November 10, 2024
WhatsApp Image 2022-12-17 at 13.42.01

ಇಲ್ಲಿಯವರೆಗೆ…..

ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಲು ಬಂದ ಡಾಕ್ಟರ್ ಆಕಾಶ್ ಅವರನ್ನು ನೋಡಿ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ‌ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಸ್ಪತ್ರೆಯಿಂದ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸಲು ಹೋಗುತ್ತಾನೆ. ಆಕಾಶ್ ಇರುವ ಆಸ್ಪತ್ರೆ ನವಚೇತನ. ಗೋಪಾಲ ರಾಯರು ಕಟ್ಟಿಸಿದ್ದು. ಇವರ ಒಬ್ಬಳೇ ಮಗಳು ಗೌತಮಿ ಮಕ್ಕಳ ಡಾಕ್ಟರ್ ಅಜಿತ್ ನ ಪ್ರೀತಿಸಿ ಮದುವೆಯಾದ ಎರಡು ವರ್ಷ ಆಗುವ ಮುಂಚೆ ಸಾಯುತ್ತಾಳೆ. ಆಕಾಶ್ ಸುಶೀಲ ಅವರ ಮನೆಯಲ್ಲಿ ಇರುವ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ.

 

ಅವಿನಾಭಾವ ಭಾಗ -9

ಆ ದಿನ ಬೆಳಿಗ್ಗೆ ರಿತಿಕಾ ಕೆಲಸಕ್ಕೆ ಬಂದವಳೇ ಡಾಕ್ಟರ್ ಆಕಾಶ್ ನ ಬಳಿ ಬಂದು ಅಂಟಿ ನಿಮ್ಮನ್ನು ಸಂಜೆ ಮನೆಗೆ ಬರಲು ಹೇಳಿದ್ದಾರೆ ಎಂದಾಗ ಆಕಾಶ್ ನಿಗೆ ಕೆಲಸದ ಒತ್ತಡದಿಂದಾಗಿ ಸುಶೀಲ ಆಂಟಿಯ ಮನೆಗೆ ಹೋಗಲು ಆಗಲಿಲ್ಲ ಛೇ ಅವರೇ ಬರಲು ಹೇಳಿದ್ದಾರೆ ಎಂದು ಎನಿಸಿ ಖಂಡಿತಾ ಬರುತ್ತೇನೆ. ಒಂದು ಕೆಲಸ ಮಾಡಿ ರಿತಿಕಾ ನಿಮ್ಮ ಕೆಲಸ ಮುಗಿಸಿ ‌ ನನ್ನನ್ನು ಕರೆಯಿರಿ ನಾನು ನಿಮ್ಮ ಜೊತೆ ಬರುತ್ತೇನೆ ಒಟ್ಟಿಗೆ ಹೋಗೋಣ ಎಂದಾಗ ಸರಿ ಸರ್ ಎಂದು ರಿತಿಕಾ ತನ್ನ ಕೆಲಸಕ್ಕೆ ಹೋದಳು.
ಹೇಳಿದಂತೆ ರಿತಿಕಾ ತನ್ನ ಕೆಲಸದ ಸಮಯ ಮುಗಿದ ಮೇಲೆ ಡಾಕ್ಟರ್ ಆಕಾಶ್ ನ ಬಳಿ ತೆರಳಿದಾಗ ಅವನು ರೋಗಿಯ ಬಳಿ ತೆರಳಿದ್ದ. ಸ್ವಲ್ಪ ಸಮಯದ ಬಳಿಕ ಬಂದು ರಿತಿಕಾಳನ್ನು ನೋಡಿ ಓಹೋ ಮರೆತೇ ಹೋಗಿತ್ತು ಕ್ಷಮಿಸಿ ಈಗ ಬಂದೆ ಎನ್ನುತ್ತಾ ತನ್ನ ಕೆಲಸದ ವಿವರಗಳನ್ನು ಬೇರೆ ಡಾಕ್ಟರ್ ಗೆ ಒಪ್ಪಿಸಿ ರಿತಿಕಾಳ ಬಳಿ ಬಂದು ಹೋಗೋಣ ಎಂದನು. ಇಬ್ಬರು ಕಾರ್ ನ ಬಳಿ ಬಂದಾಗ ರಿತಿಕಾ ಹಿಂದಿನ ಸೀಟಿನ ಹತ್ತಿರ ಹೋದಾಗ ಮುಂದೆ ಬನ್ನಿ ರಿತಿಕಾ ಎಂದಾಗ ಬೇಡ ಸರ್ ಎಂದಳು. ಆಗ ಆಕಾಶ್ ನಿಮಗೆ ಹೇಳಬೇಕು ಎಂದು ಇದ್ದೆ. ನನ್ನನು ನೀವು ಸರ್ ಎನ್ನಬೇಡಿ ಆಕಾಶ್ ಎಂದರೆ ಅಷ್ಟೇ ಸಾಕು.ಈಗ ನಾವು ಇಬ್ಬರೇ ಇರುವುದು ತಾನೇ ಮುಂದೆ ಬನ್ನಿ ಎಂದಾಗ ರಿತಿಕಾ ಹೆಚ್ಚು ಒತ್ತಾಯ ಮಾಡದೆ ಮುಂದಿನ ಸೀಟಿನಲ್ಲಿ ಬಂದು ಕುಳಿತಳು. ಇಬ್ಬರು ಹೊರಟರು ಪೇಟೆಯ ಮದ್ಯೆ ಕಾರ್ ಬಂದಾಗ ಕಾಫಿ ಕುಡಿಯೋಣವ ರಿತಿಕಾ ಎಂದು ಆಕಾಶ್ ಕೇಳಿದಾಗ ಬೇಡ ಸರ್ ನೇರಾ ಮನೆಗೆ ಹೋಗೋಣ ಅಂಟಿ ಎನಾದರೂ ತಿಂಡಿ ಮಾಡಿ ಇರುವರು ನೋಡೋಣ ಎಂದಾಗ ಅದು ಸರಿ ಹಾಗಾದರೆ ಸೀದಾ ಹೋಗೋಣ ಎಂದ ಆಕಾಶ್ ಇಬ್ಬರು ಹೆಚ್ಚು ಮಾತನಾಡದೆ ಮನೆಗೆ ಬಂದರು. ಸುಶೀಲ ಆಂಟಿ ಬಾಗಿಲಲ್ಲಿ ಕಾಯುತ್ತಾ ಕುಳಿತಿದ್ದರು. ಇಬ್ಬರನ್ನೂ ಕಂಡು ಮುಖ ತುಂಬಾ ನಗು ನಗುತ್ತಾ ತಂಬಿಗೆಯಲ್ಲಿ ನೀರು ತಂದು ಕೈ ಕಾಲು ತೊಳೆದು ಬನ್ನಿ ಡಾಕ್ಟರೇ ಎಂದರು ಸುಶೀಲ. ತಂಬಿಗೆ ತೆಗೆದುಕೊಂಡು ಕೈ ಕಾಲು ತೊಳೆದು ಒಳಗೆ ಹೋಗಿ ಕುಳಿತನು ಆಕಾಶ್. ರಿತಿಕಾ ಟವೆಲ್ ಕೊಟ್ಟಳು. ಲೋಟ ತುಂಬಾ ಕಷಾಯ ತಂದು, ಎರಡು ದೊಡ್ಡ ತುಂಡು ಹಿಂದಿನ ಕಾಲದಲ್ಲಿ ಮಾಡುತಿದ್ದ ಕೆಂಡದ ಅಡ್ಯೇಯನು ಬಟ್ಟಲಿನಲ್ಲಿ ಹಾಕಿ ಆಕಾಶ್ ನ ಎದುರು ಇಟ್ಟರು. ಆಕಾಶ್ ನಿಗೆ ಬಹು ಕಾಲದಿಂದ ಮನೆ ಎಂಬ ಅಕ್ಕರೆ ಮನಸ್ಸಿನಲ್ಲೇ ಲಘು ಸಂಗೀತ ಮೀಟಿದಂತೆ ಭಾಸವಾಯಿತು. ಅಂಟಿ ಇದು ಯಾವ ಕಷಾಯ ಎಂದಾಗ ಸುಶೀಲ ಇದು ಜೀವಕ್ಕೆ ಏನೂ ತೊಂದರೆ ನೀಡದ ನಿಮ್ಮ ಕೆಲಸದ ಒತ್ತಡ ನಿವಾರಣೆ ಮಾಡುವ ಟಾನಿಕ್ ಎಂದರೆ ತಪ್ಪಾಗಲಾರದು ಹೆಚ್ಚು ಸಿಹಿ ಕೂಡ ಇಲ್ಲ. ತಿಂಡಿ ಕೂಡ ಈಗ ಮಾಡಿದ್ದು ಎಂದರು. ಆಗ ರಿತಿಕಾ ಕೂಡ ಇಬ್ಬರಿಗೂ ತಿಂಡಿ ಮತ್ತು ಕಷಾಯ ತಂದು ಮೂವರು ಒಟ್ಟಿಗೆ ಕುಳಿತು ತಿಂದರು. ಆಕಾಶ್ ಎನು ಮಾತನಾಡದೆ ಕೊಟ್ಟ ಎಲ್ಲಾ ತಿಂಡಿ ತಿಂದು ಕಷಾಯ ಕುಡಿದ.ಇಂತಹ ಅಡ್ಯೇ ತಿನ್ನದೇ ಯಾವ ಕಾಲ ಆಗಿತ್ತು ನೆನಪು ಇಲ್ಲ ಅವನಿಗೆ. ತಿಂಡಿ ಹಿತವಾದ ಸಿಹಿ ನವಿರಾದ ಒಗ್ಗರಣೆ ಮಿತವಾದ ಬಿಸಿ ಇದ್ದು ತಿನ್ನುವಾಗ ಏನೋ ಕುಶಿ ಅಲ್ಲದೆ ಒಂಥರಾ ಆಹ್ಲಾದಕರ ವಾತಾವರಣ ಇದ್ದು ಅಷ್ಟು ತಿಂದದೆ ತಿಳಿಯಲಿಲ್ಲ ಆಕಾಶ್ ನಿಗೆ. ಮನೆಯಲ್ಲಿ ಎಲ್ಲ ಕಡೆ ಓಡಾಡಿದ ಆಕಾಶ್.. ಯಾಕೋ ಏನೋ ಒಂದು ರೀತಿಯ ಆಪ್ತತೆ ಮನಸ್ಸಿಗೆ ಮುದ ನೀಡಿತು. ತಮ್ಮ ಅಷ್ಟು ದೊಡ್ಡ ಬಂಗಲೆಯಂತಿರುವ ಮನೆ ಮನಸ್ಸಿಗೆ ನೆಮ್ಮದಿ ಮುದ ತರುವ ಬದಲು ಪ್ರೇತ ಕಲೆಯನ್ನು ಒಳಗೊಂಡಿದೆ ಎಂದು ಮನಸ್ಸಿನಲ್ಲೇ ಅಂದುಕೊಂಡ ಆಕಾಶ್. ಸುಶೀಲ ಅವರ ಪುಟ್ಟ ಕೈ ತೋಟ ತರಕಾರಿ ಗಿಡಗಳನ್ನು ಮುಟ್ಟಿ ನೋಡಿಕೊಂಡ ಸಣ್ಣ ಮಕ್ಕಳಂತೆ. ಮನೆ ಅಂದರೆ ನಾವು ಮಾತ್ರ ಬದುಕುವುದು ಅಲ್ಲ ಅಲ್ಲಿ ಹೂ ಹಣ್ಣು ಗಿಡ ಮರ ಬಳ್ಳಿಗಳು ಇದ್ದರೆ ಅದಕ್ಕೊಂದು ಚಂದ ಎಂದುಕೊಂಡ…. ಸುಶೀಲ ಆಂಟಿ ತುಂಬಾ ಚಟುವಟಿಕೆಯಿಂದ ಓಡಾಡಿ ಆಕಾಶ್ ನಿಗೆ ಗಿಡ ಬಳ್ಳಿ ಹೂ ಗಳ ಪರಿಚಯ ಮಾಡಿದರು. ಟೊಮೆಟೊ ಗಿಡ, ಪುದಿನಾ ಸೊಪ್ಪು, ಹರಿವೆ.ಬೆಂಡೆ,ಬದನೆ, ನುಗ್ಗೆ, ಹಾಗಲಕಾಯಿ, ಕುಂಬಳ ಕಾಯಿ, ಬಸಳೆ ಹೀಗೆ ವಿವಿಧ ತರಕಾರಿಗಳನ್ನು ಬೆಳೆಸುತ್ತಿದ್ದರು. ಚುಕ್ಕು, ಸೀತಾಫಲ, ನೆಲ್ಲಿ ಕಾಯಿ, ಜಂಬು ನೇರಳೆ, ಮಾವಿನ ಕಾಯಿ, ಬಾಳೆ ಹೀಗೆ ಹಣ್ಣು ಕೂಡ ಇತ್ತು. ಮೊದಲೇ ಆಕಾಶ್ ಪರಿಸರ ಪ್ರಕೃತಿ ಪ್ರೇಮಿ. ಇದನ್ನೆಲ್ಲಾ ನೋಡಿದ ಮೇಲೆ ಮೈ ಮರೆತು ಆಸ್ಪತ್ರೆ ರೋಗ ರೋಗಿ ಅಪ್ಪ ಅಮ್ಮ ಎಲ್ಲವನ್ನೂ ಮರೆತು ತನ್ಮಯತೆಯಿಂದ ತಾನು ಗಿಡ ಮರ ಬಳ್ಳಿ ಎಂಬಂತೆ ಅದರಲ್ಲಿ ಲೀನವಾದನು. ಕತ್ತಲು ಕವಿದು ಕಣ್ಣಿಗೆ ಪೊರೆ ಬಂದ ಹಾಗೆ ಅಸ್ಪಷ್ಟ ಕಾಣುತಿತ್ತು….. ಡಾಕ್ಟರೇ ಒಳಗೆ ಬನ್ನಿ ಎಂದರು ಸುಶೀಲ. ಆಗ ಆಕಾಶ್ ಅಂಟಿ ನೀವು ಪ್ರತಿ ಸಾರಿ ನನ್ನನ್ನು ಡಾಕ್ಟರೇ ಎಂದು ಯಾಕೆ ಕರೆಯುವುದು ಲಕ್ಷಣವಾಗಿ ಆಕಾಶ್ ಎನ್ನಿ ಎಂದನು.. ಅದು ಹಾಗಲ್ಲ ಡಾಕ್ಟರೇ ಕೆಲವು ಕೆಲಸ ಸಮಾಜದಲ್ಲಿ ಪರಿವರ್ತನೆ ಮಾಡುವ ಜನರನ್ನು ಸುಶಿಕ್ಷಿತ ಸುರಕ್ಷಿತ ಮಾಡುವ ಒಳ್ಳೆಯ ಕೆಲಸವನ್ನು ಅದೇ ಹೆಸರಿನಲ್ಲಿ ಕರೆದರೆ ತುಂಬಾ ಪರಿಣಾಮಕಾರಿ ಎಂದು ನನ್ನ ಭಾವನೆ. ಉದಾಹರಣೆಗೆ ಶಿಕ್ಷಣ… ಶಿಕ್ಷಕರು ಮಾಡುವ ಕೆಲಸ ತುಂಬಾ ಸುಲಭ ಎಂದೆನಿಸುವ ಹಾಗೂ ಅಷ್ಟೇ ಕಷ್ಟವಾದ ಬಾರೀ ತಾಳ್ಮೆ ಬಯಸುವ ಕೆಲಸ ಅದು. ಒಬ್ಬ ವ್ಯಕ್ತಿ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದರೆ ಅವರನ್ನು ಟೀಚರ್ ಬಂದರು ಎನ್ನುವುದೇ ಆ ಕ್ಷಣ ಆ ಪರಿಸರವನ್ನು ಎಚ್ಚರಿಸುವ ಗೌರವ ಸೂಚಕ ಪದ ಅಲ್ವಾ.ರೈತ ಕೂಡ ಹಾಗೆಯೇ ಅದೇ ರೀತಿ ಡಾಕ್ಟರ್ ಎಂದರೆ ನೊಂದ ಜೀವಕ್ಕೆ ದೇವರೇ ಎನ್ನುವಂತಹ ಕೆಲಸ ಇಂತಹ ನೂರಾರು ಒಳ್ಳೆಯ ಕೆಲಸ ಸಮಾಜದಲ್ಲಿ ‌ಹಲವಾರು ಇದೆ. ಅದಕ್ಕಾಗಿ ನಿಮ್ಮನ್ನು ಡಾಕ್ಟರೇ ಎಂದು‌ ಪ್ರೀತಿ ಅಕ್ಕರೆ ಅಭಿಮಾನದಿಂದ ಹೇಳುವುದು ಎಂದು ತಮ್ಮ ನಿಲುವನ್ನು ಹೇಳಿದಾಗ ಆಕಾಶ್ ಸುಶೀಲರವರ ಬಗ್ಗೆ ಅಬ್ಬಾ ಇವರಿಗೆ ಇಷ್ಟೋಂದು ಆಳವಾದ ಜ್ಞಾನ ಇದೆಯಾ ಎಂದು ಆಶ್ಚರ್ಯದಿಂದ ನೋಡಿದ!!!!!!
( ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *