…..ನೋವು, ಚಳಿ ಜೊತೆಗೆ ಭಯದಿಂದ ನಡುಗುತ್ತಿದ್ದ ಕರಿಯನನ್ನು ಕಂಡು ದಾದುವಿಗೆ ಪಶ್ಚತ್ತಾಪವಾಯಿತು. ಕರಿಯ ಇದ್ದಲ್ಲಿಗೆ ಹೋಗಿ ” ಇನ್ನು ಹೀಗೆ ನನ್ನ ಮೇಲೆ ದ್ವೇಷ ಸಾಧಿಸುವ ಪ್ರಯತ್ನ ಮಾಡ್ಬೇಡ ನಿನ್ನನ್ನು ಕ್ಷಮಿಸಿದ್ದೇನೆ” ಎಂದು ಮರಕ್ಕೆ ಕಟ್ಟಿದ ಹಗ್ಗ ಬಿಚ್ಚುತ್ತಾ “ಕರಿಯ ನಿನ್ನ ದ್ವೇಷವನ್ನ ಇಲ್ಲಿಗೆ ಬಿಟ್ಟು ಬಿಡು ಇನ್ನು ಮುಂದುವರೆಸಿದರೆ ಇದಕ್ಕಿಂತ ಜಾಸ್ತಿ ಅನುಭವಿಸ್ತಿಯಾ!” ಎಂದು ಎಚ್ಚರಿಕೆ ಕೊಟ್ಟ. ಹಗ್ಗ ಬಿಚ್ಚುತ್ತಲೇ ಏನೂ ಮಾತಾನಾಡದೇ ತನಗಾದ ಅವಮಾನದ ಮುಖ ತೋರಿಸಲಾಗದೇ ಮನೆಯತ್ತ ಓಡಿದ.
ಮನೆಯಲ್ಲಿ ಲೋಕಯ್ಯನವರಲ್ಲಿ ಹೇಳಿ ಏನಾದರೂ ರಾದ್ದಾಂತ ಮಾಡಿದರೆ ಎಂಬ ಭಯ ದಾದುವಿಗೆ ಇತ್ತು. ಆದರೆ ಕರಿಯನ ದ್ವೇಷ ಕಾರುವ ಕೆಲಸಗಳೆಲ್ಲ ಹಿಂದಿನಿಂದ ಮಾತ್ರ ಆಗುತಿತ್ತು. ಯಾವತ್ತೂ ನೇರವಾಗಿ ಯಾವ ಕೆಲಸವನ್ನು ಮಾಡಿದವನೇ ಅಲ್ಲ.. ಹೀಗಾಗಿ ನಾನು ಹೊಡೆದಿದ್ದನ್ನು ಯಾರಿಗೂ ಹೇಳಲಾರ ಎಂಬ ದೈರ್ಯವು ಒಂದು ಕಡೆ ಇತ್ತು. ಅದು ನಿಜವೂ ಆಯ್ತು..
ಕರಿಯ ಹತ್ತು ದಿನ ದಾದುವಿಗೆ ಮುಖ ತೋರಿಸಲಿಲ್ಲ ಮತ್ತೆ ನಿಧಾನವಾಗಿ ರಾಜಿಯಾಗಿ ದಾದುವಿನೊಂದಿಗೆ ಕೆಲಸ ಕಾರ್ಯಗಳಲ್ಲಿ ಜೊತೆಯಾಗುತ್ತಿದ್ದ.
ದಾದು ಊರಿನ ಕ್ಷೌರ ಮತ್ತು ಶುದ್ಧ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಕಾರಣ ಆತನ ಜನಪ್ರಿಯತೆ ಹೆಚ್ಚಾಯಿತು. ಲೋಕಯ್ಯ ಭಂಡಾರಿಯವರಿಗೆ ಭಂಡಾರದ ಚಾಕರಿಗೂ ದಾದುವೇ ನೆಚ್ಚಿನ ಬಂಟನಾಗಿದ್ದ. ಊರಿನಲ್ಲಿ ಬಡಗು ಮತ್ತು ತೆಂಕು ಎಂಬ ಧಾರ್ಮಿಕ ಗ್ರಾಮಗಳು ಈ ಎರಡು ಗ್ರಾಮಗಳಲ್ಲಿ ಒಟ್ಟು ನಾಲ್ಕು ಭಂಡಾರದ ಸತ್ತಿಗೆ (ದೈವದ ಛತ್ರಿ) ಕೆಲಸದ ಜವಬ್ದಾರಿ ಲೋಕಯ್ಯ ಭಂಡಾರಿಯವರ ಮೇಲಿತ್ತು. ಅದರಲ್ಲಿ ಒಂದು ತನ್ನ ದೊಡ್ಡ ಮಗ ಸಿದ್ದು ಭಂಡಾರಿಗೆ ಬಡಗು ಮಾಳದ ಕೊಡಮಣಿತ್ತಾಯನ ಸತ್ತಿಗೆಯ ಪಟ್ಟಿ ಆಗಿತ್ತು. ತೆಂಕು ಮಾಳದ ಎಲ್ಲ ಸತ್ತಿಗೆ ಜವಬ್ದಾರಿಯನ್ನು ದಾದುವಿಗೆ ನೀಡುವ ಅಲೋಚನೆಯಲ್ಲಿದ್ದರು. ಹೀಗಾಗಿ ತೆಂಕು ಮಾಳದ ಕೊಡಮಣಿತ್ತಾಯ , ದುಗ್ಗಲಾಯ ದೈವದ ಸತ್ತಿಗೆ ಜವಬ್ದಾರಿ ದಾದುವಿಗೆ ನೀಡಲು ಗುತ್ತಿನ ಪ್ರಮುಖರು, ಊರಿಗೆ ಸಂಬಂಧಿಸಿದ ಅಸ್ರಣ್ಣರು ಕೂಡಾ ಬೆಂಬಲ ನೀಡಿ ಪಟ್ಟಿ ನೀಡಿ ದೈವ ಚಾಕರಿಯ ಹಿಂಗಾರದ ಎಸಳಿನ ಅಧಿಕಾರ ನೀಡಿದರು.
ಇದು ಕರಿಯನ ಮಾತ್ಸರ್ಯವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿತ್ತಲ್ಲದೇ ತಂದೆಯ ಜೊತೆ ವೈಷಮ್ಯವನ್ನು ಬೆಳೆಸುವಂತೆ ಮಾಡಿದ್ದು ಕೂಡಾ ಸುಳ್ಳಲ್ಲ. ಆದರೆ ಸರಿಯಾಗಿ ಕೆಲಸ ಗೊತ್ತಿಲ್ಲದ ಊರವರ ದೃಷ್ಟಿಯಲ್ಲಿ ಊರಿನ ಶುದ್ಧ ಮತ್ತು ದೈವದ ಕೆಲಸಗಳಿಗೆ ಅಸಮರ್ಥ ಎಂಬ ಹಣೆಪಟ್ಟಿ ಇದ್ದ ಎಡವಟ್ಟು ಕರಿಯನನ್ನು ತನ್ನ ಮಗನೇ ಆದರೂ ಲೋಕಯ್ಯರಿಗೆ ಊರಿನ ಸತ್ತಿಗೆಯ ಜವಬ್ದಾರಿ ಕೊಡಲು ಸಿದ್ದರಿರಲಿಲ್ಲ. ಊರಿನ ಜವಬ್ದಾರಿಯನ್ನು ದಾದುವಿಗೆ ನೀಡಿ ದಾದುವಿನೊಂದಿಗೆ ಎಲ್ಲ ಕೆಲಸಗಳನ್ನು ಕಲಿಯಲು ಹೇಳಿದ್ದು ಮತ್ತಷ್ಟು ಅವಮಾನಕ್ಕೆ ಕಾರಣವಾಯ್ತು. ಆದರೂ ಅನಿವಾರ್ಯ ದಾದುವಿನ ಕೈ ಕೆಳಗೆ ಕೆಲಸ ಮಾಡಬೇಕಾಯ್ತು. ಊರಿನ ಕೆಲಸ ಅದರಲ್ಲೂ ನೇಮೊತ್ಸವ ಅಂದರೆ ದಾದು ಮಾಳಕ್ಕೆ ಬಂದ ದಿನದಿಂದಲೂ ಲೋಕಯ್ಯರೊಂದಿಗೆ ನಿಷ್ಠೆಯಿಂದ ನಿರ್ವಹಿಸುತ್ತಿದ್ದ. ಪಟಾಪಟ್ ಕೇಶಕರ್ತನ, ನೇರ ಮಾತು, ಪ್ರಾಮಾಣಿಕತೆ, ದೈವ ಚಾಕರಿಯಲ್ಲಿನ ನಿಷ್ಠೆ , ನೇಮದ ಕಟ್ಟುಕಟ್ಟಳೆಯ ಬಗೆಗಿನ ಜ್ಞಾನ ಸಣ್ಣ ವಯಸ್ಸಿನಲ್ಲೇ ರಾಜನ್ ದೈವಗಳ ಭಂಡಾರ ಸತ್ತಿಗೆಯ ಜವಬ್ದಾರಿ ಸಿಗಲೂ ಪ್ರಮುಖ ಕಾರಣವೆನ್ನಬಹುದು.
ದಾದುವಿಗೆ ದೈವ ಚಾಕರಿಯ ಉಸ್ತುವಾರಿ ನೀಡುವ ದಿನ ಬಂದೇ ಬಿಟ್ಟಿತು. ಅಸ್ರಣ್ಣರು ನಿಯಮ ಭೋದಿಸಲು ಕೂಟದ ಮುನ್ನ ದಿನ ದಾದುವನ್ನು ಮನೆಗೆ ಕರೆಸಿಕೊಂಡರು. “ನಿನಗೆ ಹೆಚ್ಚೇನೂ ಹೇಳಬೇಕಾಗಿಲ್ಲ ನಿನ್ನ ತಲೆಯಲ್ಲಿ ನೇಮದ ನಿಯಮಗಳೆಲ್ಲ ಈಗಾಗಲೇ ಹಾಸುಹೊಕ್ಕಾಗಿದೆ. ಆದರೂ ನನ್ನ ಜವಬ್ದಾರಿ ನಿರ್ವಹಿಸುವುದು ನನ್ನ ಧರ್ಮ. ನೇಮದ ಮುನ್ನ ದಿನ ನಡೆಯುವ ಕೂಟ ಎಂಬ ಕಟ್ಟಳೆಗೆ ಹಾಜರಾಗಿ ಚಾಕರಿಯವರೆಲ್ಲ ನೇಮದ ಮುನ್ನ ದಿನದಿಂದ ಪವಿತ್ರರಾಗಿ ಇದ್ದು ಭಂಡಾರದ ಕಟ್ಟಳೆಯನ್ನು ನಿರ್ವಹಿಸಬೇಕು. ಆಯಾಯ ಭಂಡಾರಗಳಿಗೆ ಮುಕಾಲ್ದಿ ಪ್ರಮುಖರಾದರೂ, ಭಂಡಾರದ ಕಟ್ಟುಕಟ್ಟಳೆಯ ಮಾರ್ಗದರ್ಶಿ ಭಂಡಾರಿ ಇದಕ್ಕಾಗಿಯೇ ಸಾಂಪ್ರಾದಾಯಿಕವಾಗಿ ಭಂಡಾರಿ ಎಂಬ ಹೆಸರು ನಿಮಗೆ ಬಂದಿದೆ. ಎಲ್ಲ ಕಟ್ಟುಕಟ್ಟಳೆಗಳನ್ನು ಭಂಡಾರಿಯ ಮಾರ್ಗದರ್ಶನದಲ್ಲಿ ನಡೆಯುವ ಕಾಲವೊಂದು ಇತ್ತು. ದೈವ ಚಾಕರಿಯ ಕಟ್ಟು ಕಟ್ಟಳೆಯಲ್ಲಿ ಏನಾದರೂ ತಪ್ಪಾದಲ್ಲಿ ಭಂಡಾರಿ ಗುತ್ತು ಪ್ರಮುಖರ ಕಿವಿಯಲ್ಲಿ ಹೇಳಿ ಅಸ್ರಣ್ಣರ ಮೂಲಕ ತಪ್ಪು ಕಾಣಿಕೆ ಹಾಕಬೇಕು ಎಂಬ ಅಲಿಖಿತ ನಿಯಮವೊಂದು ಹಿಂದಿನಿಂದಲೇ ಇದೆ. ಇದನ್ನೆಲ್ಲ ಗಮನವಿಟ್ಟು ಯಾವತ್ತೂ ಕರ್ತವ್ಯಕ್ಕೆ ಚ್ಯುತಿ ಬರದಂತೆ ನಡೆದುಕೋ ನಿನ್ನ ಮೇಲೆ ನನಗೆ ಮತ್ತು ಊರಿನ ಎಲ್ಲ ಗುತ್ತು ಪ್ರಮುಖರಿಗೆ ವಿಶೇಷ ಒಲವು ಇದೆ, ನಿರೀಕ್ಷೆಯೂ ಇದೆ. ಹಾಗೆ ದೈವ ಇಚ್ಚೆಯೂ ಅದೇ ಆಗಿದೆ ಒಳ್ಳೆದಾಗುತ್ತದೆ.” ಎಂದು ಹಾರೈಸಿ ಕಳುಹಿಸಿದರು.
ಆ ದಿನ ಬಂದೇ ಬಿಟ್ಟಿತು. ದಾದುವಿನ ಜೀವನದಲ್ಲಿ ಇದೊಂದು ಅವಿಸ್ಮರಣೀಯ ಕ್ಷಣ. ಪಟ್ಟಿ ನೀಡುವ ಎಲ್ಲ ಕ್ರಮಗಳು ಅಸ್ರಣ್ಣರ ನೇತೃತ್ವದಲ್ಲಿ ನಡೆಯಿತು. ಆ ದೈವದ ಸತ್ತಿಗೆ ಹಿಡಿದು ನಿಂತಾಗ ಅದೇನೋ ವಿಶೇಷ ಅನುಭವ… ತನ್ನ ಕೂದಲು ಕೊಕ್ಕರಿಸಿ ನಿಂತಂತೆ. ಅದೇನೋ ಶಕ್ತಿ ದೈವದ ಸತ್ತಿಗೆಯಲ್ಲಿ ಇರುತ್ತದೆ ಎಂಬುದನ್ನೂ ಕೇಳಿದ್ದ ದಾದುವಿಗೆ, ಆ ಸತ್ತಿಗೆ ಜವಬ್ದಾರಿ ತನಗೆ ಬಂದಾಗ ಆ ಸತ್ತಿಗೆಯ ಪಾವಿತ್ರತೆಯ ಅರಿವಾಯಿತು. ನೇಮದ ಕೊನೆಯ ಹಂತಕ್ಕೆ ತಲುಪುತ್ತಿದ್ದಂತೆ ದೈವ ನಂಬಿಗೆ ಕೊಡಲು ಚಾಕರಿಯವರನ್ನೆಲ್ಲ ಕರೆಯಿತು. ಈಗ ದಾದುವಿನ ಸರಧಿ.. ದೈವ ತನ್ನ ನುಡಿ ಆರಂಭಿಸಿತು. “ದೈವಲ ಯಾನೆ, ಕಟ್ಟ್ ಲ ಗುತ್ತು ಬರ್ಕೆದನೇ.. ಮಣ್ಣ್ ಲ ಎನ್ನನೇ… ರಾಜನ್ ದೈವಲ ಯಾನೆ ಒಂಜಿ ಕಾಲೋಡು ಕೈ ತತ್ತ್ ಪೋಯಿನ ಪಿಂಗಾರದ ಎಸಲ್ ನ್ ಜೋಪಾನೋ ಮಲ್ತ್ ದ್ ಒಂಜೆಕ್ ಒಂಜಿ ಎಸಲ್ ಜಾಸ್ತಿ ಮಲ್ತ್ ದ್ ನಿನ್ನ ಕೈಕ್ ದೀದ್ ಎನ್ನ ಮಾಯೋದ ಕರ್ತವ್ಯ ಪಾಲನೆ ಮಲ್ತ್ ದ್ ಧರ್ಮ ದೈವ ಆದ್ ನಂಬಿಗೆ ಕೊರೊಂದುಲ್ಲೆ ನಿಕ್ ವಾ ತೊಂದರೆ ಆವಂದಿಲಕ ದೈವ ಉಲ್ಲೆಗೆ ಪಂದ್ ಪನ್ಪದ್ ಕೊರ್ಪೆ ” ಎಂದು ನಂಬಿಗೆಯ ಪ್ರಸಾದ ಜೊತೆಗೆ ಪಟ್ಟಿಯ ಹಿಂಗಾರ ನೀಡಿತು.
ನಿಜಕ್ಕೂ ಇದು ನಂಬಲಾಗದ ಅನುಭವ ದಾದು ನಂಬಿಕೆಯೊಂದಿಗೆ ಬೆಸೆದುಕೊಂಡಿದ್ದ ಯುವಕನಾದರೂ ವೈಚಾರಿಕತೆಯನ್ನು ಬೆಳೆಸಿಕೊಂಡಿದ್ದ. ಸಣ್ಣವನಿದ್ದಾಗ ಎಷ್ಟೋ ದೈವ ನರ್ತಕರ ಬಳಿ ಹೋಗಿ ನಿಜವಾಗಿಯೂ ನಿಮಗೆ ದೈವ ಬರುತ್ತದೆಯೋ ? ಸತ್ಯವೋ ಇದೆಲ್ಲ ಎಂದು ಪ್ರಶ್ನಿಸುತ್ತಿದ್ದ ಹುಡುಗನಿಗೆ ದೈವ ನರ್ತಕರು ತಮಾಷೆಯಾಗಿ ಉತ್ತರಿಸಿ ಇಲ್ಲ ಹಾಗೇನೂ ವಿಶೇಷವಾಗಿ ದೈವ ನಮ್ಮ ಮೇಲೆ ಬರೋದಿಲ್ಲ ಒಂದು ಕ್ಷಣ ತಂಬಾಕು ತಿಂದಾಗ ತಲೆಗೆ ಹಿಡಿದರೆ ಹೇಗಾಗುತ್ತದೋ ಹಾಗಾಗುತ್ತದೆ. ಆಗ ನಾವು ಏನೂ ಮಾಡುತ್ತಿದ್ದೇವೆ ಗೊತ್ತಾಗೊದಿಲ್ಲ. ಇದು ಮೂರು ಬಾರಿ ಆಗುತ್ತದೆ. ಮತ್ತೆಲ್ಲ ನಾವು ಅರಿವಿದ್ದೆ ಮಾಡೋದು ಯಾವ ದೈವವೂ ನಮ್ಮ ಮೇಲಿರುವುದಿಲ್ಲ ಅನ್ನುತ್ತಿದ್ದರು. ಆದರೆ ಭೂತ, ಭವಿಷ್ಯದ ವಿಚಾರಗಳು ದೈವ ಕಟ್ಟಿದವನಿಗೆ ಗೊತ್ತಾಗುತ್ತದೆ ಎಂದು ದಾದು ಅಷ್ಟಾಗಿ ನಂಬುತ್ತಿರಲಿಲ್ಲ. ದೈವದ ನುಡಿ ಈಗ ಮತ್ತಷ್ಟು ಕಾಡಲು ಆರಂಭಿಸಿತು. ದೈವದ ಮೇಲಿನ ನಂಬಿಕೆಗಿಂತ ಆತ ತನ್ನ ಬಗ್ಗೆ ಎಲ್ಲ ತಿಳಿದಿರುವ ಆತ್ಮೀಯ ಸ್ನೇಹಿತ ನನಗೆ ಒಳ್ಳೆಯನ್ನು ಬಯಸುವ ಪರಮಾಪ್ತ, ಎಂಬ ಭಾಂದವ್ಯ ಮನಸ್ಸಿನಲ್ಲಿ ಮೂಡಿತು. ತನ್ನ ತಾಯಿಯ ನೆನಪಾಯಿತು. ತಂದೆಯಿಂದ ಯಾರೋ ಕಸಿದುಕೊಂಡ ದೈವ ಚಾಕರಿ ಇಂದು ಅವರ ಮಗನಿಗೆ ಸಿಕ್ಕಿತು. ಊರು ಯಾವುದಾದರೇನು? ದೈವ ಅವನೇ , ಈ ಮಣ್ಣು ಅವನಿಗೆ ಸೇರಿದ್ದು, ಮನುಷ್ಯರು ದೈವದ ಎದುರು ಶೂನ್ಯರು ದೈವ ಯಾವತ್ತೂ ಧರ್ಮ ಬಿಡೋದಿಲ್ಲ. ದ್ವೇಷ ಬೆಳೆಸಲೂ ಪ್ರೇರೆಪಿಸೋದಿಲ್ಲ. ತಾಳ್ಮೆಯಿಂದ ಕಾಯುತ್ತದೆ. ಅಧರ್ಮಿಗಳು ಅವರ ಪಾಪದಿಂದಲೇ ಶೂನ್ಯರಾಗುತ್ತಾರೆ.ಅವರನ್ನು ಶಿಕ್ಷಿಸುವ ಅಗತ್ಯವಿಲ್ಲ. ಧರ್ಮದಿಂದ ನಡೆಯುವನನ್ನು ದೈವ ನೋಡಿಕೊಳ್ಳುತ್ತದೆ. ತಾಳ್ಮೆಯಿಂದ ಕರ್ತವ್ಯ ಮಾಡಿದವನಿಗೆ ಸೂಕ್ತ ಗೌರವ ನೀಡುತ್ತದೆ. ಎಂಬುದು ದೈವದ ನುಡಿಯ ನಂತರ ದಾದುವಿಗೆ ಮನದಟ್ಟಾಯಿತು.
ತನ್ನ ತಾಯಿ ಈ ಕ್ಷಣ ನನ್ನೊಂದಿಗೆ ಇರಬೇಕಿತ್ತು. ನಾನು ನನಗೆ ದೈವ ನೀಡಿದ ಹಿಂಗಾರ ಎಸಳು ತಾಯಿಗೆ ತೋರಿಸಬೇಕಿತ್ತು. ದೈವದ ನುಡಿಯನ್ನು ಅಮ್ಮನಲ್ಲಿ ಹೇಳಬೇಕಿತ್ತು. ಅದೆಷ್ಟು ಖುಷಿಪಡುತ್ತಿತ್ತೇನೋ ಆ ಜೀವ! ಎಂದು ಕೊಂಡು ಭಾವುಕನಾದ. ನೇಮವೆಲ್ಲ ಮುಗಿದು ಕರಿಯ ಮತ್ತು ದಾದು ಮನೆಗೆ ಬಂದು ನಿದ್ದೆಗೆ ಜಾರಿದರು.
ಮುಂದುವರೆಯುವುದು……….