ತುಲುನಾಡಲ್ಲಿ ಗಡಾಯಿ ಕಲ್ಲ್ ಎಂಬ ಕಲ್ಲುಗಳ ಕುಂಜ ಅಥವಾ ಬೆಟ್ಟದ ಬಗ್ಗೆ ಮಾಹಿತಿ ತಿಳಿಯಲು ಈಗ ಬಲು ಸುಲಭ. ಗೂಗಲ್ ಎಂಬ ಇಂಟರ್ನೇಟ್ ಪ್ರಪಂಚವು ತುಂಬಾ ಸಹಕಾರಿಯಾಗಿದೆ. “ಗಡಾಯಿ ಕಲ್ಲ್” ಎಂದು ಬರೆದು ಸರ್ಚ್ ಮಾಡಿದರಾಯಿತು. ಮಾಹಿತಿ ಒಡನೆ ಇಮೇಜುಗಳನ್ನು ಕೊಡುತ್ತದೆ. ವೀಡಿಯೋಗಳು ಲಭ್ಯ ಇದೆ. ಗಡಾಯಿ ಕಲ್ಲು ಎಂಬ ಆದಿ ಮೂಲದ ಹೆಸರಿನೊಡನೆ ನಂತರದ ಹೆಸರುಗಳಾದ ನರಸಿಂಹಗಡ, ಜಮಲಾ ಗಡ, ಜಮಲಾಬಾದ್ ಹೆಸರುಗಳನ್ನು ತಿಳಿಸುತ್ತದೆ. ಈ ಕುಂಜವು ಸಮುದ್ರ ಮಟ್ಟದಿಂದ 1788 ಅಡಿಯಷ್ಟು ಎತ್ತರದಲ್ಲಿದೆ, 1876 ಮೆಟ್ಟಿಲುಗಳನ್ನು ಏರಿ ಇದರ ತುದಿಯಲ್ಲಿರುವ ವಿಸ್ತಾರದ ಜಾಗವನ್ನು ತಲುಪಬಹು ದು ಎಂಬೀ ವಿಷಯಗಳ ಮಾಹಿತಿಯನ್ನು ತಿಳಿಸುತ್ತದೆ. ಅಲ್ಲದೆ ಈ ಕುಂಜದ ತಳಭಾಗದ ವಿಸ್ತೀರ್ಣ ಐದು ಕಿಲೋಮೀಟರ್ ಎಂದು ಹೇಳುತ್ತದೆ. ಈ “ಗಡಾಯಿ” ಕಲ್ಲು ಇರುವ ವಿಳಾಸವನ್ನು ತಿಳಿಸುವುದು ಅಲ್ಲದೆ ಚಾರಣ ಮಾಡುವವರಿಗೆ ಸೂಕ್ತ ಸಲಹೆ ಮಾರ್ಗದರ್ಶ ನವನ್ನೂ ಗೂಗಲ್ ತಿಳಿಸುತ್ತದೆ.
ತುಲುನಾಡ್ ಅಲ್ಲದೆ ನಮ್ಮ ಕರ್ನಾಟಕದ ಎಲ್ಲಾ ಜಿಲ್ಲೆಗಳ ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ ದೇಶ ವಿದೇಶದ ಪ್ರವಾಸಿಗರನ್ನೂ ಈ ಕಲ್ಲು ಕೈ ಬೀಸಿ ಕರೆಯು ತ್ತಿದೆ. ದಿನಂಪ್ರತಿ ಸಾವಿರಾರು ಚಾರಣ ಪ್ರೀಯರು ಈ ಬೆಟ್ಟವನ್ನು ಏರುತ್ತಿರುವ ದೃಶ್ಯ ಸಾಮಾನ್ಯ ಆಗಿ ಬಿಟ್ಟಿದೆ. ಪಶ್ಚಿಮ ಘಟ್ಟಗಳ ಸಾಲುಗಳೊಂದಿಗೆ ಶೋಭಿಸುತ್ತಾ ಹಿನ್ನೆಲೆಯನ್ನು ಎಲ್ಲೆಡೆ ಚೆಲ್ಲುತ್ತಾ ಅನಾದಿ ಕಾಲದಿಂದಲೂ ತನ್ನ ತಲೆಯನ್ನು ಎತ್ತಿ ಗಂಭೀರವಾಗಿ ನಾನು “ಗಡಾಯಿ ಕಲ್ಲು”ಎಂದು ಕರೆಸಿಕೊಂಡು ಇದೆ. ಬಂದ ಪ್ರವಾಸಿಗರು ಪ್ರಕೃತಿ ಮಾತೆಯ ಲೀಲೆಗೆ ಮಾರು ಹೋಗಿ ಅವಳಿಗೆ ಕೈ ಮುಗಿದು ವಂದಿಸುವರು.
