ಇಲ್ಲಿಯವರೆಗೆ…..
ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಸ್ಪತ್ರೆಯಿಂದ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಇರುವ ಆಸ್ಪತ್ರೆ ನವಚೇತನ. ಗೋಪಾಲ ರಾಯರು ಕಟ್ಟಿಸಿದ್ದು. ಇವರ ಒಬ್ಬಳೇ ಮಗಳು ಗೌತಮಿ ಡಾಕ್ಟರ್ ಅಜಿತ್ ನ ಪ್ರೀತಿಸಿ ಮದುವೆಯಾದ ಎರಡು ವರ್ಷ ಆಗುವ ಮುಂಚೆ ಸಾಯುತ್ತಾಳೆ. ಆಕಾಶ್ ಸುಶೀಲ ಅವರ ಮನೆಯಲ್ಲಿ ಇರುವ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಆಕಾಶ್ ಸುಶೀಲ ಅವರ ಮನೆಗೆ ಬಂದಿದ್ದಾನೆ….
ಅವಿನಾಭಾವ ಭಾಗ 11
ಅಂಟಿ ನಾನು ಈ ದಿನ ಇಲ್ಲೇ ಇರುತ್ತೇನೆ ಎಂದು ಹೇಳುವುದು ಹೇಳಿದ್ದಾನೆ ಆಕಾಶ್. ಹೇಳಿದ ಮೇಲೆ ತುಂಬಾ ಭಯವಾಯಿತು.ಅಂಟಿ ಎಲ್ಲಿ ಬೈದು ಬಿಡುತ್ತಾರ ಅಥವಾ ಇನ್ನೂ ಮನೆಗೆ ಬರಬೇಡ ಎಂದರೆ ಅಥವಾ ನನ್ನ ಬಗ್ಗೆ ಕೆಟ್ಟದ್ದನ್ನು ಎನಿಸಿದರೆ ಎಂದು ನಾಚಿಕೆ ಆಯಿತು ಆಕಾಶ್ ನಿಗೆ. ಒಂದು ಕ್ಷಣದಲ್ಲಿ ಇಷ್ಟೆಲ್ಲಾ ಯೋಚನೆ ಬಂದು ಹೋಗುವ ಮುಂಚೆ ಸರಿ ಡಾಕ್ಟರೇ ಮನೆಗೆ ಹೇಳಿ ಬಿಡಿ ಅಮ್ಮ ಅಪ್ಪ ಕಾಯಬಾರದು ಅಲ್ವಾ ಎಂದರು. ನಾನು ಇಷ್ಟೊಂದು ಅಳುಕು ಅಂಜಿಕೆಯಿಂದ ಕೇಳಿದರೆ ಸುಶೀಲ ಆಂಟಿ ಯಾವುದೇ ರೀತಿಯ ಕಲ್ಮಶ ಇಲ್ಲದೆ ನೇರವಾಗಿ ಆಯಿತು ಇರು ಎಂದು ಹೇಳಿದರು ಎಂಬುದೇ ಸೋಜಿಗ ಎನಿಸಿತು ಆಕಾಶ್ ನಿಗೆ.ನೈತಿಕ ಮೌಲ್ಯ ಎಂದರೆ ಇನ್ನೊಬ್ಬರಿಗೆ ನಾವು ಹೇಳುವುದು ಅಲ್ಲ. ನಮ್ಮ ನಡವಳಿಕೆಯಲ್ಲಿ ಇರಬೇಕು ಎಂದು ಕೊಂಡ ಆಕಾಶ್. ಅಂಟಿ ಹೇಳಿದಂತೆ ಅಮ್ಮನಿಗೆ ಕಾಲ್ ಮಾಡಿ ಹೆಚ್ಚು ಮಾತನಾಡದೆ ನಾನು ನಾಳೆ ಬೆಳಗ್ಗೆ ಬರುತ್ತೇನೆ ಅಮ್ಮ ಎಂದು ಹೇಳಿದ.
ಇವತ್ತು ರಾತ್ರಿ ಸುಶೀಲ ಆಂಟಿ ಬಳಿ ಬಾಲ್ಯದಿಂದಲೇ ನಿಮ್ಮ ಬಗ್ಗೆ ನನ್ನ ಅಪ್ಪ ಅಮ್ಮ ಯಾಕೆ ಮಾತನಾಡುತ್ತಿರಲಿಲ್ಲ ಎಂದು ಹೇಗಾದರೂ ಕೇಳಬೇಕು ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಿದ್ದ …. ಸುಶೀಲ ಆಂಟಿ ತನ್ನ ಬಗ್ಗೆ ವ್ಯಕ್ತ ಪಡಿಸುವ ಪ್ರೀತಿ ವಿಶ್ವಾಸ ನೋಡಿದಾಗ “ಪ್ರೀತಿ ಎಂದರೆ ಸಂತೋಷ ಮಾತ್ರವೇ ಅಲ್ಲ.. ಅದು ಮನುಷ್ಯ ಜೀವನದಲ್ಲಿ ನಿರಂತರವಾಗಿ ಸಂತೋಷವನ್ನು ನೀಡುವಂತಹುದು. ಪ್ರೀತಿ ಜೀವನಕ್ಕೆ ಸುಖವನ್ನು ನೀಡಬೇಕೇ ಹೊರತು ದುಃಖವನ್ನು ನೀಡಬಾರದು “ಎಂದು ಮನಸ್ಸಿನಲ್ಲೇ ಆಕಾಶ್ ಎಂದುಕೊಂಡ…
ರಿತಿಕಾ ಸ್ವಲ್ಪ ಹೊತ್ತು ಏನೋ ಓದುತ್ತಿದ್ದು ಎದ್ದು ಅಂಟಿ ನಾನು ಮಲಗುತ್ತೇನೆ ಎಂದಾಗ ಡಾಕ್ಟರಿಗೆ ಇಲ್ಲೇ ಮಲಗಲು ಚಾಪೆ ಹಾಸಿ ಕೊಟ್ಟು ನೀನು ಹೋಗಿ ಮಲಗು ಪುಟ್ಟ. ನಾನು ಸ್ವಲ್ಪ ಹೊತ್ತು ಡಾಕ್ಟರ್ ಬಳಿ ಮಾತನಾಡಿ ಆಮೇಲೆ ಮಲಗುತ್ತೇನೆ ಎಂದರು.ಅದರಂತೆ ರಿತಿಕಾ ಒಳ ನಡೆದಳು. ಆಕಾಶ್ ಮತ್ತು ಸುಶೀಲ ಅವರ ಮದ್ಯೆ ಒಂದು ಕ್ಷಣ ಮೌನ ಆವರಿಸಿತ್ತು. ಆಕಾಶ್ ನಿಗೆ ಹೇಗೆ ಮಾತನಾಡಬೇಕು ಎನು ಮಾತನಾಡಬೇಕೆಂದು ತಿಳಿಯದೆ ಪೇಚಾಟ ಆಯಿತು.
ಕೆಲವೊಮ್ಮೆ ಮಾತನಾಡಲು ವಿಷಯವೇ ಇರುವುದಿಲ್ಲ ಆದರೆ ಮಾತನಾಡಲು ವಿಷಯ ಇದ್ದು ಹೇಗೆ ಮಾತನಾಡಬೇಕು ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಮಾಡುವುದು ಕಷ್ಟ ಎಂದುಕೊಂಡ ಆಕಾಶ್.
ಆಕಾಶ್ ನಿಗೆ ಮಲಗಲು ಚಾಪೆ ಹಾಸಿದ ಸ್ವಲ್ಪ ಅಂತರದಲ್ಲಿ ಸುಶೀಲ ಅವರು ಮಲಗಲು ಚಾಪೆ ಹಾಸಿದರು. ಇದರಿಂದ ಆಕಾಶ್ ನಿಗೆ ಏನೋ ಇರಿಸುಮುರಿಸು ಉಂಟಾಯಿತು.ಅವರ ಮನೆಯಲ್ಲಿ ಆದರೆ ಪ್ರತಿಯೊಬ್ಬರೂ ಬೇರೆ ಬೇರೆ ಕೋಣೆಯಲ್ಲಿ ಮಲಗುತ್ತಾರೆ ಅದನು ನೋಡಿಯೇ ಬೆಳೆದ ಆಕಾಶ್ ನಿಗೆ ಇಲ್ಲಿ ಇರಿಸುಮುರಿಸು ಆಗುವುದು ಸಹಜ ಎಂದುಕೊಂಡನು. ಸುಶೀಲ ಯಾವುದೇ ರೀತಿಯ ಅಳುಕು ಅಂಜಿಕೆ ಇಲ್ಲದೆ ಇರುವುದರಿಂದ ಆಕಾಶ್ ನಿಗೆ ಕೂಡ ಇದ್ದ ಅಳುಕು ಹೋಯಿತು ಎಂದೇ ಹೇಳಬಹುದು..
ಆಕಾಶ್ ನ ಮೌನ ಕಂಡು ಸುಶೀಲ ಅವರೇ ಮಾತು ಆರಂಭಿಸಿದರು. ನಿಮಗೆ ನನ್ನಲ್ಲಿ ಕೇಳಲು ಇರುವ ಸುಮಾರು ವಿಚಾರಗಳು ನನಗೂ ನಿಮ್ಮಲ್ಲಿ ಹೇಳಬೇಕು ಎಂದು ಇದೆ ಆದರೆ ನಾನು ನಿಮ್ಮ ಎದುರಿಗೆ ಹೇಳುವಷ್ಟು ಜಾಣ್ಮೆಯು ತಾಳ್ಮೆಯೂ ಇಲ್ಲ! ಹಾಗಂತ ಧೈರ್ಯ ಇಲ್ಲ ಎಂದು ಅಲ್ಲ. ಹೇಳುವಾಗ ನಾನು ನನ್ನ ಸ್ಥೈರ್ಯ ಕಳೆದುಕೊಂಡು ನಿಮ್ಮ ಮನಸ್ಸಿನಲ್ಲಿ ನಿಜವಾಗಿಯೂ ಮೂಡುವ ಭಾವನೆಗಳಿಗೆ ಎಲ್ಲಿ ವಿಚಲಿತಳಾಗುತ್ತೇನಾ ಎಂಬ ಭಯದಿಂದ ನಾನು ಯಾರು? ಎನು ವಿಚಾರ ಎಂದು ನನ್ನ ಭಾವನೆ ಮತ್ತು ಅನಿಸಿಕೆ ಎಲ್ಲವನ್ನೂ ನನ್ನ ಆತ್ಮ ಕಥೆ ಎಂದರೆ ತಪ್ಪಾಗಲಾರದು ಅದೆಲ್ಲವೂ ಈ ಪುಸ್ತಕದಲ್ಲಿ ಬರೆದು ಇಟ್ಟಿದ್ದೇನೆ. ನೀವು ಓದಿ ಓದುವ ಮುಂಚೆ ತಪ್ಪಿಯೂ ನಿಮ್ಮ ಅಪ್ಪ ಅಮ್ಮನಿಗೆ ತೋರಿಸಬೇಡಿ ಹಾಗೂ ಹೇಳಬೇಡಿ ? ಕಾರಣ ಓದಲು ಬಿಡಲಾರರು ಅದಕ್ಕೆ ಹೇಳಿದೆ ಎಂದು ಹಳೆಯ ಪುಸ್ತಕವೊಂದನ್ನು ಆಕಾಶ್ ನ ಕೈಯಲ್ಲಿ ನೀಡಿ ಇದನ್ನು ಈಗ ತೆಗೆದಿಡಿ ನಿಮಗೆ ಸಮಯ ಸಿಕ್ಕಾಗ ಓದಿ. ಈಗ ಮಲಗಿ ಎಂದು ಹೇಳಿ ಮುಸುಕು ಹೊದ್ದು ಮಲಗಿದರು ಸುಶೀಲ.
ಆಕಾಶ್ ನ ಕೈಯಲ್ಲಿ ಪುಸ್ತಕ ನೀಡಿ ಮಲಗಿದ ತಕ್ಷಣ ಸುಶೀಲ ನಿಶ್ಚಿಂತೆಯಿಂದ ಎಂಬಂತೆ ನಿದ್ದೆ ಹೋದರು. ಆಕಾಶ್ ನಿಗೆ ಸುಮಾರು ಒಂದು ತಾಸು ನಿದ್ದೆ ಬಾರದೇ ಪುಸ್ತಕದಲ್ಲಿ ಎನು ಬರೆದಿರಬಹುದು? ಇವರು ಯಾರು? ಇವರಿಗೂ ನನಗೂ ಎನು ಸಂಬಂಧ ಎಂಬ ಜಿಜ್ಞಾಸೆಯಿಂದ ಒಂದು ಕ್ಷಣ ಈ ಪುಸ್ತಕ ಈಗಲೇ ಓದಿ ಬಿಡಲೇ! ಹೇಗೊ ಸುಶೀಲ ಆಂಟಿಗೆ ನಿದ್ದೆ ಬಂದಿದೆ ನಾನು ಓದಿದರೂ ತಿಳಿಯಲಾರದು ಎಂದು ಕೊಂಡನು ಆಕಾಶ್. ಮರುಕ್ಷಣ ಛೀ ನಾನು ಅವರು ಹೇಳಿದಂತೆ ಕೇಳದಿದ್ದರೆ ನನಗೆ ಎನು ಗೌರವ ಉಳಿಯುತ್ತದೆ ಎಂದು ಒಳ ಮನಸ್ಸು ನುಡಿಯಿತು. ಒಮ್ಮೆ ಮನೆಗೆ ಎದ್ದು ಹೋಗೋಣವೇ ಎಂದು ಕೂಡ ಯೋಚನೆ ಬಂತು. ಹಿಂದೊಮ್ಮೆ ಸುಶೀಲ ಆಂಟಿ ಹೇಳಿದಂತೆ ಯೋಚನೆಗೆ ಬೇಲಿ ಇಲ್ಲ ಅಲ್ವಾ ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಮನಸ್ಸಿನಲ್ಲಿ ಒಮ್ಮೆ ಆಡುತ್ತದೆ. ಮಗದೊಮ್ಮೆ ಓಡುತ್ತದೆ. ಕೆಲವೊಮ್ಮೆ ಮಗುವಿನಂತೆ ತೆವಳುತ್ತದೆ… ಯೋಚಿಸುತ್ತಿದ್ದ ಹಾಗೆ ಆಕಾಶ್ ನಿಗೆ ನಿದ್ರಾ ದೇವಿ ಆವರಿಸಿತ್ತು.
( ಮುಂದುವರಿಯುವುದು)