ಕನಸುಗಳ ಮೂಟೆ ಹೊತ್ತ ಪಾರ್ವತಿ ದಿನಾ ರಾತ್ರಿ ಕನಸುಗಳು ಬೀಳುತ್ತಿದ್ದವೇ ಹೊರತು ಕನಸುಗಳು ನನಸಾಗುವ ದಿನ ಬರಲೇ ಇಲ್ಲ. ಇರ್ವತ್ತೂರಿನ ಕೊಡಮಂದಾಯನ ಕಾರ್ಣಿಕ ಅಂತಿಂತದಲ್ಲ. ನನ್ನ ಮಗನಿಗೆ ಜಾತಿಕಸುಬು ಮಾಡುವ ಬುದ್ದಿಕೊಡುವುದು ದೊಡ್ಡ ಕೆಲಸವೇ? ಹೀಗೆ ಅಂದು ಕೊಳ್ಳುತಿತ್ತು ಪಾರ್ವತಿಯ ಜವಾಬ್ದಾರಿಯುತ ತಾಯಿ ಸ್ಥಾನದ ಮನಸ್ಸು. ಯಾಕೋ ನಿದ್ದೆ ಬರಲಿಲ್ಲ ಕೊಡಮಂದಾಯ ಸಾಮಾನ್ಯ ದೈವವೇ? ಊರಿನಲ್ಲಿ ಎಷ್ಟು ಮನೆಯಿದೆ? ಎಷ್ಟು ಹೊಸ ಮನೆ ಸೇರ್ಪಡೆಯಾಗಿದೆ? ನೇಮದ ದಿನ ಪ್ರತಿ ಮನೆಯಿಂದ ಬರಬೇಕಾದ ಕಾಣಿಕೆ ರೂಪದ ಬಾಳೆಗೊನೆ ಬಂದಿದೆಯೇ? ಇಲ್ಲವೇ? ಅದರಲ್ಲಿ ಎಷ್ಟು ಮನೆಯವರ ಕಾಣಿಕೆ ಬಂದಿಲ್ಲ ಎಂಬುದನ್ನು ಕರಾರುವಕ್ಕಾಗಿ ಹೇಳುವ ದೈವ ಇರ್ವತ್ತೂರಿನ ಮಣ್ಣಿಗೆ ಕಾಲಿಟ್ಟು ನೆಲೆಯೂರಿದವರೆಲ್ಲರನ್ನು ತನಗೆ ಶರಣಾಗಿಸುವ ಶಕ್ತಿ, ನಂಬಿಕೆಯಿಲ್ಲದವರಿಗೂ ನಂಬಿಕೆ ಹುಟ್ಟಿಸುವ ಶಕ್ತಿಯಾಗಿ ಮೆರೆಯುತ್ತಿರುವ ದೈವ.
ಇಷ್ಟೇ ಅಲ್ಲ ಒಮ್ಮೆ ಬ್ರಿಟಿಷ್ ಅಧಿಕಾರಿಯೊಬ್ಬ ನೀರಾವರಿ ಯೋಜನೆಗಾಗಿ ಚಿಲಿಂಬಿ ಹತ್ತಿರ ವರ್ಷವಿಡೀ ಬತ್ತದ ಅಂತರ್ಜಲವನ್ನು ಕಂಡು ಬೋರ್ ವೆಲ್ ಕೊರೆಸಿ ಚಿಲಿಂಬಿಗೆ ಹತ್ತಿರವಾಗಿರುವ ಭೌಗೋಳಿಕವಾಗಿ ಗಡಿಭಾಗ ಎತ್ತರವಾಗಿ ದೊಡ್ಡ ಕೆರೆಯನ್ನು ಹೋಲುವ ಇರ್ವತ್ತೂರು ಗ್ರಾಮವನ್ನು ಸುತ್ತಮತ್ತ ಇರುವ ನೀರಿನ ಒರತೆಗಳನ್ನು ಒಟ್ಟುಗೂಡಿಸಿ ನೀರು ಹರಿಸಿ ಕೆರೆ ನಿರ್ಮಾಣ ಮಾಡುವ ಯೋಜನೆಗೆ ಕೈ ಹಾಕಿದ, ಈ ಯೋಜನೆಯಿಂದ ಇರ್ವತ್ತೂರು ಗ್ರಾಮ ಭಾಗಶಃ ಮುಳುಗಡೆಯಾಗುತಿತ್ತು. ಮುಳುಗಿಸಲು ಬ್ರಿಟಿಷರು ಸಿದ್ಧವಾಗಿದ್ದರು. ಆದರೆ ಕೊಡಮಂದಾಯ ಬಿಡುತ್ತಾನೆಯೇ? ಬಿಡಲಿಲ್ಲ!! ಆ ಬ್ರಿಟಿಷ್ ಅಧಿಕಾರಿ ಅನಾರೋಗ್ಯಕ್ಕೆ ತುತ್ತಾಗಿ ತನ್ನ ಊರಿಗೆ ಫಲಾಯನ ಮಾಡಿದ. ಹೀಗೆ ತನ್ನ ಗಂಡ ಹೇಳುತಿದ್ದ ದೈವದ ಕಥೆಗಳು ಪಾರ್ವತಿಗೆ ನೆನಪಾಗಿ ಕಾಡತೊಡಗಿತು. ಇಂತ ಕಾರ್ಣಿಕದ ದೈವ ನನ್ನ ಸಣ್ಣ ಕನಸನ್ನು ನನಸು ಮಾಡದೇ ಇರಲೂ ಸಾಧ್ಯವೇ ಎಂದು ತನ್ನನ್ನು ತಾನೇ ಸಮಾಧಾನಪಡಿಸಿಕೊಂಡಳು.
ಸೂರ್ಯೋದಯವಾಗುವ ಒಂದು ಗಂಟೆ ಮುನ್ನವೇ ‘ದಾದು’ ಎದ್ದು ಆಸಕ್ತಿಯಿಂದ ಹಟ್ಟಿ ಕೆಲಸ , ಕೃಷಿ ಕೆಲಸ ಮಾಡುತ್ತಿದ್ದ. ಕೋಣಗಳೆಂದರೆ ಅಚ್ಚುಮೆಚ್ಷು ಉಳುಮೆ ಮಾಡುತ್ತಿದ್ದ ತ್ಯಾಂಪಣ್ಣನ ಜೊತೆ ಉಳುಮೆ ಕಲಿಯುತ್ತಿದ್ದ. ಹೆಗ್ಡೆಯವರ ಮನೆಯ ಕೃಷಿ ಕಸುಬು, ಕಂಬಳ, ಕೋಳಿಅಂಕದ ವೈಭವದ ನಡುವೆ ಜಾತಿಕಸುಬಿನ ಆಕರ್ಷಣೆ ಅವನಿಗಿರಲಿಲ್ಲ.
ಹೊತ್ತು ಹೊತ್ತಿಗೆ ಊಟ , ದಿನ ಬೆಳಗ್ಗೆ ಎಳನೀರು, ಬೇಕೆಂದಾಗ ಹಾಲು ಮೊಸರು ಯಾವುದಕ್ಕೂ ಕೊರತೆಯಿರದ ಬದುಕು ದಾದುವಿನದ್ದಾಗಿತ್ತು. ಲಿಂಗಪ್ಪ ಹೆಗ್ಡೆಯವರ ಹೆಂಡತಿ ಗಂಗಮ್ಮ ಬೆಳೆಯುತ್ತಿರುವ ಹುಡುಗ ಎಂಬ ಅನುಕಂಪ ತೋರಿಸಿ ತನ್ನ ಮಗನಂತೆ ಸಲಹುತಿದ್ದರು. ಮತ್ತೆ ಇನ್ನೇನೂ ಬೇಕು? ಹದಿಹರೆಯದ ಹುಡುಗ, ಜಾತಿಕಸುಬಿನ ತಲೆಗೆ ಹೋಗಲು ಅವಕಾಶವೇ ಇರಲಿಲ್ಲ.
ಒಂದು ದಿನ ಕಾರ್ಕಳದ ಮಾಳ ಗ್ರಾಮದ ಲೋಕಯ್ಯ ಭಂಡಾರಿ ಎಂಬವರು ಉಳುಮೆ ಕೋಣ ಖರೀದಿಸಲು ಬಂದಿದ್ದರು. ದಾದು ಸಾಕುತ್ತಿದ್ದ ಪ್ರೀತಿಯ ಕೋಣ ಬೊಲ್ಲ ನನ್ನು ಲಿಂಗಪ್ಪ ಹೆಗ್ಡೆಯವರಿಂದ ಖರೀದಿಸುವ ಒಪ್ಪಂದ ಆಯ್ತು. ವಿಷಯ ತಿಳಿದ ದಾದು ತಾನು ಸಾಕಿದ ಕೋಣ ನನಗೆ ಬೇಕೆಂದು ಅಳಲು ಪ್ರಾರಂಭಿಸಿದ. ಆ ಕೋಣದೊಂದಿಗಿನ ಒಡನಾಟ ಎಷ್ಟಿತ್ತೆಂದರೆ, ಯಾರ ಮಾತು ಕೇಳದ ಕೋಣ ದಾದು ಹೇಳಿದ ಹಾಗೆ ಕೇಳುತಿತ್ತು. ಹೀಗಾಗಿ ಬೊಲ್ಲನಿಗೂ ದಾದುನಿಗೂ ಅಭಿನಭಾವ ಸಂಬಂಧ . ಬಿಡಿಸಲಾಗದ ನಂಟು ಇತ್ತು. ಬೊಲ್ಲ ಕೂಡಾ ಲಿಂಗಪ್ಪ ಹೆಗ್ಡೆಯವರು ಹಗ್ಗ ಬಿಚ್ಚಲು ಹೋದಾಗ ತಾನು ಇಲ್ಲಿಂದ ಹೋಗಲಾರೆ ಎಂಬಂತೆ ಹಾಯಲು ಮುಂದಾಯಿತು. ಕಟ್ಟಿದ ಹಗ್ಗವನ್ನು ಬಿಚ್ಚಲು ಬಿಡಲಿಲ್ಲ. ಹೆಗ್ಡೆಯವರು ದಾದುವನ್ನು ಕರೆದು ಹಗ್ಗಬಿಚ್ಚಲು ಹೇಳಿದರು. ಕಣ್ಣೀರು ತಡೆಯಲಾಗಲಿಲ್ಲ, ಧಣಿಗಳ ಮಾತು ಮೀರುವಂತಿರಲಿಲ್ಲ. ಹಗ್ಗ ಬಿಚ್ಚಿಕೊಡಲೇ ಬೇಕಾಯಿತು. ಆದರೂ ತಡೆಯಲಾಗದೇ “ಬೊಲ್ಲ ನನಗೆ ಬೇಕು ಧಣಿ” ಎಂದ. ಅದಕ್ಕೆ ಧಣಿಯವರು “ಈಗ ಅದು ಲೋಕಯ್ಯನವರದ್ದು, ಅವರಿಗೆ ಕೊಟ್ಟಾಗಿದೆ ಬೇಕಾದರೆ ಅವರಲ್ಲೇ ಕೇಳು” ಎಂದರು ತಮಾಷೆಗೆ.
ಅದಕ್ಕೆ ಲೋಕಯ್ಯನವರು “ಈ ಹುಡುಗ ನಮ್ಮ ಮನೆಗೆ ಬರಲಿ ಬೊಲ್ಲನ ಸಾಕೋದಕ್ಕೆ ಜನ ಆಗುತ್ತೆ” ಅಂದರು.
“ನಿಮ್ಮದೇ ಹುಡುಗ ಕರೆದುಕೊಂಡು ಹೋಗಿ.. ಭಂಡಾರಿ ಕಸುಬು ಕಲಿಯುವ ವಯಸ್ಸಾಯ್ತು ಕಲ್ಸಿ ಅವನಿಗೆ” ಅಂದುಬಿಟ್ಟರು ಹೆಗ್ಡೆಯವರು.
ದಾದು ನನಗೆ ಬೊಲ್ಲ ಬೇಕು, ಬೊಲ್ಲ ಬೇಕು ಅನ್ನುತ್ತಾ ಅಳುತ್ತಿದ್ದ ಹೊರತು ಅವನಿಗೆ ಕಾಬೆಟ್ಟಿನ ಧಣಿಯವರ ಮನೆಬಿಟ್ಟು ಹೋಗಲು ಮನಸ್ಸಿರಲಿಲ್ಲ.
ದಾದು ಅಳುತ್ತಾ ನಿಂತಿದ್ದ. ಮಕ್ಕಳು ಮತ್ತು ಪ್ರಾಣಿಗಳ ಭಾಂದವ್ಯ ಹೀಗೆ ಅಲ್ಲವೇ? ಅವರ ಮಾತಿಗೆ ಬೆಲೆ ಕೊಟ್ರೆ ವ್ಯವಹಾರ ಸಾಧ್ಯವೇ? ಹೀಗಾಗಿ ಯಾರೂ ದಾದುವಿನ ಕೊರಗಿಗೆ ಯಾರೂ ಸ್ಪಂದಿಸಲಿಲ್ಲ. ಅಳುತ್ತಿದ್ದ ದಾದುವಿನ ಕೈಯಿಂದ ಹಗ್ಗವನ್ನು ಕಸಿದ ಹೆಗ್ಡೆಯವರು ಲೋಕಯ್ಯನ ಕೈಗಿತ್ತರು. ದಾದುವಿನ ಅಳುವಿನ ಮಧ್ಯೆ ವ್ಯವಹಾರ ನಡೆದು ಲೋಕಯ್ಯ ತನ್ನ ಮನೆಗೆ ಹೊರಟು ನಿಂತರು. ಎರಡು ಹಗ್ಗ ಹಾಕಿ ಬಿಗಿಯಾಗಿ ಹಿಡಿದು ನಡೆಯಲಾರಂಭಿಸಿದರು. ದಾದು ಹಿಂದಿನಿಂದ ಬೊಲ್ಲ ಬೊಲ್ಲ ಅಳುತ್ತಾ ಸಾಗಿದ.
ಮಗ ಗದ್ದೆಯ ದಾರಿಯಲ್ಲಿ ಕೋಣದ ಹಿಂದೆ ಹೋಗುತ್ತಿರುವುದನ್ನು ಕಂಡು ಓಡಿ ಹೋಗಿ ಅವನನ್ನು ತಡೆದು ಒಂದು ಪೆಟ್ಟುಕೊಟ್ಟು ಮನೆಗೆ ಹೋಗುವಂತೆ ಕೈ ತೋರಿಸಿದಳು.
ಅಳುತ್ತಾ ಓಡಿ ಹಿಂದೆ ಬಂದ ದಾದು ಹಟ್ಟಿಯಲ್ಲಿ ಕುಳಿತು ಬೊಲ್ಲನ ಜಪ ಆರಂಭಿಸಿದ.
ಬೊಲ್ಲ ಹೋಗಿ ಒಂದು ಗಂಟೆಯೂ ಆಗಿಲ್ಲ ಬೊಲ್ಲ ಹಟ್ಟಿಯ ಹಿಂದೆ ಪ್ರತ್ಯಕ್ಷ .. ದಾದುವಿನ ಖುಷಿಗೆ ಪಾರವೇ ಇರಲಿಲ್ಲ. ಬೊಲ್ಲನಿಗೆ ಮುದ್ದಿಸಿ ಹಟ್ಟಿಗೆ ಕರೆತಂದು ಕಟ್ಟಿಹಾಕಿಬಿಟ್ಟ ದಾದು ಒಮ್ಮೆ ನಿಟ್ಟುಸಿರು ಬಿಟ್ಟ.
ಹೊರಬಂದು ನೋಡುವಾಗ ಬಾಕ್ಯಾರು ಗದ್ದೆಯ ದಾರಿಯಲ್ಲಿ ಮತ್ತೆ ಈ ಬೊಲ್ಲನ ಯಜಮಾನ ಲೋಕಯ್ಯ ನಡೆದುಕೊಂಡು ಬರುತ್ತಿರುವುದು ಕಂಡುಬಂತು.
(ಮುಂದುವರೆಯುವುದು)