September 20, 2024

ಚಳಿಗಾಲದಲ್ಲಿ ಚರ್ಮ ಒಣಗಿ ಬಿರುಕು ಬಿಟ್ಟಹಾಗೆ ಆಗಿದ್ಯಾ? ಆಯುರ್ವೇದ ಮದ್ದು ಇಲ್ಲಿದೆ

ಚರ್ಮ ಒಣಗಿದಂತಾಗಿ ಕಿರಿಕಿರಿಯಾಗುವುದು ಚಳಿಗಾಲದಲ್ಲಿ ಸಹಜ. ಇದನ್ನು ಹೇಗೆ ನಿವಾರಿಸಬಹುದು ಎನ್ನುವ ಬಗ್ಗೆ ಆಯುರ್ವೇದ ವೈದ್ಯರ ಸಲಹೆ ಇಲ್ಲಿದೆ

ಚಳಿಗಾಲ ಆರಂಭವಾಗಿದೆ. ತಣ್ಣನೆಯ, ಒಣ ವಾತಾವರಣಕ್ಕೆ ಚರ್ಮ ಒಣಗಿದಂತಾಗಿ ಬಿರುಕು ಬಿಟ್ಟ ಅನುಭವದಿಂದ ಕಿರಿಕಿರಿಯಾಗುವುದು ಸಹಜ. ಅಲ್ಲದೆ ಇದರಿಂದ ಉರಿ ಸಹ ಕಾಣಿಸಿಕೊಳ್ಳುತ್ತದೆ. ಅದಾಗಲೇ ಒಣ ಚರ್ಮದ ಸಮಸ್ಯೆ ಇದ್ದರಂತೂ ಚರ್ಮ ಬಿರಿದಂತಾಗಿ ರಕ್ತವೂ ಬರಬಹುದು. ಹೀಗಾಗಿ ಚಳಿಗಾಲದಲ್ಲಿ ಚರ್ಮವನ್ನು ಮೃದುವಾಗಿ ಕಾಪಾಡಿಕೊಳ್ಳುವುದು ಒಂದು ಟಾಸ್ಕ್‌ ಇದ್ದಂತೆಯೇ ಸರಿ.

ಹಾಗಾದರೆ ಚರ್ಮ ಡ್ರೈ ಆಗದಂತೆ, ಕೊರೆಯುವ ಚಳಿಯಲ್ಲೂ ಮೃದು, ನಯವಾದ ತ್ವಚೆಯನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶ ಕು ಟಿಪ್ಸ್‌ ನೀಡಿದ್ದಾರೆ ಇಲ್ಲಿದೆ ನೋಡಿ.

ಅಭ್ಯಂಗ

ಆಯುರ್ವೇದದಲ್ಲಿ ಅಭ್ಯಂಗಕ್ಕೆ ವಿಶೇಷ ಸ್ಥಾನವಿದೆ. ಚರ್ಮದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಎಣ್ಣೆಯ ಮಸಾಜ್ ಪರಿಣಾಮಕಾರಿಯಾಗಿರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆ ಇರುವವರಿಗೆ ಈ ಅಭ್ಯಂಗ ಸ್ನಾನ ಅತೀ ಅಗತ್ಯವಾಗಿರುತ್ತದೆ.

ಹೀಗೆ ಮಾಡಿ

ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ ಯಾವುದಾದರೂ ಒಂದನ್ನು ತೆಗೆದುಕೊಂಡು ತುಸು ಬಿಸಿ ಮಾಡಿ. ನಂತರ ಇಡೀ ದೇಹಕ್ಕೆ ಹಚ್ಚಿ ಒಂದೆರಡು ನಿಮಿಷ ಮಸಾಜ್‌ ಮಾಡಿ. ಹಾಗೆಯೇ ಎಣ್ಣೆ ಚರ್ಮಕ್ಕೆ ಹೀರಿಕೊಳ್ಳಲು 15ರಿಂದ 20 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಇದರಿಂದ ಚರ್ಮ ಮೃದುವಾಗುತ್ತದೆ. ಜೊತೆಗೆ ಚಳಿಗಾಲದಲ್ಲಿ ಕಾಡುವ ಬಿರುಕು ಸಮಸ್ಯೆಯೂ ನಿವಾರಣೆಯಾಗುತ್ತದೆ.

ತುಪ್ಪದ ಸೇವನೆ

ತುಪ್ಪ ಚರ್ಮವನ್ನು ಒಳಗಿನಿಂದ ಪೋಷಿಸಲು ಸಹಾಯ ಮಾಡುತ್ತದೆ. ಹೀಗಾಗಿ ಪ್ರತಿನಿತ್ಯ ಒಂದು ಚಮಚ ತುಪ್ಪವನ್ನು ಸೇವನೆ ಮಾಡುತ್ತಾ ಬಂದರೆ ಒಣ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.

