ಜೀವನ ಅರಿಯೋಣ
ಎದೆಯಾಳದಲ್ಲಿ ಸುಂದರ ಹಣತೆ ಉರಿಸಿ
ಪ್ರೀತಿಯೆಂಬ ತೈಲವ ಎರೆದು
ಬದುಕಿನ ತಿರುಳ ಆಸ್ವಾದಿಸೋಣ
ದ್ವೇಷಾಸೂಯೆಗಳನ್ನು ಮರೆತು ಬಾಳೋಣ
ಕಿತ್ತೆಸೆಯೋಣ ಒಡಲೊಳಗಿನ ಕಿಚ್ಚನ್ನು
ನಾನು ನನ್ನದು ಎನ್ನುವುದ ಬಿಟ್ಟು
ನಾವು ನಮ್ಮದು ಎನ್ನೋಣ
ಮೋಡ ಕರಗಿ ಮಳೆಯಾಗುವಂತೆ
ನದಿ ಹರಿದು ಸಾಗರ ಸೇರುವಂತೆ
ಮಾನವೀಯತೆ ಹರಿಸಿ ಒಂದಾಗೋಣ
ಬೆಳೆ ಫಸಲು ಕೊಡುವಂತೆ
ಮರಗಿಡ ಗಾಳಿ ನೀಡುವಂತೆ
ಸ್ವಾರ್ಥ ಸಮಾಜದಲ್ಲಿ ನಿಸ್ವಾರ್ಥರಾಗೋಣ
ಅನ್ಯಾಯ ಅಧರ್ಮಗಳ ಮೆಟ್ಟಿ ನಿಂತು
ನ್ಯಾಯ ಧರ್ಮದ ದಾರಿಯಲ್ಲಿ ಸಾಗೋಣ
ಬೆಸೆಯೋಣ ಸಂಬಂಧಗಳ ಕೊಂಡಿ
ಕಳಚಲಿ ಮುಖವಾಡದ ಬಂಡಿ
ಸತ್ಯ ನೀತಿಯೊಂದೆ ಉಸಿರಾಗಲಿ
ಬಲ್ಲವರಾರು ವಿಧಿ ಲಿಖಿತ
ಬದುಕೆನ್ನುವುದು ಮೂರು ದಿನದ ಆಟ
ಅರಿತು ಬಾಳು ನೀ ಮನುಜ.
— ವೈಶಾಲಿ ಭಂಡಾರಿ ಬೆಳ್ಳಿಪ್ಪಾಡಿ