ಆಗಿರಬಹುದು. ಕೆಲವೊಮ್ಮೆ ಮಗುವಿನ ಜೀವನದಲ್ಲಿ ಪೋಷಕರು ಇಲ್ಲದಿದ್ದಾಗ, ಪೋಷಕರು ಮರಣವನ್ನಪ್ಪಿದರೆ, ವ್ಯಸನಕ್ಕೊಳಗಾದರೆ, ಮಗುವನ್ನು ಬಿಟ್ಟು ಹೋದರೆ ಅಥವಾ ಮಗುವನ್ನು ಸಾಕುವುದಕ್ಕೆ ಪೋಷಕರು ಅನರ್ಹರಾದಾಗ ಮಗು ಅಜ್ಜಅಜ್ಜಿಯ ಮಡಿಲಿಗೆ ಬೀಳುತ್ತದೆ. ಮೊಮ್ಮಕ್ಕಳನ್ನು ನೋಡಿಕೊಳ್ಳುವ ಕಾರಣದಿಂದಾಗಿ ಕೆಲವೊಮ್ಮೆ ಹಿರಿಯರು ಕೆಲಸಕ್ಕೆ ಹಿಂತಿರುಗುತ್ತಾರೆ ಮತ್ತು ಕೆಲವೊಮ್ಮೆ ಮೊಮ್ಮಕ್ಕಳನ್ನು ಬೆಳೆಸಲು ಹೆಚ್ಚುವರಿ ಆದಾಯದ ಮೂಲವನ್ನು ಕಂಡುಹಿಡಿಯಬೇಕಾಗುತ್ತದೆ.

ಕುಟುಂಬ ರಚನೆ ಯಾವ ರೀತಿ ಇದ್ದರೆ ಒಳ್ಳೆಯದು ಎನ್ನುವುದನ್ನು ಹೇಳಲಾಗದು ಯಾಕೆಂದರೆ ಪ್ರತಿಯೊಂದು ಕುಟುಂಬದಲ್ಲೂ ಸಾಧ್ಯತೆ ಬಾಧ್ಯತೆಗಳಿರುತ್ತದೆ. ಕುಟುಂಬ ಜೀವನವು ಯಶಸ್ವಿಯಾಗುವುದು ಆ ಕುಟುಂಬ ಪರಸ್ಪರ ಪ್ರೀತಿ, ಬೆಂಬಲವನ್ನು ನೀಡಿದಾಗ ಮಾತ್ರ. ಯಾವುದೇ ವಿಧದ ಕುಟುಂಬವಾಗಲಿ ತಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಕುಟುಂಬ ಸದಸ್ಯರು ಕೆಲವೊಮ್ಮೆ ತ್ಯಾಗವನ್ನೂ ಮಾಡಬೇಕಾಗುತ್ತದೆ.

 

Leave a Reply

Your email address will not be published. Required fields are marked *