ಚಾರಣಗಾರರು ಈ ಕುಂಜವನ್ನು ಮೇಲೇರಿದ ತಮ್ಮಅನುಭವಗಳನ್ನು ಬರಹದ ಮೂಲಕವಾಗಿ, ಇಮೇಜುಳಲ್ಲಿ ಮತ್ತು ವೀಡಿಯೋಗಳಲ್ಲಿ ತಿಳಿಸಿದ್ದಾರೆ. ಈ “ಗಡಾಯಿ”ಕಲ್ಲಿನ ಬಗ್ಗೆ ಇಲಾಖೆಗಳು, ಬರಹಗಾರರುಸಾಕಷ್ಟು ಬರೆದಿದ್ದಾರೆ. ಆದರೆ ಈವರೆಗೂ ಈ “ಗಡಾಯಿಕಲ್ಲು” ಎಂಬ ಹೆಸರು ಹೇಗೆ ಬಂತು ಎಂದು ಯಾರೂ ತಿಳಿಸಲಿಲ್ಲ. ತಿಳಿಸಲುಆಗುವುದಿಲ್ಲ. ಇನ್ನೂತಿಳಿಸಲು ಸಾಧ್ಯವಿಲ್ಲ.”ಗಡಾಯಿ”ಪದದ ಅರ್ಥವನ್ನುಕೊಡಲು ಯಾರಿಗೂ ಆಗಿಲ್ಲ. ಆದರೆ ಈ “ಗಡಾಯಿ”ಎಂಬ ಗ್ರೇಟ್ ಪದದ ಅರ್ಥವನ್ನು ನಾನು ಕೊಡುತ್ತೇನೆ. ಒಪ್ಪುವುದಾದರೆ ಒಪ್ಪಬಹುದು ಅಥವಾ ಬಿಟ್ಟು ಬಿಡಬಹುದು. ನಾನು ಅರ್ಥ ಕೊಟ್ಟು ತೃಪ್ತಿಯನ್ನು ಪಡೆಯುವೆ. ಆ ಕಲ್ಲಿಗೆ ವಂದಿಸಿ ನಮ್ಮ ತುಲುವಪೂರ್ವಜರಿಗೆ ಸಾಷ್ಟಾಂಗ ನಮಾಸ್ಕಾರ ಮಾಡಿ ತಿಳಿಸುವೆ.
ತುಲುನಾಡಲ್ಲಿ ತುಲು ಭಾಷೆ ಜನಿಸಿದಾಗಲೇ ಈ ಕಲ್ಲಿಗೆ “ಗಡಾಯಿ” ಎಂದು ಹೆಸರಿಟ್ಟು ಕರೆದಿದ್ದಾರೆ. “ಗಡಾಯಿ”ಶಬ್ಧದಲ್ಲಿ ಎರಡು ಪದಗಳಿವೆ. ಅವೆಂದರೆ “ಗಡಿ” ಮತ್ತು”ಆಯಿ” ಎಂಬುದಾಗಿದೆ.
ತುಲು ಭಾಷೆಯಲ್ಲಿ “ಗಡಿ” ಪದವನ್ನು ಅನೇಕ ಕಡೆಬಳಸಿದ್ದು ಕಾಣುತ್ತದೆ. ಅದು ಬೇರೆ ಬೇರೆ ಅರ್ಥವನ್ನುಕೊಡುವುದನ್ನೂ ಕಾಣಬಹುದು. ಉದಾಹರಣೆಗೆ:ಗಡಿಕಲ್ಲು=ಎರಡು ಊರುಗಳಲ್ಲಿ ಇಲ್ಲವೇ ಎರಡುಭೂಮಿಗಳ ಮಧ್ಯೆ ಎಲ್ಲೆಯನ್ನು ಸೂಚಿಸುವುದು. ಗಡಿಪಾರೆ=ಗಡಿಯಲ್ಲಿ ದ್ವಾರದಲ್ಲಿ ಕಾವಲು ಕಾಯುವುದು. ಗಡಿ ಗಡಿ=ಆಗಾಗ್ಗೆ. ಗಡಿ ಬುಡ್ಪಾವುನು=ನೀರುಹರಿಯುವಂತೆ ಮಾಡುವುದು.ಗಡಿ ಮುಚ್ಚಾವುನು=ನೀರು ಹರಿಯದಂತೆ ಮಾಡುವುದು. ಗಡಿ ಕೊರ್ಪುನು,ಗಡಿ ಪತ್ತುನಿ=ಯಾವುದೇ ತಪ್ಪು ಆತಂಕಗಳು ನಡೆಯದಂತೆ ಜವಾಬ್ದಾರಿಯನ್ನು ಮುಖಂಡತ್ವವನ್ನು ವಹಿಸಿಕೊಡುವುದು. ಗಡಿಬುಡಿ=ಅವಸರ ಆತಂಕದ ಸ್ವಭಾವ.ಗಡಿ ಪ್ರಸಾದ=ಬೂತ ಕೋಲ ಉತ್ಸವಗಳಲ್ಲಿ ಯಜಮಾನನಿಗೆ ಕೊಡುವ ಪ್ರಸಾದ. ಗಡಿಯರಿ=ನಿಗದಿತ ಅಕ್ಕಿ.ಇತ್ಯಾದಿ ಇತ್ಯಾದಿ.
(ಗಡಿ(ಗಾಯ)ಬಿರುಕು,ಕುಸಿಯುವ ಪರಿಸ್ಥಿತಿಗಳಿಂದಲೇ ಪ್ರವಾಸಿಗರನ್ನು ಆಕರ್ಷಿಸುವ ಗಡಾಯಿ ಕಲ್ಲು.)
(ಒಂದೊಂದು ದಿಕ್ಕಿನಲ್ಲಿ ಒಂದೊಂದು ವಿನ್ಯಾಸದಲ್ಲಿ ಕಾಣುವ ಗಡಾಯಿ ಕಲ್ಲು.)
ಇಲ್ಲಿ ಅಂದರೆ “ಗಡಾಯಿ”(ಗಡಿ+ಆಯಿ)ಪದದಲ್ಲಿ ಬರುವ “ಗಡಿ”ಪದವು ಗಾಯ(Wound),ಪೆಟ್ಟು, ಬರೆ,ಭಾಗ,ಬಿರುಕು,ಕುಸಿಯು ಎಂಬ ಅರ್ಥಗಳನ್ನು ಕೊಡು ತ್ತದೆ.”ಆಯಿ” ಎಂದರೆ ಆದ(ಆಯಿನ-ಆಗಿರುವ)ಎಂಬ ಅರ್ಥವನ್ನು ಕೊಡುತ್ತದೆ. ಒಟ್ಟಿನಲ್ಲಿ “ಗಡಾಯಿ”ಎಂದರೆಗಾಯವಾಗಿದೆ, ಪೆಟ್ಟಾಗಿದೆ,ಭಾಗವಾಗಿದೆ, ಬಿರುಕು ಬಿಟ್ಟಿದೆ, ಕುಸಿದಿದೆ,ಬರೆ ಎಳೆದಿದೆ,ಕಡಿತ ಆಗಿದೆ ಎಂಬ ಅರ್ಥಗಳು.
“ಗಡಾಯಿ ಕಲ್ಲ್” ಎಂದರೆ ಗಾಯವಾದ ಕಲ್ಲು , ಪೆಟ್ಟಾದ ಕಲ್ಲು ,ಭಾಗವಾದ ಕಲ್ಲು , ಬರೆ ಎಳೆದ ಕಲ್ಲು ,ಬಿರುಕು ಬಿಟ್ಟ ಕಲ್ಲು , ಕಲ್ಲು ಕುಸಿದಿದೆ ,ಗಡಗಡ ಎನ್ನುವಕಲ್ಲು ,ರಂಧ್ರಗಳ ಕಲ್ಲು ಎಂದಿದ್ದಾರೆ.
(ಗಡಾಯಿ ಕಲ್ಲಿನ ಇನ್ನೊಂದು ಸ್ವರೂಪ)
(ಬಿರುಕು ಬಿಟ್ಟಿರುವ ಗಡಾಯಿ ಕಲ್ಲಿನ ಇನ್ನೊಂದು ರೂಪ)
(ಗಡಿ ಆಯಿ(ಗಾಯ ಆದ)ಕಲ್ಲಿನ ಮೇಲಿನ ನೋಟ)
(ಸುಂದರವಾದ ಗಡಾಯಿ ಕಲ್ಲು)
(ಚಾರಣ ಮಾಡುವಾಗ ಸಿಗುವ ನೈಮುಲಿ (ಸಾಫ್ಟ್ ಮುಲಿ ಹುಲ್ಲು)ಪ್ರದೇಶ)
(ಯಾವುದೋ ಕಾಲದಲ್ಲಿ ಈ ಕಲ್ಲಿನ ತುಂಡು ಭಾಗಗಳು ಕುಸಿದಿದೆ.ಸಿಕ್ಕಾ
ಪಟ್ಟೆ ಬಿರುಕುಗಳು ಕಾಣುತ್ತದೆ.)
(ಎಲ್ಲರನ್ನು ದೋಚುವ ರಮಣೀಯ ದೃಶ್ಯ.ಇಲ್ಲೂ ಝೂಮ್ ಮಾಡಿದಾಗ
ಗಡಿ ಬಿರುಕುಗಳನ್ನು ಕಾಣಬಹುದು.)
(ಗಡಾಯಿ ಕಲ್ಲಿನ ಇನ್ನೊಂದು ವಿನ್ಯಾಸ)
(ಕುಕ್ಕುದ ಗಡಿ(ಗಾಯ)ಮತ್ತು ಗಾಯದಿಂದ ಕುಸಿದ ಭಾಗ.ಗಡಾಯಿ
ಕಲ್ಲಿನಲ್ಲೂ ಅಷ್ಟೇ. ಬಿರುಕು ಗಡಿ(ಗಾಯ)ಮತ್ತು ಭಾಗ)
(ಕಾಯಿ ಮತ್ತು ಬಿರುಕು ಬಿಟ್ಟಿರುವ ಕಾಯಿ. (ಗಡಿ)ಗಾಯ ಆಗಿ ಭಾಗ ಕುಸಿದಿದೆ. ಗಡಾಯಿ ಕಲ್ಲಿನ ಸ್ಥಿತಿ ಇದೇ ರೀತಿ ಗಡಾಯಿ ಕಲ್ಲಿನಲ್ಲಿದೆ.)
(ಪೆಲಕಾಯಿದ ಗಡಿ. ಇಲ್ಲೂ ಪೆಲಕಾಯಿಗೆ ಗಾಯ(ಗಡಿ)ಮಾಡಿದ
ಬಳಿಕ ಭಾಗ(ಗಡಿ)ಪ್ರತ್ಯೇಕ ಆಗುತ್ತದೆ. ಗಡಾಯಿ ಕಲ್ಲಿಗೂ ಗಡಿ(ಗಾಯ)ಆಗಿದೆ. ಭಾಗ ಪ್ರತ್ಯೇಕ ಆಗುತ್ತದೆ)
“ಗಡಿ”ಎಂದರೆ ಗಾಯ ಅಥವಾ ಭಾಗ ಎಂಬುದಕ್ಕೆ ತುಲು ಭಾಷೆಯಲ್ಲಿ ಮಾತುಗಳು ಇವೆ.ಗಡಿ ಉಪ್ಪಡ್(ಮಾವಿನಕಾಯಿ ತುಂಡುಗಳಿಂದ ತಯಾರಿಸಿದ ಉಪ್ಪಿನ ಕಾಯಿ) ,ತಾರಾಯಿದ ಗಡಿ(ಒಡೆದ ತೆಂಗಿನಕಾಯಿ),ಪೆಲಕಾಯಿದ ಗಡಿ(ಹಲಸಿನ ಹಣ್ಣಿನ ಭಾಗ),ಕುಕ್ಕುದ ಗಡಿ(ಮಾವಿನಕಾಯಿ ತುಂಡು),ಗಡಿತ್ತ ಎಣ್ಣೆ(ಗಾಯದ ಎಣ್ಣೆ)ಇತ್ಯಾದಿ. ಇಲ್ಲಿ ಗಾಯ ಮಾಡದೆ ಭಾಗ ಅಥವಾ ತುಂಡು ಮಾಡಲು ಆಗೊಲ್ಲ.ಈ ರೀತಿಯಾಗಿ ಗಡಾಯಿ ಕಲ್ಲಿಗೆ ಗಾಯ ಆಗಿ ಭಾಗಗಳು ತುಂಡುಗಳುಕುಸಿದು ಬಿದ್ದಿದೆ ಎಂದಿದ್ದಾರೆ ನಮ್ಮ ತುಲುವರು. ಅನಾದಿ ಕಾಲವದು. ಬರೆಯುವಂತಹ ನಾಗರಿಕತೆ ಬೆಳೆದಿರಲಿಲ್ಲ. ಮುಂದಿನ ಪೀಳಿಗೆಯ ಜನರು ಅರ್ಥೈಸಿಕೊಳ್ಳಲು ಕಲ್ಲಿಗೆ ಗಾಯದ ಕಲ್ಲು ಎಂದಿದ್ದಾರೆ. ಗಾಯದಿಂದ ಬಳಲುತ್ತಿರುವ ಕಲ್ಲು ಎಂದಿದ್ದಾರೆ. ಗಾಯದಮೇಲೆ ಬರೆಗಳ ಮೇಲೆ ಬರೆ ಎಳೆದುಕೊಂಡಿರುವ ಕಲ್ಲುಎಂದಿದ್ದಾರೆ. ಈಗಾಗಲೇ ಈ ಕಲ್ಲಿನ ತುಂಡುಗಳು ಕುಸಿದಿದೆ. ಮುಂಜಾಗ್ರತೆಯಿಂದಿರಲು “ಗಡಾಯಿ ಕಲ್ಲು” ಎಂಬ ಹೆಸರನ್ನು ಇಟ್ಟುಕೊಂಡು ಕರೆಯುತ್ತಾ ಬಂದರು. ಅಪಾಯ ಇದೆ ಎಂದು ಸಾರಿದಂತೆ ಇದೆ.
ಪ್ರತಿ ಒಬ್ಬರೂ ಬರೆಗಣ್ಣಿನಲ್ಲೇ ದೂರದಿಂದಲೇ ಈ ಮೇಲಿನ ಲಕ್ಷಣಗಳನ್ನು “ಗಡಾಯಿ”ಕಲ್ಲಿನಲ್ಲಿ ಕಾಣಬಹುದು. “ಈಗಾಗಲೇ ಈ ಕಲ್ಲಿನ ಸುತ್ತ ಭಾರಿಶಬ್ಧ ಕೇಳಿಸುತ್ತಿತ್ತು. ಕಲ್ಲಿನ ಒಂದು ಭಾಗದಲ್ಲಿ ಕುಸಿತಆಗಿದೆ”ಎಂಬ ಸುದ್ದಿ ಜನರಿಂದ ಕೇಳಿ ಬಂದಿದೆ. ಅಲ್ಲದೆ”ಯಾವುದೇ ಅನಾಹುತ ಸಂಭವಿಸೋದಿಲ್ಲ”ಎಂಬಸ್ಪಷ್ಟನೆಯು ಸಂಬಂಧ ಪಟ್ಟ ಇಲಾಖೆಯಿಂದ ಬಂದಿದೆ. ಆದರೂ ಹೆಸರಲ್ಲೇ ಇರುವ “ಗಡಾಯಿ”ಕಲ್ಲಿನ ಅಪಾಯ ಮುಂದೊಂದು ದಿನ ಬರುವ ಸಾಧ್ಯತೆ ಇದೆ. ಈ ಸತ್ಯವನ್ನು ಅರಿತೇ ನಮ್ಮ ಪೂರ್ವಜರು ಗಡಿ ಆಯಿ(ಗಾಯವಾದ)ಕಲ್ಲು ಎಂದು ಎಂದು ಕರೆದುಕೊಂಡುಬಂದಿದ್ದಾರೆ.
“ಮರಕ್ಕ್ ಗಡಿ ದೀಪುನು” ಎಂಬ ಮಾತು ತುಲುವರಲ್ಲಿಇದೆ. ಎಂದರೆ ಮರವನ್ನು ಕಡಿದು ಉರುಳಿಸುವ ಮೊದಲು ಮರಕ್ಕೆ ಗಾಯ ಮಾಡುವ ಕಾರ್ಯಕ್ರಮ. ಈ ಗಡಾಯಿ ಕಲ್ಲಿಗೆ “ಗಡಿ ದೀಪುನ” ಕಾರ್ಯಕ್ರಮ ಅಂದೇ ಆಗಿರುತ್ತದೆ ಎಂದು ಈ ಗಡಾಯಿ(ಗಡಿ ಆಯಿ)ಕಲ್ಲಿನ ಹೆಸರಲ್ಲೇ ತಿಳಿಯುತ್ತದೆ. ಈ ಕಲ್ಲು ಒಂದಲ್ಲ ಒಂದು ದಿನ ಕುಸಿದು ಉರುಳುತ್ತದೆ ಎಂಬ ಭವಿಷ್ಯವನ್ನು ಅಂದೇ ತಿಳಿದು ಈ ಕಲ್ಲಿಗೆ “ಗಡಿ ಆಯಿ ಕಲ್ಲ್”ಎಂದಿದ್ದಾರೆ. ಈ ಕಲ್ಲಿನ ಮೇಲೆಲ್ಲಾ ಗಡಿ(ಗಾಯ),ಬಿರುಕುಗಳನ್ನು ಕಂಡು ಇದಕ್ಕೆ ಭವಿಷ್ಯ ಇಲ್ಲ ಎಂದಿದ್ದಾರೆ. ಉರುಳುತ್ತದೆ ಕುಸಿಯುತ್ತದೆ ಎಂದಿದ್ದಾರೆ.
