ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಿದ್ದರೆ ಈ ಆಹಾರ ಸೇವಿಸಿ .
ಹಿಮೋಗ್ಲೋಬಿನ್ ಮಟ್ಟ ಒಂದು ಬಾರಿ ಕಡಿಮೆಯಾದರೆ ಹೆಚ್ಚಿಸಿಕೊಳ್ಳಲು ಸರಿಯಾದ ಆಹಾರದ ಡಯಟ್ ಇರಲೇಬೇಕು. ಯಾವೆಲ್ಲಾ ಆಹಾರಗಳು ಒಳ್ಳೆಯದು ಎನ್ನುವ ಮಾಹಿತಿ ಇಲ್ಲಿದೆ.
ಆರೋಗ್ಯ ಉತ್ತಮವಾಗಿರಲು ರಕ್ತದ ಪ್ರಮಾಣ ಸರಿಯಾಗಿರಬೇಕು. ಅದಕ್ಕೆ ಹಿಮೋಗ್ಲೋಬಿನ್ ಮಟ್ಟ ಸಮತೋಲನದಲ್ಲಿ ಇರಬೇಕು. ಅದರಲ್ಲೂ ಮಹಿಳೆಯರಲ್ಲಿ ಹೆಚ್ಚು ಹಿಮೋಗ್ಲೋಬಿನ್ ಕೊರತೆ ಕಾಣುತ್ತದೆ. ಪುರುಷರಿಗೆ, ಪ್ರತಿ ಡೆಸಿಲಿಟರ್‌ಗೆ 13.2 ರಿಂದ 16.6 ಗ್ರಾಂ. ಮತ್ತು ಮಹಿಳೆಯರಿಗೆ, ಪ್ರತಿ ಡೆಸಿಲೀಟರ್ಗೆ 11.6 ರಿಂದ 15 ಗ್ರಾಂ. ಇರಬೇಕು
ಹಿಮೋಗ್ಲೋಬಿನ್ ಮಟ್ಟ ಉತ್ತಮವಾಗಿಟ್ಟುಕೊಳ್ಳಲು ಆಹಾರ ಪದ್ಧತಿ ಸರಿಯಾಗಿರಬೇಕು. ಹಿಮೋಗ್ಲೋಬಿನ್ ಮಟ್ಟ ಏರಿಕೆಯಾಗಲು ಯಾವೆಲ್ಲಾ ಪದಾರ್ಥಗಳು ಅವಶ್ಯಕ ಎನ್ನುವ ಬಗ್ಗೆ ವೈದ್ಯರ ಮಾಹಿತಿ ಇಲ್ಲಿದೆ.
ಹರಿವೆ ಸೊಪ್ಪು
ದೇಹಕ್ಕೆ ಕಬ್ಬಿಣಾಂಶವನ್ನು ಪೂರೈಸಲು ಹರಿವೆ ಸೊಪ್ಪು ಅತ್ಯುತ್ತಮವಾಗಿದೆ. ಕಬ್ಬಿಣಾಂಶದಿಂದ ಸಮೃದ್ಧವಾಗಿರುವ ಹರಿವೆ ಸೊಪ್ಪು, ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ ಮತ್ತು ಹಿಮೋಗ್ಲೋಬಿನ್ ಅಂಶ ಮತ್ತು ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಹರಿವೆ ಸೊಪ್ಪು ಹಿಮೋಗ್ಲೋಬಿನ್ ಉತ್ತಮವಾಗಿಸಲು ಸಹಾಯ ಮಾಡುತ್ತದೆ.
ಖರ್ಜೂರ
ಖರ್ಜೂರದಲ್ಲಿರುವ ಕಬ್ಬಿಣದ ಅಂಶವು ಎರಿಥ್ರೋಸೈಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಖರ್ಜೂರವು ಕಬ್ಬಿಣವನ್ನು ಹೊಂದಿರುವ ಹಣ್ಣುಗಳಲ್ಲಿ ಒಂದಾಗಿದೆ. ವಿಟಮಿನ್ C, ವಿಟಮಿನ್ B ಕಾಂಪ್ಲೆಕ್ಸ್ ಮತ್ತು ಫೋಲಿಕ್ ಆಮ್ಲದ ಅಗತ್ಯಗಳನ್ನು ಪೂರೈಸುತ್ತದೆ. ಇದು ಕೆಂಪು ರಕ್ತ ಕಣಗಳ ಉತ್ಪಾದಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಖರ್ಜೂರವನ್ನು ಸೇವಿಸುವ ಮೂಲಕ ಕೆಂಪು ರಕ್ತ ಕಣಗಳ ರಚನೆಯನ್ನು ಸುಧಾರಿಸಲು ಮತ್ತು ರಕ್ತಹೀನತೆಯನ್ನು ತಡೆಯಬಹುದು.
ಒಣದ್ರಾಕ್ಷಿ
ಒಣದ್ರಾಕ್ಷಿ ಕಬ್ಬಿಣ ಮತ್ತು ತಾಮ್ರದ ಸಮೃದ್ಧ ಮೂಲವಾಗಿದೆ, ಇದು ಕೆಂಪು ರಕ್ತ ಕಣಗಳ ರಚನೆಗೆ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಅವಶ್ಯಕವಾಗಿದೆ. ಅಲ್ಲದೆ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಸೇವನೆ ಮಾಡುವುದರಿಂದ ಮಲಬದ್ದತೆಯ ಸಮಸ್ಯೆಯನ್ನೂ ನಿವಾರಿಸುತ್ತದೆ.
ಹಿಮೋಗ್ಲೋಬಿನ್ ಆಹಾರ
ಎಳ್ಳಿನ ಬೀಜಗಳು
ಎಳ್ಳು ವಿವಿಧ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತವೆ, ಅವುಗಳೆಂದರೆ ಕಬ್ಬಿಣ, ಫೋಲೇಟ್, ಫ್ಲೇವನಾಯ್ಡ್‌ಗಳು, ತಾಮ್ರ ಮತ್ತು ಇತರ ಪೋಷಕಾಂಶಗಳು ರಕ್ತಹೀನತೆಯನ್ನು ನಿವಾರಿಸುವಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಹೀಗಾಗಿ ಎಳ್ಳಿನ ಉಂಡೆ ಅಥವಾ ಎಳ್ಳಿನ ಜ್ಯೂಸ್ ಸೇವನೆ ಮಾಡುವುದು ಒಳ್ಳೆಯದು.
ರಾಗಿ
ರಾಗಿಯ ನಿಯಮಿತ ಸೇವನೆಯು ಕಬ್ಬಿಣದ ಕೊರತೆ, ರಕ್ತಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧ್ಯಯನ ಕೂಡ ಹಿಮೋಗ್ಲೋಬಿನ್ ಮತ್ತು ಸೀರಮ್ ಫೆರಿಟಿನ್ ಮಟ್ಟವನ್ನು ರಾಗಿ ಸುಧಾರಿಸುತ್ತದೆ ಎಂದು ಸಾಬೀತುಪಡಿಸಿದೆ.
ಅಲ್ಲದೆ ರಾಗಿ ದೇಹದ ಅತಿಯಾದ ತೂಕವನ್ನು ಇಳಿಸಲು ಕೂಡ ಸಹಾಯ ಮಾಡುತ್ತದೆ. ಪೌಷ್ಟಿಕವಾದ ಆಹಾರ ಎನ್ನುವ ರಾಗಿ ಹಿಮೋಗ್ಲೋಬಿನ್ ಮಟ್ವವನ್ನು ಹೆಚ್ಚಿಸಲು ಬಹಳ ಒಳ್ಳೆಯದು.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ವಿ ಕೆ