November 22, 2024
bhandara

ಕಾರ್ಕಳ ಸಾಣೂರಿನ ಭಂಡಾರ ಚಾಕರಿಯ ಮನೆತನದಲ್ಲೊಂದು ನಿಗೂಢ ಸಾವು. ಸತ್ತವನು ಮೋನಪ್ಪ ಎಂಬ ಮೂವತ್ತೈದು ವರ್ಷದ ಊರಿನ ಬಂಡಾರದ ಚಾಕರಿ ಜೊತೆಗೆ ಶುದ್ದ ಮಾಡುವ ಸಾಂಪ್ರಾದಾಯಿಕ ಪುರೋಹಿತ ಭಂಡಾರಿ. ಇವನ ಸಾವು ನಿಗೂಢ. ಅದು ಕೂಡಾ ಊರಿನ ನೇಮದ ಮರುದಿನ!

ಯಾವುದೋ ಕಾರಣಕ್ಕೆ ಚಾಕರಿಯವರ ಒಳಗೆ ಏನೋ ಜಗಳ ನಡೆದು ಹತ್ಯೆಯಾಗಿದೆ‌ ಎಂದು ಕೋಲ ನೋಡದೆ ಗಂಧ ಪ್ರಸಾದ ತೆಗೆದುಕೊಂಡು ಹೋದವರು ಮಾತನಾಡಿದರೆ, ದೈವದ ಗಗ್ಗರ ಸೇವೆ ಆದ ನಂತರ ಹೋದವರು ದೈವದ ಆಭರಣ ಕದ್ದಿದ್ದಾನೆ! ಇರಬೇಕು.. ದೈವ ಏನೋ ಅವನನ್ನೆ ದಿಟ್ಟಿಸಿ ಕೇಳುತಿತ್ತು ಎಂದೂ.. ಇನ್ನೂ ಕೆಲವರು…ಈತ ಕುಡಿದು ಸತ್ತಿಗೆ (ಛತ್ರ ) ಹಿಡಿದು ನೇಮದ ನಿಯಮಗಳನ್ನು ಮೀರಿದ ದೋಷ ಅದಕ್ಕೆ ರಕ್ತಕಾರಿ ಸತ್ತಿದ್ದಾನೆ ಎಂಬ ವಾದ ದೈವ ಚಾಕರಿಯವರಲ್ಲಿ ಕೆಲವರದ್ದು. ಇನ್ನು ಕೆಲವರು ಊರಿನ ನೇಮಕ್ಕೆ ಮುಖ ಮಾಡದ ನಾಸ್ತಿಕ ವರ್ಗ ಹೆಣ ನೀಲಿಯಾಗಿದೆ ಯಾವುದೋ ವಿಷ ಆಹಾರ ಅಥವಾ ವಿಷ ಜಂತು ಕಚ್ಚಿ ಸತ್ತಿದ್ದಾನೆ ಎನ್ನುತ್ತಿದ್ದರು. ಹೀಗೆ ಒಬ್ಬೊಬ್ಬರದ್ದು ಒಂದೊಂದು ಕತೆ…

ಆಗ ಇದ್ದಿದ್ದು ಬ್ರಿಟಿಷ್ ಸರ್ಕಾರ ಅವರ ತನಿಖೆಗೂ ಸಿಗದಂತಹ ಆ ನಿಗೂಢ ಸಾವು ಕೊನೆಗೆ ಆತ್ಮಹತ್ಯೆ ಎಂಬ ತೀರ್ಮಾನ ಕೊಟ್ಟು ಬ್ರಿಟಿಷ್ ಪೋಲಿಸರು ಪ್ರಕರಣದ ತನಿಖೆಗೆ ಅಂತ್ಯ ಹಾಡಿದರು. ಆದರೆ ಅಂದಿನ ಜನ‌ ಅದನ್ನು ಒಪ್ಪಲು ಸಿದ್ದರಿಲ್ಲ, ದೈವದ ದೋಷದಿಂದ ಮೃತನಾದ ಎಂಬ ಜನಾಭ್ರಿಪಾಯವೇ ಸುಪ್ರೀಂ ತೀರ್ಪು ಎಂಬಂತೆ ಊರಿನಲ್ಲಿ ಘೋಷಣೆಯಾಯಿತು.

 

ಮೋನಪ್ಪನಿಗೆ ಮದುವೆಯಾಗಿ ಐದು ವರ್ಷದ ಮಗನೊಬ್ಬನಿದ್ದ. ಅಲ್ಲಿನ ಜನರ ಬಾಯಿಮಾತಿನ ಸುಪ್ರೀಂ ತೀರ್ಪು ಮೋನಪ್ಪನ ದುಃಖತಪ್ತ ಕುಟುಂಬವನ್ನು ಗ್ರಾಮದ್ರೋಹಿ ಎಂಬಂತೆ ನೋಡುತಿತ್ತು. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ, ವಿಧವೆಯಾಗಿರುವ ಪಾರ್ವತಿ ಐದು ವರ್ಷದ ಮಗುವನ್ನು ಹೇಗೆ ಸಾಕಬಲ್ಲಳು? ಅದು ಊರಿನವರ ಅಘೋಷಿತ ಬಹಿಷ್ಕಾರದ ನಡುವೆ! ಅವಳ ತವರು ಮನೆಗೆ ಹೋಗೋಣವೆಂದರೆ ಅದು ತಾಯಿಯಿಲ್ಲದ ತವರುಮನೆ, ತನ್ನ ಗಂಡನ ಮರಣಕ್ಕೂ ಬಾರದ ಅಣ್ಣಂದಿರು ನನ್ನನ್ನು ಮನೆಗೆ ಸೇರಿಸುತ್ತಾರೆಯೇ? ಎಂಬ ಪ್ರಶ್ನೆ ಅವಳಲ್ಲಿ ಮೂಡಿತು. ಇಡೀ ರಾತ್ರಿ ನಿದ್ದೆಯಿಲ್ಲದೇ ಪಾರ್ವತಿ ಒದ್ದಾಡಿದಳು… ಐದು ವರ್ಷದ ಮಗ ದಾದು ಆತನಿಗೆ ಹಸಿವು ಜಾಸ್ತಿ ನಿದ್ದೆಯಿಂದ ಎದ್ದು ಊಟ ಬೇಕು ಎನ್ನುತ್ತಿದ್ದ, ಯಾವತ್ತೋ ನೇಮದಿಂದ ತಂದಿದ್ದ ಅವಲಕ್ಕಿ ಪ್ರಸಾದ ಕೊಟ್ಟು ನೀರು ಕುಡಿಸಿ ಮಲಗಿಸುತ್ತಿದ್ದಳು.

ಪಾರ್ವತಿಗೆ ಸೂರ್ಯೋದಯವಾಗುತ್ತಿದ್ದಂತೆ ಬಿಕ್ಷಾ ಪಾತ್ರೆಯೊಂದೇ ಗತಿ ಎಂಬುದನ್ನು ಮನಸ್ಸು‌ ಹೇಳುತಿತ್ತು. ಆದರೂ ಪಕ್ಕದ ಇರ್ವತ್ತೂರಿನ‌‌ ತನ್ನ ತವರು ಆಕೆಯನ್ನು ಸೆಳೆಯುತಿತ್ತು. ಇರ್ವತ್ತೂರಿನ‌ಲ್ಲಿರುವ‌‌ ತನ್ನ ತವರು ಮನೆಗೆ ಹಸಿವಿನ ಹೊಟ್ಟೆಯಲ್ಲೇ ಮಗನನ್ನು ಎತ್ತಿಕೊಂಡು ನಡೆದಳು. ಗುಡ್ಡ ಹತ್ತಿ , ಗದ್ದೆ ಬದುಗಳಲ್ಲಿ ಸಾಗಿ ತನ್ನ ತವರಿನ ಮನೆಯ ಅಂಗಳದಿಂದಲೇ “ಅಣ್ಣ.. ಅಣ್ಣಾ….” ಎಂದು ಕರೆದು ಒಳಹೋಗಲು ಮೆಟ್ಟಲು ಹತ್ತಿದಳು, ಮೂವರು ಅಣ್ಣಂದಿರಲ್ಲಿ ಒಬ್ಬ ಬಂದು, “ನಿನ್ನ‌ ಗಂಡ ಒಬ್ಬ ದೈವ ಶಾಪಗ್ರಸ್ತ ಊರಿಗೆ ಮಾರಿ….! ಅದಕ್ಕೆ ನಾವು ಹೆಣ ಕೂಡಾ ನೋಡಲು ಬಂದಿಲ್ಲ… ನೀನು ಕೂಡಾ ಶಾಪಗ್ರಸ್ತಳು ತೊಲಗು ಇಲ್ಲಿಂದ ಮನೆಗೆ ಕಾಲಿಡಬೇಡ” ಎಂದು ಗರ್ಜಿಸಿದ. ಪಾರ್ವತಿ‌‌ – “ಅಣ್ಣಾ..” ಎಂದು ಕಾಲು ಹಿಡಿಯಲು ಹೋದಳು ಅಣ್ಣ ಕೋಣದ ಬೆತ್ತ ಹಿಡಿದು ಬಂದ ” ಹೋಗು….!” ಇಲ್ಲಿಂದ ಎಂದು ಗರ್ಜಿಸಿದ.. ಇನ್ನಿಬ್ಬರು ಅಣ್ಣಂದಿರು , ಅತ್ತಿಗೆಯರು ಬಂದರು. ಅವರ್ಯಾರು ಅಣ್ಣನನ್ನು ತಡೆಯಲಿಲ್ಲ ಮೌನವಾಗಿ ಪಾರ್ವತಿ ಒಬ್ಬ ಕೈಲಾಗದವಳು, ತಿರಸ್ಕೃತಳು, ಶಾಪಗ್ರಸ್ತಳು ಎಂಬ ಭಾವನೆಯಿಂದ ದೃಷ್ಟಿಸುತ್ತಿದ್ದರು.

ಪಾರ್ವತಿಯ ನಿರೀಕ್ಷೆಯಂತೆ ತವರು ಮನೆ ತನಗೆ ಬಾಗಿಲು ತೆರೆಯಲಿಲ್ಲ.. ಎಲ್ಲಿ ಹೋದರೂ ಬಹಿಷ್ಕಾರದ ಮುಖಗಳು, ಸತ್ತು ಹೋಗಿರುವ ಮಾನವೀಯತೆ, ಎಲ್ಲಿ ಹೋಗಲಿ ಈ ಊರಿನಲ್ಲಿ ತಿರಸ್ಕೃತ ಕುಟುಂಬಕ್ಕೆ ಬಿಕ್ಷೆ ಆದ್ರೂ ಯಾರೂ ಕೊಡ್ತಾರೆ ಎಂದು ದಿಕ್ಕು ತೋಚದೆ ಊರಿನ ಹೊರಗೆ ಬಂದು ಅಲ್ಲಿ ಸಿಕ್ಕ ಝರಿ ಒಂದರಲ್ಲಿ ನೀರು ಕುಡಿದು ಅವಲಕ್ಕಿ ತಿಂದು ಪಾರ್ವತಿ ತನ್ನ ಮಗನೊಂದಿಗೆ ಪಕ್ಕದ ಹಲಸಿನ ಮರವೊಂದರ ಕಟ್ಟೆಯಲ್ಲಿ ವಿಶ್ರಾಂತಿ ಪಡೆಯಲು ಮಲಗಿದಳು. ಅಲ್ಲೆ ಪಕ್ಕದಲ್ಲಿ ದೈವಸ್ಥಾನವೊಂದು ಇರುವುದು ಕಾಣಿಸಿತು. ಪಾರ್ವತಿ ಮಲಗಿದಲ್ಲಿಯೇ ” ಈ ತಲೊಟು ಇತ್ತಿನ‌ ಸತ್ಯೊಲೆ ಎನ್ನ ಕಂಡನ್ಯನ್ ಏರ್ ಕೆರ್ಯೆರ್? ದಾಯೆಗ್ ಕೆರ್ಯೆರ್ ಸತ್ಯ ತೆರಿಪಾಲೆ… ಎನನ್ ಎನ್ನ ಬಾಲೆನ್ ಕಾಪುಲೆ … ನಿಗುಲೆ ಎಂಕ್ ದಿಕ್ಕ್ ” ಎಂದು ಪ್ರಾರ್ಥಿಸಿ ಕಣ್ಣೀರು ಹರಿಸುವಳು. ಪ್ರಾರ್ಥಿಸುತ್ತಾ ನಿದ್ದೆಗೆ ಜಾರಿದ ಪಾರ್ವತಿಗೆ ಗಗ್ಗರದ ಶಬ್ದವೊಂದು ಕೇಳಿಸಿತು…

(ಮುಂದುವರೆಯುವುದು)

Leave a Reply

Your email address will not be published. Required fields are marked *