ಈ ಗಡಾಯಿ ಕಲ್ಲನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದೊಂದು ಏಕ ಶಿಲಾ ಪಾದೆಕಲ್ಲು ಎಂದು ಹೇಳಲುಆಗುವುದಿಲ್ಲ. ಪ್ರಕೃತಿಯೇ ಒಂದು ಕಲ್ಲಿನ ಮೇಲೆಇನ್ನೊಂದು ಕಲ್ಲನ್ನು ಜೋಡಿಸಿದಂತೆ ಕಾಣುತ್ತದೆ.ಈ ಕಾರಣದಿಂದ ಕಲ್ಲುಗಳು ಬೆಳೆಯುತ್ತಾ ಹೋದಂತೆಲ್ಲಭಾರವಾಗಿ ಸಮತೋಲನ ತಪ್ಪಿ ಬಿರುಕು ಕಂಡು ಕುಸಿತಆಗಿದೆ ಮತ್ತು ಇನ್ನೂ ಕುಸಿತವಾಗುವ ಸಂಭವ ಇರುತ್ತದೆ. ಅನಾದಿಕಾಲದಿಂದಲೂ ನಿರಂತರ ಸಿಡಿಲಿನ ಬಡಿತಕ್ಕೆ ಸಿಲುಕಿದ ಪರಿಣಾಮವಾಗಿ ಕಲ್ಲು ಬಿರುಕು ಬಿಟ್ಟು ಭಾಗಗಳಾಗಿ ಕುಸಿದಿರುವ ಸಾಧ್ಯತೆ ಇದೆ. ಮುಂದಕ್ಕೂ ಇದು ಮುಂದುವರಿಯಿತ್ತದೆ ಎಂಬ ವಿಷಯವನ್ನು ಈ”ಗಡಾಯಿ”ಹೆಸರಿನಲ್ಲಿ ತಿಳಿಸಿದ್ದಾರೆ ನಮ್ಮ ಪೂರ್ವಜರು
ಈ ಗಡಾಯಿ ಕಲ್ಲ್ ಮೇಲೆ ಅರಣ್ಯ ಇಲಾಖೆಯೋ ಅಥವಾ ಸಂಬಂಧ ಪಟ್ಟ ಇಲಾಖೆಗಳು ನಿರಂತರ ನಿಗಾಇಡಬೇಕಿದೆ. ಈ ಕಲ್ಲೇ ಹೇಳುತ್ತಿದೆ ತಾನು ಅಪಾಯದಲ್ಲಿ ಇದ್ದೇನೆಂದು. ಈ ಪ್ರದೇಶದಲ್ಲಿ ಹೊಸದಾಗಿ ಮನೆಗಳನ್ನು ನಿರ್ಮಾಣ ಮಾಡಲು ಅನುಮತಿ ನೀಡಬಾರದು. ಗಡಿ(ಗಾಯ)ಆಗಿ ಬಳಲುತ್ತಿರುವ ಕಲ್ಲನ್ನು ರಕ್ಷಿಸಲು ತುಲುನಾಡಿನಾದ್ಯಂತ ಕಲ್ಲು ಕೋರೆಗಳನ್ನು ನಿಲ್ಲಿಸಬೇಕು. ಕಾಡು ಬೆಟ್ಟ ಗುಡ್ಡಗಳನ್ನು ನೆಲಸಮ ಮಾಡುವ ಅತ್ಯಾಚಾರಿಗಳನ್ನು ಜೈಲಿಗಟ್ಟ ಬೇಕು. ಪಶ್ಚಿಮ ಘಟ್ಟದಪಂಚಾಂಗದ ಅಡಿಪಾಯ ಕಡಲಿನ ಆಳದವರೆಗೂ ಇದೆ. ಕರಾವಳಿಯಲ್ಲಿನ ಬೆಟ್ಟ ಗುಡ್ಡ ಪರ್ವತ ಕುಂಜ ಗಳು ಪಶ್ಚಿಮ ಘಟ್ಟವು ಗಟ್ಟಿಯಾಗಿ ಇರಲೆಂದು ನಿರ್ಮಾಣ ಮಾಡಿದ ಬೃಹತ್ ಕಂಭಗಳಾಗಿವೆ. ಈ ಕಂಭಗಳೇ ಕುಸಿದು ಬಿದ್ದರೆ ಪಶ್ಚಿಮ ಘಟ್ಟವೇ ಇಲ್ಲವಾಗುವುದು. ಇದರೊಂದಿಗೆ ತುಲುನಾಡ್ ಕೂಡಾಪ್ರಲಯಕ್ಕೆ ಸಿಲುಕುವುದು ಖಂಡಿತ. ಗಡಿ ಆಯಿನಕಲ್ಲೇ “ಗಡಾಯಿ”ಗಲ್ಲ್.ಎಚ್ಚರ ಉಪ್ಪುಲೆ ಪಂದ್ ಪಂತೆರ್ ನಮ್ಮ ಪೆರಿಯಾಕುಲು.