ಅಲ್ಲದೆ ಚಳಿಗಾಲದಲ್ಲಿ ಹೆಚ್ಚಾಗಿ ಕಾಡುವ ಕೀಲುಗಳ ನೋವಿನ ಸಮಸ್ಯೆ ಕೂಡ ತುಪ್ಪದ ಸೇವನೆಯಿಂದ ನಿವಾರಣೆಯಾಗುತ್ತದೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ ಚರ್ಮದ ಶುಷ್ಕತೆಯನ್ನು ನಿವಾರಿಸಿ ನಯಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಚಳಿಗಾಲದ ಒಣತ್ವಚೆ ಸಮಸ್ಯೆಗೆ ಬಾದಾಮಿ ಎಣ್ಣೆ ಉತ್ತಮ ಎನ್ನಬಹುದು. ಚರ್ಮದ ಮೇಲೆ ಮಾತ್ರವಲ್ಲ ಸೇವನೆ ಕೂಡ ಮಾಡಬಹುದು.

ಒಟ್ಟಿನಲ್ಲಿ ತ್ವಚೆಯ ಸಮಸ್ಯೆಗೆ ಬಾದಾಮಿ ಎಣ್ಣೆಯನ್ನು ಹೇಗೆ ಬಳಸಬಹುದು ಎಂದು ನೋಡುವುದಾದರೆ.

ಹೀಗೆ ಮಾಡಿ

  • ಬಾದಾಮಿ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿ ಮಸಾಜ್‌ ಮಾಡಿಕೊಳ್ಳಬಹುದು.
  • ಒಂದು ಕಪ್‌ ಹಾಲಿಗೆ ಒಂದೆರಡು ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಸೇರಿಸಿ ಸೇವನೆ ಮಾಡಿ. ಇದರಿಂದ ಚರ್ಮ ಒಣಗಿದ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿ

ಕಿತ್ತಳೆ ಸಿಪ್ಪೆ ಫೇಸ್‌ ಪ್ಯಾಕ್‌

ಒಣ ತ್ವಚೆಯ ಸಮಸ್ಯೆಗೆ ಫೇಸ್‌ ಪ್ಯಾಕ್‌ಗಳನ್ನು ಬಳಕೆ ಮಾಡಬಹುದಾಗಿದೆ. ಇದರಿಂದ ಚರ್ಮಕ್ಕೆ ಪೋಷಣೆ ದೊರಕಿ ಮೃದುವಾಗುತ್ತದೆ. ಅದರಲ್ಲಿ ಒಂದು ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್‌ ಪ್ಯಾಕ್‌.

ಹೀಗೆ ಮಾಡಿ

ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿಗೆ ಒಂದು ಚಮಚ ರೋಸ್‌ ವಾಟರ್‌, ಅರ್ಧ ಚಮಚ ಲಿಂಬು ರಸ, ಹಾಗೂ ಒಂದು 2 ಹನಿ ಕುಂಕುಮಾದಿ ತೈಲವನ್ನು ಬೆರೆಸಿ ಪೇಸ್ಟ್‌ ತಯಾರಿಸಿ ಮುಖಕ್ಕೆ ಹಚ್ಚಿ. ನಂತರ ಒಣಗಿದ ಮೇಲೆ ಮುಖವನ್ನು ತೊಳದು, ಒರೆಸದೆ ಹಾಗೆಯೇ ಬಿಡಿ.

ಇವುಗಳನ್ನು ಅಭ್ಯಾಸದಲ್ಲಿಟ್ಟುಕೊಳ್ಳಿ

ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರವೂ ಮುಖ್ಯ ಕಾರಣವಾಗಿರುತ್ತದೆ.

  • ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎರಡು ಲೋಟ ನೀರನ್ನು ಸೇವಿಸುತ್ತಾ ಬನ್ನಿ. ಇದರಿಂದ ದೇಹ ನಿರ್ಜಲೀಕರಣವಾಗುವುದು ತಪ್ಪುತ್ತದೆ, ಜೊತೆಗೆ ಒಣ ಚರ್ಮದ ಸಮಸ್ಯೆಯೂ ನಿವಾರಣೆಯಾಗುತ್ತದೆ.
  • ಇನ್ನು ಹಣ್ಣುಗಳಲ್ಲಿ ಕಿತ್ತಳೆ, ಮೂಸಂಬಿ ಹಾಗೂ ಪಪ್ಪಾಯ ಹಣ್ಣಗಳನ್ನು ದಿನನಿತ್ಯ ಯಾವುದಾದರೂ ಒಂದು ಹಣ್ಣನ್ನು ಸೇವನೆ ಮಾಡುತ್ತಾ ಇರಿ. ಇದರಿಂದ ತ್ವಚೆಯ ಸಮಸ್ಯೆಯಿಂದ ಮುಕ್ತಿಪಡೆಯಬಹುದಾಗಿದೆ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *