ಇಲ್ಲಿಯವರೆಗೆ…..
ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಲು ಬಂದ ಡಾಕ್ಟರ್ ಆಕಾಶ್ ಅವರನ್ನು ನೋಡಿ ತನ್ನ ಬಾಲ್ಯವನ್ನು ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಸ್ಪತ್ರೆಯಿಂದ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸಲು ಹೋಗುತ್ತಾನೆ. ಅಲ್ಲಿಂದ ಬಂದ ಮೇಲೆ ತನಗೆ ಒಡಹುಟ್ಟಿದವರು ಇರಬೇಕಿತ್ತು ಎಂದು ಅಲವತ್ತು ಕೊಳ್ಳುತ್ತಾನೆ. ಆಕಾಶ್ ಇರುವ ಆಸ್ಪತ್ರೆ ಗೋಪಾಲ ರಾಯರು ಕಟ್ಟಿಸಿದ್ದು. ಇವರ ಒಬ್ಬಳೇ ಮಗಳು ಗೌತಮಿ ಮಕ್ಕಳ ಡಾಕ್ಟರ್ ಇವಳನ್ನು ಅಜಿತ್ ನಿಗೆ ಮದುವೆ ಮಾಡಿ ಕೊಟ್ಟಿರುತ್ತಾರೆ. ಅಲ್ಲಿಂದ ತಕ್ಷಣ ಬರಬೇಕು ಎಂದು ಗೋಪಾಲ್ ರಾಯರಿಗೆ ಫೋನ್ ಕಾಲ್ ಬರುತ್ತದೆ .
ಅವಿನಾಭಾವ-ಭಾಗ -7
ಗೋಪಾಲ್ ರಾಯರು ಮತ್ತು ಇವರ ಹೆಂಡತಿ ವೇದಾರವರು ಹೋಗುವಾಗ ಪೊಲೀಸರು ಮನೆಯ ಹೊರಗೆ ಇದ್ದರು. ಗೋಪಾಲ್ ರಾಯರು ಮತ್ತು ಅವರ ಹೆಂಡತಿ ವೇದಾರವರ ಮನಸ್ಸು ಯಾಕೋ ಏನೋ ಕೇಡನ್ನೇ ಶಂಕಿಸಿತು. ಭಗವಂತ ನಮ್ಮ ಮಗಳಿಗೆ ಏನೂ ಆಗದಿರಲಿ ಎಂದು ಮನಸ್ಸಿನಲ್ಲೇ ಬೇಡಿಕೊಂಡು ಮನೆಯ ಒಳಗೆ ಬಂದರು. ಯಾವುದು ಆಗಬಾರದು ಎಂದು ಅಂದುಕೊಂಡು ಬಂದಿದ್ದರೋ !!! ಏನು ನೋಡಬಾರದು ಎಂದು ಕೊಂಡಿದ್ದರೋ ಇಲ್ಲಿ ಎಲ್ಲವೂ ಆಗಿ ಹೋಗಿತ್ತು. ಗೌತಮಿಯ ಹೆಣವನ್ನು ಬಿಳಿ ಬಟ್ಟೆ ಹಾಕಿ ಮಲಗಿಸಿದ್ದರು!!!
ಅಜಿತ್ ಊರಲ್ಲಿ ಇಲ್ಲ ಅವನು ವೈದ್ಯ ಗೆಳೆಯರ ಜೊತೆ ಹೊರ ಊರಿಗೆ ಹೋಗಿದ್ದಾನೆ.. ಇವಳು ರೂಂನಲ್ಲಿ ಫ್ಯಾನ್ ಗೆ ನೇಣು ಬಿಗಿದು ಸತ್ತಿದ್ದಾಳೆ ಎಂದು ಉಸುರಿದರು…. ಅವಳು ಇತ್ತೀಚೆಗೆ ಅಳುತ್ತಿದ್ದಳು ಮಾನಸಿಕ ಒತ್ತಡ ನಿವಾರಣೆ ಬಗ್ಗೆ ಇವಳಿಗೆ ಆಪ್ತ ಸಮಾಲೋಚನೆ ಕೂಡ ನಡೆಸಿದ್ದೇವೆ ಎಂದರು… ಒಬ್ಬಳೇ ಮಗಳನ್ನು ಮದುವೆ ಆಗಿ ಎರಡು ವರ್ಷ ಆಗುವ ಮುಂಚೆಯೇ ಈ ಸ್ಥಿತಿಯಲ್ಲಿ ನೋಡುತ್ತೇವೆ ಎಂದು ಯೋಚಿಸದ ಗೌತಮಿಯ ತಾಯಿ ವೇದಾ ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು. ಗೋಪಾಲ್ ರಾಯರಿಗೆ ಎನು ಮಾಡಬೇಕೆಂದು ಆ ಕ್ಷಣ ತಿಳಿಯಲಿಲ್ಲ.. ಮಗಳನ್ನು ಕಳೆದುಕೊಂಡೆ ಈಗ ಹೆಂಡತಿಯನ್ನು ಕಳೆದುಕೊಳ್ಳುವ ಭೀತಿಯಿಂದ ಅಲ್ಲಿಯವರ ಸಹಾಯದಿಂದ ವೇದಾರವರನ್ನು ಎತ್ತಿ ಕಾರಲ್ಲಿ ಹಾಕಿಕೊಂಡು ನೇರವಾಗಿ ತಮ್ಮದೇ ನವಚೇತನ ಆಸ್ಪತ್ರೆಗೆ ತಂದು ದಾಖಲು ಮಾಡಿದರು….
ವೇದಾರವರಿಗೆ ಸತತ ಮೂರನೇ ದಿನ ಪ್ರಜ್ಞೆ ಬಂದು ನೆನಪಿನ ಶಕ್ತಿಯನ್ನೆ ಕಳೆದುಕೊಂಡಿದ್ದರು!!!! ಅಂದಿನಿಂದ ಗೋಪಾಲ್ ರಾಯರು ಮೊದಲಿನ ಮನಸ್ಥಿತಿಯನ್ನು ಕಳೆದುಕೊಂಡು ಯಾಂತ್ರಿಕವಾಗಿ ಬದುಕುತ್ತಿದ್ದಾರೆ ಎಂದು ಅವರನ್ನು ನೋಡಿದಾಗ ತಿಳಿಯುತ್ತಿತ್ತು….ಮೊದಲೇ ಬಡ ಹೆಣ್ಣು ಮಕ್ಕಳಿಗೆ ಆಸ್ಪತ್ರೆಯ ಖರ್ಚನ್ನು ಭರಿಸಲು ಸಹಾಯ ಮಾಡುತಿದ್ದರು… ತಮ್ಮ ಮಗಳನು ಕಳೆದುಕೊಂಡು ಹೆಂಡತಿ ಹಾಸಿಗೆ ಹಿಡಿದ ಮೇಲೆ ಯಾವ ರೋಗಿಯು ಕಷ್ಟ ಎಂದು ಬಂದರೆ ಅವರ ಎಲ್ಲ ಖರ್ಚು ವೆಚ್ಚಗಳನ್ನು ಆಸ್ಪತ್ರೆಯೇ ಭರಿಸುತಿತ್ತು…. ಇವರಿಗೆ ಆಕಾಶ್ ನ ಬಗ್ಗೆ ವಿಶೇಷ ಪ್ರೀತಿ ಇತ್ತು. ಆಕಾಶ್ ನಿಗೆ ಕೂಡ ಇವರ ಸಹಾಯ ಮಾಡುವ ಗುಣ ಇವರ ಮನೆಯ ವಿಷಯ ತಿಳಿದ ಮೇಲೆ ತುಂಬಾ ಕಾಳಜಿಯಿಂದ ಗೋಪಾಲ್ ರಾಯರ ಜೊತೆ ಕೆಲಸ ಮಾಡುತಿದ್ದನು.
ಸರ್ ಇವತ್ತು ಸ್ವಲ್ಪ ಲೇಟಾಗಿ ಬಂದೆ ಹಾಗೆ ಗಡಿಬಿಡಿ ಆಯಿತು ಎಂದನು ಆಕಾಶ್. ಇರಲಿ ಬಿಡಿ ನಾವು ಇದ್ದೇವೆ ಅಲ್ವಾ ಎಂದರು ಗೋಪಾಲ್ ರಾಯರು.
ರಾಯರು ಆರಾಮವಾಗಿ ಇರುವುದನ್ನು ಕಂಡು ಆಕಾಶ್ “ಸರ್ ನಮ್ಮ ಆಸ್ಪತ್ರೆಗೆ ಸ್ವಾಗತಕಾರಿಣಿ ಕೆಲಸಕ್ಕೆ ಒಬ್ಬರು ಬೇಕು ಎಂದು ಹೇಳಿದ್ದೀರಿ .. ನನ್ನ ಪರಿಚಯದ ಒಬ್ಬ ಹೆಣ್ಣು ಮಗಳು ಇದ್ದಾರೆ. ಅವರಿಗೆ ಕೆಲಸದ ಅಗತ್ಯ ತುಂಬಾ ಇದೆ ಅವರ ಬಯೋಡೇಟಾ ಇದು ಎಂದು ಅವರ ಟೇಬಲ್ ಎದುರು ರಿತಿಕಾಳ ಪೈಲ್ ಇಟ್ಟ.
ಪೈಲ್ ನ ಅಗತ್ಯ ಇಲ್ಲ ಆಕಾಶ್ ಅವರಿಗೆ ಕೆಲಸದ ಅಗತ್ಯ ಇದೆ ಎಂದು ಹೇಳಿದ್ದೀರಿ ತಾನೇ ಅವರನ್ನು ನಾಳೆಯಿಂದಲೇ ಕೆಲಸಕ್ಕೆ ಕರೆಯಿರಿ ಇಲ್ಲಿನ ಕೆಲಸ ಹೇಗೆ ಎನು ಎಂದು ತಿಳಿದು ಕೊಳ್ಳಲು ಹೇಳಿ ಎಂದು ಗೋಪಾಲ್ ರಾಯರು ಅಲ್ಲಿಂದ ಎದ್ದು ಹೊರಗೆ ನಡೆದರು. ಈ ನವಚೇತನ ಆಸ್ಪತ್ರೆಯ ಹೆಚ್ಚಿನ ಎಲ್ಲಾ ಉಸ್ತುವಾರಿ ನೋಡಿಕೊಳ್ಳುವುದು ಆಕಾಶ್. ಇದು ಆಕಾಶ್ ನಿಗೂ ಕುಶಿಯ ವಿಚಾರ ಆಗಿತ್ತು.
ಆಕಾಶ್ ತನ್ನ ಕಾಫಿ ಕುಡಿಯುವ ಸಮಯದಲ್ಲಿ ಕ್ಯಾಂಟೀನಿನಲ್ಲಿ ಕಾಫಿ ಕುಡಿಯುತ್ತ ಸುಶೀಲ ಅವರ ಮೊಬೈಲ್ ನಂಬರ್ ಗೆ ಕರೆ ಮಾಡಿದ. ಅತ್ತ ಕಡೆಯಿಂದ ಸುಶೀಲ ಅವರ ಹಲೋ ಎಂಬ ಧ್ವನಿ ಕೇಳಿ ಒಳ ಮನಸ್ಸು ಒಂದು ಕ್ಷಣ ಭಾವುಕತೆಗೆ ಒಳಗಾಯಿತು. ಮರುಕ್ಷಣ ಸಾವರಿಸಿಕೊಂಡು ಆಕಾಶ್ ಹಲೋ ನಾನು ಆಕಾಶ್ ಅಂಟಿ ಚೆನ್ನಾಗಿ ಇದ್ದೀರಾ ಎಂದು ಕೇಳಿದ. ಓಹೋ ಆಕಾಶ್ ನಾನು ನಿಮ್ಮನ್ನೇ ಎನಿಸುತ್ತಿದ್ದೆ ಎಂದರು ಸುಶೀಲ. ಆಕಾಶ್ ನಿಗೆ ಹೃದಯವೇ ಹಿಂಡಿದ ಭಾವವೊಂದು ಹಾದು ಹೋಯಿತು ಆದರೂ ತೋರ್ಪಡಿಸಿಕೊಳ್ಳದೆ ಏನಾಯಿತು ಅಂಟಿ ಚೆನ್ನಾಗಿ ಇದ್ದೀರಾ ನಾನು ಅಲ್ಲಿಗೆ ಬರಬೇಕೆ ಎಂದು ಕೇಳಿದಾಗ ನಾನು ಚೆನ್ನಾಗಿಯೇ ಇದ್ದೇನೆ.ನೀವು ಬರಬೇಕಿಲ್ಲ ನೆನಪುಗಳಿಗೆ ಯಾವುದೇ ರೀತಿಯ ಬೇಲಿ ಇಲ್ಲ ಅಲ್ವಾ?? ಅದು ಎಲ್ಲಿ ಬೇಕಾದರೂ ಬರಬಹುದು ಎಲ್ಲಿ ಬೇಕಾದರೂ ಹೋಗಬಹುದು ಅಲ್ವಾ !!!ಹಾಗೆ ಬಂತು ಎಂದು ಹೇಳಿದರು ಸುಶೀಲ.
ಅಂಟಿ ರಿತಿಕಾಳಿಗೆ ನಮ್ಮ ಆಸ್ಪತ್ರೆಯಲ್ಲೇ ಕೆಲಸಕ್ಕೆ ಮಾತನಾಡಿದೆ. ನಾಳೆಯಿಂದಲೇ ಬರಲು ಹೇಳಿದ್ದಾರೆ ಎಂದಾಗ ಸುಶೀಲ ಸಂತೋಷ ತಡೆಯಲಾರದೆ ನೀನು ನನ್ನ ಮನೆಯ ಮನಸ್ಸಿನ ಕೂಸು, ಮಗು ನಿಜ ಮಾಡಿದೆ ಎಂದು ಒಮ್ಮೆಲೇ ಹೇಳಿಬಿಟ್ಟರು. ಅಂಟಿ ನಾನು ನಿಮ್ಮ ಮನೆಯ ಕೂಸೇ ಎಂದು ಆಶ್ಚರ್ಯದಿಂದ ಕೇಳಿಯೇ ಬಿಟ್ಟ ಆಕಾಶ್. ಒಮ್ಮೆಲೇ ಸುಶೀಲ ಅವರ ಸ್ವರ ಕಂಪಿಸಿ. ಸಂತೋಷ ತಡೆಯಲಾರದೆ ಹಾಗೆ ಹೇಳಿಬಿಟ್ಟೆ ಡಾಕ್ಟರೇ ತಪ್ಪು ಎನಿಸಬೇಡಿ ಎಂದು ಸಮಾಜಯಿಸಿದರು ಸುಶೀಲ.ಆದರೆ ಆಕಾಶ್ ಪ್ರತಿಯೊಂದು ಮಾತು ಪ್ರತಿ ವ್ಯಕ್ತಿಯ ಚಲನ ವಲನದ ನಿಖರತೆಯನ್ನು ಅಳೆಯುವ ಮಾಪನ ಎಂದು ಸುಶೀಲ ಅವರಿಗೆ ತಿಳಿಯಲಿಲ್ಲ. ಅವರು ಆಡಿದ ಮಾತು ಆಕಾಶ್ ನನ್ನು ಒಂದು ಕ್ಷಣ ತೊಟ್ಟಿಲಿನಲ್ಲಿ ತೂಗುವಂತೆ ಮಾಡಿ ಸುಶೀಲ ಅವರ ಮಡಿಲಲ್ಲಿ ಮಲಗಿ ಅವರನ್ನು ಬರಸೆಳೆದು ಬಿಗಿದಪ್ಪಿ ಅವರಲ್ಲೇ ಲೀನವಾಗುವಂತೆ ಮಾಡಿತು… ಯಾಕೋ ಏನೋ ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎಂದು ಮನಸ್ಸು ತಾಳ ಹಾಕುತ್ತಿತ್ತು. ಮನಸ್ಸನ್ನು ತಹಬಂದಿಗೆ ತಂದು ಅಂಟಿ ನಾಳೆ ರಿತಿಕಾಳನು ಕರೆದುಕೊಂಡು ಬರುತ್ತೀರಾ ಎಂದು ಕೇಳಿದ. ಅವಳಿಗೆ ಮಂಗಳೂರು ಗೊತ್ತು ಡಾಕ್ಟರೇ ಎಂದರು ಸುಶೀಲ. ಆಕಾಶ್ ನಿಗೆ ಸುಶೀಲ ಆಂಟಿ ಕೂಡ ರಿತಿಕಾಳ ಜೊತೆ ಬರಲಿ ಎಂದು ಮನಸ್ಸಿನಲ್ಲೇ ಆಶಿಸುತ್ತಾ ನಾಳೆ ಬೆಳಗ್ಗೆ ಕಳಿಸಿ ಅಂಟಿ ಎಂದು ಹೇಳಿ ಫೋನ್ ಕಟ್ ಮಾಡಿದ.
(ಮುಂದುವರಿಯುವುದು)