September 20, 2024

ಇಲ್ಲಿಯವರೆಗೆe…..

ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಲು ಬಂದ ಡಾಕ್ಟರ್ ಆಕಾಶ್ ಅವರನ್ನು ನೋಡಿ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ‌ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಸ್ಪತ್ರೆಯಿಂದ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸಲು ಹೋಗುತ್ತಾನೆ. ಆಕಾಶ್ ಇರುವ ಆಸ್ಪತ್ರೆ ನವಚೇತನ. ಗೋಪಾಲ ರಾಯರು ಕಟ್ಟಿಸಿದ್ದು. ಇವರ ಒಬ್ಬಳೇ ಮಗಳು ಗೌತಮಿ ಮಕ್ಕಳ ಡಾಕ್ಟರ್ ಅಜಿತ್ ನಿಗೆ ಮದುವೆ ಮಾಡಿ ಕೊಟ್ಟಿರುತ್ತಾರೆ. ಮದುವೆ ಆಗಿ ಎರಡು ವರ್ಷ ದ ಮುಂಚೆಯೇ ಅವಳು ಆತ್ಮಹತ್ಯೆ ಮಾಡಿದ್ದಾಳೆ ಎಂದು ಅವಳ ಅತ್ತೆ ಮಾವ ಹೇಳಿ ಕಳಿಸುತ್ತಾರೆ…..

ಅವಿನಾಭಾವ ಭಾಗ -8

ರಾತ್ರಿ ಮಲಗಿದಾಗ ಆಕಾಶ್ ನಿಗೆ ತುಂಬಾ ಸಮಯ ನಿದ್ದೆಯೇ ಹತ್ತಿರ ಸುಳಿಯಲಿಲ್ಲ. ಸುಶೀಲ ಆಂಟಿಯ ಬಗ್ಗೆ ನನಗೇಕೆ ಇಷ್ಟು ಮಮಕಾರ! ಹೇಳಲು ಅಸಾಧ್ಯವಾದ ಸೆಳೆತ ಯಾಕೆ? ಅವರು ನನಗೆ ಯಾವ ಸಂಬಂಧ ಆಗಿರಬಹುದು ಅಥವಾ ನಮ್ಮ ಮನೆಯ ಹತ್ತಿರ ಇದ್ದರೂ ಎಂಬ ಸೆಳೆತವೇ? ಹೀಗೆಯೇ ಪ್ರಶ್ನೆಗಳು ಬರುತ್ತಿದ್ದು ಯಾವಾಗ ನಿದ್ದೆ ಬಂತೋ ಗೊತ್ತಾಗಲಿಲ್ಲ. ನಿದ್ದೆಯಲ್ಲಿ ಕೂಡ ಏನೇನೋ ಕನಸುಗಳು.. ಬೆಳಿಗ್ಗೆ ಎಚ್ಚರ ಆಗುವಾಗ ಮೈ ಇಡೀ ಉದಾಸೀನ ಭಾವ ಕಾಡಿತ್ತು ಆಕಾಶ್ ನಿಗೆ . ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಬಂದಾಗ ಮನಸ್ಸು ದೇಹ ಪ್ರಫುಲ್ಲ ಆಯಿತು. ಲಗುಬಗೆಯಿಂದ ತಿಂಡಿ ತಿಂದು ಆಸ್ಪತ್ರೆಗೆ ಬಂದು ಆಕಾಶ್ ರೋಗಿಗಳ ಪೈಲ್ ನೋಡುತ್ತಾ ಕುಳಿತ.ಸಮಯ ಕಳೆದುದೆ ತಿಳಿಯಲಿಲ್ಲ. ಇವನ ಎದುರು ಸುಶೀಲ ಆಂಟಿ ಬಂದು ನಿಂತಾಗ ಒಮ್ಮೆಲೇ ಇಹಲೋಕದ ಪರಿವೆ ಆಯಿತು. ಕುಳಿತುಕೊಳ್ಳಲು ಇಬ್ಬರಿಗೂ ಹೇಳಿ ಅವರ ಆರೋಗ್ಯ ವಿಚಾರಿಸಿದ ಆಕಾಶ್. ಮೊನ್ನೆ ಗಿಂತ ಇವತ್ತು ಸುಶೀಲ ಅವರು ಲವಲವಿಕೆಯಿಂದ ಇರುವುದನ್ನು ಆಕಾಶ್ ಗಮನಿಸಿದ. ಇವರನ್ನು ಕಂಡರೆ ನನಗೆ ಮಾತ್ರ ಭಾವಪರವಶ ಆಗುವುದು ಅಲ್ಲ ಇವರಿಗೂ ನನ್ನ ಕಂಡಾಗ ಎನೋ ಒಂದು ರೀತಿಯ ಆನಂದ ಇದೆ ಎಂಬುದನ್ನು ಅವರ ಮುಖಭಾವದಿಂದಲೇ ಕಂಡುಕೊಂಡ ಆಕಾಶ್!!! ರಿತಿಕಾ ಸರಳ ಸುಂದರಿಯಾಗಿ ಚೆಲ್ಲು ಚೆಲ್ಲಾಗಿ ವರ್ತಿಸಾದ ಗಂಭೀರ ಹೆಣ್ಣು ಇವಳು ಈ ಕೆಲಸಕ್ಕೆ ಸರಿಯಾದ ಆಯ್ಕೆ ಎಂದು ಮೊದಲ ದಿನ ಎರಡನೇ ನೋಟದಲ್ಲೇ ಅರ್ಥ ಮಾಡಿಕೊಂಡ ಆಕಾಶ್.
ಇಬ್ಬರನ್ನೂ ಆಸ್ಪತ್ರೆಯಲ್ಲಿ ಎಲ್ಲಾ ಕಡೆ ತೋರಿಸಿ ರಿತಿಕಾಳ ಕೆಲಸದ ಬಗ್ಗೆ ಸೂಚ್ಯವಾಗಿ ಹೇಳಿ ಅವಳಿಗೆ ಕುಳಿತುಕೊಳ್ಳಲು ಆಸನ ತೋರಿಸಿ ಕೆಲಸ ಪ್ರಾರಂಭ ಮಾಡಲು ಹೇಳಿದ. ಮದ್ಯಾಹ್ನ ಊಟಕ್ಕೆ ಕ್ಯಾಂಟಿನ್ ಇದೆ. ನಿಮಗೆ ಇಷ್ಟ ಇಲ್ಲದಿದ್ದರೆ ಊಟ ಮನೆಯಿಂದ ತರಬಹುದು ಎಂಬುದನ್ನು ಹೇಳಿದಾಗ ರೋಗಿಯ ಕಡೆಯವರು ಏನೋ ಮಾಹಿತಿ ಕೇಳಿದರು. ಆಕಾಶ್ ರಿತಿಕಾಳ ಬಳಿ ಕಂಪ್ಯೂಟರ್ ನಲ್ಲಿ ನೋಡಿ ಅವರಿಗೆ ಹೇಳಲು ಹೇಳಿ ಸುಶೀಲ ಮತ್ತು ಆಕಾಶ್ ಹೊರಗೆ ಬಂದರು. ಅಂಟಿ ಬನ್ನಿ ಕಾಫಿ ಕುಡಿಯೋಣ ಎಂದು ಅವರನ್ನು ಕ್ಯಾಂಟಿನ್ ಗೆ ಕರೆದೊಯ್ದ. ತಿಂಡಿ ಬೇಡ ನಾನು ದೋಸೆ ತಿಂದು ಬಂದುದು ಬರೀ ಕಾಫಿ ಸಾಕು ಎಂದು ಹೇಳಿದರು ಸುಶೀಲ.


ಸುಶೀಲ ಮತ್ತು ಆಕಾಶ್ ಎದುರು ಬದುರು ಕುರ್ಚಿಯಲ್ಲಿ ಕುಳಿತು ಕಾಫಿಗಾಗಿ ಕಾದರು. ಆಕಾಶ್ ನಿಗೆ ಎನೋ ಕಳೆದುಕೊಂಡ ಬೆಲೆ ಬಾಳುವ ವಸ್ತುವನ್ನು ಪಡೆದುಕೊಂಡ ಅನುಭವ ಆಗುತ್ತಿತ್ತು.. ಯಾವಾಗಲೂ ಯಾವುದನ್ನು ಹೆಚ್ಚು ಹಚ್ಚಿಕೊಳ್ಳದ ಆಕಾಶ್ ನಿಗೆ ಸುಶೀಲ ಅವರ ಎದುರು ಕುಳಿತಾಗ ಮನಸ್ಸು ದೇಹ ಒಂದು ರೀತಿಯ ಅನುಭೂತಿಯನ್ನು ಪಡೆಯಿತು. ಬೇರೆಯವರು ಈ ರೀತಿಯ ಮನಸ್ಥಿತಿ ಬಗ್ಗೆ ಹೇಳಿದ್ದರೆ ನಂಬುತ್ತಿರಲಿಲ್ಲ ಆಕಾಶ್!!
ಆಕಾಶ್ ಸುಶೀಲ ಅವರ ಮುಖವನ್ನೇ ದಿಟ್ಟಿಸಿ ನೋಡುತ್ತಾ ಇದ್ದಾಗ ಸುಶೀಲ ಅವರೇ ನಿಮ್ಮ ಅಪ್ಪ ಅಮ್ಮ ಹೇಗಿದ್ದಾರೆ ಡಾಕ್ಟರೇ ಎಂದರು. ಅವರಿಬ್ಬರೂ ಚೆನ್ನಾಗಿ ಇದ್ದಾರೆ ಅಂಟಿ ಎಂದ ಆಕಾಶ್. ನಾನು ನಿಮಗೆ ‌ಪರಿಚಯ ಆಗಿರುವುದು ಅವರಲ್ಲಿ ಹೇಳಿದ್ದೀರಾ ಎಂದು ಹೇಳಿ ಪುನಃ ಮುಂದುವರಿಸಿ ನೀವು ಹೇಳಲು ಹೋಗಬೇಡಿ ಅದರಿಂದ ನಿಮಗೆ ತೊಂದರೆಯೇ ಆದೀತು ಎಂದರು ಸುಶೀಲ. ಅದಕ್ಕೆ ಯಾವುದೇ ರೀತಿಯ ಪ್ರತ್ಯುತ್ತರ ನೀಡದೆ ಕೇವಲ ಮುಗುಳು ನಗು ಮಾತ್ರ ನಕ್ಕ ಆಕಾಶ್.
ಸುಶೀಲ ಅವರೇ ಮಾತನಾಡಿ ಡಾಕ್ಟರೇ ನಮ್ಮ ರಿತಿಕಾಳ ಜೊತೆ ಆಗಾಗ ಮನೆಗೆ ಬರುತ್ತೀರಿ. ಬರುವಾಗ ಊಟ ಮಾಡಿಕೊಂಡು ಬರಬೇಡಿ ನಮ್ಮ ಮನೆಯಲ್ಲಿಯೇ ಮಾಡಿದರಾಯಿತು ಎಂದರು. ಆಕಾಶ್ ನಿಗೆ ಈ ಮಾತಿನಿಂದ ತುಂಬಾ ಅಂದರೆ ತುಂಬಾನೇ ಸಂತೋಷ ಆಗಿ ಖಂಡಿತಾ ಬರುತ್ತೇನೆ ಅಂಟಿ ನನಗೂ ಒಂದು ಮನೆ ಇದೆ ಎಂದು ಆಯಿತು ಅಲ್ವಾ ಎಂದನು ಆಕಾಶ್. ಯಾವಾಗಲೂ ಯಾವ ಸಮಯದಲ್ಲೂ ನಿಮಗೆ ಬರಬೇಕು ಎಂದು ಅನಿಸಿದರೆ ಖಂಡಿತಾ ಬನ್ನಿ ಎಂದರು ಸುಶೀಲ.
ಕಾಫಿ ಕುಡಿದು ಇಬ್ಬರು ಆಸ್ಪತ್ರೆಗೆ ಬಂದರು.ಸುಶೀಲ ರಿತಿಕಾಳ ಬಳಿ ಹೇಳಿ ಆಕಾಶ್ ನಲ್ಲಿ ನಾನು ಹೋಗುತ್ತೇನೆ ಎಂದಾಗ ಆಕಾಶ್ ನಾನು ಮನೆಗೆ ಬಿಡುತ್ತೇನೆ ಅಂಟಿ ಎಂದಾಗ ಬೇಡ ಡಾಕ್ಟರೇ ಇವತ್ತು ಬೇರೆ ಎನೋ ಕೆಲಸ ಇದೆ ಅದನ್ನು ಮುಗಿಸಿ ನಾನು ಮನೆಗೆ ಹೋಗುತ್ತೇನೆ ನೀವೂ ನಿಮ್ಮ ಕೆಲಸ ಮಾಡಿ ನಾನು ಹೋಗುತ್ತೇನೆ ಎಂದು ಹೋದರು.
ರಿತಿಕಾ ಕೆಲಸಕ್ಕೆ ಸೇರಿ ಒಂದು ತಿಂಗಳು ಆಗುತ್ತಾ ಬಂತು ಅಚ್ಚು ಕಟ್ಟಾಗಿ ತನ್ನ ಕೆಲಸವನ್ನು ಮಾಡಿ ಮುಗಿಸುತ್ತಿದ್ದಳು. ಆಕಾಶ್ ನಲ್ಲಿ ಕೂಡ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಹೇಳುವ ಬದಲು ಆಕಾಶ್ ನಿಗೆ ಮಾತನಾಡಲು ಸಮಯವೇ ಹೆಚ್ಚು ಸಿಗುತ್ತಿರಲಿಲ್ಲ. ಇತ್ತೀಚೆಗೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಹೀಗಾಗಿ ಎಲ್ಲರೂ ಅವರವರ ಕೆಲಸದಲ್ಲಿ ಮಗ್ನರಾಗಿದ್ದರು.
(ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *